ಬೆಳಗಾವಿ ಗಡಿ ವಿವಾದ: ರಾಜಕೀಯ ಸಂದಿಗ್ಧತೆಯಲ್ಲಿ ಬಿಜೆಪಿ
ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ ಶಿಂದೆ ಬಣದ ಶಿವಸೇನೆಯನ್ನು ಅಸಮಾಧಾನಗೊಳಿಸಲು ಸಾಧ್ಯವಿಲ್ಲ. ಹಾಗೆಯೇ, ಚುನಾವಣೆ ಹತ್ತಿರವಿರುವುದರಿಂದ ಅದು ಕನ್ನಡಪರ ಸಂಘಟನೆಗಳನ್ನೂ ದೂರ ಮಾಡುವ ಸ್ಥಿತಿಯಲ್ಲಿಲ್ಲ.
ಕೇಂದ್ರವು ಈ ಸಮಸ್ಯೆಯನ್ನು ಎಷ್ಟು ದೂರ ತಳ್ಳಬಹುದು? ಅದು ತನ್ನಷ್ಟಕ್ಕೆ ತಣ್ಣಗಾಗುತ್ತದೆಯೇ? ೨೦೨೩ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮತ್ತು ಆನಂತರ ಲೋಕಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ ಆಯ್ಕೆಗಳನ್ನು ಅಳೆದು ತೂಗಿ ಎರಡೂ ರಾಜ್ಯಗಳಿಗೆ ಒಪ್ಪಿಗೆಯಾಗುವಂತಹ ಪರಿಹಾರವನ್ನು ತರುವ ಅನಿವಾರ್ಯತೆಗೆ ಬಿಜೆಪಿ ಬಿದ್ದಿದೆ. ಸಮಸ್ಯೆಯನ್ನು ನೇರವಾಗಿ ಎದುರಿಸಬೇಕಾಗಿದೆ. ಕಡೆಗೂ ವಿವಾದ ಗಡಿ ವಿಚಾರದ್ದಾದರೂ, ಎರಡೂ ರಾಜ್ಯಗಳ ನಾಯಕರು ಪಕ್ಷದ ಹಿತಾಸಕ್ತಿಗೇ ಮೊದಲ ಆದ್ಯತೆ ಕೊಡುತ್ತಾರೆಂಬುದೇ ನಿಜ ಎನ್ನಲಾಗುತ್ತಿದೆ.
ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಭುಗಿಲೆದ್ದಿರುವ ಸಂಘರ್ಷವು ಕುತೂಹಲಕಾರಿ ಘಟ್ಟ ಮುಟ್ಟಿದೆ. ಒಂದಿಂಚೂ ಭೂಮಿ ಬಿಡೆವು ಎಂಬ ನಿರ್ಣಯವನ್ನು ಅವು ಅಂಗೀಕರಿಸಿದ್ದೂ ಆಗಿದೆ. ಒಂದೆಡೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಬೇಕಿರುವಾಗಲೇ, ಎರಡೂ ರಾಜ್ಯಗಳ ನಡುವಿನ ಈ ಕದನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದು, ಇದು ಬಿಜೆಪಿ ವರ್ಸಸ್ ಬಿಜೆಪಿ ಕದನವಾಗುತ್ತಿದೆಯೇ ಎಂಬ ಹಿನ್ನೆಲೆಯಲ್ಲಿ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಸರಕಾರದ ಭಾಗವಾಗಿ ಬಿಜೆಪಿಯಿದೆ. ಹಾಗಾಗಿ ಈ ಕದನದ ಸ್ವರೂಪ ಅಪರೂಪದ್ದಾಗಿದೆ.
ಬಿಜೆಪಿಯ ಸಂದಿಗ್ಧವೆಂಥದು ಎಂದರೆ, ಅದು ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಪಕ್ಷ ಶಿಂದೆ ಬಣದ ಶಿವಸೇನೆಯ ಅಸಮಾಧಾನಕ್ಕೆ ಕಾರಣವಾಗುವಂತಿಲ್ಲ. ಅದೇ ವೇಳೆ, ಅದು ಕನ್ನಡಪರ ಸಂಘಟನೆಗಳನ್ನು ಕೂಡ ಎದುರು ಹಾಕಿಕೊಳ್ಳಲಾರದು. ಯಾಕೆಂದರೆ ಚುನಾವಣೆ ಸಮೀಪದಲ್ಲಿಯೇ ಇದೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿರುವ ಮಹಾರಾಷ್ಟ್ರ, ಮಂಗಳವಾರ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದು, ಪಶ್ಚಿಮ ರಾಜ್ಯಕ್ಕೆ ೮೬೫ ಮರಾಠಿ ಮಾತನಾಡುವ ಹಳ್ಳಿಗಳನ್ನು ಸೇರಿಸಲು ಕಾನೂನುಬದ್ಧವಾಗಿ ಮುಂದುವರಿಯುವುದಾಗಿ ಹೇಳಿದೆ. ಕೆಲವು ದಿನಗಳ ಹಿಂದೆ, ಕರ್ನಾಟಕ ಸರಕಾರವು ದಕ್ಷಿಣ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ನೆರೆಯವರಿಗೆ ಒಂದು ಇಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು. ಉಲ್ಬಣಗೊಳ್ಳುತ್ತಿರುವ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವಾಗಲೂ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಸ್ಥಿಕೆ ವಹಿಸಿದ್ದರೂ ಸಹ ರಾಜಕೀಯ ಕೆಸರೆರಚಾಟ ಮುಂದುವರಿದಿದೆ.
ನವೆಂಬರ್‌ನಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಅವರು ಗಡಿ ವಿವಾದವನ್ನು ಪರಿಶೀಲಿಸಲು ಸಭೆ ನಡೆಸಿದರು. ಕಾನೂನು ಮತ್ತು ರಾಜಕೀಯವಾಗಿ ಸಮನ್ವಯವನ್ನು ಹೆಚ್ಚಿಸಲು ಇಬ್ಬರು ಸಚಿವರನ್ನು ನಿಯೋಜಿಸಿದಾಗ ಸುಮಾರು ೭೦ ವರ್ಷಗಳ ಹಿಂದಿನ ವಿವಾದ ಮತ್ತೆ ಭುಗಿಲೆದ್ದಿತು. ಅದಾದ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರದ ಸುಮಾರು ೪೦ ಹಳ್ಳಿಗಳ ಮೇಲೆ ಹಕ್ಕು ತಮ್ಮದೆಂದರು. ಬೆಳಗಾವಿ ಮತ್ತು ಕರ್ನಾಟಕದ ಇತರ ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪಿಂಚಣಿಗೆ ಅರ್ಹರು ಎಂದು ಶಿಂದೆ ಹೇಳಿದರೆ, ಬೊಮ್ಮಾಯಿ ಮಹಾರಾಷ್ಟ್ರದ ಎಲ್ಲಾ ಕನ್ನಡ ಶಾಲೆಗಳಿಗೆ ಅನುದಾನವನ್ನು ಘೋಷಿಸಿದರು.
ಹಿಂಸಾಚಾರ ಭುಗಿಲೆದ್ದಿತು. ಮಹಾರಾಷ್ಟ್ರದ ಆರು ಟ್ರಕ್‌ಗಳು ಕರ್ನಾಟಕದ ಗಡಿ ಪ್ರವೇಶಿಸುತ್ತಿದ್ದಂತೆ ಕನ್ನಡ ರಕ್ಷಣಾ ವೇದಿಕೆ ದಾಳಿ ಮಾಡಿತು. ಅದೇ ರೀತಿ ಅಲ್ಲಿ ಪ್ರತಿಪಕ್ಷವಾಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಪುಣೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳನ್ನು ವಿರೂಪಗೊಳಿಸಿದರು. ಈ ಮಧ್ಯೆಯೇ, ಕನ್ನಡ ಧ್ವಜ ಬೀಸಿದ ವಿದ್ಯಾರ್ಥಿಗೆ ಥಳಿಸಲಾಯಿತೆಂಬ ಕಾರಣಕ್ಕೆ ಡಿಸೆಂಬರ್‌ನಲ್ಲಿ ಹಲವಾರು ಸಂಘಟನೆಗಳು, ಮುಖ್ಯವಾಗಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸಿದವು.
ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡರಲ್ಲೂ ಬಿಜೆಪಿ ಸರಕಾರ ಇರುವುದರಿಂದ ಈ ವಿವಾದ ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಪಕ್ಷವಾದ ಶಿಂದೆ ನೇತೃತ್ವದ ಆಡಳಿತಾರೂಢ ಶಿವಸೇನೆಯನ್ನು ಅಸಮಾಧಾನಗೊಳಿಸಿದರೆ ಮರಾಠಿ ಮನುಸ್ ಕೋಪಕ್ಕೆ ಕಾರಣವಾಗಬಹುದು ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವುದರಿಂದ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳನ್ನು ಕೂಡ ದೂರವಿಡಲು ಸಾಧ್ಯವಿಲ್ಲ.
ಗದ್ದಲ ಹೆಚ್ಚಾಗುತ್ತಿದ್ದಂತೆ ಪ್ರತಿಪಕ್ಷಗಳೂ ಕೇಂದ್ರದ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ‘‘ಕೇಂದ್ರ, ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಹಾಗಾಗಿ ಇದು ಚುನಾವಣೆಗಾಗಿ ನಡೆಸುತ್ತಿರುವ ಕುತಂತ್ರ ಎಂಬುದರಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಕನ್ನಡ ಭಾಷೆ, ನೆಲ, ಜಲ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಹಾಗಾಗಿ ಈ ವಿಷಯದಲ್ಲಿ ಎಂಥ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ’’ ಎಂದು ಟ್ವೀಟ್ ಮಾಡಿದ್ದಾರೆ.
ಇಲ್ಲಿನ ಜನರು ಮರಾಠಿ ಮಾತನಾಡುವುದರಿಂದ ಉತ್ತರ ಕರ್ನಾಟಕದಲ್ಲಿ ಬರುವ ಬೆಳಗಾವಿ ಜಿಲ್ಲೆಯ ಹಲವು ಭಾಗಗಳ ಮೇಲೆ ಮಹಾರಾಷ್ಟ್ರ ಹಕ್ಕು ಸಾಧಿಸುತ್ತದೆ. ಮಹಾರಾಷ್ಟ್ರ ಏಕೀಕರಣ ಸಮಿತಿ, ೧೯೪೮ರಲ್ಲಿ ಸ್ಥಾಪನೆಯಾದ ಮರಾಠಿ ಪರ ಸಾಮಾಜಿಕ-ರಾಜಕೀಯ ಸಂಘಟನೆಯು ಬೆಳಗಾವಿಯಲ್ಲಿ ಅಧಿಕಾರವನ್ನು ಹೊಂದಿದೆ ಮತ್ತು ಈ ಪ್ರದೇಶವನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಲು ಒತ್ತಾಯಿಸುತ್ತಿದೆ. ೨೦೦೪ರಲ್ಲಿ, ಮಹಾರಾಷ್ಟ್ರ ಸರಕಾರವು ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿತ್ತು. ಈಗ ಅಂಥದೇ ಒತ್ತಾಯವನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಮಾಡಿದೆ. ಆದರೆ ಇದನ್ನು ಶಿಂದೆ ಬಣದ ಶಿವಸೇನೆ ಟೀಕಿಸಿದೆ.
ಹಿಂದಿನ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರಕಾರವು ಕರ್ನಾಟಕದೊಂದಿಗೆ ಮಹಾರಾಷ್ಟ್ರದ ಗಡಿಯಲ್ಲಿರುವ ಹಳ್ಳಿಗಳಲ್ಲಿ ಕೆಲವು ಸರಕಾರಿ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಶಿಂದೆ ಹೇಳಿದ್ದಾರೆ. ನಾವು ರೂ. ೨,೦೦೦ ಕೋಟಿ ಮೌಲ್ಯದ ಮಹೈಸಲ್ ವಿಸ್ತರಣೆ ಯೋಜನೆಯನ್ನು ಅನುಮೋದಿಸಿದ್ದೇವೆ ಎಂದು ಶಿಂದೆ ಹೇಳಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಸಿಎಂ ಗಡಿ ಭಾಗದ ಅರ್ಹ ಯುವಕರನ್ನು ಸರಕಾರಿ ಉದ್ಯೋಗಗಳಿಗೆ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದರು. ‘‘ಕರ್ನಾಟಕದ ರಾಜಕೀಯ ನಾಯಕರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ಕರ್ನಾಟಕದೊಂದಿಗೆ ನೀರು ಹಂಚಿಕೊಳ್ಳುವ ಬಗ್ಗೆಯೂ ರಾಜ್ಯವು ಮರುಚಿಂತನೆ ಮಾಡಬೇಕಾಗುತ್ತದೆ’’ ಎಂದು ಮಹಾರಾಷ್ಟ್ರ ಸಚಿವ ಶಂಬುರಾಜ್ ದೇಸಾಯಿ ಅವರು ಬೆಂಕಿಗೆ ತುಪ್ಪಸುರಿದಿದ್ದರು.
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ, ಬೆಳಗಾವಿಯು ಇಂದಿನ ಕರ್ನಾಟಕದ ಭಾಗಗಳನ್ನು ಒಳಗೊಂಡಿರುವ ಬಾಂಬೆ ರಾಜ್ಯದ ಭಾಗವಾಗಿತ್ತು. ರಾಜ್ಯ ಮರುಸಂಘಟನೆ ಕಾಯ್ದೆ, ೧೯೫೬ರ ಅನುಷ್ಠಾನದ ನಂತರ, ಬೆಳಗಾವಿಯು ಮೈಸೂರಿನ ಭಾಗವಾಯಿತು, ನಂತರ ಅದನ್ನು ಕರ್ನಾಟಕದಲ್ಲಿ ವಿಲೀನಗೊಳಿಸಲಾಯಿತು. ಮೇ ೧, ೧೯೬೦ರಂದು, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ೮೬೫ ಗ್ರಾಮಗಳು ತನ್ನ ಭಾಗವಾಗಬೇಕೆಂದು ಮಹಾರಾಷ್ಟ್ರ ಹೇಳಿಕೊಂಡಾಗ, ಕರ್ನಾಟಕವು ತನ್ನ ಪ್ರದೇಶದ ಯಾವುದೇ ಭಾಗವನ್ನು ಬೇರ್ಪಡಿಸುವುದಿಲ್ಲ ಎಂದು ಹೇಳಿತ್ತು. ೧೯೬೬ರ ಅಕ್ಟೋಬರ್ ೨೫ರಂದು ಕೇಂದ್ರ ಸರಕಾರ ಸ್ಥಾಪಿಸಿದ ಮಹಾಜನ್ ಆಯೋಗವು ಬೆಳಗಾವಿಯ ಮೇಲಿನ ಮಹಾರಾಷ್ಟ್ರದ ಹಕ್ಕನ್ನು ತಿರಸ್ಕರಿಸಿತು. ನಂತರ, ಕರ್ನಾಟಕವು ಬೆಳಗಾವಿಯಲ್ಲಿ ಸುವರ್ಣಸೌಧವನ್ನು ಕಟ್ಟಿತು.
ಸಂಸತ್ತು ಮಾತ್ರ ರಾಜ್ಯದ ಗಡಿಗಳನ್ನು ನಿರ್ಧರಿಸುತ್ತದೆಯೇ ಹೊರತು ಸುಪ್ರೀಂ ಕೋರ್ಟ್ ಅಲ್ಲ ಎಂದು ಕರ್ನಾಟಕ ವಾದಿಸಿದೆ. ಹಾಗೆ ಮಾಡುವಾಗ ಅದು ಭಾರತೀಯ ಸಂವಿಧಾನದ ೩ನೇ ವಿಧಿಯನ್ನು ಉಲ್ಲೇಖಿಸುತ್ತದೆ. ಇದರರ್ಥ, ಸುಪ್ರೀಂ ಕೋರ್ಟ್ ತೀರ್ಪು ಸಾಕಷ್ಟು ಬೇಗ ಬಂದರೂ, ಅಂತರ್‌ರಾಜ್ಯ ಕಾವೇರಿ ನದಿ ವಿವಾದದಂತೆಯೇ ಪ್ರಾದೇಶಿಕ ಭಿನ್ನಾಭಿಪ್ರಾಯ ಕೂಡ ಕೊನೆಗೊಳ್ಳದು ಎಂಬ ಸೂಚನೆಗಳಿವೆ ಎನ್ನುತ್ತವೆ ವರದಿಗಳು.
ಕಳೆದ ೭೦ ವರ್ಷಗಳಿಂದ ನಡೆದುಬಂದಿರುವ ಈ ವಿವಾದವೀಗ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳಿರುವುದರಿಂದ ಸಂದಿಗ್ಧತೆಯನ್ನು ಹುಟ್ಟುಹಾಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ನ್ಯಾಯಾಲಯದ ತೀರ್ಪು ಕಾಯೋಣ ಎಂದಿದ್ದಾರೆ.
ಆದರೆ ಕೇಂದ್ರವು ಸಮಸ್ಯೆಯನ್ನು ಎಷ್ಟು ದೂರ ತಳ್ಳಬಹುದು? ಅದು ತನ್ನಷ್ಟಕ್ಕೆ ತಣ್ಣಗಾಗುತ್ತದೆಯೇ? ೨೦೨೩ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮತ್ತು ಆನಂತರ ಲೋಕಸಭೆ ಚುನಾವಣೆ ನಡೆಯಲಿದ್ದು, ಎಲ್ಲಾ ಆಯ್ಕೆಗಳನ್ನು ಅಳೆದು ತೂಗಿ ಎರಡೂ ರಾಜ್ಯಗಳಿಗೆ ಒಪ್ಪಿಗೆಯಾಗುವಂತಹ ಪರಿಹಾರವನ್ನು ತರುವ ಅನಿವಾರ್ಯತೆಗೆ ಬಿಜೆಪಿ ಬಿದ್ದಿದೆ. ಸಮಸ್ಯೆಯನ್ನು ನೇರವಾಗಿ ಎದುರಿಸಬೇಕಾಗಿದೆ. ಕಡೆಗೂ ವಿವಾದ ಗಡಿ ವಿಚಾರದ್ದಾದರೂ, ಎರಡೂ ರಾಜ್ಯಗಳ ನಾಯಕರು ಪಕ್ಷದ ಹಿತಾಸಕ್ತಿಗೇ ಮೊದಲ ಆದ್ಯತೆ ಕೊಡುತ್ತಾರೆಂಬುದೇ ನಿಜ ಎನ್ನಲಾಗುತ್ತಿದೆ.