ಶಿವಮೊಗ್ಗ | ಹೊಸ ವರ್ಷದ ಪಾರ್ಟಿ ವೇಳೆ ಗನ್ ಫೈರ್: ಓರ್ವ ಗಂಭೀರ, ಗುಂಡು ಹಾರಿಸಿದ ವ್ಯಕ್ತಿ ಕುಸಿದು ಮೃತ್ಯು

Update: 2023-01-01 04:00 GMT

ಶಿವಮೊಗ್ಗ, ಜ.1: ಹೊಸ ವರ್ಷಾಚರಣೆಯ ಪಾರ್ಟಿ ವೇಳೆ ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು ಹಾರಿಸಿಲು ಮುಂದಾದಾಗ, ಗುಂಡು ಆಕಸ್ಮಿಕವಾಗಿ ವ್ಯಕ್ತಿಯೊಬ್ಬನಿಗೆ ತಗುಲಿದೆ. ಇದರಿಂದ ಆತಂಕಗೊಂಡು ಗುಂಡು ಹಾರಿಸಿದ ವ್ಯಕ್ತಿ ಕುಸಿದು ಸಾವನ್ನಪ್ಪಿರುವ ಘಟನೆ  ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದಲ್ಲಿ ಕಳೆದ ಮಧ್ಯರಾತ್ರಿ ಸಂಭವಿಸಿದೆ.

ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮನೆ ಮಾಲಕ ಮಂಜುನಾಥ್ ಓಲೇಕರ್ ಮೃತಪಟ್ಟವರು. ಮಂಜುನಾಥ್ ಮನೆಯಲ್ಲಿ ಆಯೋಜಿಸಿದ್ದ ಹೊಸವರ್ಷದ ಪಾರ್ಟಿ ವೇಳೆ ಈ ದುರಂತ ಸಂಭವಿಸಿದೆ.  ಹೊಸವರ್ಷದ ಸಂಭ್ರಮಾಚರಣೆಯಲ್ಲಿದ್ದ ಮಂಜುನಾಥ್ ಗನ್ ತೆಗೆದುಕೊಂಡು ಹನ್ನೆರಡು ಗಂಟೆ ರಾತ್ರಿಯಲ್ಲಿ ಏರ್ ಫೈರ್ ಮಾಡುವ ಮೂಲಕ 2023 ಕ್ಕೆ ಶುಭಕೋರಲು ಮುಂದಾಗಿದ್ದಾರೆನ್ನಲಾಗಿದೆ. ಈ ವೇಳೆ ಗಾಳಿಯಲ್ಲಿ ಹಾರಬೇಕಿದ್ದ ಗುಂಡು ಮಿಸ್ ಪೈರ್ ಆಗಿ ಪಾರ್ಟಿ ಮಾಡುತ್ತಿದ್ದ ಎದುರಿನ ಹುಡುಗನೊಬ್ಬನಿಗೆ ತಗುಲಿದೆ. ಗಂಭೀರ ಗಾಯಗೊಂಡ ಯುವಕನನ್ನು ನಗರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಈ ಘಟನೆಯಿಂದ ಆಘಾತಕ್ಕೆ ಒಳಗಾದ ಮಂಜುನಾಥ್ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News