ಸತ್ವಹೀನತೆಯಿಂದ ತತ್ವಹೀನತೆಯೆಡೆಗೆ -ಸಾಹಿತ್ಯಕ ಪಯಣ

ಸಾಹಿತ್ಯ ಮತ್ತು ವಿಶಾಲ ಸಮಾಜದ ನಡುವಿನ ಸೂಕ್ಷ್ಮಕೊಂಡಿಯಲ್ಲಿ ಸಾಕಷ್ಟು ಒಳಬಿರುಕುಗಳಿವೆ

Update: 2022-12-31 09:08 GMT

ಸಾಹಿತ್ಯ ಪರಿಷತ್ ಅಧ್ಯಕ್ಷರು ‘‘ಕನ್ನಡ ಸಾಹಿತ್ಯ ಪರಿಷತ್ತು ಎಡಪಂಥ, ಬಲಪಂಥ, ಮೇಲ್ಪಂಥ, ಕೆಳಪಂಥ, ಮಧ್ಯಮಪಂಥ ಹೀಗೆ ಯಾವ ಚೌಕಟ್ಟಿಗೂ ಸಿಲುಕವಂತಹುದಲ್ಲ, ಅದು ಕನ್ನಡ ಪಂಥಕ್ಕೆ ಸೇರಿದ್ದು’’ ಎಂದು ಹೇಳಿದ್ದಾರೆ. ಈ ‘ಕನ್ನಡ ಪಂಥ’ದ ವ್ಯಾಪ್ತಿಯಲ್ಲಿ ನಾವು ನೋಡಬೇಕಿರುವುದು ಕೇವಲ ಗ್ರಾಂಥಿಕ ಅಕ್ಷರಗಳನ್ನಲ್ಲ ಎಂಬ ವಿವೇಚನೆಯೂ ನಮಗಿರಬೇಕಲ್ಲವೇ? ಅಕ್ಷರಗಳಲ್ಲಿ ಮೂಡುವ ಅಭಿವ್ಯಕ್ತಿಗಳನ್ನೂ ಮೀರಿದ ಒಂದು ಸಾಮಾಜಿಕ-ಸಾಂಸ್ಕೃತಿಕ ಜಗತ್ತು ನಮ್ಮ ಸುತ್ತಲೂ ಅನಾವರಣಗೊಳ್ಳುತ್ತಿದೆಯಲ್ಲವೇ? ಈ ಜಗತ್ತಿನಲ್ಲಿ ಢಾಳಾಗಿ ಕಾಣುತ್ತಿರುವ ತರತಮಗಳು, ದೌರ್ಜನ್ಯಗಳು, ಅಸಮಾನತೆಯ ಮತ್ತು ಶೋಷಣೆಯ ನೆಲೆಗಳನ್ನು ಸಾಹಿತ್ಯ ಲೋಕದ ಪುಟಗಳಲ್ಲಿ ದಾಖಲಿಸಲಾಗುತ್ತಿದೆಯೇ? ‘ಇಲ್ಲ’ ಎಂದಾದರೆ ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ? ಹಾಗೆಯೇ ದಾಖಲಾಗದೆ ಉಳಿದು ಹೋದ ಸಮಾಜವನ್ನು ಶೋಧಿಸಿ ವಾಸ್ತವತೆಯನ್ನು ಹೊರಗೆಳೆಯುವ ಒಂದು ವೇದಿಕೆಯಾಗಿ ‘ಸಾಹಿತ್ಯ ಸಮ್ಮೇಳನ’ ರೂಪುಗೊಳ್ಳಬೇಕಲ್ಲವೇ? 

 ಜಾತಿ ಶ್ರೇಣೀಕರಣ, ಬಹುಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಧರ್ಮೀಯ ನೆಲೆಗಳನ್ನು ಹೊತ್ತು ಶತಮಾನಗಳಷ್ಟು ಮುನ್ನಡೆದಿರುವ ಭಾರತದಂತಹ ದೇಶದಲ್ಲಿ ಸಾಹಿತ್ಯ ಮತ್ತು ಕಲೆ ತಮ್ಮದೇ ಆದ ಬೌದ್ಧಿಕ-ಲೌಕಿಕ-ನೈತಿಕ ಜವಾಬ್ದಾರಿಯನ್ನು ಹೊತ್ತಿರುವುದು ಅತ್ಯವಶ್ಯ. ದೇಶದ ಬಹುಸಂಖ್ಯಾತ ಜನತೆಗೆ ಅಲಭ್ಯವಾಗಿದ್ದ ಅಕ್ಷರ ಸಾಹಿತ್ಯಕ್ಕೆ ಪ್ರತಿಯಾಗಿ ಮೂಡಿಬಂದಂತಹ ಜನಪದ ಸಾಹಿತ್ಯ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ನಿರ್ಲಕ್ಷ್ಯಕ್ಕೊಳಗಾದ ಜನಸಮುದಾಯಗಳಿಗೆ ಬದುಕು ಬವಣೆಗಳನ್ನು ಬಿಂಬಿಸಿತ್ತು. ಶತಮಾನಗಳ ಇತಿಹಾಸ ಇರುವ ಈ ಜನಪದ ಪರಂಪರೆ ಮತ್ತು ಮೌಖಿಕ ಸಾಹಿತ್ಯದ ನೆಲೆಗಳನ್ನು ಇಂದಿಗೂ ಸಹ ವಿಸ್ತರಿಸುತ್ತಲೇ ಬರುತ್ತಿರುವ ಆಧುನಿಕ ಸಮಾಜ, ಸಮಾಜದ ಬೌದ್ಧಿಕ ಫಲವತ್ತತೆಯನ್ನೂ ಸಹ ಈ ನೆಲೆಗಳಿಂದಲೇ ಗುರುತಿಸಬೇಕಾಗಿದೆ. ಈ ಪ್ರಯತ್ನದ ನಡುವೆಯೇ ವರ್ತಮಾನದ ಬದುಕಿಗೆ ಹತ್ತಿರವಾಗುವ ಅಕ್ಷರ ಸಾಹಿತ್ಯದ ಹಲವು ರೂಪಗಳು ಸಾಂಪ್ರದಾಯಿಕ ಸಮಾಜಕ್ಕೆ ಮುಖಾಮುಖಿಯಾಗುತ್ತಲೇ, ಆಧುನಿಕ ಭವಿಷ್ಯದೊಡನೆ ಅನುಸಂಧಾನ ಮಾಡಬೇಕಾಗುತ್ತದೆ. ಅಕ್ಷರ ಸಾಹಿತ್ಯದ ಪ್ರಾತಿನಿಧಿಕ ಸಂಸ್ಥೆಯಾಗಿ ‘ಕನ್ನಡ ಸಾಹಿತ್ಯ ಪರಿಷತ್ತು’ ಈ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಬೇಕಾಗುತ್ತದೆ. ಭಾಷೆ ಸಾಹಿತ್ಯ ಮತ್ತು ಸಮಾಜ

 ಭಾಷೆ ಮತ್ತು ಭಾಷಿಕರ ನಡುವೆ ಇರುವ ಅಮೂರ್ತ ಸಂಬಂಧಗಳು, ಭೌಗೋಳಿಕ ರಾಜ್ಯ ಮತ್ತು ಭಾಷಿಕ ಸಮುದಾಯಗಳ ನಡುವೆ ಇರುವ ಸೂಕ್ಷ್ಮ ಸಂಬಂಧಗಳು, ಆಡಳಿತ ವ್ಯವಸ್ಥೆ ಮತ್ತು ಜನತೆಯ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳ ನಡುವೆ ಇರುವ ದೈನಂದಿನ ಬದುಕಿನ ಸವಾಲುಗಳು, ಇವೆಲ್ಲವನ್ನೂ ಗಮನಿಸುತ್ತಲೇ ಸಾಮಾನ್ಯ ಜನತೆಯ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸವಾಲುಗಳಿಗೆ ಮಾನವೀಯ ಸ್ಪರ್ಷ ಮತ್ತು ಸಮನ್ವಯತೆಯ ಆಯಾಮವನ್ನು ನೀಡುವ ಜವಾಬ್ದಾರಿಯೂ ಅಕ್ಷರ ಸಾಹಿತ್ಯ ಲೋಕದ ಮೇಲಿರುತ್ತದೆ. ಜನಪದ ಸಾಹಿತ್ಯ ಸಹಜವಾಗಿಯೇ ಈ ಜವಾಬ್ದಾರಿಯನ್ನು ನಿಭಾಯಿಸುತ್ತದೆ ಏಕೆಂದರೆ ಅದು ಜನಸಮೂಹಗಳ ಗರ್ಭದೊಳಗಿಂದಲೇ ಉಗಮಿಸುತ್ತದೆ. ಬಾಹ್ಯ ಸಮಾಜದಿಂದ ಉಗಮಿಸುವ ಅಕ್ಷರ ಸಾಹಿತ್ಯ ಎಚ್ಚರಿಕೆಯಿಂದಲೇ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ‘ಕನ್ನಡ ಸಾಹಿತ್ಯ ಪರಿಷತ್ತು’ ಎನ್ನುವ ಒಂದು ಪ್ರಾತಿನಿಧಿಕ ಸಂಸ್ಥೆಯ ಸ್ಥಾಪನೆಯನ್ನು ಈ ಎಲ್ಲ ಆಯಾಮಗಳಿಂದಲೂ ಗಮನಿಸಬೇಕಿದೆ. 

ತನ್ನ ಶತಮಾನದ ಇತಿಹಾಸದಲ್ಲಿ ಪರಿಷತ್ತು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದೆಯೇ ಎಂದು ಪ್ರಶ್ನಿಸಿಕೊಂಡಾಗ ಪ್ರಶ್ನೆಯೇ ಜಟಿಲ ಎನಿಸಿಬಿಡುತ್ತದೆ. ಏಕೆಂದರೆ ಕಳೆದ ಕೆಲವು ದಶಕಗಳಲ್ಲಿ ಸಾಹಿತ್ಯ ಪರಿಷತ್ತು ನಡೆದುಬಂದ ಹಾದಿಯನ್ನು ಗಮನಿಸಿದಾಗ, ಬಾಹ್ಯ ಸಮಾಜದ ರಾಜಕೀಯ-ಸಾಂಸ್ಕೃತಿಕ ವಿದ್ಯಮಾನಗಳೊಂದಿಗೇ, ಮಾರುಕಟ್ಟೆ ಆರ್ಥಿಕತೆ, ಕಾರ್ಪೊರೇಟ್ ಸಂಸ್ಕೃತಿ ಹಾಗೂ ಬದಲಾಗುತ್ತಿರುವ ಜಾತಿ-ಮತ ಕೇಂದ್ರಿತ ಸಾಮಾಜಿಕ ಪಲ್ಲಟಗಳಿಂದ ಪ್ರಭಾವಿತವಾಗಿರುವ ಸಾಹಿತ್ಯ ಪರಿಷತ್ತು ತನ್ನ ಮೂಲ ನೆಲೆಯಿಂದ ಬಹುದೂರ ಸಾಗಿರುವುದು ಸ್ಪಷ್ಟವಾಗುತ್ತದೆ. ಅಧಿಕಾರ ರಾಜಕಾರಣ ಮತ್ತು ಇದಕ್ಕೆ ಹೊಂದಿಕೊಂಡೇ ಮುನ್ನಡೆಯುವ ಆರ್ಥಿಕತೆ ಸಾಹಿತ್ಯ ಪರಿಷತ್ತಿನ ಪ್ರತೀ ಹೆಜ್ಜೆಯನ್ನೂ ನಿಯಂತ್ರಿಸುತ್ತಿರುವುದು, ನಿರ್ಬಂಧಿಸುತ್ತಿರುವುದು ಸುಸ್ಪಷ್ಟವಾಗಿ ಕಾಣುತ್ತದೆ. ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಸಾಹಿತ್ಯ ಪರಿಷತ್ತಿಗೆ ನಡೆಯುವ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗುತ್ತದೆ. ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪಟ್ಟಿಯನ್ನು ನೋಡಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸತ್ವಹೀನವಾಗಲು ಇದೂ ಒಂದು ಕಾರಣ. ಇದಕ್ಕೂ ದೀರ್ಘ ಇತಿಹಾಸವಿದೆ.

ಅಕ್ಷರ ಜಾತ್ರೆ ಎಂದೇ ಪರಿಗಣಿಸಲಾಗುವ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆಯ್ಕೆ ಮತ್ತು ಆದ್ಯತೆಗಳು ಏನಿರಬೇಕು? ಪ್ರತೀ ವರ್ಷ ನಡೆಯುವ ಈ ಸಮ್ಮೇಳನಗಳಲ್ಲಿ ನಾವು ಕಾಣಬಯಸುವುದು ಅಕ್ಷರ ಸಾಹಿತ್ಯದ ಅತ್ಮರತಿಯನ್ನೋ ಅಥವಾ ಸಾಹಿತ್ಯ ಪಯಣದ ಆತ್ಮಾವಲೋಕನವನ್ನೋ ಅಥವಾ ಭವಿಷ್ಯದ ದಿಕ್ಸೂಚಿಯನ್ನೋ? 50 ವರ್ಷಗಳ ಹಿಂದೆ ನಡೆದ ಸಮ್ಮೇಳನದ ಆದ್ಯತೆ, ಆಶಯಗಳೂ, ವರ್ತಮಾನದ ಆದ್ಯತೆ, ಆಶಯಗಳೂ ಒಂದೇ ಆಗಿರಬೇಕೇ? ತನ್ನ ಸುತ್ತಲಿನ ಪಲ್ಲಟಗಳನ್ನು ಮತ್ತು ತಾನು ಪ್ರತಿನಿಧಿಸುವ ಕೋಟ್ಯಂತರ ಜನರ ಬದುಕನ್ನು ಬಾಧಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ವ್ಯತ್ಯಯಗಳನ್ನು ಸಾಹಿತ್ಯಕ ವಲಯ ಹೇಗೆ ಗ್ರಹಿಸುತ್ತಿದೆ, ಈ ಹತಾಶೆ ಮತ್ತು ಆಕ್ರೋಶಗಳಿಗೆ ವರ್ತಮಾನದ ಅಕ್ಷರ ಸಾಹಿತ್ಯ ಹೇಗೆ ಸ್ಪಂದಿಸುತ್ತಿದೆ ಎನ್ನುವ ಜಟಿಲ-ಸಂಕೀರ್ಣ ಪ್ರಶ್ನೆಗಳು ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ವನ್ನು ಕಾಡಲೇಬೇಕಲ್ಲವೇ? ಈ ಶೋಧನೆಯನ್ನು ನಡೆಸುವ ವ್ಯಕ್ತಿಗತ ಜವಾಬ್ದಾರಿಯನ್ನು ಲೇಖಕರು, ಕವಿಗಳು, ನಾಟಕಕಾರರು ನಿಭಾಯಿಸುತ್ತಿದ್ದರೂ, ಸಾಮಾಜಿಕ ಸ್ವಾಸ್ಥ್ಯ, ಸಮನ್ವಯ ಮತ್ತು ಸೌಹಾರ್ದವನ್ನು ಕಾಪಾಡಲು ಬಯಸುವ ‘ಸಾಹಿತ್ಯ ಲೋಕ/ವಲಯ’ ಸಮಷ್ಟಿ ನೆಲೆಯಲ್ಲಿ ಹೇಗೆ ನಿರ್ವಹಿಸುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮನ್ನು ಕಾಡಬೇಕಲ್ಲವೇ? ಸಾಹಿತ್ಯ ಪರಿಷತ್ ಅಧ್ಯಕ್ಷರು ‘‘ಕನ್ನಡ ಸಾಹಿತ್ಯ ಪರಿಷತ್ತು ಎಡಪಂಥ, ಬಲಪಂಥ, ಮೇಲ್ಪಂಥ, ಕೆಳಪಂಥ, ಮಧ್ಯಮಪಂಥ ಹೀಗೆ ಯಾವ ಚೌಕಟ್ಟಿಗೂ ಸಿಲುಕವಂತಹುದಲ್ಲ, ಅದು ಕನ್ನಡ ಪಂಥಕ್ಕೆ ಸೇರಿದ್ದು’’ ಎಂದು ಹೇಳಿದ್ದಾರೆ. 

ಈ ‘ಕನ್ನಡ ಪಂಥ’ದ ವ್ಯಾಪ್ತಿಯಲ್ಲಿ ನಾವು ನೋಡಬೇಕಿರುವುದು ಕೇವಲ ಗ್ರಾಂಥಿಕ ಅಕ್ಷರಗಳನ್ನಲ್ಲ ಎಂಬ ವಿವೇಚನೆಯೂ ನಮಗಿರಬೇಕಲ್ಲವೇ? ಅಕ್ಷರಗಳಲ್ಲಿ ಮೂಡುವ ಅಭಿವ್ಯಕ್ತಿಗಳನ್ನೂ ಮೀರಿದ ಒಂದು ಸಾಮಾಜಿಕ-ಸಾಂಸ್ಕೃತಿಕ ಜಗತ್ತು ನಮ್ಮ ಸುತ್ತಲೂ ಅನಾವರಣಗೊಳ್ಳುತ್ತಿದೆಯಲ್ಲವೇ? ಈ ಜಗತ್ತಿನಲ್ಲಿ ಢಾಳಾಗಿ ಕಾಣುತ್ತಿರುವ ತರತಮಗಳು, ದೌರ್ಜನ್ಯಗಳು, ಅಸಮಾನತೆಯ ಮತ್ತು ಶೋಷಣೆಯ ನೆಲೆಗಳನ್ನು ಸಾಹಿತ್ಯ ಲೋಕದ ಪುಟಗಳಲ್ಲಿ ದಾಖಲಿಸಲಾಗುತ್ತಿದೆಯೇ? ‘ಇಲ್ಲ’ ಎಂದಾದರೆ ಏಕೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ? ಹಾಗೆಯೇ ದಾಖಲಾಗದೆ ಉಳಿದು ಹೋದ ಸಮಾಜವನ್ನು ಶೋಧಿಸಿ ವಾಸ್ತವತೆಯನ್ನು ಹೊರಗೆಳೆಯುವ ಒಂದು ವೇದಿಕೆಯಾಗಿ ‘ಸಾಹಿತ್ಯ ಸಮ್ಮೇಳನ ’ ರೂಪುಗೊಳ್ಳಬೇಕಲ್ಲವೇ? ‘‘ಕನಕನ-ಅಲ್ಲಮ-ಬಸವರ-ಕುವೆಂಪು-ಅಂಬೇಡ್ಕರರ ದೃಷ್ಟಿಯಲ್ಲಿ ಮಹಿಳೆ’’ ಎಂಬ ವಿಷಯವನ್ನು ಚರ್ಚಿಸಬೇಕಾದ್ದೇನೋ ಹೌದು. ಚಾರಿತ್ರಿಕವಾಗಿ ಸಮಾಜವನ್ನು ಅರಿಯಲು ಇದು ಅವಶ್ಯಕ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಈ ಮಹನೀಯರ ಸಾಂಸ್ಕೃತಿಕ-ರಾಜಕೀಯ-ಸಾಮಾಜಿಕ ವಾರಸುದಾರರ, ಕಲ್ಪಿತ ಉತ್ತರಾಧಿಕಾರಿಗಳ ಸಮಾಜದಲ್ಲಿ ವರ್ತಮಾನದ ಮಹಿಳೆಯನ್ನು ಹೇಗೆ ಕಾಣಲಾಗುತ್ತಿದೆ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಹಾಗೆ ಕಾಡಿದಾಗ ನಮ್ಮ ಗಮನ ಸಹಜವಾಗಿಯೇ ಅಧ್ಯಾತ್ಮ ಕೇಂದ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ವಯಸ್ಕ ಬಾಲಕಿಯರತ್ತ ಹೊರಳುತ್ತದೆ. ಇದೇ ಸೂತ್ರವನ್ನು ಅಲ್ಪಸಂಖ್ಯಾತ ಸಮುದಾಯಕ್ಕೂ ಅನ್ವಯಿಸಬಹುದು, ದಲಿತ-ಅಸ್ಪೃಶ್ಯ-ಶೋಷಿತ ಸಮುದಾಯಗಳಿಗೂ ಅನ್ವಯಿಸಬಹುದು. 

ದಿನನಿತ್ಯ ನಮಗೆ ಎದುರಾಗುತ್ತಿರುವ ಸಾಮಾಜಿಕ ಕ್ರೌರ್ಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಗಳಿಗೂ ಈ ಸಮುದಾಯಗಳಿಗೆ ಎದುರಾಗುತ್ತಿರುವ ಸವಾಲುಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಹೊರಗೆಳೆಯುವ ಪ್ರಯತ್ನ ಸಾಹಿತ್ಯ ಲೋಕದಿಂದ ನಡೆಯುತ್ತಿದೆಯೇ ಎಂಬ ಪ್ರಶ್ನೆ ‘ಅಖಿಲ ಭಾರತ ಸಮ್ಮೇಳನದಲ್ಲಿ’ ಚರ್ಚೆಗೊಳಗಾಗ ಬೇಕಲ್ಲವೇ? ಪ್ರಾತಿನಿಧ್ಯದ ಪ್ರಶ್ನೆ ಇಲ್ಲಿ ಮುನ್ನೆಲೆಗೆ ಬರುತ್ತದೆ. ಎಡ-ಬಲ ಇತ್ಯಾದಿ ಪಂಥಗಳ ಲೌಕಿಕತೆಯನ್ನು ಹೊರಗಿಟ್ಟು ನೋಡಿದಾಗಲೂ, ಈ ಸಂಕೀರ್ಣ ಸಮಸ್ಯೆಗಳನ್ನು ‘ಕನ್ನಡ ಪಂಥ’ ದ ವಾರಸುದಾರರ ಮುಂದಿರಿಸಲಾದರೂ ಸಾಮುದಾಯಿಕ ಪ್ರಾತಿನಿಧ್ಯ ಅವಶ್ಯವಲ್ಲವೇ? ಪ್ರಾತಿನಿಧ್ಯದ ಭಿನ್ನ ಆಯಾಮಗಳು

 ಸರ್ ಮಿರ್ಝಾ ಇಸ್ಮಾಯೀಲ್ ಅವರ ಭಾವಚಿತ್ರ, ಸಂತ ಶಿಶುನಾಳ ಷರೀಫರ ಹೆಸರಿನ ವೇದಿಕೆ ಇವೆರಡನ್ನೂ ಮುಸ್ಲಿಮ್ ಸಮುದಾಯದ ಪ್ರಾತಿನಿಧಿಕ ಸಂಕೇತಗಳಾಗಿ ಬಿಂಬಿಸುವ ಮಹೇಶ್ ಜೋಷಿಯವರ ಆಲೋಚನಾ ಲಹರಿಯೇ ಪ್ರಶ್ನಾರ್ಹವಾಗಿದೆ. ಷರೀಫರು ಮುಸ್ಲಿಮರ ಪ್ರತಿನಿಧಿಯಾಗಿರಲಿಲ್ಲ, ಬದಲಾಗಿ ಕರ್ನಾಟಕದ ಸಮನ್ವಯ ಸಂಸ್ಕೃತಿಯ ಪ್ರತಿನಿಧಿಯಾಗಿದ್ದರು. ಈ ಸಮನ್ವಯ ಸಂಸ್ಕೃತಿ ಹಂತಹಂತವಾಗಿ ಅವನತಿ ಹೊಂದುತ್ತಿರುವ ಸಂದರ್ಭದಲ್ಲಿ, ಸಮನ್ವಯದ ನೆಲದಲ್ಲೇ ಸಮ್ಮೇಳನ ನಡೆಯುತ್ತಿದೆ. 

ವರ್ತಮಾನ ಸಮಾಜದಲ್ಲಿ ಮುಸ್ಲಿಮ್ ಸಮುದಾಯದ ತಲ್ಲಣಗಳನ್ನು ಸಮ್ಮೇಳನದ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ವ್ಯಕ್ತಿಯ ಪ್ರಾತಿನಿಧ್ಯಕ್ಕೂ, ಷರೀಫರ ಚಾರಿತ್ರಿಕ ನೆಲೆಗೂ ಇರುವ ಅಂತರವನ್ನು ಗ್ರಹಿಸದಷ್ಟು ಅಸೂಕ್ಷ್ಮವಾಗಿಬಿಟ್ಟಿದ್ದೇವೆಯೇ? ವರ್ತಮಾನದ ಸಮಾಜದಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ, ದಬ್ಬಾಳಿಕೆ, ಜಾತಿ ತಾರತಮ್ಯಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿದ ದ್ವೇಷ ರಾಜಕಾರಣ ಇವೆಲ್ಲವನ್ನೂ ಹೊರಗಿಟ್ಟು ನಡೆಸುವ ಸಾಹಿತ್ಯ ಚರ್ಚೆಗಳು ಶುಷ್ಕ ಎನಿಸುವುದೇ ಅಲ್ಲದೆ ನಿರರ್ಥಕವೂ ಆಗುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಮಾಲೂರಿನ ಗುಜ್ಜುಕೋಲಿನಿಂದ ಚಾಮರಾಜನಗರದ ಹೆಗ್ಗೋಠಾರದ ತೊಂಬೆಯವರೆಗೆ ವ್ಯಾಪಿಸಿರುವ ಅಸ್ಪೃಶ್ಯತೆ, ಮಳವಳ್ಳಿಯ ಹಾಸ್ಟೆಲಿನಿಂದ ಚಿತ್ರದುರ್ಗದ ಮುರುಘಾಮಠದವರೆಗೆ ವ್ಯಾಪಿಸಿರುವ ಲೈಂಗಿಕ ದೌರ್ಜನ್ಯ, ಕರಾವಳಿ ಯಿಂದ ಕೋಲಾರದ ಗಡಿಯವರೆಗೂ ವ್ಯಾಪಿಸಿರುವ ಮತದ್ವೇಷದ ಚಟುವಟಿಕೆಗಳು ಇವೆಲ್ಲವೂ ಕನ್ನಡ ಜನತೆಯನ್ನು ಕಾಡಬೇಕಿರುವ ಜಟಿಲ ಪ್ರಶ್ನೆಗಳು. ಸಾಹಿತ್ಯಕ ನೆಲೆಯಲ್ಲಿ ಈ ಬೆಳವಣಿಗೆಗಳನ್ನು ಹೇಗೆ ವ್ಯಾಖ್ಯಾನಿಸಬೇಕು? ಇಲ್ಲಿ ಸಾಹಿತ್ಯ ಸಮ್ಮೇಳನದ ವೇದಿಕೆ ಮತ್ತು ಅಲ್ಲಿನ ಪ್ರಾತಿನಿಧಿಕ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಸ್ತ್ರೀಸಂವೇದನೆ, ಲಿಂಗಸೂಕ್ಷ್ಮತೆ, ಜಾತಿ ಸೂಕ್ಷ್ಮತೆ ಮತ್ತು ಮತೀಯ ಸಮನ್ವಯತೆಯ ಜ್ವಲಂತ ಸವಾಲುಗಳನ್ನು ಸಮರ್ಪಕವಾಗಿ ಪ್ರತಿಧ್ವನಿಸುವ ಒಂದು ವೇದಿಕೆಯಾಗಿ ಸಾಹಿತ್ಯ ಸಮ್ಮೇಳನ ಹೊರಹೊಮ್ಮಬೇಕಾದರೆ, ಷರೀಫಜ್ಜನ ಹೆಸರು ಆಲಂಕಾರಿಕವಾಗಿ ಮಾತ್ರವೇ ಕಾಣಬಹುದಷ್ಟೇ. 

ಸಮುದಾಯಗಳ ಒಡಲಾಳದ ತಲ್ಲಣಗಳನ್ನು ಹೃದಯಸ್ಪರ್ಶಿಯಾಗಿ ಸಮಾಜದ ಮುಂದಿಡುವ ಸಾಹಿತ್ಯಕ ಅವಕಾಶವಾಗಿ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ವನ್ನು ಪರಿಗಣಿಸುವುದೇ ಆದರೆ, ಸಾಮುದಾಯಿಕ ಪ್ರಾತಿನಿಧ್ಯವೂ ಮುಖ್ಯವಾಗಿ ಕಾಣುವುದು ಸಹಜ. ಇಲ್ಲವಾದರೆ ಮೇಲ್ನೋಟದ ವ್ಯಾಖ್ಯಾನಗಳು, ತೇಲ್ನೋಟದ ವಿಶ್ಲೇಷಣೆಗಳು ಗಾಳಿಯಲ್ಲಿ ಹಾರಿ ಹೋಗುವಂತಿರುತ್ತವೆ. ಈ ಪ್ರಾತಿನಿಧಿತ್ವದೊಂದಿಗೇ, ‘ಕನ್ನಡ ಪಂಥ’ವನ್ನು ಪ್ರತಿನಿಧಿಸುವ ಒಂದು ಸಾಹಿತ್ಯಕ ಭೂಮಿಕೆಯಾಗಿ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವು ಕನ್ನಡಿಗರು ಎದುರಿಸುತ್ತಿರುವ ಸಮಕಾಲೀನ ಸವಾಲುಗಳು ಮತ್ತು ಜೀವನೋಪಾಯದ ಜ್ವಲಂತ ಬಿಕ್ಕಟ್ಟುಗಳನ್ನೂ ಗಮನಿಸಬೇಕಿದೆ. ಯುವ ಸಮೂಹ, ಮಹಿಳೆಯರು, ಭಾಷಿಕ ಮತ್ತು ಮತೀಯ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು, ಸಮಾಜವನ್ನು ದಶದಿಕ್ಕುಗಳಿಂದಲೂ ಒತ್ತರಿಸಿಕೊಂಡು ಬರುತ್ತಿರುವ ನವ ಉದಾರವಾದ-ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆ-ವಾಣಿಜ್ಯೀಕರಣದ ಅಪಾಯಗಳನ್ನು ಹೊರಗಿಟ್ಟು ಚರ್ಚಿಸಲಾಗುವುದಿಲ್ಲ. 

ಹೆಚ್ಚಾಗುತ್ತಿರುವ ಅಸ್ಪೃಶ್ಯತೆ, ಮಹಿಳಾ ದೌರ್ಜನ್ಯ, ಮತೀಯ ದ್ವೇಷದ ಕ್ರೌರ್ಯಗಳಿಗೂ, ವಿಸ್ತರಿಸುತ್ತಿರುವ ಬಂಡವಾಳಶಾಹಿ ಆರ್ಥಿಕ ಬಾಹುಗಳಿಗೂ ಸಂಬಂಧ ಇರುವುದನ್ನು ಸಹ ಗಮನಿಸಬೇಕಾಗುತ್ತದೆ. ಆಗ ಮಾತ್ರವೇ ‘ಕನ್ನಡ ಪಂಥ’ ಎನ್ನುವ ಪದಪುಂಜವೂ ಪ್ರಾತಿನಿಧಿಕವಾಗಿ ಅರ್ಥಪೂರ್ಣವಾಗುತ್ತದೆ. ಇಲ್ಲವಾದರೆ ಈ ಪಂಥವೂ ಯಾವುದೋ ಒಂದು ಸ್ಥಾಪಿತ ಪಂಥದೊಳಗೆ ಹೊಕ್ಕು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯಕವಾಗಿ ಸತ್ವಹೀನವಾಗಿರುವ ಸಾಹಿತ್ಯ ಪರಿಷತ್ತು ಈ ಬೆಳವಣಿಗೆಗಳ ನಡುವೆ ತತ್ವಹೀನವಾಗುತ್ತಿರುವುದಕ್ಕೆ ಈ ವಿದ್ಯಮಾನವೂ ಕಾರಣವಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಸಾಹಿತ್ಯ ಮೇಳವನ್ನು ಈ ವಿಭಿನ್ನ ಆಯಾಮಗಳಿಂದ ನೋಡಬೇಕಿದೆ. ಅದು ಪರ್ಯಾಯ ಸಮ್ಮೇಳನ ಅಲ್ಲ, ಪ್ರತಿರೋಧದ ಸಮ್ಮೇಳನವೂ ಅಲ್ಲ. ಬದಲಾಗಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವತೆ ಮತ್ತು ಸಮನ್ವಯತೆ ಸಂದೇಶದ ವಿಶಾಲ ವ್ಯಾಪ್ತಿಯನ್ನು, ‘ಕನ್ನಡ ಪಂಥ’ವನ್ನು ಪ್ರತಿನಿಧಿಸುವ ಜನಸಾಮಾನ್ಯರಿಗೆ ತಲುಪಿಸುವುದು ಈ ಸಮ್ಮೇಳನದ ಉದ್ದೇಶವಾಗಬೇಕಿದೆ/ಆಗಿದೆ. ಕುವೆಂಪು ಕನಸಿನ ‘ಸರ್ವಜನಾಂಗದ ಶಾಂತಿಯ ತೋಟ’ವನ್ನು ಸದಾ ಹಸಿರಾಗಿಡುವ ಸಪ್ರಯತ್ನಗಳಿಗೆ ಹಾವೇರಿಯಲ್ಲಿ ಧ್ವನಿಸುವ ‘ಕನ್ನಡ ಪಂಥ’ದ ಸಾಹಿತ್ಯಕ ಕಹಳೆ ಪೂರಕವಾಗಿರುವುದೇ? ಕಾದು ನೋಡೋಣ.