ಚಿಕ್ಕಬಳ್ಳಾಪುರ ಬಳಿಯ ಇಶಾ ಆದಿಯೋಗಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ತಡೆ

Update: 2023-06-27 11:01 GMT

ಬೆಂಗಳೂರು, ಜ.11: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಆವಲಗುರ್ಕಿ ಬಳಿಯಲ್ಲಿ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಯನ್ನು ನಡೆಸಬಾರದು ಹಾಗೂ ಈ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಚಿಕ್ಕಬಳ್ಳಾಪುರ ತಾಲೂಕಿನ ಕಸಬಾ ಹೋಬಳಿ ಚಂಬಳ್ಳಿಯ ಕೃಷಿಕ ಎಸ್.ಕ್ಯಾತಪ್ಪ, ಮಸ್ಟೂರು ಗ್ರಾಮದ ಜಿ.ಎಂ.ಶ್ರೀಧರ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಬುಧವಾರ ಈ ಆದೇಶ ನೀಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲ ಎಂ.ಶಿವಪ್ರಕಾಶ್ ಅವರು, ರಾಜ್ಯ ಸರಕಾರ ಕೊಯಮತ್ತೂರಿನ ಇಶಾ ಯೋಗ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಕೆರೆ, ಕುಂಟೆ, ಕಂಟಿಗಳು ಹಾಗೂ ಗೋಮಾಳ ವ್ಯಾಪ್ತಿಯ ಜಮೀನನ್ನು ಮಂಜೂರು ಮಾಡಿದೆ. ಇಲ್ಲಿನ ನಂದಿಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ. ಇದರ ಸುತ್ತಮುತ್ತಲಿನ ಜಮೀನನ್ನು ಪರಭಾರೆ ಮಾಡಿರುವ ಕಾರಣ ರೈತರ ಬದುಕಿಗೆ ಹಾಗೂ ಪರಿಸರಕ್ಕೆ ಭರಿಸಲಾಗದ ಹಾನಿಯಾಗಲಿದೆ ಎಂದು ಪೀಠಕ್ಕೆ ತಿಳಿಸಿದರು.

ಪರಿಸರದ ಸೂಕ್ಷ್ಮ ವಲಯಕ್ಕೆ ಒಳಪಡುವ ಈ ಪ್ರದೇಶವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಾನೂನು ಬಾಹಿರ. ಆದುದರಿಂದ, ಇಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಆದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರತಿವಾದಿಗಳಾದ ಕೇಂದ್ರ ಪರಿಸರ ಸಚಿವಾಲಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಶಾ ಯೋಗ ಕೇಂದ್ರವೂ ಸೇರಿದಂತೆ ಹದಿನಾರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ಇಶಾ ಫೌಂಡೇಶನ್‍ಗೆ 250 ಎಕರೆ ಜಾಗ, 100 ಕೋಟಿ ರೂ.ನೀಡಿರುವುದು ಹಗರಣ: ರಮೇಶ್ ಬಾಬು ಆರೋಪ

Similar News