ಗೋಮೂತ್ರ ಶ್ರೇಷ್ಠವಾಗಿದ್ದರೆ ನೀವೇ ಕುಡಿಯಿರಿ, ನಮ್ಮನ್ನು ಸ್ವಚ್ಛವಾಗಿರಲು ಬಿಡಿ: ನಟ ಪ್ರಕಾಶ್ ರಾಜ್

''ಇತಿಹಾಸವೇ ಇಲ್ಲದವರಿಂದ ದೇಶದ ಇತಿಹಾಸ ತಿರುಚುವ ಕೆಲಸ'' ► ''ಭೀಮಾ ಕೋರೆಂಗಾವ್ ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತ''

Update: 2023-01-02 12:17 GMT

ಮೈಸೂರು,ಜ.1: ಇತಿಹಾಸವೇ ಇಲ್ಲದವರು ದೇಶದ ಇತಿಹಾಸವನ್ನು ತಿರುಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜೈಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ  ಅಶೋಕಪುರಂ ಬಳಿ ಇರುವ ಜಯನಗರ ರೈಲ್ವೆ ಗೇಟ್ ಬಳಿ ಇರುವ ಕೋರೆಂಗಾವ್ ಸ್ಥಂಭಕ್ಕೆ ರವಿವಾರ ಪುಷ್ಪಾರ್ಚನೆ ಮಾಡಿ ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

'ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ ಗೊತ್ತಿಲ್ಲ. ಇದರಿಂದಲೇ ಇವರಿಗೆ ಭೂತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ  ಅವರಿಗೆ ಅನುಕೂಲಕರವಾಗುವಂತೆ ಇತಿಹಾಸವನ್ನು ಬದಲಿಸಲು ಹೊರಟಿದಿದ್ದಾರೆ' ಎಂದು ಆರೋಪಿಸಿದರು.

''ಭೀಮಾ ಕೋರೆಂಗಾವ್  ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತ. ಇದು ಜೈಭೀಮ್ ಅನುಯಾಯಿಗಳ ಅಸ್ಮಿತೆ ಮತ್ತು ಅಸ್ತಿತ್ವ. ಇದನ್ನು ಸಹಿಸಿಕೊಳ್ಳದ ಮನಸ್ಸುಗಳು ಈ ಚರಿತ್ರೆಯನ್ನು ತಿದ್ದಲು ಹುನ್ನಾರ ನಡೆಸಿವೆ. ಆದರೆ, ಇದು ಸಾಧ್ಯವಿಲ್ಲ. ಈ ವಿಚಾರಗಳೆಲ್ಲ ನಮಗೆ ನಿಧಾನವಾಗಿ ಅರ್ಥವಾಗುತ್ತಿದೆ'' ಎಂದರು.

'ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು. ಹೀಗೆ ಅನೇಕರ ವಿರುದ್ಧವೂ ಎಫ್‌ಐಆರ್ ಹಾಕಲಾಗಿದೆ. ಆದರೀಗ ಇವುಗಳೆಲ್ಲ ‘ಸುಳ್ಳು ಕೇಸ್’ ಎಂಬುದು ಗೊತ್ತಾಗಿದೆ. ಇದೆಲ್ಲ ಇತಿಹಾಸ ಗೊತ್ತಿಲ್ಲದವರು ಮಾಡುವ ಕುತಂತ್ರ' ಎಂದು ಆರೋಪಿಸಿದರು.

ನಮ್ಮನ್ನು ಸ್ವಚ್ಛವಾಗಿರಲು ಬಿಡಿ: 'ಸುಳ್ಳಿಗೆ ಆಯಸ್ಕಾಂತೀಯ ಶಕ್ತಿ ಇದೆ. ಜನರನ್ನು ದಾರಿ ತಪ್ಪಿಸಲು ಸುಳ್ಳಿನ ಸರಮಾಲೆಯನ್ನೇ ಬಿತ್ತಲಾಗುತ್ತಿದೆ. ವ್ಯಾಟ್ಸ್‌ಆ್ಯಪ್ ಯೂನಿವರ್ಸಿಟಿ ಮೂಲಕ ಕಾಗಕ್ಕ ಗುಬ್ಬಕ್ಕನ ಕಥೆಯಂತಹ ಇತಿಹಾಸವನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಬುಲ್‌ಬುಲ್ ಹಕ್ಕಿ ಮೇಲೆ ಸಾವರ್ಕರ್ ಪ್ರಯಾಣ, ಗೋಮೂತ್ರ ಸೇವನೆ ಆರೋಗ್ಯಕರ ಎಂಬ ಹಸಿಸುಳ್ಳು ಇದಕ್ಕೆ ಇತ್ತೀಚಿನ ನಿದರ್ಶನವಾಗಿದೆ. ಗೋಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕುಡಿಯಿರಿ. ನಮ್ಮನ್ನು ಸ್ವಚ್ಛವಾಗಿರಲು ಬಿಡಿ' ಎಂದರು.

''ಬಲಪಂಥೀಯರ ಎಡಬಿಡಂಗಿತ ಪ್ರಪಂಚಾದ್ಯಂತ ಎಲ್ಲೆಡೆ ಇದೆ. ಇವರ ಆಟವೆಲ್ಲ ಕೆಲ ವರ್ಷಗಳು ಮಾತ್ರ ನಡೆಯುತ್ತದೆ. ನಿಜಾಂಶ ಗೊತ್ತಾದ ಬಳಿಕ ಇದೆಲ್ಲ ನಡೆಯಲ್ಲ. ಇವರು ಸೃಷ್ಟಿಸುವ ಗಾಯವನ್ನು ತಡೆದುಕೊಂಡು, ಸುಧಾರಿಸಿಕೊಳ್ಳುವ ಶಕ್ತಿ ಈ ದೇಶಕ್ಕೆ ಇದೆ'' ಎಂದರು.

‘ಯಾರಿಗೂ ಇಲ್ಲದ ಉಸಾಬರಿ ನಿನಗೆ ಏಕೆ? ಸುಮ್ಮನೆ ಸಿನೆಮಾ ಮಾಡಿಕೊಂಡು ಹೋಗು’ ಎಂದು ಅನೇಕರು ನನಗೆ ಸಲಹೆ ನೀಡುತ್ತಾರೆ. ನಟನೆ ನನ್ನ ಕರ್ಮ, ಅದು ಮುಂದುವರಿಯುತ್ತದೆ ಎಂದ ಅವರು, ನಾವುಗಳೆಲ್ಲ ಅಂಬೇಡ್ಕರ್, ಕುವೆಂಪು, ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಅವರಿಂದ ಅರಿವು ಪಡೆದುಕೊಂಡವರು. ಹೃದಯ ಶ್ರೀಮಂತರು. ಕಳೆದುಕೊಳ್ಳುವುದರಲ್ಲಿ ಶ್ರೀಮಂತರು. ಬಚ್ಚಿಡುವವರಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಬೇಧಭಾವ ಮಾಡದ ಪ್ರಕೃತಿಯಿಂದಲೂ ಬಲಪಂಥೀಯರು ಪಾಠ ಕಲಿಯುತ್ತಿಲ್ಲ. ಇದನ್ನೂ ಅರ್ಥಮಾಡಿಕೊಳ್ಳುತ್ತಿಲ್ಲ. ಇದರ ಮುಂದೆ ಯಾರೂ ಶ್ರೀಮಂತರಲ್ಲ, ಬಡವರಲ್ಲ. ಆ ಜಾತಿ- ಈ ಜಾತಿಯೂ ಇಲ್ಲ. ಎಲ್ಲರೂ ಒಂದೇ. ರಕ್ತದಲ್ಲೂ ಯಾವುದೇ ತಾರತಮ್ಯವಿಲ್ಲ. ಎಲ್ಲರಲ್ಲಿ ಇರುವುದು ಒಂದೇ ರೀತಿಯ ರಕ್ತವೇ. ಇವರೆಲ್ಲ ದೇಹದಲ್ಲಿ ಹರಿಯುವ ರಕ್ತದಿಂದಲೂ ಪಾಠ ಕಲಿಯುತ್ತಿಲ್ಲ ಎಂದು ಕುಟುಕಿದರು.

ಕಾರ್ಯಕ್ರಮದಲ್ಲಿ ಬಂತೇಜಿ, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ,  ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯೆ ಪಲ್ಲವಿಬೇಗಂ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್ ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದರಾಜು, ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯ ಜಯರಾಜ್, ರವಿ, ದಿಲೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಸಮಾನತೆಯಿಂದ ಬದುಕುತ್ತಿದ್ದ ಕಾಲದಲ್ಲಿ ಸಮಾನತೆ ಬೇಕು, ಸಮಾನತೆ ಬೇಕೆಂದರೆ ಅಧಿಕಾರ ಬೇಕು ಎಂಬ ಜವಾಬ್ದಾರಿಯ ಎಚ್ಚರಿಕೆ ಮೂಡಿಸಿದವರು ಬಾಬಾಸಾಹೇಬ್ ಅಂಬೇಡ್ಕರ್.

 - ಓ.ಎಲ್.ನಾಗಭೂಷಣಸ್ವಾಮಿ, ವಿಮರ್ಶಕ.

ಇದನ್ನೂ ಓದಿ>>> ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ 6 ಜನರ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

Full View

Similar News