×
Ad

ಅಕ್ರಮ-ಸಕ್ರಮ ಯೋಜನೆಯಡಿ 68 ಸಾವಿರ ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ: ಸಚಿವ ಸುನಿಲ್ ಕುಮಾರ್

Update: 2022-12-29 17:08 IST

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಅಕ್ರಮ, ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ರೈತರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ನಂಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಕ್ರಮ-ಸಕ್ರಮ ಯೋಜನೆಯಡಿ, 1.36ಲಕ್ಷ ಅರ್ಜಿಗಳು ಬಂದಿದ್ದು, ಆ ಪೈಕಿ ಈಗಾಗಲೇ 66,889 ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಉಳಿದವರಿಗೆ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರದ ‘ಹಸಿರು ಇಂಧನ’ ಉತ್ಪಾದನೆಗೆ ಸರಕಾರ ಒತ್ತು ನೀಡಿದ್ದು, ಈ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳಿಗೆ ಸಂಪರ್ಕ ಕಲ್ಪಿಸಲಾಗುವುದು.ಒಟ್ಟು 1230 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

|| 68 ಸಾವಿರ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ 

ಜೆಡಿಎಸ್ ಸದಸ್ಯ ಎಂ.ವಿ.ವೀರಭದ್ರಯ್ಯ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸುನಿಲ್ ಕುಮಾರ್,‘ತತ್ಕಾಲ್ ಯೋಜನೆಯಡಿ 68 ಸಾವಿರ ರೈತರ ಕೃಷಿ ಪಂಪ್‍ಸೆಟ್‍ಗಳಿಗೆ ಟ್ರಾನ್ಸ್‍ಫಾರ್ಮರ್ ಒದಗಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ ರೈತರು 10 ಸಾವಿರ ರೂ.ಪಾವತಿಸಬೇಕಿದೆ. ಆದರೆ, ವಿದ್ಯುತ್ ಕಂಪೆನಿಗಳು 1.50 ಲಕ್ಷ ರೂ.ವೆಚ್ಚ ಭರಿಸಬೇಕು.ರಾಜ್ಯದಲ್ಲಿ 2,014 ಮಂದಿ ರೈತರಿಗೆ ತತ್ಕಾಲ್ ಯೋಜನೆಯಡಿ ಟಿಸಿ ಒದಗಿಸಬೇಕಾಗಿದ್ದು, ಹಣಕಾಸಿನ ಲಭ್ಯತೆ ಆಧಾರದ ಮೇಲೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Similar News