ಚಾಮರಾಜನಗರ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

Update: 2022-12-30 15:27 GMT

ಚಾಮರಾಜನಗರ: ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ನ್ಯಾಯಾಲಯವು ದಂಡಸಮೇತ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿತು.

ಯಳಂದೂರು ಪಟ್ಟಣ ನಿವಾಸಿ ಮಹೇಶ್(38) ಶಿಕ್ಷೆಗೊಳಗಾದ ವ್ಯಕ್ತಿ.

ಮಕ್ಕಳ ಸ್ನೇಹಿ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎ.ಸಿ‌.ನಿಶಾರಾಣಿ ಈ ಆದೇಶ ಮಾಡಿದರು. ಅಪರಾಧಿಗೆ ಶಿಕ್ಷೆಯೊಂದಿಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ. ಕಾನೂನು ಸೇವಾ ಪ್ರಾಧಿಕಾರವು ಸಂತ್ರಸ್ತೆಗೆ 4 ಲಕ್ಷ ರೂ. ಪರಿಹಾರ ಕೊಡುವಂತೆ ಸೂಚಿಸಿದೆ.

ಘಟನೆಯ ಹಿನ್ನೆಲೆ: 2019ರಲ್ಲಿ ಆರೋಪಿ ಮಹೇಶ್ ಮನೆಯಲ್ಲಿ ತನ್ನ ಮಗಳೊಂದಿಗೆ ಸಂತ್ರಸ್ತ ಬಾಲಕಿ ಟಿವಿ ನೋಡುತ್ತಿದ್ದಳು. ಈ ಸಂದರ್ಭದಲ್ಲಿ ತನ್ನ ಮಗಳನ್ನು ಹೊರಕಳುಹಿಸಿ ಮಹೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಬಾಲಕಿ ಅನಾರೋಗ್ಯಗೊಂಡಿದ್ದು ಕೃತ್ಯ  ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೇಶ್ ವಾದ ಮಂಡಿಸಿದ್ದರು.

Similar News