'ಪಕ್ಷದ ಬಾವುಟ ಬಳಸದ ಶಿವಲಿಂಗೇಗೌಡ': ಅರಸೀಕೆರೆ ಕ್ಷೇತ್ರದ ಗೊಂದಲ ನಿವಾರಿಸುವಂತೆ ಜೆಡಿಎಸ್ ಕಾರ್ಯಕರ್ತರಿಂದ ಆಗ್ರಹ

''ರೇವಣ್ಣ ಕುಟುಂಬದಿಂದ ಯಾರಾದರೂ ಸ್ಪರ್ಧಿಸಲಿ''

Update: 2022-12-30 15:52 GMT

ಹಾಸನ, ಡಿ.30: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು, ಕ್ಷೇತ್ರದ ಗೊಂದಲ ನಿವಾರಣೆ ಮಾಡುವಂತೆ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಲ್ಲದೇ, ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ಶುಕ್ರವಾರ ನಗರದ ಸಂಸದರ ನಿವಾಸಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗಮಿಸಿದಾಗ ಸ್ಥಳಕ್ಕೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಮುಖಂಡರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ಈ ವೇಳೆ ಕೆಲವರು ಏರು ಧ್ವನಿಯಲ್ಲಿಯೇ ಪ್ರಶ್ನೆ ಮಾಡಿದ ಪ್ರಸಂಗವೂ ಕೂಡ ನಡೆಯಿತು.

ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿ; 'ಶಿವಲಿಂಗೇಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹ ಕ್ಷೇತ್ರದಾದ್ಯಂತ ಹರಿದಾಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಅವರ ನಡೆಯೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಬೇಕಿದ್ದರೆ ಕೆ.ಎಂ. ಶಿವಲಿಂಗೇಗೌಡ ಅವರನ್ನೇ ಉಳಿಸಿಕೊಳ್ಳಲಿ, ಇಲ್ಲ ರೇವಣ್ಣ ಅವರ ಕುಟುಂಬದಿಂದ ಯಾರಾದರೂ ಸ್ಪರ್ಧಿಸಲಿ. ಒಟ್ಟಿನಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿ' ಎಂದು ಒತ್ತಾಯ ಮಡಿದರು.

ಹಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರು ಗೊಂದಲದಲ್ಲಿದ್ದು, ಇದನ್ನು ನಿವಾರಣೆ ಮಾಡಬೇಕು ಎಂದು ಕೋರಿದರು.

ಜೆಡಿಎಸ್ ಪಕ್ಷದಿಂದ ಗೆದ್ದು, ಯಾವುದೇ ಕಾರ್ಯಕ್ರಮದಲ್ಲೂ ಮಾತೃ ಪಕ್ಷದ ಬಾವುಟ ಬಳಸದ ಶಿವಲಿಂಗೇಗೌಡ ಅವರು, ಜೆಡಿಎಸ್ ಕಾರ್ಯಕರ್ತರಿಗಿಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಸ್ಪಂದಿಸುತ್ತಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರ್ಯಕ್ರಮಗಳಿಗೂ ಜೆಡಿಎಸ್ ಕಾರ್ಯಕರ್ತರನ್ನು ಆಹ್ವಾನಿಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೇ ಮಣೆ ಹಾಕುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚು ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದರು. ರೇವಣ್ಣನವರ ಎದುರೇ ಕಾರ್ಯಕರ್ತರು ಕೂಗಾಡಿದರು. ಈವೇಳೆ ಸಮಧಾನ ಮಾಡಲು ರೇವಣ್ಣನವರು ಮುಂದಾದರು. 2023ರ ಚುನಾವಣೆ ಸಮೀಪ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದ್ದು, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಒತ್ತಡ ಕಂಡು ಬರುತ್ತಿದೆ. 

ಇದನ್ನೂ ಓದಿ: ಹಾವೇರಿ ಸಮ್ಮೇಳನದ ಕವಿಗೋಷ್ಠಿ ತಿರಸ್ಕರಿಸಿದ ಯುವ ಬರಹಗಾರ

Similar News