ಪತನಮುಖೀ ಕನ್ನಡ

Update: 2023-01-02 06:48 GMT

ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಲೇಖಕ, ಸಂಶೋಧಕರಾಗಿ ಗುರುತಿಸಲ್ಪಟ್ಟವರು. ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ಶಿಕ್ಷಣ ಪಡೆದು ಸುಳ್ಯ, ಮಂಗಳೂರು, ಹಂಪಿ, ದಿಲ್ಲಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ‘ದಲಿತ ಜಗತ್ತು’, ‘ಶಿಷ್ಟ ಪರಿಶಿಷ್ಟ’, ‘ಕರಾವಳಿ ಜಾನಪದ’, ‘ಕೂಡುಕಟ್ಟು’, ‘ಬಹುರೂಪ’ ಇವರ ಕೆಲವು ಮುಖ್ಯ ಕೃತಿಗಳು. ಕರ್ನಾಟಕ ಜಾನಪದ ಅಕಾಡಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.

ಡಾ. ಪುರುಷೋತ್ತಮ ಬಿಳಿಮಲೆ

ಕೇಂದ್ರ ಸರಕಾರಕ್ಕೆ ಸಂಸ್ಕೃತವು ರಾಷ್ಟ್ರೀಯ ಭಾಷೆಯಾಗಬೇಕು ಮತ್ತು ಹಿಂದಿಯು ಸಂಪರ್ಕ ಭಾಷೆಯಾಗಬೇಕು. ಇದಕ್ಕಾಗಿ ಅದು ಏನನ್ನಾದರೂ ಮಾಡಲು ಸಿದ್ಧವಿದೆ. ದೇಶದ ಉಳಿದ ಭಾಷೆಗಳ ಬಗ್ಗೆ ಅದಕ್ಕೆ ಅಂಥ ಗೌರವವೇನಿಲ್ಲ. ಕೇಂದ್ರ ಸರಕಾರವನ್ನು ಮೆಚ್ಚಿಸುವುದೇ ತಮ್ಮ ಬದುಕಿನ ಬಹುದೊಡ್ಡ ಭಾಗ್ಯ ಎಂದು ತಿಳಿದಿರುವ ಕರ್ನಾಟಕ ಸರಕಾರವು ಕೇಂದ್ರದ ಈ ನಡೆಯನ್ನು ಪ್ರಶ್ನಿಸದೆ ಒಪ್ಪಿಕೊಂಡು ತನ್ನ ನಿಷ್ಠೆಯನ್ನು ಮೆರೆಯುತ್ತಿದೆಯೇ ವಿನಾ ಕನ್ನಡವೂ ಸೇರಿದಂತೆ ತನ್ನ ರಾಜ್ಯದಲ್ಲಿರುವ ಸುಮಾರು 72 ಭಾಷೆಗಳ ಬಗ್ಗೆ ಯಾವ ಕಾರ್ಯಯೋಜನೆಯನ್ನೂ ಪ್ರಕಟಿಸುತ್ತಿಲ್ಲ. ಈ ನಡುವೆ ಮಧ್ಯಮ ವರ್ಗದ ಭಾರತೀಯರು ಭಾಷಾ ಅಧ್ಯಯನವನ್ನು ‘ಅನುತ್ಪಾದಕ’ ಎಂದು ಭಾವಿಸಿ, ಭಾಷಾ ಕಲಿಕೆಯಿಂದ ದೂರ ಸರಿಯುತ್ತಿದ್ದಾರೆ.

ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಇಲ್ಲವೇ ವಿದೇಶಗಳಿಗೆ ಕಳುಹಿಸಿಕೊಡುವುದು ಬಹಳ ಮುಖ್ಯ ಎಂದು ಬಹುತೇಕ ಎಲ್ಲರೂ ನಂಬಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಮರುಶೋಧಿಸುವ, ವರ್ತಮಾನದ ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೀಲಿಸುವ ಭಾಷೆ ಮತ್ತು ಸಾಹಿತ್ಯದ ಮಹತ್ವ ಕಡಿಮೆಯಾಗುತ್ತದೆ. ಭಾಷೆಗಳ ಕುರಿತು ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದಿ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಜಗತ್ತಿನ ಎಲ್ಲ ಫ್ಯಾಶಿಸ್ಟ್ ಸರಕಾರಗಳು ಬೇಕೆಂತಲೇ ಮರೆಯುತ್ತವೆ ಮತ್ತು ಅವು ತಮ್ಮ ಅಧಿಕಾರದ ಭಾಷೆಯೇ ಜನರ ಭಾಷೆಯಾಗಬೇಕೆಂದು ಬಯಸುತ್ತವೆ.

ಜನರ ನೈತಿಕತೆಯನ್ನು ಬಡಿದೆಬ್ಬಿಸಲು, ಸಮಾಜದ ಸಾಮರಸ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ನಿರಂತರವಾಗಿ ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಯಾವುದೇ ಸಮಾಜವು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. 10ನೇ ಶತಮಾನದ ಪಂಪನು ‘ಮಾನವ ಜಾತಿ ಒಂದೆ ವಲಂ’ ಎಂದಾಗ ಅದು 20ನೇ ಶತಮಾನದ ಕುವೆಂಪು ಅವರ ವಿಶ್ವಮಾನವ ಕಲ್ಪನೆಗೆ ಹತ್ತಿರವಾಗಿರುವುದೇ ಹೌದಾದರೆ ಕರ್ನಾಟಕ್ಕೆ ಅಂಥದ್ದೊಂದು ಭಾಷಿಕ ಪರಂಪರೆ ಇದೆಯೇ? ಡಾ. ಅಂಬೇಡ್ಕರ್ ಅವರ ವಿಗ್ರಹಗಳನ್ನು ನಾಡಿನಾದ್ಯಂತ ಸ್ಥಾಪಿಸಿದಾಗ ಅಂಬೇಡ್ಕರ್ ಸಾಂಸ್ಥೀಕರಣಕ್ಕೆ ಒಳಗಾಗುತ್ತಿದ್ದಾರೆಯೇ? ರಾಷ್ಟ್ರೀಯ ಸ್ವಯಂಸೇವಾ ಸಂಘದ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವ ಸರಕಾರಗಳು ರವೀಂದ್ರನಾಥ ಠಾಗೋರರ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಏಕೆ ಮೂಲೆಗೆ ತಳ್ಳಿವೆ? ಆನಂದ ಕುಮಾರಸ್ವಾಮಿಯವರು ಭಾರತದ ಕಲೆ ಮತ್ತು ವಾಸ್ತುಶಿಲ್ಪಗಳ ಬಗ್ಗೆ ಏನು ಹೇಳಿದರು? ವ್ಯಾಸರು ಬರೆದ ಮಹಾಭಾರತವು ಸಾವಿರಾರು ಮಹಾಭಾರತಗಳಾಗಿ ಯಾಕೆ ಪುನ: ಸೃಷ್ಟಿಯಾದುವು? ಎಂಬಿತ್ಯಾದಿ ಪ್ರಶ್ನೆಗಳನ್ನು ನಾವು ನಿರಂತರವಾಗಿ ಕೇಳಿಕೊಳ್ಳುವುದರಿಂದಲೇ ಜ್ಞಾನ ಸೃಷ್ಟಿಯಾಗುತ್ತದೆ.

ಆದರೆ ವರ್ತಮಾನ ಕಾಲದಲ್ಲಿ ಪ್ರಶ್ನೆಗಳನ್ನು ಕೇಳುವುದು ಅಪರಾಧವಾಗಿದೆ. ಇಂಥದ್ದೇ ಪಠ್ಯಗಳನ್ನು ಓದಬೇಕು ಎಂಬ ನಿರ್ದೇಶನಗಳನ್ನು ಪ್ರಭುತ್ವ ನೀಡಲಾರಂಭಿಸಿದೆ. ಜಗತ್ತಿನ ವಿದ್ವಾಂಸರ ಕಣ್ದೆರೆಸಿದ ಎ.ಕೆ. ರಾಮಾನುಜನ್ ಅವರ ಮುನ್ನೂರು ರಾಮಾಯಣಗಳು ಲೇಖನವನ್ನು ಓದಬಾರದೆಂದು ದಿಲ್ಲಿ ವಿಶ್ವವಿದ್ಯಾನಿಲಯದ ಮೇಲೆ ಒತ್ತಡ ಹೇರಲಾಯಿತು. ಇದರ ಒಟ್ಟು ಪರಿಣಾಮವೋ ಎಂಬಂತೆ ಶಿಕ್ಷಣ ಕ್ಷೇತ್ರದಲ್ಲಿ ಈಗ ಭಾಷಾಧ್ಯಯನ ಕಳೆಗುಂದುತ್ತಿದೆ. ಉನ್ನತ ಶಿಕ್ಷಣದಲ್ಲಂತೂ ಭಾಷೆಯೂ ಸೇರಿದಂತೆ ಮಾನವಿಕಗಳು ಅವನತಿಯತ್ತ ಹೆಜ್ಜೆ ಇಟ್ಟಿವೆ.

ಇದೀಗ ಕೇಂದ್ರ ಸರಕಾರವು ಹೊಸ ಶಿಕ್ಷಣ ನೀತಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸರಕಾರವು ಹೆಚ್ಚು ಯೋಚನೆ ಮಾಡದೆ ಅದನ್ನು ಅಂಗೀಕರಿಸಿದೆ. ಈ ನೀತಿಯು ಇದೀಗ ಭಾರತದಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಬಲಪಡಿಸುತ್ತಿದೆ. 2011ರ ಜನಗಣತಿಯಲ್ಲಿ ಗುರುತಿಸಲಾದ 19ಸಾವಿರಕ್ಕೂ ಮಿಕ್ಕಿದ ತಾಯ್ನುಡಿಗಳ ಬಗ್ಗೆ ಯಾವ ಸರಕಾರಗಳೂ ತುಟಿ ಬಿಚ್ಚುತ್ತಿಲ್ಲ. ಚಾಲ್ತಿಯಲ್ಲಿ ಇಲ್ಲದ ಭಾಷೆಯ ಬಗ್ಗೆ ಸರಕಾರಗಳಿಗಿರುವ ಪ್ರೀತಿ ಚಾಲ್ತಿಯಲ್ಲಿ ಇರುವ ಭಾಷೆಗಳ ಬಗ್ಗೆ ಇಲ್ಲದಿರುವುದು ಅನಾಹುತಕಾರಿಯಾಗಿದೆ. ಹಿಂದಿಯನ್ನು ಎಲ್ಲರೂ ಓದುವಂತೆ ಮಾಡಲು ಕಾರ್ಯಸೂಚಿಯನ್ನು ಸಿದ್ಧಪಡಿಸುವ ಸರಕಾರವು ಇತರ ಭಾರತೀಯ ಭಾಷೆಗಳಿಗೆ ಕಾರ್ಯಸೂಚಿಯನ್ನು ಕೊಡುವುದಿಲ್ಲ.

ಸಂಸ್ಕೃತ ಭಾಷಿಕರ ಸಂಖ್ಯೆಯನ್ನು 2023ರ ಜನಗಣತಿಯಲ್ಲಿ ಹೆಚ್ಚು ಮಾಡಬಯಸುವ ಸಂಘ ಸಂಸ್ಥೆಗಳು ತಮ್ಮದೇ ತಾಯ್ನುಡಿಯ ಬಗ್ಗೆ ಮಾತಾಡುವುದಿಲ್ಲ. ಮಾತೃ ಭಾಷೆಯಲ್ಲಿ ಅಥವಾ ರಾಜ್ಯ ಭಾಷೆಯಲ್ಲಿ ಶಿಕ್ಷಣ ಎಂಬ ಆಕರ್ಷಕ ಮಾತು ಶಿಕ್ಷಣ ನೀತಿಯಲ್ಲಿದೆ. ಆದರೆ ಇದನ್ನು ಅಳವಡಿಸುವುದು ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲಗಳ ಕ್ರೋಡೀಕರಣ ಹೇಗೆ ? ಎಂಬ ಬಹಳ ಮಹತ್ವದ ಹಾಗೂ ಪ್ರಾಯೋಗಿಕ ವಿಚಾರಗಳ ಬಗ್ಗೆ ಯಾರಿಗೂ ತಿಳಿವಳಿಕೆಯಿಲ್ಲ. ಕರ್ನಾಟಕ ಸರಕಾರವು ಕನ್ನಡವನ್ನು ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಮಾಡ ಹೊರಟಾಗ ಸುಪ್ರಿಂಕೋರ್ಟ್ ಅದನ್ನು ತಿರಸ್ಕರಿಸಿತು. ಈ ಕುರಿತು ಸಂವಿಧಾನದಲ್ಲಿಯೇ ಸೂಕ್ತವಾದ ತಿದ್ದುಪಡಿ ತರಲು ಯಾರೂ ಕೆಲಸ ಮಾಡುತ್ತಿಲ್ಲ. ಬದಲು ಇದೇ ಅವಕಾಶವನ್ನು ಬಳಸಿಕೊಂಡು ದೇಶದಾದ್ಯಂತ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಶಕ್ತಿಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರ ಹೊಮ್ಮಿದೆ. ಅದು ಅನ್ನದ ಭಾಷೆಯಾಗಿದೆ ಎಂಬ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ. ಇದರಿಂದಾಗುತ್ತಿರುವ ಬಹಳ ದೊಡ್ಡ ಅಪಾಯವೆಂದರೆ, ಜಗತ್ತಿನಾದ್ಯಂತ ಸಜೀವವಾಗಿರುವ ಸಾವಿರಾರು ಸಣ್ಣ ಭಾಷೆಗಳು ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವುದು. ಈ ಬಗ್ಗೆ ಆಯಾ ದೇಶಗಳ ಸರಕಾರಗಳು ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಮತ್ತು ಸರಕಾರಗಳು ಸಣ್ಣ ಭಾಷೆಗಳ ಕುರಿತು ತೋರುತ್ತಿರುವ ನಿರ್ಲಕ್ಷ್ಯವು ಅವುಗಳನ್ನು ಜಗತ್ತಿನಾದ್ಯಂತ ಅವಸಾನದ ಅಂಚಿಗೆ ತಂದು ನಿಲ್ಲಿಸಿವೆ.

ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಗೋವು, ಜಾತಿ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆಯುವ ಹಾಗೆ, ಹಿನ್ನಡೆ ಅನುಭವಿಸುತ್ತಿರುವ ಭಾಷೆಯ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ.

ಭಾಷೆಗೆ ಸಂಬಂಧಿಸಿದಂತೆ 1971ರಿಂದಲೂ ಕೇಂದ್ರ ಸರಕಾರ ಒಂದು ಧೋರಣೆಯನ್ನು ಸ್ಪಷ್ಟವಾಗಿ ಅನುಸರಿಸುತ್ತಲೇ ಬಂದಿದೆ. ಅದೆಂದರೆ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳನ್ನು ಮಾತ್ರ ಅದು ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ. ಈ ನಿಲುವಿನಿಂದಾಗಿ ನಮ್ಮ ದೇಶದ ಅನೇಕ ಸ್ವತಂತ್ರ ಭಾಷೆಗಳ ಹೆಸರುಗಳು ( ಉದಾ: ಕರ್ನಾಟಕದ ಕೊರಗ ಭಾಷೆ) ಇಲ್ಲಿ ಲಭ್ಯವಾಗುವುದೇ ಇಲ್ಲ. ಅರೆಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡದಂಥ ಪ್ರಾದೇಶಿಕ ಭಾಷೆಗಳ ಕತೆಯಾದರೂ ಅಷ್ಟೆ. ಈ ಮಿತಿಯೊಳಗೆ 2011ರ ಜನಗಣತಿಯು ಒಟ್ಟು 19,569 ಭಾಷೆಗಳನ್ನು ಮಾತೃಭಾಷೆಗಳೆಂದು ಮನ್ನಿಸುತ್ತದೆ.

ಅಚ್ಚರಿಯೆಂದರೆ 2001ರ ಜನಗಣತಿಯು ಕೇವಲ 1,636 ಭಾಷೆಗಳನ್ನು ಮಾತ್ರ ಪಟ್ಟಿ ಮಾಡುತ್ತದೆ. ಕೇವಲ 10 ವರ್ಷಗಳಲ್ಲಿ ಸುಮಾರು 18 ಸಾವಿರ ಭಾಷೆಗಳು ಹೆಚ್ಚಾಗಲು ಸರಕಾರವು ತನ್ನ ಕೆಲವು ಮಾನದಂಡಗಳನ್ನು ಬದಲಾಯಿಸಿದ್ದೇ ಕಾರಣ. ಈ ಬಗೆಯ ಸದಾ ಬದಲಾಗುತ್ತಿರುವ ಮಾನದಂಡಗಳಿಂದಾಗಿ ನಾವು ಮಾತೃಭಾಷೆಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ಅನೇಕ ತೀರ್ಮಾನಗಳು ಹಾಸ್ಯಾಸ್ಪದವಾಗುತ್ತಿವೆ. ಈಗಿನ ಕೇಂದ್ರ ಸರಕಾರವಂತೂ ಅಂಕಿ ಅಂಶಗಳ ಜೊತೆ ಆಟವಾಡುತ್ತಲೇ ಬರುತ್ತಿದೆ. ಒಟ್ಟಾರೆಯಾಗಿ ಇದರ ಅರ್ಥವಿಷ್ಟೆ- ಸರಕಾರಗಳು ಒದಗಿಸುವ ಅಂಕಿ ಅಂಶಗಳನ್ನು ಆಧರಿಸಿ ನಾವು ಭಾಷೆಯೊಂದರ ಅಭಿವೃದ್ಧಿಯ ಬಗೆಗೆ ಏನಾದರೂ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಷ್ಟ ಮಾತ್ರವಲ್ಲ ಅಪಾಯವೂ ಹೌದು.

2011ರ ಜನಗಣತಿಯ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 40. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 60. 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 122. ಸಾವಿರಾರು ತಾಯ್ನುಡಿಗಳಿರುವ ನಮ್ಮ ದೇಶದಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಅದರಲ್ಲಿ 18 ಭಾಷೆಗಳು ಉತ್ತರ ಭಾರತದವು, ಕೇವಲ ನಾಲ್ಕು ದಕ್ಷಿಣ ಭಾರತದವು. ಈಗ ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ 99. 8ನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯು 52,83,47,193 ಜನರನ್ನು ಹೊಂದಿದ್ದು (ಶೇ.43.63) ಪ್ರಥಮ ಸ್ಥಾನದಲ್ಲಿದೆ. 4,37,06,512 ಜನರನ್ನು ಹೊಂದಿರುವ ( ಶೇ.3.61) ಕನ್ನಡವು ಈ ಪಟ್ಟಿಯಲ್ಲಿ ಬಹಳ ಕೆಳಗಿದೆ.

ಬಂಗಾಲಿ (ಶೇ.8.3), ಮರಾಠಿ (ಶೇ.6.86), ತೆಲುಗು (ಶೇ.6.70), ತಮಿಳು (ಶೇ.7.70), ಗುಜರಾತಿ (ಶೇ.4.58) ಮತ್ತು ಉರ್ದು ( ಶೇ.4.19 ) ಭಾಷೆಗಳು ಸಂಖ್ಯಾ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲಿವೆ. ಸಂಸ್ಕೃತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ ಒಟ್ಟು 24,821 ಮಾತ್ರ. ಆದರೆ ಅದರ ಅಭಿವೃದ್ಧಿಗೆ ವಿನಿಯೋಗಿಸಲಾದ ಹಣವು 400 ಕೋಟಿಗಳಿಗೂ ಹೆಚ್ಚು. ಆರೂವರೆ ಕೋಟಿ ಜನರಾಡುವ ಕನ್ನಡ ಭಾಷೆಗೆ ದಕ್ಕಿದ್ದು ಆರು ಕೋಟಿಗೂ ಕಡಿಮೆ. ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297ಆಗಿದ್ದು ಇದರಲ್ಲಿ ಶೇ.96.47 ಜನರು ( 4,37,06,512) ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಉಳಿದ 21,54,853 (ಶೇ.3.53) ಜನರು ಕರ್ನಾಟಕದಲ್ಲಿರುವ ಬೇರೆ ಭಾಷೆಯವರಾಗಿದ್ದಾರೆ. ಈ ನಡುವೆ ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ, 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ.

ರಾಷ್ಟ್ರೀಯ ಭಾಷಾ ನೀತಿ ಯಾಕಿಲ್ಲ?

ಆಶ್ಚರ್ಯವೆಂದರೆ ಭಾಷೆಗೆ ಸಂಬಂಧಿಸಿದಂತೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರಕಾರ ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ರಾಷ್ಟ್ರೀಯ ಭಾಷಾ ನೀತಿಯೇ ಇಲ್ಲ. ಇದರಿಂದಾಗಿ ಇವತ್ತು ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನರ ತಾಯ್ನುಡಿಗಳನ್ನು ಯಾರೂ ಕೇಳುವವರಿಲ್ಲವಾಗಿದೆ. ಭಾಷಾವಾರು ಪ್ರಾಂತಗಳ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡುತ್ತಿಲ್ಲ.

ಆಂಧ್ರ ಪ್ರದೇಶವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದಿಲ್ಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ, ಬ್ಯಾರಿ, ತುಳು ಮೊದಲಾದ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಇಂಥವುಗಳನ್ನು ಸೂಕ್ಷ್ಮವಾಗಿ ಮತ್ತು ವಿವರವಾಗಿ ಗಮನಿಸಿದರೆ ಭಾರತದ ಭಾಷಾ ರಾಜಕೀಯದ ಬಗೆಗೆ ನಮ್ಮಲ್ಲಿ ತಿಳಿವಳಿಕೆ ಹುಟ್ಟುತ್ತದೆ.

ಐತಿಹಾಸಿಕವಾಗಿ, ಭಾಷೆಗಳು ವೇಗವಾಗಿ ಪತನಮುಖಿಯಾಗ ತೊಡಗಿದ್ದು ಕಳೆದ ಶತಮಾನದ ತೊಂಭತ್ತರ ದಶಕದಲ್ಲಿ. ಜಾಗತೀಕರಣವು ಜಗತ್ತಿನ ಭಾಷೆಗಳ ವ್ಯಾಕರಣ ವನ್ನು ಏಕರೂಪಿಯಾಗಿ ಮಾರ್ಪಡಿಸಿತು. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಆಮೂಲಾಗ್ರವಾಗಿ ಬದಲಾಯಿಸುವಾಗ ಭಾಷೆಗಳೂ ಬದಲಾದುವು ಮತ್ತು ಭಾಷೆಗಳು ಬದಲಾವಣೆಗಳನ್ನು ವಿವರಿಸಿದವು. ಮೇಲಿನ ಪರಿಭಾಷೆಗಳು ಮೂಲತಹ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿವೆ. ಅದೇ ಪ್ರಕಾರ ಅವು ನಮ್ಮ ಶಿಕ್ಷಣ ಕ್ಷೇತ್ರವನ್ನೂ ಆಮೂಲಾಗ್ರವಾಗಿ ಬದಲಾಯಿಸುತ್ತಿವೆ. ಪರಿಣಾಮವಾಗಿ ಶಿಕ್ಷಣದ ಅಂತರ್ರಾಷ್ಟ್ರೀಯಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗುತ್ತಿದೆ. 

ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ ಈ ಅಂತರ್ರಾಷ್ಟ್ರೀಯಕರಣ ಪ್ರಕ್ರಿಯೆ ಅಗತ್ಯ ಎಂದು ಸರಕಾರಗಳು ಹೇಳುತ್ತಿವೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾನಿಲಯಗಳ ಅಂತರ್ರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಪ್ರಬಲವಾಗಿ ವಾದ ಮಂಡಿಸಿವೆ. ಇದನ್ನು ಕಾರ್ಪೊರೇಟ್ ವಲಯ ಬಲವಾಗಿ ಬೆಂಬಲಿಸಿದೆ. ಪರಿಣಾಮವಾಗಿ ಶಿಕ್ಷಣದ ಖಾಸಗೀಕರಣ ಪ್ರಕ್ರಿಯೆ ಆರಂಭವಾಗಿದೆ. ಸರಕಾರಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಂತೆ ಖಾಸಗಿ ಶಾಲೆಗಳು, ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು ಮತ್ತು ವಿದೇಶಿ ವಿಶ್ವವಿದ್ಯಾನಿಲಯಗಳು ವೇಗವಾಗಿ ತಲೆ ಎತ್ತುತ್ತಿವೆ. ಈಗ ಶಿಕ್ಷಣವು ಬಹುದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿದೆ. ಸರಳವಾಗಿ ಹೇಳಬೇಕೆಂದರೆ, 21ನೇ ಶತಮಾನದ ಆರಂಭಕ್ಕೆ ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿದೆ.

ಭಾರತದಲ್ಲಿ ಶಿಕ್ಷಣದ ಅಂತರ್ರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement on Trade in Services) ಹಾಗೂ ಡಬ್ಲ್ಯುಟಿಒ (World Trade Organization) ಒಪ್ಪಂದದ ಮೇರೆಗೆ ಆರಂಭವಾಯಿತು. ಎಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು Educational Services as sector of industry under GATS ಎಂದು ಘೋಷಿಸಿತು. ಇಂದು ಇದು ಸರಕಾರದ ಒಂದು ಅಂಗೀಕೃತ ಯೋಜನೆಯಾಗಿದೆ. ಹೀಗೆ ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸಿದ ಆನಂತರ ಭಾರತವೂ ಸೇರಿದಂತೆ ಅನೇಕ ದೇಶಗಳು ಶಿಕ್ಷಣವನ್ನು ಲಾಭ ನಷ್ಟಗಳ ಮೂಲಕ ನೋಡಲು ಪ್ರಚೋದನೆ ನೀಡಿದುವು. ಇದಕ್ಕಾಗಿ ಯುಜಿಸಿಯು ರಚಿಸಿದ ಉಪಸಮಿತಿಯು 2007ರಲ್ಲಿ ಮಾಡಿದ ಶಿಫಾರಸುಗಳನ್ನು ಈಗ ಜಾರಿಗೆ ತರಲಾಗುತ್ತಿದೆ. ಅದರಲ್ಲಿ ಮುಖ್ಯವಾದ ಮೂರು ವಿಷಯಗಳು ಈ ಕೆಳಗಿನಂತಿವೆ-

1. ಶಿಕ್ಷಣ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ : ಈ ಶಿಫಾರಸಿನ ಪ್ರಕಾರ ಭಾರತದ ಬಹುತೇಕ ಪ್ರೌಢ ಶಾಲಾ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಲಿದ್ದಾರೆ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ನಾವು ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ತಯಾರಾಗಬೇಕಾಗಿದೆ.

2.  ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು: ಈ ಯೋಜನೆಯಲ್ಲಿ ಖಾಸಗಿ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳು ವಿದೇಶಿ ಶಾಲಾ ಕಾಲೇಜುಗಳೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುತ್ತವೆ. ಆ ಮೂಲಕ ಪರಸ್ಪರ ಮಾಹಿತಿ ಹಾಗೂ ಪರಿಣಿತರ ವಿನಿಮಯ ಸಾಧ್ಯವಾಗುತ್ತದೆ. ದಿಲ್ಲಿಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ವಿದೇಶಿ ಅಧ್ಯಾಪಕರು ಪಾಠ ಮಾಡುತ್ತಿದ್ದಾರೆ. ಈ ಬಗೆಯ ಸಹಭಾಗಿತ್ವದಿಂದ ಅನಿವಾಸಿ ಭಾರತೀಯರು ಇಲ್ಲಿ ವಿಶ್ವವಿದ್ಯಾನಿಲಯಗಳನ್ನು ಆರಂಭಿಸುತ್ತಿದ್ದಾರೆ ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಭಾರತದ ವಿವಿಗಳಲ್ಲಿ ಕಲಿಯಲು ದೊಡ್ಡ ಪ್ರಮಾಣದಲ್ಲಿ ಮುಂದೆ ಬರುತ್ತಿದ್ದಾರೆ. ಒಟ್ಟಿನಲ್ಲಿ ಈ ಬದಲಾವಣೆಯು ಮುಂದಿನ ದಿನಗಳಲ್ಲಿ ಶಿಕ್ಷಣದ ಕ್ರಮಗಳನ್ನು ಆಮೂಲಾಗ್ರವಾಗಿ ಬದಲಾಯಿಸಲಿವೆ. ಪಾಶ್ಚಾತ್ಯ ಮಾದರಿಯ ಶಾಲೆಗಳು ಮತ್ತು ಅಲ್ಲಿಯ ಬೋಧನೆಯ ಕಲಿಕೆಯ ಗುಣಮಟ್ಟ ಇತ್ಯಾದಿಗಳು ಮುಂದಿನ ದಿನಗಳಲ್ಲಿ ನಮಗೊಂದು ಸವಾಲಾಗಲಿವೆ.

3. ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ: ಭಾರತ ದೇಶದ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಆರಂಭವಾಗಲಿರುವ ಈ ವಿಶೇಷ ಶಿಕ್ಷಣ ವಲಯಗಳಲ್ಲಿ ಭಾರತೀಯ ಮತ್ತು ವಿದೇಶೀಯ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತವೆ. ಇಲ್ಲಿನ ಪಠ್ಯಕ್ರಮಗಳನ್ನು ಎರಡೂ ದೇಶಗಳ ಸಂಸ್ಥೆಗಳು ಜಂಟಿಯಾಗಿ ರೂಪಿಸುತ್ತವೆ. ಹಾಗೆಯೇ ಎರಡು ದೇಶಗಳ ಅಧ್ಯಾಪಕರು ಈ ವಲಯಗಳಲ್ಲಿ ಜಂಟಿಯಾಗಿ ಕೆಲಸಮಾಡುತ್ತಾರೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಇಂಥ ಯೋಜನೆಗಳು ಕಾರ್ಪೊರೇಟ್ ಜಗತ್ತಿಗೆ ಬೇಕಾದ ಬುದ್ಧಿವಂತರನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗಿವೆ. ಸಹಜವಾಗಿಯೇ ಇಂಥ ಕಡೆ ಸಾಮಾಜಿಕ ನ್ಯಾಯದ ಪ್ರಶ್ನೆ ಹಿನ್ನೆಲೆಗೆ ಸರಿಯುತ್ತದೆ.

ಈ ಬೆಳವಣಿಗೆಗಳನ್ನು ಗಮನಿಸಿದರೆ, ಇಂದು ಶಿಕ್ಷಣವು ಒಂದು ರಾಜ್ಯದ ಅಥವಾ ಒಂದು ವಿಶ್ವವಿದ್ಯಾನಿಲಯದ, ಗಡಿಗಳಿಗೆ ಮಿತವಾಗಿ ಉಳಿದಿಲ್ಲದಿರುವ ಅಂಶ ಸ್ಪಷ್ಟವಾಗುತ್ತದೆ. ಶಿಕ್ಷಣವು ಇದೀಗ ಸೀಮಾತೀತವಾಗುತ್ತಿದೆ. ಇಂಥ ಸಂದರ್ಭದಲ್ಲಿ ಭಾಷೆ ಮತ್ತು ಸಾಹಿತ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುವವರೆಲ್ಲರೂ ಅವರ ಜವಾಬ್ದಾರಿಗಳ ಬಗ್ಗೆ �