ಉತ್ತರ ಕರ್ನಾಟಕದ ಸಚಿವರಿಗೆ ಸಣ್ಣ ಖಾತೆ, ದಕ್ಷಿಣದವರಿಗೆ ದೊಡ್ಡ ಖಾತೆ: BJP ಶಾಸಕ ಯತ್ನಾಳ್

''ಅಧಿವೇಶನದ ಆರಂಭದಲ್ಲೇ ಉ. ಕ ಭಾಗದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ''

Update: 2022-12-29 14:36 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಉತ್ತರ ಕರ್ನಾಟಕದ ಅಭಿವೃದ್ಧಿ ಎಂದು ದೊಡ್ಡ ಭಾಷಣ ಮಾಡುತ್ತೀರಾ, ಬೆಳಗಾವಿಯಲ್ಲಿ ಅಧಿವೇಶನ ಕರೆದಾಗ ಆರಂಭದಲ್ಲೇ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ, ಸುಮ್ಮನೆ ಅಧಿವೇಶನದ ಕೊನೆಯಲ್ಲಿ ಯಾಕೆ ಚರ್ಚೆ ಕೈಗೆತ್ತಿಕೊಳ್ಳುತ್ತೀರಾ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಚರ್ಚೆ ನಡೆಯುವಾಗ ಸಚಿವರು ಯಾರೂ ಇರುವುದಿಲ್ಲ, ಯಾರಿಗೂ ಈ ಬಗ್ಗೆ ಆಸಕ್ತಿನೂ ಇರೋದಿಲ್ಲ. ಉತ್ತರ ಕರ್ನಾಟಕದ ಚರ್ಚೆ ಅಂತ ಒಂದು ನೆಪ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಯಾವ ಪಕ್ಷದ ಹೆಚ್ಚು ಶಾಸಕರು ಇರುತ್ತಾರೋ ಅವರದ್ದೇ ಪಕ್ಷ ಅಧಿಕಾರದಲ್ಲಿರುತ್ತದೆ.ಆದರೂ, ಉತ್ತರ ಕರ್ನಾಕದ ಸಚಿವರಿಗೆ ಸಣ್ಣ ಸಣ್ಣ ಖಾತೆ ಕೊಡುತ್ತಾರೆ.ದೊಡ್ಡ ಖಾತೆಗಳನ್ನು ದಕ್ಷಿಣ ಭಾಗದವರು ಹೊಡೆದುಕೊಂಡಿರುತ್ತಾರೆ. ಇವತ್ತು ಕೊನೆ ದಿನ. ಅಲ್ಲದೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಈ ವಿಧಾನಸಭೆ ಅವಧಿಯ ಕೊನೆಯ ಅಧಿವೇಶನವಾಗಿದೆ.ಮುಂದಿನ ದಿನಗಳಲ್ಲಿ ಬೆಳಗಾವಿ ಅಧಿವೇಶನದ ಮೊದಲ ದಿನದಿಂದಲೇ ಉತ್ತರ ಕರ್ನಾಟಕದ ಚರ್ಚೆ ಮಾಡುವಂತೆ ನಿಯಮ ಮಾಡಲಿ ಎಂದು ಸ್ಪೀಕರ್ ಗೆ ಅವರು ಮನವಿ ಮಾಡಿದರು.

Similar News