×
Ad

ಹುಣಸೂರು | ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ: ಮಹಿಳೆ ಸಾವು, ಓರ್ವನಿಗೆ ಗಂಭೀರ ಗಾಯ

Update: 2022-12-30 20:31 IST

ಮೈಸೂರು,ಡಿ.30: ಹೊಲದಲ್ಲಿ ಕೆಲಸ ಮಾಡುತ್ತಿದ್ದ  ಮಹಿಳೆಯೊಬ್ಬರ ಮೇಲೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕ ಬೀಚನಹಳ್ಳಿಯಲ್ಲಿ ನಡೆದಿದೆ.

ಆನೆ ದಾಳಿಗೆ ಸಿಲುಕಿ ಮಹಿಳೆ ಚಿಕ್ಕಮ್ಮ (60) ಮೃತಪಟ್ಟಿದ್ದು, ನಂತರ ಇದೇ ಆಣೆ ಬಿಳಿಕೆರೆ ಗ್ರಾಮದ ರವಿ ಎಂಬುವವರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ.

ಚಿಕ್ಕಬೀಚನಹಳ್ಳಿಯ ಸಿದ್ದೇಗೌಡ ಅವರು ಪತ್ನಿ ಚಿಕ್ಕಮ್ಮ ಅವರೊಂದಿಗೆ ಬೆಳಿಗ್ಗೆ ಹುರುಳಿ ಕಣದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ಮೇಲೆ ಆನೆ ದಾಳಿ ಮಾಡಿದೆ. ಈ ವೇಳೆ ಸಿದ್ದೇಗೌಡ ಓಡಿಹೋಗಿದ್ದು,  ಚಿಕ್ಕಮ್ಮ ಅವರಿಗೆ ಅಲ್ಲಿಂದ ತಕ್ಷಣಕ್ಕೆ ಓಡಿಹೋಗಲು ಸಾಧ್ಯವಾಗದೆ ಆನೆ ಕಾಲಿಗೆ ಸಿಕ್ಕು ಮೃತಪಟ್ಟಿದ್ದಾರೆನ್ನಲಾಗಿದೆ. 

ಮೃತ ಕುಟುಂಬಸ್ಥರ ಮನೆಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಆನೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ  ನೀಡಿದ್ದಾರೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News