ಉಚಿತ ಆಹಾರಧಾನ್ಯ ಯೋಜನೆ ಬಡತನಕ್ಕೊಂದು ಪರಿಹಾರವಾದೀತೆ?

Update: 2022-12-30 09:29 GMT

ದೇಶದ 81 ಕೋಟಿ ಬಡವರಿಗೆ ವರ್ಷಕ್ಕೆ ಉಚಿತ ಆಹಾರ ಧಾನ್ಯಗಳನ್ನು ಸರಕಾರ ಘೋಷಿಸಿತ್ತು. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಬರುತ್ತದೆಯಾದರೂ, ಮಾರ್ಚ್ 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಘೋಷಿಸಲಾದ ಉಚಿತ ಆಹಾರ ಧಾನ್ಯಗಳ ಯೋಜನೆಯ ವಿಸ್ತರಣೆಯಂತಿದೆ. ಈ ಯೋಜನೆಯಡಿ ಪ್ರತೀ ಬಡ ವ್ಯಕ್ತಿಗೆ 5 ಕೆ.ಜಿ. ಆಹಾರ ಧಾನ್ಯ ಸಿಗುತ್ತಿತ್ತು. ಕೊರೋನ ಮತ್ತು ಸಂಪೂರ್ಣ ಲಾಕ್‌ಡೌನ್‌ನಿಂದ ತೀವ್ರ ತೊಂದರೆಗೊಳಗಾಗಿರುವ 80 ಕೋಟಿ ಬಡವರಿಗೆ ಇದರ ಉಪಯೋಗವಾಗಿತ್ತು.

ಆ ಸಮಯದಲ್ಲಿ, ಎನ್‌ಎಫ್‌ಎಸ್‌ಎ ಆಗಲೇ ಅಸ್ತಿತ್ವದಲ್ಲಿತ್ತು ಮತ್ತು ಬಡವರಿಗೆ ಸಬ್ಸಿಡಿ ಆಹಾರಧಾನ್ಯವನ್ನು ಒದಗಿಸುತ್ತಿತ್ತು. ಗ್ರಾಮೀಣ ಜನಸಂಖ್ಯೆಯ ಶೇ. 75 ಮತ್ತು ನಗರ ಜನಸಂಖ್ಯೆಯ ಶೇ. 50ರಷ್ಟು ಜನರು ಅದರ ಪ್ರಯೋಜನ ಪಡೆಯುತ್ತಿದ್ದರು. ಅವರ ಸಂಖ್ಯೆ ಒಟ್ಟು 81.34 ಕೋಟಿ ಎಂದು ಅಂದಾಜಿಸಲಾಗಿದೆ. ಎನ್‌ಎಫ್‌ಎಸ್‌ಎಯ ಅಧಿಕೃತ ವೆಬ್‌ಸೈಟ್ ಪ್ರಕಾರ, 80 ಕೋಟಿ ಬಡವರು ಅಕ್ಕಿ, ಗೋಧಿ ಮತ್ತಿತರ ಧಾನ್ಯವನ್ನು ಕೆ.ಜಿ.ಗೆ 3, 2, 1 ರೂ. ದರದಲ್ಲಿ ಪಡೆದಿದ್ದಾರೆ. ಎರಡು ಯೋಜನೆಗಳು ಒಟ್ಟಾಗಿ 2021-22ರಲ್ಲಿ ಆಹಾರ ಸಬ್ಸಿಡಿ ಮೊತ್ತ 2.9 ಲಕ್ಷ ಕೋಟಿ ರೂ. ಎಂದು ಬಜೆಟ್ ದಾಖಲೆಗಳು ಬಹಿರಂಗಪಡಿಸುತ್ತವೆ.

2019-20ರಲ್ಲಿ, ಪಿಎಂಜಿಕೆವೈ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಆಹಾರ ಸಬ್ಸಿಡಿ 1.09 ಲಕ್ಷ ಕೋಟಿ ರೂ. ಇತ್ತು. ಈಗ ಎರಡು ಯೋಜನೆಗಳನ್ನು ಎನ್‌ಎಫ್‌ಎಸ್‌ಎಗೆ ವಿಲೀನಗೊಳಿಸಲಾಗಿದ್ದು, 81 ಕೋಟಿ ಬಡವರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಆದ್ದರಿಂದ, ಪಿಎಂಜಿಕೆವೈ ಅಡಿಯಲ್ಲಿ ಒದಗಿಸಲಾದ ಆಹಾರ ಧಾನ್ಯವನ್ನು ಬಡವರಿಗೆ ನೀಡಲಾಗುತ್ತದೆ. ಆದರೆ ಎನ್‌ಎಫ್‌ಎಸ್‌ಎ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಪಡೆಯುತ್ತಿದ್ದ ಆಹಾರಧಾನ್ಯ ಇನ್ನು ಮುಂದೆ ಬಡವರಿಗೆ ಲಭ್ಯವಾಗುವುದಿಲ್ಲ. ಹೀಗಾಗಿ, ಹಿಂದಿನ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಅಗ್ಗದ ಆಹಾರಧಾನ್ಯಗಳಿಗೆ ವ್ಯಯವಾಗುತ್ತಿದ್ದ ರೂ. 1.09 ಲಕ್ಷ ಕೋಟಿ ಸಬ್ಸಿಡಿಯನ್ನು ಸರಕಾರ ಉಳಿಸುತ್ತದೆ.

ಇದು ಬಡವರ ಮೇಲೆ ಹೆಚ್ಚುವರಿ ಹೊರೆಯಾಗಲಿದ್ದು, ಸರಕಾರ ಉಳಿಸುವ ಸಬ್ಸಿಡಿಗಿಂತ ಅಧಿಕವಾಗಲಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬೆಲೆಗಿಂತ ಈಗ ಆಹಾರ ಧಾನ್ಯಗಳ ಬೆಲೆ ಹೆಚ್ಚಿರುವ ಮುಕ್ತ ಮಾರುಕಟ್ಟೆಯಿಂದ ಬಡವರು ತಮ್ಮ ಅಗತ್ಯದ ಆಹಾರಧಾನ್ಯಗಳನ್ನು ಖರೀದಿಸಬೇಕಾಗುತ್ತದೆ. 2022ರಲ್ಲಿ, ಗೋಧಿ ಉತ್ಪಾದನೆ ಮತ್ತು ಸಂಗ್ರಹಣೆ ಕುಸಿದಿದೆ. ಪ್ರಮುಖ ಭತ್ತ ಬೆಳೆಯುವ ಪ್ರದೇಶಗಳಲ್ಲಿ ತಡವಾಗಿ ಸುರಿದ ಮಳೆ ಮತ್ತು ಕೊನೆಯಲ್ಲಿ ಪ್ರವಾಹದಿಂದಾಗಿ ಭತ್ತದ ಬೆಳೆಗಳು ಸಹ ಹಾನಿಗೊಳಗಾದವು.

ಯಾವುದೇ ಸೋರಿಕೆಯಾಗುವುದಿಲ್ಲ ಎಂದು ಭಾವಿಸಿದರೆ, 316 ಮಿಲಿಯನ್ ಟನ್ ಉತ್ಪಾದನೆಯಲ್ಲಿ 81 ಕೋಟಿ ಜನರಿಗೆ ಸುಮಾರು 100 ಮಿಲಿಯನ್ ಟನ್ ಆಹಾರಧಾನ್ಯವನ್ನು ಒದಗಿಸಲಾಗಿದೆ. ಅಂದರೆ, ಶೇ. 60ರಷ್ಟು ಜನಸಂಖ್ಯೆಯು ಸರಕಾರದಿಂದ ಸುಮಾರು ಶೇ. 32ರಷ್ಟು ಆಹಾರಧಾನ್ಯಗಳನ್ನು ಪಡೆದಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ, 2019-20ರಲ್ಲಿ ಧಾನ್ಯಗಳ ಸರಾಸರಿ ಲಭ್ಯತೆ ಕೊರೋನಕ್ಕಿಂತ ಮೊದಲು ಪ್ರತೀ ವ್ಯಕ್ತಿಗೆ ತಿಂಗಳಿಗೆ 13.9 ಕೆ.ಜಿ. ಇತ್ತು. ಆಗ ಬಡವರು ಮಾರುಕಟ್ಟೆಯಿಂದ ಪ್ರತೀ ತಿಂಗಳು 3.9 ಕೆ.ಜಿ. ಖರೀದಿಸಬೇಕಾಗಿತ್ತು ಮತ್ತು ಈಗ ಅವರು ಪ್ರತೀ ತಿಂಗಳು 8.9 ಕೆ.ಜಿ. ಖರೀದಿಸಬೇಕಾಗುತ್ತದೆ. ಪ್ರತೀ ಕ್ವಿಂಟಾಲ್ ಗೋಧಿಗೆ ಪ್ರಸ್ತುತ ರೂ. 2,500ರ ಬೆಲೆಯಲ್ಲಿ, ಐದು ಜನರ ಕುಟುಂಬಕ್ಕೆ ಹೆಚ್ಚುವರಿ ಮಾಸಿಕ ವೆಚ್ಚ 575 ರೂ. ಆಗಲಿದೆ.

ಹಾಗಾಗಿ ಭಾರತದಲ್ಲಿ ಬಡತನ ಹೆಚ್ಚಾಗಲಿದೆ. ಸಾಂಕ್ರಾಮಿಕ ಸಮಯದಲ್ಲಿ ಕೆಲಸದ ನಷ್ಟ ಮತ್ತು ಆದಾಯದಲ್ಲಿನ ಕುಸಿತದಿಂದಾಗಿ ಇದು ಈಗಾಗಲೇ ಹೆಚ್ಚಾಗಿದೆ. ಮುಖ್ಯವಾಗಿ, ಭಾರತದಲ್ಲಿ 80 ಕೋಟಿ ಬಡವರಿದ್ದಾರೆ, ಅವರಿಗೆ ಉಚಿತ ಆಹಾರ ಧಾನ್ಯಗಳ ಅಗತ್ಯವಿದೆ ಎಂದು ಸರಕಾರ ಒಪ್ಪಿಕೊಂಡಿದೆ.

2018ರ ದಿಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ಯೋಜಿಸಿದರೆ, ಶೇ. 90 ಭಾರತೀಯ ಕುಟುಂಬಗಳು ತಿಂಗಳಿಗೆ ರೂ. 10,000ಕ್ಕಿಂತ ಕಡಿಮೆ ಖರ್ಚು ಮಾಡುತ್ತವೆ. ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ 28 ಕೋಟಿ ಅಸಂಘಟಿತ ವಲಯದ ಕಾರ್ಮಿಕರಲ್ಲಿ, ಶೇ. 94 ಜನರು ತಿಂಗಳಿಗೆ 10,000 ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿದವರಾಗಿದ್ದಾರೆ. ಒಂದು ಕುಟುಂಬದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರೆ, ಕುಟುಂಬದ ಆದಾಯ 20,000 ರೂ.ಗಿಂತ ಕಡಿಮೆ ಇರುತ್ತದೆ.

ಹಾಗಾಗಿ, ಅಂತರ್‌ರಾಷ್ಟ್ರೀಯ ಮಾನದಂಡಗಳ ಪ್ರಕಾರ, ಶೇ. 90 ಭಾರತೀಯರು ಬಡವರು. ಎನ್‌ಎಫ್‌ಎಸ್‌ಎ, ಶೇ. 60 ಜನರನ್ನು ಒಳಗೊಳ್ಳುತ್ತದೆ. ವಾಸ್ತವವಾಗಿ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, 5 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗಿದ್ದರೂ ಸರಕಾರದ ಯೋಜನೆಯು ದೇಶದಲ್ಲಿ ಬಡತನವನ್ನು ಹೆಚ್ಚಿಸಲಿದೆ. ಈಗ, ನೀಡುತ್ತಿರುವ ರಿಯಾಯಿತಿ ಧಾನ್ಯವು ಇನ್ನು ಮುಂದೆ ಲಭ್ಯವಿರುವುದಿಲ್ಲ ಮತ್ತು ಬಡವರು ತಮ್ಮ ಆಹಾರಧಾನ್ಯದ ಅಗತ್ಯದ ಶೇ. 64ರಷ್ಟನ್ನು ಮಾರುಕಟ್ಟೆಯಿಂದ ಹೆಚ್ಚಿನ ಬೆಲೆಗೆ ಖರೀದಿಸಬೇಕಾಗುತ್ತದೆ.

ಬಹುಮುಖ್ಯವಾಗಿ, ದೇಶದಲ್ಲಿ 81 ಕೋಟಿ ಬಡವರಿದ್ದಾರೆ ಎಂದು ಸರಕಾರ ಒಪ್ಪಿಕೊಂಡಿದೆ. ದೃಢವಾದ ಆರ್ಥಿಕ ಬೆಳವಣಿಗೆ ಎಂದು ಸರಕಾರ ಹೇಳಿಕೊಳ್ಳುವಾಗ ಇಷ್ಟೊಂದು ದೊಡ್ಡ ಸಂಖ್ಯೆ ಏಕೆ? ಒಂದೋ ಬೆಳವಣಿಗೆ ಕಡಿಮೆ ಅಥವಾ ಸಂಘಟಿತ ವಲಯದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ವಾಸ್ತವವಾಗಿ, ಎರಡೂ ಸರಿ. ರಾಷ್ಟ್ರದಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ, ಆದರೆ ಅವು ಹೆಚ್ಚು ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿವೆ. ಬಡವರಿಗೆ ಸಬ್ಸಿಡಿ ಕಡಿತಗೊಳಿಸುತ್ತಲೇ ಸರಕಾರ ಅವರಿಗೆ ರಿಯಾಯಿತಿಗಳನ್ನು ಹೆಚ್ಚಿಸುತ್ತಿದೆ. ಇದು ನ್ಯಾಯವೇ?ಕೃಪೆ: thewire.in

Similar News