ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶವನ್ನೇ ನೀಡದ ಸರಕಾರ: ಪ್ರಿಯಾಂಕ್ ಖರ್ಗೆ ಅಸಮಾಧಾನ

Update: 2022-12-29 12:44 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ರಾಜ್ಯ ಸರಕಾರ ಅವಕಾಶವನ್ನೇ ನೀಡುತ್ತಿಲ್ಲ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಗುರುವಾರ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹತ್ತು ಹಲವು ಸಮಸ್ಯೆಗಳನ್ನು ಚರ್ಚೆ ಮಾಡಲು ಸದನವನ್ನು ಮೊಟಕುಗೊಳಿಸುವುದು ಬೇಡ.ಸಿಎಂ ದಿಲ್ಲಿ ಪ್ರವಾಸದ ನಂತರ ಅಧಿವೇಶನವನ್ನು ಮೊಟಕುಗೊಳಿಸುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ರೈತರ ಸಮಸ್ಯೆ ವಿಚಾರ ಅಧಿವೇಶನದ ಮೊದಲ ಪ್ರಶ್ನೆಯಾಗಿತ್ತು. ಆದರೆ, ರೈತರ ವಿಚಾರ ಮುಂದೂಡಿ, ಕುಕ್ಕರ್ ಸ್ಪೋಟ ವಿಚಾರಕ್ಕೆ ಆದ್ಯತೆ ನೀಡಲಾಯಿತು ಎಂದು ಆರೋಪಿಸಿದ ಅವರು, ರೈತರು, ಸಾರ್ವಜನಿಕರ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಲೇ ಇಲ್ಲ ಎಂದು ಹೇಳಿದರು.

ಚಿಲುಮೆ ಅಕ್ರಮ, ಮಹದಾಯಿ ಯೋಜನೆ, ಪಿಎಸ್ಸೈ ನೇಮಕಾತಿ ಹಗರಣದ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‍ನಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಆದರೆ, ಆಡಳಿತ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Similar News