ಬೃಹತ್ ಕಾರ್ಪೊರೇಟ್ ಗಳು ಮಾಧ್ಯಮ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ: ಡಾ. ವಿನೋದ್ ಕೆ. ಜೋಸ್

Update: 2023-01-02 06:48 GMT

ಡಾ. ವಿನೋದ್ ಕೆ. ಜೋಸ್, ಭಾರತದ ಪ್ರಮುಖ ದೀರ್ಘ ಬರಹ (Long-form) ತನಿಖಾ ಪತ್ರಿಕೋದ್ಯಮ ನಿಯತಕಾಲಿಕ ‘ದಿ ಕಾರವಾನ್’ ನ ಕಾರ್ಯನಿರ್ವಾಹಕ ಸಂಪಾದಕರು. ಅದರ ನಿರ್ಭೀತ ತಂಡವನ್ನು 15 ವರ್ಷಗಳಿಂದ ಮುನ್ನಡೆಸುತ್ತಿರುವವರು. ಈ ಅವಧಿಯಲ್ಲಿ ಅವರ ನೇತೃತ್ವದಲ್ಲಿ ಹಲವಾರು ಮಹತ್ವದ ವರದಿಗಳು ಪ್ರಕಟವಾಗಿವೆ. ಮತ್ತು ಆ ವರದಿಗಳು ಮುಖ್ಯ ವಾಹಿನಿಯ ಪತ್ರಿಕೋದ್ಯಮವು ತಾನು ಅಲಕ್ಷಿಸಿದ್ದ ವಿಷಯಗಳನ್ನೇ ಫಾಲೋ ಅಪ್ ಮಾಡುವಂತಾಗಲು ಕಾರಣವಾಗಿವೆ. ‘ಕಾರವಾನ್’ನಲ್ಲಿನ ಈವರೆಗಿನ ಅಂಥ ವರದಿಗಳಲ್ಲಿಯೇ ನ್ಯಾಯಾಧೀಶ ಲೋಯಾ ಸಾವಿನ ಕುರಿತ ಬರಹವು ಅತ್ಯಂತ ಪ್ರಮುಖವಾದುದೆಂದು ಅವರು ಪರಿಗಣಿಸುತ್ತಾರೆ. ಏಕೆಂದರೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾರವಾನ್‌ನಿಂದ ಹಿಂದೆಂದೂ ಇರದಷ್ಟು ಫಾಲೋ ಅಪ್ ಬರಹಗಳು - ಸುಮಾರು 29 ಅಥವಾ 30 - ಬಂದವು ಮತ್ತು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಗೂ ಆಗಿನ ಮುಖ್ಯ ನ್ಯಾಯಾಧೀಶರ ವಿರುದ್ಧ ವಿಫಲ ದೋಷಾರೋಪಣೆ ಪ್ರಕ್ರಿಯೆಗೂ ಕಾರಣವಾದವು ಎಂದು ಅವರು ಇತ್ತೀಚೆಗೆ ‘ವಾರ್ತಾ ಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಟಿ.ಎ. ಅಮೀರುದ್ದೀನ್

ಈ ಸಂದರ್ಶನದಲ್ಲಿ, ವಿನೋದ್ ಕೆ. ಜೋಸ್ ದೀರ್ಘ ಬರಹಗಳ ಪತ್ರಿಕೋದ್ಯಮದ ಭವಿಷ್ಯ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಕ್ಷೀಣಿಸುತ್ತಿರುವ ವಿಚಾರ, ವೃತ್ತಿಯ ಸವಾಲುಗಳ ಬಗ್ಗೆ ಮಾಧ್ಯಮದವರಲ್ಲಿನ ಕಳಕಳಿಯ ಕೊರತೆ, ಅಧಿಕಾರ ಕೇಂದ್ರಗಳಿಗೆ ಹತ್ತಿರವಾದ ಬಂಡವಾಳಶಾಹಿಗಳ ಕೈಗಳಲ್ಲಿ ಮಾಧ್ಯಮ ಮಾಲೀಕತ್ವ ಸೇರುತ್ತಿರುವುದು, ಮಾಧ್ಯಮಗಳನ್ನು ದಾರಿ ತಪ್ಪಿಸುವ ಸರಕಾರದ ಪ್ರಯತ್ನ ಮತ್ತು ಸತ್ಯವನ್ನು ಹೇಳುವ ಪತ್ರಕರ್ತರ ವಿರುದ್ಧ ದೇಶದ್ರೋಹದ ಆರೋಪಗಳನ್ನು ಹೊರಿಸಲಾಗುತ್ತಿರುವುದು ಮುಂತಾದ ವಿವಿಧ ಮಾಧ್ಯಮ ವಿಷಯಗಳ ಕುರಿತು ಮಾತನಾಡಿದ್ದಾರೆ. 

ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಈಗಿನ ಧಾವಂತದ ಮತ್ತು ಬಿಡಿ ಬಿಡಿ ಸಾರ್ವಜನಿಕ ಸಂವಾದಗಳ ಕಾಲದಲ್ಲಿ ದೀರ್ಘ ಬರಹಗಳ ಪತ್ರಿಕೋದ್ಯಮದ ಉಳಿವು ಸಾಧ್ಯವೇ?

► ಕೇವಲ ದೀರ್ಘ ಬರಹಗಳದ್ದಲ್ಲ, ಯಾವುದೇ - ಗುಣಮಟ್ಟದ ಪ್ರಭಾವಶಾಲಿ ಪತ್ರಿಕೋದ್ಯಮವು ಬಹಳ ಮುಖ್ಯವಾದ ಸಾಮಾಜಿಕ ಮತ್ತು ರಾಜಕೀಯ ಪಾತ್ರ ವಹಿಸುತ್ತದೆ. ಇದು ನಾಗರಿಕರಿಗೆ ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಕುರಿತು ಮಾಹಿತಿ ನೀಡುವುದು ಮತ್ತು ಪ್ರಭುತ್ವವನ್ನು ಹೊಣೆಯಾಗಿಸುವುದು. ಇದು ಉತ್ತಮ, ಗುಣಮಟ್ಟದ ಪತ್ರಿಕೋದ್ಯಮದ ಪ್ರಾಥಮಿಕ ಪಾತ್ರವಾಗಿದೆ ಎಂದು ನನ್ನ ಅಭಿಪ್ರಾಯ. ಬಹಳ ಸಲ ಪತ್ರಕರ್ತರಿಗೆ ಗಡುವುಗಳ ಕಾರಣದಿಂದಾಗಿ

ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಕಷ್ಟು ಸಮಯ ಸಿಗುವುದಿಲ್ಲ. ಆದ್ದರಿಂದ ವರದಿಗಾರನಿಗೆ

ಹೆಚ್ಚಿನ ಸಮಯವನ್ನು ನೀಡುವ ಉದ್ದೇಶದ ದೀರ್ಘ ಬರಹ ಪತ್ರಿಕೋದ್ಯಮ ಹುಟ್ಟಿದೆ. ಇದರಿಂದಾಗಿ ಲೇಖನಕ್ಕೆ ಹೆಚ್ಚಿನ ಆಕರಗಳನ್ನು ಗಮನಿಸಬಹುದು. ಹೆಚ್ಚಿನ ಮೂಲಗಳನ್ನು ಹುಡುಕಬಹುದು ಮತ್ತು ತನಿಖೆಯ ಅಗತ್ಯವಿದ್ದರೆ ಇನ್ನಷ್ಟು ಆಳವಾಗಿ ಶೋಧಿಸಬಹುದು. ಒಮ್ಮೆ ಅಗತ್ಯ ಅಕರಗಳನ್ನೆಲ್ಲ ಕಲೆಹಾಕಿದ ಮೇಲೆ ಅದನ್ನು ಮನಮುಟ್ಟುವಂತೆ ನಿರೂಪಿಸುವ ಕೆಲಸಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ. ಪಾತ್ರಗಳನ್ನು, ಸನ್ನಿವೇಶಗಳನ್ನು ಕುತೂಹಲಭರಿತವಾಗಿ ಜೋಡಿಸುವ ಮೂಲಕ ಓದುಗನೆದುರು ಇಡೀ ಚಿತ್ರ ಕಣ್ಣಿಗೆ ಕಟ್ಟುವಂತೆ ಅಂತಿಮ ಬರಹ ಸಿದ್ಧಗೊಳ್ಳುತ್ತದೆ.ಈ ಪ್ರಕ್ರಿಯೆಯಲ್ಲಿ, ಮೂರು ಅಂಶಗಳಿಗೆ ನ್ಯಾಯ ನೀಡುವ ಪ್ರಯತ್ನವಿರುತ್ತದೆ.

1. ವರದಿಗಾರಿಕೆ, 2. ಉತ್ತಮ ಬರವಣಿಗೆ ಮತ್ತು 3. ಪಾಂಡಿತ್ಯ. ಹೀಗೆಂದರೆ, ಪತ್ರಕರ್ತರು ಇಡೀ ಘಟನೆಯು ತೆರೆದುಕೊಳ್ಳುವ ಸಂದರ್ಭವನ್ನು ಮತ್ತು ಬರೆದುದರ ವಿಸ್ತಾರ ಹಿನ್ನೆಲೆಯನ್ನು ವಿವರಿಸಬೇಕು. ಪತ್ರಕರ್ತರಲ್ಲಿ ಸಮಾಜಶಾಸ್ತ್ರಜ್ಞರಿದ್ದಾರೆ, ಪತ್ರಕರ್ತರಲ್ಲಿ ಇತಿಹಾಸಕಾರರಿದ್ದಾರೆ, ಪತ್ರಕರ್ತರಲ್ಲಿ ರಾಜಕೀಯ ವಿಜ್ಞಾನಿಗಳು ಇರುತ್ತಾರೆ. ಇವೆಲ್ಲ ಶಿಸ್ತುಗಳಿಗೂ ನ್ಯಾಯ ಸಲ್ಲಿಸುವುದು ನನ್ನ ದೃಷ್ಟಿಯಲ್ಲಿ ದೀರ್ಘ ಬರಹ ಪತ್ರಿಕೋದ್ಯಮ. ಇದು ಲಕ್ಷಾಂತರ ಓದುಗರನ್ನು ಹೊಂದಿರಬೇಕಿಲ್ಲ. ಆದರೆ ಇದು ಖಂಡಿತವಾಗಿಯೂ ಹಲವೆಡೆಗಳಲ್ಲಿ ನಾಯಕತ್ವದ ಸ್ಥಾನದಲ್ಲಿರುವ ಸಾವಿರಾರು ಓದುಗರನ್ನು ಹೊಂದಿರುತ್ತದೆ. ಅವರು ಸ್ವತಃ ವೃತ್ತಿಪರ ಜೀವನದಲ್ಲಿ ಸ್ಥಾನ ಹೊಂದಿದವರಾಗಿರುತ್ತಾರೆ.

ಅವರು ಪ್ರಮುಖ ಚಿಂತಕರಾಗಿರಬಹುದು, ಉತ್ತಮ ಓದುಗರಾಗಿರಬಹುದು ಮತ್ತು ಈ ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಬಯಸುವ ನಾಗರಿಕರಾಗಿರಬಹುದು. ಗುಣಮಟ್ಟದ, ಉತ್ತಮ ದೀರ್ಘ ಬರಹ ಪತ್ರಿಕೋದ್ಯಮವನ್ನು ಬೆಳೆಸಲು ಅಷ್ಟು ಸಂಖ್ಯೆಯ ಓದುಗರು ಸಾಕು. ಕಾರವಾನ್ನಲ್ಲಿ 15 ವರ್ಷಗಳಿಂದ ಪ್ರಯೋಗಕ್ಕೆ ತಂದು ರೂಪಿಸಿದ ಪತ್ರಿಕೋದ್ಯಮ ಹೀಗೆ ತನ್ನದೇ ಓದುಗ ವರ್ಗವನ್ನು ಪಡೆದಿದೆ.

 ಕಾರವಾನ್ ಭಾರತದ ಅತ್ಯುತ್ತಮ ದೀರ್ಘ ಬರಹ ನಿಯತಕಾಲಿಕ. ಆದರೆ ಅದರ ತಲುಪುವಿಕೆ ತೃಪ್ತಿ ತಂದಿದೆಯೆ? 

► ಮುದ್ರಣ ಮತ್ತು ಡಿಜಿಟಲ್ ಆವೃತ್ತಿಗಳನ್ನು ಸೇರಿಸಿದರೆ ಕಾರವಾನ್ಗೆ ಐದು ಲಕ್ಷ ಓದುಗರು ಇದ್ದಾರೆ. ಭಾರತದಂತಹ ದೊಡ್ಡ ದೇಶದಲ್ಲಿ ಇದು ದೊಡ್ಡ ಸಂಖ್ಯೆಯಲ್ಲ. ಆದರೆ ನಾವು ಮಾಡಿದ ಬರಹಗಳು - ನ್ಯಾಯಾಧೀಶ ಲೋಯಾ ಸಾವು, ಅಮಿತ್ ಶಾ ಮಗನ ವ್ಯವಹಾರದ ಕಥೆಗಳು, ಕೇಮನ್ ದ್ವೀಪದಲ್ಲಿರುವ ಅಜಿತ್ ದೋವಲ್ ಮಗನ ಕಂಪನಿ, ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನೀಡಿದ ಹಣದ ನಮೂದುಗಳನ್ನು ಹೊಂದಿರುವ ಯಡಿಯೂರಪ್ಪ ಡೈರಿ ಹೆಸರಿಸಬಹುದಾದ ಕೆಲವು ಕಾರ್ಪೊರೇಟ್ ತನಿಖೆಗಳು ದೇಶದ ರಾಜಕೀಯ ನಿರೂಪಣೆಯಲ್ಲಿ ಒಂದು ಪಾತ್ರ ನಿರ್ವಹಿಸಿದವು.

ನಾವು ಬರೆದದ್ದೇ ಎಲ್ಲರನ್ನೂ ತಲುಪಿತು ಎಂದಲ್ಲ; ಆದರೆ ನಾವು ಬರೆದದ್ದರಿಂದ ಇತರ ಮಾಧ್ಯಮ ಸಂಸ್ಥೆಗಳು ಆ ವಿಚಾರಗಳನ್ನು ಎತ್ತಿಕೊಳ್ಳಲೇಬೇಕಾಗಿ ಬಂತು. ಅವುಗಳಲ್ಲಿ ಹಲವಂತೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಶಾಶ್ವತ ಸ್ಥಾನ ಪಡೆದವು. ಏಕೆಂದರೆ ಅವುಗಳನ್ನು ನ್ಯಾಯಾಲಯಗಳಲ್ಲಿ ಉಲ್ಲೇಖಿಸಲಾಗುತ್ತಿತ್ತು. ನಾವು ನ್ಯಾಯಮೂರ್ತಿ ಲೋಯಾ ಸಾವಿನ ಬರಹವನ್ನು ಪ್ರಕಟಿಸಿದ ನಂತರ ಹಲವು ವಾರಗಳವರೆಗೆ ಮಾಧ್ಯಮಗಳು ಅತ್ಯಂತ ಠಕ್ಕ ಮೌನ ವಹಿಸಿದ್ದವು. ಆದರೆ ವಿಚಾರ ದೊಡ್ಡದಾಗುತ್ತಿದ್ದಂತೆ ಅವು ಅದನ್ನು ಎತ್ತಿಕೊಳ್ಳುವ ಅನಿವಾರ್ಯತೆಗೆ ಬಿದ್ದವು. ನಮ್ಮ ಲೇಖನವನ್ನೇ ಆಧರಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಯಿತು. ಅದು ಮುಖ್ಯ ನ್ಯಾಯಾಧೀಶರ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಗೂ ಕಾರಣವಾಯಿತು. ಉಳಿದುಕೊಳ್ಳುವುದು ಎಂದರೆ ಹೀಗೆ, ಒಂದು ಬರಹ ಮಹತ್ವದ್ದು ಅಂತನ್ನಿಸುವುದು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ಪ್ರತಿ ವರ್ಷವೂ ಕುಸಿಯುತ್ತಿದೆ. ಭಾರತ ಅದನ್ನು ನಿರಾಕರಿಸಿದೆ. ಮುಂಚೂಣಿಯಲ್ಲಿರುವವರಾಗಿ ನಿಮ್ಮ ಅನುಭವವೇನು?

►  2013ರಲ್ಲಿ, ಕಾರವಾನ್ ನಲ್ಲಿ ನನ್ನ ಐದನೇ ವರ್ಷದಲ್ಲಿದ್ದಾಗ ಮತ್ತು ಮೋದಿ ದಿಲ್ಲಿಗೆ ಬರುವ ಒಂದು ವರ್ಷದ ಮೊದಲು ನನಗಿದರ ಬಿಸಿ ತಟ್ಟತೊಡಗಿತು. ಮೋದಿಯಲ್ಲಿ ಹಿಂದೂ ಬಲಪಂಥೀಯ ರಾಕ್ ಸ್ಟಾರ್ ಬೆಳವಣಿಗೆಯನ್ನು ಮತ್ತು ಜಾಹೀರಾತಿಗಾಗಿ ಸಾಕಷ್ಟು ಹಣ ಚೆಲ್ಲಾಡುತ್ತಿರುವುದನ್ನು ಯಾರೂ ಕಾಣಬಹುದಿತ್ತು. ಬಹಳಷ್ಟು ಸಂಪಾದಕರು ಕೆಲಸ ಕಳೆದುಕೊಳ್ಳುತ್ತಿದ್ದುದು ಮತ್ತವರ ಜಾಗಕ್ಕೆ ಹೊಸ ಸಂಪಾದಕರು ಬರುತ್ತಿದ್ದುದು ಕೂಡ ನಡೆದಿತ್ತು. ಪ್ರಕಟವಾಗುವ ಸುದ್ದಿಗಳ ವಿಚಾರದಲ್ಲಿ ಜಾಹೀರಾತುದಾರರು ಷರತ್ತು ಹಾಕುವುದು ಶುರುವಾಗಿತ್ತು. ಮೋದಿ ಅಧಿಕಾರಕ್ಕೆ ಬರುವ ಒಂದು ವರ್ಷ ಮುಂಚಿನಿಂದಲೇ ಸೂಚನೆ ತುಂಬಾ ಸ್ಪಷ್ಟವಿತ್ತು.

ಅವರು ಅಧಿಕಾರ ವಹಿಸಿಕೊಂಡ ನಂತರ, ಕಾರವಾನ್ನಂತಹ ನಿಯತಕಾಲಿಕದಲ್ಲಿ ಕೆಲಸ ಮಾಡಿದ ವರದಿಗಾರರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಸರಕಾರದಲ್ಲಿರುವ ಅವರಿವರ ಮೇಲೆ ನೀವು ಬರೆದ ಬಗ್ಗೆ ನಮಗೆ ಸರಕಾರದಿಂದ ಕರೆ ಬಂದಿದೆ, ನಾವಿನ್ನು ನಿಮಗೆ ಜಾಹೀರಾತು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕಡೇ ಕ್ಷಣದಲ್ಲಿ ಜಾಹೀರಾತು ಹಿಂತೆಗೆದುಕೊಳ್ಳುವವರನ್ನು ನೋಡಬಹುದಿತ್ತು. ನೀವು ನ್ಯಾಯಾಂಗದ ಬಗ್ಗೆ ಏಕೆ ಬರೆಯಬಾರದು, ಹಣಕಾಸು ಸಚಿವಾಲಯದ ಬಗ್ಗೆ ಏಕೆ ಬರೆಯಬಾರದು ಇತ್ಯಾದಿ ಸೂಚನೆಗಳು ‘ಸ್ನೇಹ’ವಲಯಗಳಿಂದ ಬರುವುದನ್ನು ಕಾಣಬಹುದಿತ್ತು.

ಅನೇಕ ದಿಕ್ಕುಗಳಿಂದ ಒತ್ತಡ ಬರುತ್ತಿದ್ದುದನ್ನು ನಾನು ಕಂಡಿದ್ದೇನೆ. ಮತ್ತು ನಾವದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ವರದಿಗಳ ಪ್ರಕಟಣೆ ಮುಂದುವರಿಸಿದೆವು. ನಾನು ನಾಲ್ಕು ವಿಭಿನ್ನ ಅವಧಿಯ ರಾಷ್ಟ್ರೀಯ ಸರಕಾರಗಳನ್ನು ನೋಡಿದ್ದೇನೆ - ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಎರಡು ಅವಧಿ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಎರಡು ಅವಧಿಗಳು. ಸ್ಪಷ್ಟವಾಗಿ, ಈ ನಾಲ್ಕು ವಿಭಿನ್ನ ದಾರಿಗಳಲ್ಲಿ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕ ಕುಸಿತ ಕಂಡಿದೆ. ಎರಡು ಅಂಕಿಯಿಂದ ಶ್ರೇಯಾಂಕ 150ಕ್ಕೆ ಇಳಿದಿದೆ.

ಅದು ಭಾರತವನ್ನು ವಿಶ್ವದ ಅತ್ಯಂತ ಕೆಟ್ಟ ರಾಷ್ಟ್ರಗಳ ಸಾಲಿನಲ್ಲಿ ಇರಿಸಿದೆ. ವಿಪರ್ಯಾಸವೆಂದರೆ, ಅದೇ ವೇಳೆ ನಮ್ಮನ್ನು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಕರೆದುಕೊಳ್ಳುತ್ತೇವೆ.

ಮಾಧ್ಯಮದವರಲ್ಲಿ ತಮ್ಮ ವೃತ್ತಿಯ ಸವಾಲುಗಳ ಬಗ್ಗೆ ಅಷ್ಟಾಗಿ ಕಳಕಳಿಯಿದ್ದಂತೆ ಕಾಣಿಸುತ್ತಿಲ್ಲ. ಹಾಗಾದರೆ ಯಾರು ಕಾಳಜಿ ವಹಿಸಬೇಕು?

► ಖಂಡಿತವಾಗಿ ಇದು ನಾಗರಿಕರಿಗೆ ಸೇರಿದ್ದು. ನನ್ನ ಅನುಭವದಲ್ಲಿ, ನ್ಯೂಸ್ರೂಮ್ಗಳಲ್ಲಿ ಶೇ.80ರಷ್ಟು ಜನರು ಇಲ್ಲಿರುವುದು ತಮ್ಮ ಬದುಕು ನಡೆಯುತ್ತದೆ ಎಂಬ ಕಾರಣದಿಂದಲ್ಲ. ಅವರು ಪತ್ರಿಕೋದ್ಯಮವನ್ನು ಸಾಮಾಜಿಕ ಕರ್ತವ್ಯವೆಂದು ಪರಿಗಣಿಸುವುದಿಲ್ಲ. ಇದು ಅವರ ಜರೂರಲ್ಲ. ಅವರು ಉತ್ತಮ ವೃತ್ತಿಪರರು, ಬರವಣಿಗೆಯನ್ನು ಇಷ್ಟಪಡುತ್ತಾರೆ ಮತ್ತು ಸುದ್ದಿಮನೆಯಲ್ಲಿ ಇರಲು ಬಯಸುತ್ತಾರೆ ಎಂಬ ಕಾರಣದಿಂದಾಗಿ ಅವರು ಅಲ್ಲಿದ್ದಾರೆ. ಉಳಿದ 20 ಪ್ರತಿಶತದಷ್ಟು ಜನರು ತುಂಬಾ ಅತೃಪ್ತರು. ಆದರೆ ಅವರಿಗೆ ಯಾವುದೇ ಆಯ್ಕೆಯಿಲ್ಲ. ಅವರಿಗೆ ಕುಟುಂಬಗಳನ್ನು ನಡೆಸಬೇಕಿದೆ. ಅವರು ಅಲ್ಲಿ ಸಿಲುಕಿಕೊಂಡಿದ್ದಾರೆ. ಶೇ.80ರಷ್ಟಿರುವವರು ತಮ್ಮ ಮಾಲಕರನ್ನು ನಿರಂತರವಾಗಿ ವಿಮರ್ಶಿಸುವವರಾಗಿರುತ್ತಾರೆ.

ಈ 80-20 ತೀರಾ ಖಚಿತವಲ್ಲವಾದರೂ, ನ್ಯೂಸ್ರೂಮ್ಗಳನ್ನು ಗಮನಿಸುತ್ತಿರುವ ಸೂಕ್ತ ಮಾಹಿತಿಯ ಆಧಾರ ಇದಕ್ಕಿದೆ. ಸಾಮಾಜಿಕ ಬದ್ಧತೆ ಹೊಂದಿರುವ ಜನರಿದ್ದಾರೆ, ಆದರೆ ಅವರಲ್ಲಿ ಹೆಚ್ಚಿನವರು ಸುದ್ದಿಮನೆಗಳಲ್ಲಿಲ್ಲ. ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇದೆ. ಆದರೆ ಅವರು ಅಗತ್ಯ ಅರ್ಹತೆ ಹೊಂದಿಲ್ಲ. ಅವರು ಭಾಷೆಯನ್ನು ಅಗತ್ಯ ರೀತಿಯಲ್ಲಿ ಮಾತನಾಡಲಾರರು. ಅವರಿಗೆ ಲೇಖನ ಬರೆಯಲು ತಿಳಿದಿರುವುದಿಲ್ಲ. ಭಾರತದಲ್ಲಿ ಮಾತ್ರವಲ್ಲ, ಈ ಕೆಲವು ಸಂಸ್ಥೆಗಳು ಆಮೂಲಾಗ್ರ ಬದಲಾವಣೆಗೆ ಒಳಗಾಗುತ್ತವೆ ಮತ್ತು ಅಂಥ ಬದಲಾವಣೆಗೆ

ಒಳಪಡುವ ದೇಶಗಳು ಮತ್ತು ಸಂಸ್ಕೃತಿಗಳು ಅಂತಿಮವಾಗಿ ಪ್ರಜಾಪ್ರಭುತ್ವವಾಗಿ ಅಭಿವೃದ್ಧಿ ಹೊಂದುತ್ತವೆ ಅನ್ನುವುದನ್ನು ಪ್ರಪಂಚದಾದ್ಯಂತದ ನಿರಂಕುಶಾಧಿಪತ್ಯ ನಿರೂಪಿಸಿದೆ. ಆದರೆ ನಿಷ್ಕ್ರಿಯವಾಗಿ ಉಳಿಯುವ ಮತ್ತು ಬದಲಾವಣೆಗೆ ಒಳಗಾಗದ ದೇಶಗಳು ಮತ್ತು ಸಂಸ್ಕೃತಿಗಳು ಪೂರ್ಣ ಪ್ರಮಾಣದ ಫ್ಯಾಶಿಸಂನ ನಿರಂಕುಶಾಧಿಪತ್ಯಕ್ಕೆ ಕಾರಣವಾಗುತ್ತವೆ. ಇತಿಹಾಸ ಹೇಳಿರುವುದು ಇದನ್ನೇ.

ಮಾಧ್ಯಮದ ಮಾಲಕತ್ವವೂ ಸಮಸ್ಯಾತ್ಮಕವಾಗಿದೆ. ಮಾಧ್ಯಮದಲ್ಲಿನ ಪ್ರಮುಖ ಷೇರುಗಳು ಅಧಿಕಾರ ಕೇಂದ್ರಗಳಿಗೆ ಹತ್ತಿರವಿರುವ ಬಂಡವಾಳಶಾಹಿಗಳ ಒಡೆತನದಲ್ಲಿವೆ. ಇದು ಭಾರತೀಯ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆಯೇ?

► ಮಾಧ್ಯಮ ಮಾಲಕತ್ವದ ಮಾದರಿ ಹೆಚ್ಚಿನ ದೇಶಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಆದರೆ ಪ್ರಜಾಪ್ರಭುತ್ವಗಳು ಯಾವಾಗಲೂ ಸಾರ್ವಜನಿಕ ಒತ್ತಡದ ಮೂಲಕ ಅದನ್ನು ನಿಯಂತ್ರಿಸಿವೆ. ಕಾರ್ಪೋರೇಟ್ ವಲಯ ದೊಡ್ಡ ವ್ಯಾಪಾರಿ ಹಿತಾಸಕ್ತಿಯೊಂದಿಗೆ ಮಾಧ್ಯಮವನ್ನು ಖರೀದಿಸುವುದನ್ನು ನಿರ್ಬಂಧಿಸುವ ಕಾರ್ಪೊರೇಟ್ ಮತ್ತು ವ್ಯಾಪಾರ ರೂಢಿಗಳ ಕಾಯಿದೆಗಳು ಭಾರತದಲ್ಲಿದ್ದವು.

ಆದರೆ ಯಾವುದೋ ಹಂತದಲ್ಲಿ, ಮುಕ್ತ ಮಾರುಕಟ್ಟೆಯ ಬುದ್ಧಿವಂತಿಕೆಯಿಂದ ನಾವು ಆ ಕಾನೂನನ್ನು ದಾಟಿಬಿಟ್ಟಿದ್ದೇವೆ. ಈಗ ಅಧಿಕಾರದಲ್ಲಿರುವ ಜನರಿಗೆ ಹತ್ತಿರವಾಗಿರುವ ದೊಡ್ಡ ಕಾರ್ಪರೇಟ್ಗಳು ಮಾಧ್ಯಮವನ್ನು ದೊಡ್ಡ ಮಟ್ಟದಲ್ಲಿ ಪ್ರವೇಶ ಮಾಡಿವೆ. ಇದು ಯಾವಾಗಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಒಂದು ದೊಡ್ಡ ಬೆದರಿಕೆಯೇ ಆಗಿದೆ ಮತ್ತು ನಾವು ಅದನ್ನು ಭಾರತದಲ್ಲಿ ಬಹಿರಂಗವಾಗಿಯೇ ನೋಡುತ್ತಿದ್ದೇವೆ.

ಇದು ಯಾವ ಪ್ರತಿರೋಧವಿಲ್ಲದೆ ನಡೆಯುತ್ತಿದೆ. ವಿರೋಧ ಪಕ್ಷಗಳು ಮೌನವಾಗಿವೆ. ಸಾರ್ವಜನಿಕರು ಮೌನವಾಗಿದ್ದಾರೆ. ಬಹಳಷ್ಟು ಕಾರಣಗಳಿಗಾಗಿ ಪತ್ರಿಕೋದ್ಯಮ ಸಂಸ್ಥೆಗಳೊಳಗೆ ಯಾವುದೇ ಗಟ್ಟಿ ಧ್ವನಿಗಳಿಲ್ಲ. ಈ ದೇಶದ ಜನರ ಪಾಲಿಗೆ ಇದು ದೊಡ್ಡ ನಷ್ಟ.

 ಇಲ್ಲಿಯವರೆಗೆ ನಿಮ್ಮ ಅತ್ಯಂತ ಸವಾಲಿನ ಕೆಲಸ ಯಾವುದು ಮತ್ತು ಏಕೆ?

►  ಜಡ್ಜ್ ಲೋಯಾ ಅವರ ಸಾವಿನ ಕುರಿತು ಕಾರವಾನ್ ಮಾಡಿದ ತನಿಖಾ ವರದಿಗಳ ಸರಣಿಯನ್ನು ನೋಡಿಕೊಂಡಿದ್ದು ನಾನು ಮಾಡಿರುವ ಅತ್ಯಂತ ಸವಾಲಿನ ಕೆಲಸ. ಸೊಹ್ರಾಬುದ್ದೀನ್, ಅವರ ಪತ್ನಿ ಕೌಸರ್ಬಿ ಮತ್ತು ಸಾಕ್ಷಿ ಪ್ರಜಾಪತಿ ಅವರ ನಕಲಿ ಎನ್ಕೌಂಟರ್ ಹತ್ಯೆಯ ರಾಜಕೀಯ ಆರೋಪದ ಪ್ರಕರಣ ಇಲ್ಲಿತ್ತು. ಸಿಬಿಐ ತನ್ನ ತನಿಖೆಯಲ್ಲಿ ಅಮಿತ್ ಶಾ ಆರೋಪಿಯೆಂದು  ಬಂಧಿಸಿ ಜೈಲಿಗೆ ಕಳಿಸಿತ್ತು. ಪ್ರಕರಣದ ವಿಚಾರಣೆ ಗುಜರಾತ್ನ ಹೊರಗೆ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಗಿತ್ತು. ಮತ್ತು ಇದೇ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಸೂಚನೆ ನೀಡಿತ್ತು.

ಆದರೆ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನ್ಯಾಯಾಧೀಶರ ವರ್ಗಾವಣೆಯಾಯಿತು. ನಂತರ ನ್ಯಾಯಾಧೀಶ ಲೋಯಾ ಬಂದರು. ಅವರು ಹೃದಯಾಘಾತದಿಂದ ನಿಧನರಾದರು ಎಂದು ಪತ್ರಿಕೆಗಳು ಬರೆದವು. ಆದರೆ ಕಾರವಾನ್ ಬರೆದಾಗ, ನ್ಯಾಯಾಧೀಶ ಲೋಯಾ ಅವರ ಕುಟುಂಬ ತನ್ನ ಮೌನ ಮುರಿದು ಮಾತನಾಡುವ ಮೂಲಕ ಅದು ಶುರುವಾಯಿತು. ಅಮಿತ್ ಶಾ ಅವರನ್ನು ಖುಲಾಸೆಗೊಳಿಸಲು ಲೋಯಾ ಅವರ ಮೇಲೆ ತೀವ್ರ ಒತ್ತಡವಿತ್ತು ಮತ್ತು ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಅವರಿಂದ 100 ಕೋಟಿ ರೂ.ಗಳ ಆಫರ್ ಇತ್ತೆಂಬುದನ್ನು ಅವರ ಕುಟುಂಬದ ಸದಸ್ಯರು ಹೇಳಿದರು.

ಅದನ್ನು ಕಾರವಾನ್ ಪ್ರಕಟಿಸಿತು ಮತ್ತು ಅದರ ಬೆನ್ನಲ್ಲೇ ಪೋಸ್ಟ್ ಮಾರ್ಟಮ್ ಕೊಠಡಿಯಲ್ಲಿ ನಿಜವಾಗಿ ಏನಾಯಿತು ಎಂಬುದನ್ನು ವಿವರಿಸುವ, ಲೋಯಾ ಸಾವಿನ ಬಗ್ಗೆ ಪೋಲೀಸರ ಮತ್ತು ಸರಕಾರದ ಕಥೆಯನ್ನು ಬಯಲು ಮಾಡುವ ಹಲವಾರು ಲೇಖನಗಳನ್ನು ಪ್ರಕಟಿಸಿತು. ನ್ಯಾಯಾಧೀಶ ಲೋಯಾ ಅವರು ಉಳಿದುಕೊಳ್ಳಬೇಕಿದ್ದ ಸರ್ಕಾರಿ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಉದ್ಯೋಗಿಗಳನ್ನು ನಮ್ಮ ವರದಿಗಾರರು ಪತ್ತೆ ಹಚ್ಚಿದ್ದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾರವಾನ್ನಿಂದ ಹಿಂದೆಂದೂ ಇರದಷ್ಟು ಫಾಲೋ ಅಪ್ ಬರಹಗಳು - ಸುಮಾರು 29 ಅಥವಾ 30 - ಬಂದವು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಗೂ ಆಗಿನ ಮುಖ್ಯ ನ್ಯಾಯಾಧೀಶರ ವಿರುದ್ಧ ವಿಫಲ ದೋಷಾರೋಪಣೆ ಪ್ರಕ್ರಿಯೆಗೂ ಕಾರಣವಾದವು. ಹೀಗೆ, ನಾವು ಪ್ರಕಟಿಸಿದ್ದ ವರದಿ ಸರಕಾರ ಮತ್ತು ಆ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಸುಪ್ರೀಂ ಕೋರ್ಟ್ ನಿಂದಲೂ ತೀವ್ರ ನಿಗಾ ಮತ್ತು ಕುತೂಹಲಕ್ಕೆ ಒಳಗಾಯಿತು.

ಹಾಗಾಗಿ, ಪ್ರತಿಯೊಂದು ವರದಿಯ ಮೂಲಕವೂ ವಾಸ್ತವವನ್ನು ಬಿಚ್ಚಿಟ್ಟ ಜಡ್ಜ್ ಲೋಯಾ ಸರಣಿಯನ್ನು ನಾನು ದೊಡ್ಡ ಸವಾಲಿನ  ಕೆಲಸಗಳಲ್ಲಿ ಒಂದೆಂದು ಭಾವಿಸುತ್ತೇನೆ.

ಪತ್ರಕರ್ತರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ, ಆರ್ಥಿಕ ಅಕ್ರಮಗಳ ನೆಪ ಹೇಳಿ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ದೇಶದ್ರೋಹದ ಆರೋಪ ಎದುರಿಸುತ್ತಿರುವ ಪತ್ರಕರ್ತರಲ್ಲಿ ನೀವೂ ಒಬ್ಬರು. ಇದು ಏನನ್ನು ತೋರಿಸುತ್ತದೆ?

► ಅದು ನಿಜ. ಅನೇಕ ಪತ್ರಕರ್ತರ ಮೇಲೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಸಂತೋಷದಿಂದ ಗುರುತಿಸಿಕೊಳ್ಳುವ ದೇಶದಲ್ಲಿ ಯಾವುದೇ ಅರ್ಥವಿಲ್ಲದಂಥ ಕಠಿಣ ಕಾನೂನುಗಳು ಮತ್ತು ವಸಾಹತುಶಾಹಿ ಕಾನೂನುಗಳ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನನ್ನ ಮೇಲೆ ದೇಶದ ವಿವಿಧ ಭಾಗಗಳಲ್ಲಿ 10 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. ಇದು ತಾವು ಕಂಡುಕೊಂಡ ಸತ್ಯಕ್ಕೆ ಬದ್ಧರಾಗಿ ನಿಲ್ಲುವ ಸ್ವತಂತ್ರ ಪತ್ರಕರ್ತರಿಗೆ ಸಂದೇಶ ಮುಟ್ಟಿಸಲು ದೇಶದ ಪ್ರಭುತ್ವ ಕಾನೂನನ್ನು ಅಸ್ತ್ರ ಮಾಡಿಕೊಳ್ಳುವ ಮತ್ತೊಂದು ರೀತಿ.

ವ್ಯವಸ್ಥೆಯನ್ನು ಟೀಕಿಸುವ ಮಾಧ್ಯಮಗಳ ಮೇಲೆ ನಿರಂತರವಾಗಿ ಗುರಿ ಮಾಡಲಾಗುತ್ತಿದೆ. ಅವರ ವಿರುದ್ಧ ವರದಿಗಳನ್ನು ಸೃಷ್ಟಿಸಿ ಅವರ ಘನತೆಯನ್ನು ಕುಗ್ಗಿಸಲಾಗುತ್ತಿದೆ. ವೈರ್ನ ಮೆಟಾ ವರದಿ ಇದಕ್ಕೊಂದು ಉದಾಹರಣೆ. ಇಂತಹ ಬೋನನ್ನು ತಪ್ಪಿಸಿಕೊಳ್ಳಲು ವ್ಯವಸ್ಥೆಯ ವಿರುದ್ಧ ಇರುವ ಮಾಧ್ಯಮಗಳು ಮಾಡಬೇಕಾದ್ದೇನು?

► ಪತ್ರಕರ್ತರು ತಮ್ಮ ವರದಿ, ದಾಖಲೆ, ಮೂಲಗಳು ಇತ್ಯಾದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹಲವು ಬಾರಿ ತಿದ್ದಬೇಕು. ಸಂಪಾದನೆ, ಮಾಹಿತಿ ಪರಿಶೀಲನೆ ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತವೆಯೆ ಎಂಬುದನ್ನು ಹಲವು ಬಾರಿ ಎಚ್ಚರಿಕೆಯಿಂದ ಪರಿಶೀಲಿಸಬೇಕು. ಪತ್ರಿಕಾ ವೃತ್ತಿ ಎನ್ನುವುದು ಮೂಲಗಳ ನಿರ್ದಿಷ್ಟತೆ ಹಾಗೂ ವರದಿಗಾರರು ಮತ್ತು ಸಂಪಾದಕರ ನಡುವಿನ ಸಹಭಾಗಿತ್ವವಾದರೂ, ದೇಶದ ಪರಿಸ್ಥಿತಿಯಲ್ಲಿ ಅದರಲ್ಲೂ ವಿಶೇಷವಾಗಿ ತನಿಖಾ  ವರದಿಗಳ ಬಗ್ಗೆ ಹಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಪತ್ರಕರ್ತರು ನಿಧಾನಿಸಬೇಕು ಮತ್ತು ಪ್ರಕ್ರಿಯೆಗಳನ್ನು ಅನುಸರಿಸುವ ಹಳೆಯ ಕಾಲದ ಪದ್ಧತಿಗಳಿಗೆ ತೀವ್ರ ಗಮನ ಕೊಡಬೇಕು.

ಮುದ್ರಣ ಮತ್ತು ಡಿಜಿಟಲ್ ಆವೃತ್ತಿಗಳನ್ನು ಸೇರಿಸಿದರೆ ಕಾರವಾನ್ ಐದು ಲಕ್ಷ ಓದುಗರನ್ನು ಹೊಂದಿದೆ. ಭಾರತದಂತಹ ದೊಡ್ಡ ದೇಶದಲ್ಲಿ ಇದು ದೊಡ್ಡ ಸಂಖ್ಯೆಯಲ್ಲ. ಆದರೆ ನಾವು ಮಾಡಿದ ಬರಹಗಳು - ನ್ಯಾಯಾಧೀಶ ಲೋಯಾ ಸಾವು, ಅಮಿತ್ ಶಾ ಮಗನ ವ್ಯವಹಾರದ ಕಥೆಗಳು, ಕೇಮನ್ ದ್ವೀಪದಲ್ಲಿರುವ ಅಜಿತ್ ದೋವಲ್ ಮಗನ ಕಂಪೆನಿ, ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನೀಡಿದ ಹಣದ ನಮೂದುಗಳನ್ನು ಹೊಂದಿ