×
Ad

ಬೆಳಗಾವಿ ಅಧಿವೇಶನ | ಬಿಜೆಪಿ ಸರಕಾರದ ನಡೆಗೆ ಆಡಳಿತ ಪಕ್ಷದ ಸದಸ್ಯರಿಂದಲೇ ಸಭಾತ್ಯಾಗ..!

Update: 2022-12-29 18:01 IST

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ಹೊಸ ಪಿಂಚಣಿ ಯೋಜನೆ (ಎನ್‍ಪಿಎಸ್)ಯಿಂದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಕುರಿತ ಸರಕಾರದ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಸಭಾತ್ಯಾಗ ಮಾಡಿ ಹೊರ ನಡೆದರು.

ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ತಳವಾರ ಸಾಬಣ್ಣ, ಮಂಜುನಾಥ್ ಭಂಡಾರಿ ಸೇರಿದಂತೆ ಹಲವು ಸದಸ್ಯರು ಜಂಟಿಯಾಗಿ ವಿಷಯ ಪ್ರಸ್ತಾಪಿಸಿ, ಸರಕಾರಿ ನೌಕರರಲ್ಲಿ ಶೇ.50ರಷ್ಟು ಶಿಕ್ಷಕರಿದ್ದು, ಬಹುತೇಕರು `ಸಿ' ಮತ್ತು `ಡಿ' ಗ್ರೂಪ್ ನೌಕರರಿದ್ದಾರೆ.ಹೊಸ ಪಿಂಚಣಿ ಯೋಜನೆಯಿಂದ ಆ ಎಲ್ಲ ನೌಕರರ ಕುಟುಂಬಗಳು ಅತಂತ್ರವಾಗಿವೆ. ಎನ್‍ಪಿಎಸ್‍ನಿಂದ ಒಪಿಎಸ್‍ಗೆ ಪರಿವರ್ತನೆ ಕುರಿತು ಸರಕಾರ ತನ್ನ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಪ್ರಸ್ತಾವನೆ ಸರಕಾರದ ಮುಂದಿಲ್ಲ.ಆದರೂ, ಆರ್ಥಿಕ ಸ್ಥಿತಿಗತಿಯನ್ನು ನೋಡಿಕೊಂಡು, ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಾದ ಬಳಿಕ ಬಿಜೆಪಿ ಹಿರಿಯ ಸದಸ್ಯ ಆಯನೂರು ಮಂಜುನಾಥ್, ಸರಕಾರದ ಉತ್ತರಕ್ಕೆ ತೀವ್ರ ಅಸಮಾಧಾನಗೊಂಡು, ಸರಕಾರ ಎನ್ನುವುದು ತಾಯಿ ಸ್ಥಾನದಲ್ಲಿ ನಿಂತು ನೋಡಬೇಕು. ಮತ ಕೊಟ್ಟವನಿಗೆ ಎನ್‍ಪಿಎಸ್ ಕೊಟ್ಟು, ಮತ ಪಡೆದವನಿಗೆ ಒಪಿಎಸ್ ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರು.

2006ರಲ್ಲಿ ಎನ್‍ಪಿಎಸ್ ಕಾನೂನು ಬಂದಿತು.2008ರಲ್ಲಿ ಬಜೆಟ್‍ನಲ್ಲಿ ಘೋಷಣೆಯಾಯಿತು.2010ರಲ್ಲಿ ಜಾರಿಗೆ ಬಂದಿತು.ಆದರೆ, 2006ರಿಂದ ಪೂರ್ವಾನ್ವಯ ಆಗುವಂತೆ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ನೌಕರಿ ಕೊಡುವವರು ಷರತ್ತುಗಳನ್ನು ವಿಧಿಸುತ್ತಾರೆ.ಅವುಗಳನ್ನು ಒಪ್ಪಿಕೊಂಡು ನೌಕರರು ನೇಮಕಗೊಳ್ಳುತ್ತಾರೆ.ಆದರೂಈ, ಪರಿಶೀಲಿಸುವುದಾಗಿ ಸಚಿವರು ಹೇಳಿದರು.

ಇದರಿಂದ ಅಸಮಾಧಾನಗೊಂಡ ಆಯನೂರು ಮಂಜುನಾಥ್, ನಮ್ಮದೇ ಸರಕಾರ ನೀಡಿದ ಉತ್ತರಕ್ಕೆ ನನಗೆ ಮುಜುಗರ ಉಂಟುಮಾಡಿದೆ. ಹಾಗಾಗಿ, ಸಾತ್ವಿಕ ಪ್ರತಿಭಟನೆ ಮೂಲಕ ನಾನು ಹೊರಹೋಗುತ್ತಿದ್ದೇನೆ ಎಂದು ಸಭಾತ್ಯಾಗ ಮಾಡಿದರು.

ಆನಂತರ, ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸಹ ನಾನು ಸಭಾತ್ಯಾಗ ಮಾಡುವೆ ಎಂದು ಹೇಳಿ ಹೊರನಡೆದರು.ಈ ವೇಳೆ ಸದಸ್ಯ ಸಂಕನೂರು ಸಹ ಹಿಂಬಾಲಿಸಿದರು.

Similar News