ಬಿಜೆಪಿ ಫ್ಲೆಕ್ಸ್ ನಲ್ಲಿ ಸಂಸದೆ ಸುಮಲತಾ ಫೋಟೋ: ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಹೀಗೆ...
Update: 2022-12-29 17:33 IST
ಮಂಡ್ಯ: ಡಿಸೆಂಬರ್ 30ರಂದು ಮಂಡ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿ ಹಾಕಿದ ಫ್ಲೆಕ್ಸ್ ನಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha) ಅವರ ಫೋಟೋ ಕಾಣಿಸಿಕೊಂಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಕುರಿತು ಚಾಮರಾಜನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, 'ಫ್ಲೆಕ್ಸ್ ನಲ್ಲಿ ಸಂಸದೆ ಸುಮಲತಾ ಅವರ ಹಿತೈಷಿಗಳು ಫೋಟೊ ಹಾಕಿರಬಹುದು' ಎಂದು ಹೇಳಿದ್ದಾರೆ.
ಇನ್ನು 'ಅವರು ಬಿಜೆಪಿ ಸೇರುವುದು ಅವರ ವೈಯಕ್ತಿಕ ವಿಚಾರ. ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಮಂಡ್ಯಕ್ಕೆ ಭೇಟಿ ನೀಡಲಿರುವ ಅಮಿತ್ ಶಾ, ಮಂಡ್ಯ ಸರಕಾರಿ ಬಾಲಕರ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಆನಂತರ ಗೆಜ್ಜಲಗೆರೆಯಲ್ಲಿ ಸ್ಥಾಪಿಸಿರುವ ಮೆಗಾ ಡೈರಿಯನ್ನು ಉದ್ಘಾಟನೆ ಮಾಡಲಿದ್ದಾರೆ.