×
Ad

ಹೊಸವರ್ಷ: ಕಾಫಿನಾಡಿನಲ್ಲಿ ಹೆಚ್ಚಿದ ಜನಸಾಗರ

ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ, ಲಾಡ್ಜ್‌ಗಳು ಭರ್ತಿ

Update: 2022-12-31 10:20 IST

ಚಿಕ್ಕಮಗಳೂರು, ಡಿ.31: ನೂತನ ವರ್ಷಾಚರಣೆಗೆ ಒಂದು ದಿನ ಬಾಕಿ ಇದ್ದು, ಹೊಸ ವರ್ಷಾಚರಣೆಗೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಕಾಫಿನಾಡಿನತ್ತ ಮುಖ ಮಾಡಿದ್ದಾರೆ. ಪರಿಣಾಮ ನಗರ ಸೇರಿದಂತೆ ಸುತ್ತಮುತ್ತಲ ಹೋಮ್‌ಸ್ಟೇ, ರೆಸಾರ್ಟ್, ಹೋಟೆಲ್, ಲಾಡ್ಜ್‌ಗಳು ಪ್ರವಾಸಿಗರಿಂದ ತುಂಬಿ ತುಳುಕಲಾರಂಭಿಸಿವೆ.

ಪ್ರವಾಸಿತಾಣಗಳಿಗೆ ಭೇಟಿಯ ಜೊತೆಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೋಮ್‌ಸ್ಟೇ, ರೆಸಾರ್ಟ್, ಹೋಟೆಲ್‌ಗಳು ಈಗಾಗಲೇ ಬುಕ್ ಆಗಿದೆ. ಸಾವಿರಾರು ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಡಲು ಮುಂದಾಗಿದ್ದು, ನ್ಯೂ ಇಯರ್ ಜೊತೆಗೆ ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಕೆಮ್ಮಣ್ಣಗುಂಡಿ, ಕುದುರೆಮುಖ ಸೇರಿದಂತೆ ಇತರ ಪ್ರವಾಸಿತಾಣಗಳಿಗೆ ಲಗ್ಗೆ ಇಡಲಿದ್ದಾರೆ.

ಹೋಮ್‌ಸ್ಟೇ, ರೆಸಾರ್ಟ್, ಹೋಟೆಲ್‌ಗಳ ಮಾಲಕರು, ಸಿಬ್ಬಂದಿ ಪ್ರವಾಸಿಗರ ಸತ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ಸೇವೆಗಳನ್ನು ನೀಡುವ ಬಗ್ಗೆ ಪೋಸ್ಟರ್, ಫ್ಲೆಕ್ಸ್‌ಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾರಂಭಿಸಿದ್ದಾರೆ. ಹೊಸವರ್ಷದ ಸಂದರ್ಭದಲ್ಲಿ ಕಾಫಿನಾಡಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದು ಸಾಮಾನ್ಯವಾಗಿದ್ದು, ಈ ಸಮಯವನ್ನು ಬಳಸಿಕೊಂಡು ವಿವಿಧ ಸೇವೆಗಳ ನೆಪದಲ್ಲಿ ಪ್ರವಾಸಿಗರಿಂದ ಹೆಚ್ಚಿನ ಹಣ ಸುಲಿಗೆ ಮಾಡಲು ಹೋಮ್ ಸ್ಟೇ, ರೆಸಾರ್ಟ್ ಗಳು ಮುಂದಾಗಿವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.

ಸದ್ಯ ಕೋವಿಡ್ 4ನೇ ಅಲೆ ವ್ಯಾಪಿಸುವ ಭಯ ಸಾರ್ವಜನಿಕರನ್ನು ಆವರಿಸಿದ್ದು, ಈ ನಿಟ್ಟಿನಲ್ಲಿ ಸರಕಾರ ಈಗಾಗಲೇ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಎಚ್ಚರಿಕೆಯಿಂದ ಪ್ರವಾಸಿಗರು ಹೊಸ ವರ್ಷಾಚರಣೆ ಆಚರಿಸುವಂತೆ ಜಿಲ್ಲಾಡಳಿತವು ಸೂಚಿಸಿದೆ. ಹೋಮ್‌ಸ್ಟೇ, ರೆಸಾರ್ಟ್, ಹೋಟೆಲ್‌ಗಳಲ್ಲಿ ತಂಗುವ ಪ್ರವಾಸಿಗರು ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದು, ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಅತಿಥಿ ಗೃಹಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ಕಟ್ಟುನಿಟ್ಟಿನ ಆದೇಶವನ್ನು ನೀಡಲಾಗಿದೆ

ಕಳೆದ ಮೂರು ವರ್ಷಗಳಿಂದ ಕೊರೋನ, ಲಾಕ್‌ಡೌನ್‌ನಿಂದ ವ್ಯವಹಾರವಿಲ್ಲದೆ ಕಂಗೆಟ್ಟಿದ್ದ ಹೋಮ್ ಸ್ಟೇ, ರೆಸಾರ್ಟ್, ಹೋಟೆಲ್ ಮಾಲಕರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುವ ಪ್ರವಾಸಿಗರಿಂದ ವಹಿವಾಟು ವೃದ್ಧಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಹೊಸವರ್ಷದ ಸಂಭ್ರಮದ ನೆಪದಲ್ಲಿ ಪ್ರವಾಸಿಗರ ಸುಲಿಗೆ ತಪ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

------------------------------------------

ಕೋವಿಡ್ 4ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕೆಲ ಮಾರ್ಗಸೂಚಿಗಳನ್ನು ಈಗಾಗಲೇ ನೀಡಿದೆ. ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ವರ್ಷಾಚರಣೆಗೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮೈಮರೆಯದೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು.

ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

----------------------------------------------------

ಪೊಲೀಸ್ ಇಲಾಖೆಯಿಂದ ಸೂಚನೆ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಜಿಲ್ಲಾದ್ಯಂತ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು, ಪೆಟ್ರೋಲಿಂಗ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಎಎಸ್‌ಸಿ ತಂಡದಿಂದ ತಪಾಸಣೆಕೈಗೊಳ್ಳಲಾಗುವುದು. ಜಿಲ್ಲೆ ಮತ್ತು ನಗರದ ಗಡಿಗಳಲ್ಲಿ ಚೆಕ್‌ಪೋಸ್ಟ್ ಗಳನ್ನು ತೆರೆಯಲಾಗಿದೆ. ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತುಗಳ ಬಳಕೆ, ರೇವ್ ಪಾರ್ಟಿಗಳನ್ನು ನಡೆಸಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅತಿವೇಗದಿಂದ ವಾಹನ ಚಲಾಯಿಸುವುದು, ಬೇಜವ್ದಾರಿಯಿಂದ ವಾಹನ ಓಡಿಸುವುದು, ವ್ಹೀಲಿಂಗ್ ಮಾಡುವುದು, ಮದ್ಯಪಾನ ಮಾಡಿ ವಾಹನ ಓಡಿಸುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಹೊಸ ವರ್ಷಾಚರಣೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಸಾರ್ವಜನಿಕರು 112ಗೆ ಕರೆ ಮಾಡಿ ಸಹಕಾರ ನೀಡಬೇಕು. ಧ್ವನಿವರ್ಧಕ ಬಳಕೆಗೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

Similar News