ಚಿಕ್ಕಮಗಳೂರು: ಕಾಡುಕೋಣ ತಿವಿದು ವ್ಯಕ್ತಿ ಸಾವು
ಕಳಸ,(ಚಿಕ್ಕಮಗಳೂರು) ಡಿ.29: ತಾಲೂಕಿನ ತೋಟದೂರು ಸಮೀಪ ಕಾಡುಕೋಣ ತಿವಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
ಸೋಮಶೇಖರ್ (45) ಮೃತ ವ್ಯಕ್ತಿಯಾಗಿದ್ದು, ಇವರು ಕೊಪ್ಪ ತಾಲೂಕಿನ ಜಯಪುರ ನಿವಾಸಿ ಎಂದು ತಿಳಿದು ಬಂದಿದೆ.
ಇವರು ತೋಟದೂರು ಗ್ರಾಪಂ ವ್ಯಾಪ್ತಿಯ ಕುಳಿಹಿತ್ತಲು ಎಂಬ ಗ್ರಾಮದಲ್ಲಿ ಅರ್ಧ ಎಕರೆಯಷ್ಟು ಜಮೀನು ಹೊಂದಿದ್ದು, ಗುರುವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ತೋಟಕ್ಕೆ ನುಗ್ಗಿ ಬಂದ ಕಾಡುಕೋಣ ಸೋಮಶೇಖರ್ ಅವರ ಮೇಲೆ ದಿಢೀರ್ ದಾಳಿ ಮಾಡಿದೆ. ದಾಳಿಯಿಂದ ಕಾಲಿಗೆ ತೀವ್ರವಾಗಿ ಸೋಮಶೇಖರ್ ಅವರು ಓಡಲು ಸಾಧ್ಯವಾಗದೇ ಮರವೊಂದಕ್ಕೆ ಒರಗಿ ನಿಂತಿದ್ದಾರೆ. ಈ ವೇಳೆ ಮತ್ತೆ ದಾಳಿ ಮಾಡಿದ ಕಾಡುಕೋಣ ಸೋಮಶೇಖರ್ ಅವರ ದೇಹದ ಸೊಂಟದ ಭಾಗಕ್ಕೆ ತಲೆಯಿಂದ ಗುದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋಮಶೇಖರ್ ತೀವ್ರ ರಕ್ತಸ್ರಾವದಿಂದ ಒದ್ದಾಡಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ತಿಳಿದು ಬಂದಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಗಳಿಗೆ ನಲುಗಿರುವ ಜನತೆ ಈಗ ಕಾಡುಕೋಣಗಳ ದಾಳಿಯಿಂದ ಭಯಭೀತರಾಗಿದ್ದಾರೆ