×
Ad

ಕೆಎಂಎಫ್-ಅಮುಲ್‌ ಒಂದಾಗುವ ಸುಳಿವು ಕೊಟ್ಟ ಅಮಿತ್‌ ಶಾ: 'ನಂದಿನಿ‌ ಉಳಿಸಿ' ಅಭಿಯಾನ ಆರಂಭಿಸಿದ ಕನ್ನಡಿಗರು

Update: 2022-12-30 23:40 IST

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿದ್ದು, ಅಮುಲ್ ಮತ್ತು ನಂದಿನಿ ಜಂಟಿಯಾಗಿ ಕೆಲಸ ಮಾಡಿದರೆ, ಮೂರು ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ ಎಂದು ಹೇಳಿದ್ದಾರೆ. 

ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಅಮುಲ್‌ನಿಂದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತದೆ, ಈ ದಿಸೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಒಗ್ಗೂಡಿದರೆ ದೇಶಾದ್ಯಂತ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳುವ ಮೂಲಕ ಅಮುಲ್‌ ಹಾಗೂ ನಂದಿನಿ ಒಂದಾಗುವ ಆರಂಭಿಕ ಮುನ್ಸೂಚನೆಗಳನ್ನು ಶಾ ನೀಡಿದ್ದಾರೆ. ಅಮಿತ್‌ ಶಾ ಅವರ ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದಿದ್ದು, ನಂದಿನಿಯು ಅಮುಲ್‌ ಜೊತೆ ವಿಲೀನಗೊಳ್ಳಬಹುದೆಂಬ ಆತಂಕವನ್ನು ಕನ್ನಡಿಗರು ವ್ಯಕ್ತಪಡಿಸಿದ್ದಾರೆ. #SaveNandini ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಕೆಎಂಎಫ್‌ ನಂದಿನಿಯನ್ನು ಉಳಿಸಬೇಕು ಎಂಬ ಟ್ವಿಟರ್‌ ಅಭಿಯಾನವೂ ಆರಂಭವಾಗಿದೆ. 

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ ವಸಂತ್‌ ಶೆಟ್ಟಿ ಎಂಬವರು, “ನಂದಿನಿ, KMF ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮೂಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, SBI ಜೊತೆ SBM ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತಷ್ಟೆ.” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಚೇತನ್‌ ಸೂರ್ಯ ಎಂಬವರು ಪ್ರತಿಕ್ರಿಯಿಸಿ “ಈಗ ನಂದಿನಿ ಹಾಲಿಗೆ ಕರ್ನಾಟಕದ ಆರಾಧ್ಯ ದೈವ ಅಪ್ಪು ರಾಯಬಾರಿ; KMF ಸದ್ಯ ಲಾಭದಲ್ಲಿದೆ. ಇಂತಹ ಸಂಸ್ಥೆಯನ್ನು ಗುಜರಾತ್ ನ ಅಮುಲ್ ಜೊತೆಗೆ ಲೀನಗೊಳಿಸುವ ಹುನ್ನಾರವನ್ನ ಈಗಲೇ ಖಂಡಿಸಬೇಕು...  ಇದು ಕರ್ನಾಟಕದ ರೈತರ ಬದುಕಿಗೆ ಕೊಡಲಿ ಪೆಟ್ಟು ಕೊಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು. ಗುಜರಾತ್ ನ "ಅಮುಲ್" ಮತ್ತು ಕರ್ನಾಟಕದ "ಕೆಎಂಎಫ್" ಒಟ್ಟಾಗಿ ಕೆಲಸ ಮಾಡಬೇಕು ಎಂದು ಇಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ. ಇದು ಅಪಾಯದ ಮುನ್ಸೂಚನೆ! ಈಗಾಗಲೇ ಕರ್ನಾಟಕದಲ್ಲಿ ಲಾಭದಲ್ಲಿದ್ದ ವಿಜಯ ಬ್ಯಾಂಕ್, ಮೈಸೂರು ಬ್ಯಾಂಕ್ ಗಳು ಅಸ್ತಿತ್ವ ಕಳೆದುಕೊಂಡಾಗಿದೆ.” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ದಿವಾಳಿಯಾದ ಬ್ಯಾಂಕ್ ಆಫ್ ಬರೊಡ ನ, ಚೆನ್ನಾಗಿದ್ದ ನಮ್ಮ ವಿಜಯ ಬ್ಯಾಂಕ್ ಜೊತೆ ಸೇರಿಸಿ ಕನ್ನಡಿಗರಿಗಿದ್ದ ಲಾಭ, ಕೆಲಸ ಎಲ್ಲಾನು ಕಿತ್ಕೊಂಡು ಅದಕ್ಕೆ ಮತ್ತೆ ದಿವಾಳಿಯಾಗಿದ್ದ ಬ್ಯಾಂಕ್ ಹೆಸರನ್ನೆ ಇಟ್ಟಿದ್ದೀರ, ಇವಾಗ ಆ ಗತಿ ನಮ್ಮ ನಂದಿನಿಗೆ, ರೈತರಿಗೆ ಬರೋದು ಬೇಡ......" ಎಂದು ಹರೀಶ್ ಗೌಡ ಎಂಬವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮೂಲ್ ಮತ್ತು ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಡೇರಿ ಸ್ಥಾಪನೆ ಸಾಧ್ಯ: ಅಮಿತ್ ಶಾ

Similar News