ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ
Update: 2022-12-29 22:18 IST
ದಾವಣಗೆರೆ : ಹರಿಹರದ ಖಾಸಗಿ ಶಾಲೆಯೊಂದಕ್ಕೆ ಪರವಾನಿಗೆ ನವೀಕರಣಕ್ಕೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹರಿಹರದ ವಿದ್ಯಾದಾಹಿನಿ ಶಾಲೆಯ ಮುಖ್ಯಸ್ಥ ರಘುನಾಥ್ ಅವರ ಶಾಲೆಗೆ ಸಿಬಿಎಸ್ ಸಿ ಶಾಲೆ ಪರವಾನಿಗೆ ನವೀಕರಣಕ್ಕಾಗಿ 50 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆನ್ನಲಾಗಿದ್ದು, ಅದರಂತೆ ಈ ಹಿಂದೆ 10 ಸಾವಿರ ಪಡೆದಿದ್ದರು. ಮತ್ತೆ ಈಗ 15 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ಬಲೆಗೆ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ಇನ್ಸ್‍ಪೆಕ್ಟರ್ ಗಳಾದ ಆಂಜನೇಯ ಹಾಗೂ ರಾಷ್ಟ್ರಪತಿ ಅವರಿಂದ ದಾಳಿ ನಡೆಸಿದ್ದರು. ಬಿಇಓ ಸಿದ್ದಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.