×
Ad

ಜೆಡಿಎಸ್ ಪಂಚರತ್ನ ಯಾತ್ರೆ ‘ಪಂಚರ್’ ಆಗಿದೆ: ಬಿಜೆಪಿ ವ್ಯಂಗ್ಯ

Update: 2022-12-29 15:57 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ಎಂದರೆ ಜನಪರ ಅಭಿವೃದ್ಧಿಯ ಯಾತ್ರೆಯಲ್ಲ. ಅದು ಅವರ ಕುಟುಂಬದ 5 (ಪಂಚ) ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಇದು ಜನರಿಗೆ ಅರ್ಥವಾದ ಕಾರಣಕ್ಕೆ ಪಂಚರತ್ನ ಯಾತ್ರೆ, ಪಂಚರ್ ಆಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹೀಗೆ ಜೆಡಿಎಸ್‍ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆ ಎಂದು ಟೀಕಿಸಿದೆ.

ಮುಗ್ದ ಮನಸ್ಸಿನ ಮಂಡ್ಯ ಜನರ ಒಳ್ಳೆಯತನವನ್ನೇ ದಡ್ಡತನವೆಂದು ತಿಳಿದುಕೊಂಡ ಕುಮಾರಸ್ವಾಮಿ ಇಡೀ ಜಿಲ್ಲೆಯಲ್ಲಿ ಮಾಡಿದ್ದು ಹಗಲು ದರೋಡೆ.2018ರಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ ಜೆಡಿಎಸ್ ಹೇಳಿಕೊಳ್ಳುವುದಕ್ಕಾದರೂ ಒಂದು ಒಳ್ಳೆಯ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಅನ್ಯಾಯ ಮತ್ತು ನಂಬಿಕೆ ದ್ರೋಹವನ್ನು ಮಂಡ್ಯದ ಜನರು ಎಂದಿಗೂ ಸಹಿಸರು. ಹಾಗಾಗಿ 2019ರ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಸಿ ಬಿಜೆಪಿಗೆ ಗೆಲುವಿನ ಮಾಲೆ ಹಾಕಿದರು. ಎರಡೂ ಪಕ್ಷಗಳ ಕೆಲಸಗಳನ್ನು ಜಿಲ್ಲೆಯ ಇತರೆ ಆರೂ ಕ್ಷೇತ್ರಗಳ ಮತದಾರರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ಆದರೆ, ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್‍ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ ಎಂದು ಬಿಜೆಪಿ ಹೇಳಿದೆ.

ತಾನು ಮಾಡಿದ ದ್ರೋಹದ ಫಲವಾಗಿ ಮಂಡ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಲ್ಲ ಎಂಬುದನ್ನು ಕುಮಾರಸ್ವಾಮಿ ಅರ್ಥಮಾಡಿಕೊಂಡಿದ್ದಾರೆ. ಜಾತ್ಯತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವ ಆಟವನ್ನು ಹಳೇ ಮೈಸೂರು ಭಾಗದ ಜನ ಅರಿತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನೂ ಕಲಿಸುತ್ತಾರೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

Similar News