'ನಂದಿನಿ' ವಿಲೀನ ಇಲ್ಲ: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ

Update: 2023-01-01 18:20 GMT

ಬೆಂಗಳೂರು, ಜ. 1: ಕರ್ನಾಟಕ ಹಾಲು ಮಹಾ ಮಂಡಳ(ಕೆಎಂಎಫ್) ಮತ್ತು ಗುಜರಾತ್‍ನ ಅಮೂಲ್ ವಿಲೀನದ ಪ್ರಶ್ನೆಯೇ ಇಲ್ಲ. ಕೆಎಂಎಫ್ ವಿಲೀನದ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮಾತನಾಡಿಲ್ಲ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಎಂಎಫ್ ಬಲಿಷ್ಠ ಸಂಸ್ಥೆ. 15 ಮಿಲ್ಕ್ ಯೂನಿಯನ್, 9 ಲಕ್ಷ ಮಹಿಳೆಯರು ಸೇರಿ 26 ಲಕ್ಷ ಮಂದಿ ಇದರಡಿಯಲ್ಲಿ ಬರುತ್ತಾರೆ. ಸಾವಿರಾರು ಕೋಟಿ ರೂ. ವಹಿವಾಟನ್ನು ನಡೆಸುತ್ತಿದೆ ಎಂದು ವಿವರಿಸಿದರು.

ಇಲ್ಲಿನ ಮಿಲ್ಕ್ ಯೂನಿಯನ್ ಮತ್ತು ಫೆಡರೇಶನ್ ಗುಜರಾತ್‍ನಷ್ಟೇ ಪ್ರಬಲವಾಗಿ ಬೆಳೆದಿದೆ. ವಿಲೀನ ಪ್ರಸ್ತಾಪ ಇಲ್ಲವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಮಿಲ್ಕ್ ಡೈರಿ ಮಾಡಬೇಕು. ಪತ್ತಿನ ಸಹಕಾರ ಸಂಘಕ್ಕೆ ಹೊಸ ನಿಯಮಾವಳಿ ಮಾಡಬೇಕು. 3 ವರ್ಷಗಳೊಳಗೆ ಒಂದೇ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದೆ ಎಂದು ಅವರು ವಿವರಿಸಿದರು.

ಹೊಸ ಸಾಫ್ಟ್‍ವೇರ್ ಅಳವಡಿಸಲು ಶೇ.60ರಷ್ಟು ಹಣವನ್ನು ಕೇಂದ್ರ ಸರಕಾರ ಕೊಡಲಿದೆ. ಒಂದೆ ನಿಯಮಾವಳಿ, ಒಂದೆ ಸಾಫ್ಟ್ ವೇರ್ ಅಳವಡಿಕೆ ಆಗಲಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೇಷನ್ ಡಿಪೊ, ಪೆಟ್ರೋಲ್ ಬಂಕ್ ನಿರ್ವಹಣೆ ಇನ್ನಿತರ ಅವಕಾಶಗಳಿದ್ದರೆ ಅನುಮತಿ ಕೊಡಲು ಯೋಜಿಸಿದೆ. ಇಂತಹ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆ ಮಾಡಿ ಅದರ ಅನುಷ್ಠಾನ  ಆಗುತ್ತಿದೆ ಎಂದು ಸೋಮಶೇಖರ್ ತಿಳಿಸಿದರು.

ಈ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮಾದರಿ ನಿಯಮಾವಳಿ ಜಾರಿಗೊಳಿಸುವ ಉದ್ದೇಶವಿದೆ. ಗೆಜ್ಜಲಗೆರೆಯಲ್ಲಿ ಅಮಿತ್ ಶಾ ಮಾತನಾಡುವ ವೇಳೆ ಗುಜರಾತ್‍ನಷ್ಟೇ ಪ್ರಬಲವಾಗಿ ಕೆಎಂಎಫ್ ಬೆಳೆಯುತ್ತಿದೆ. ಎರಡೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದು ಅಮಿತ್ ಶಾ ಹೇಳಿದ್ದರು. ಆದರೆ, ವಿಲೀನದ ಚರ್ಚೆಯೂ ಆಗಿಲ್ಲ. ಅಂತಹ ಮಾತನ್ನೂ ಅವರು ಆಡಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ಎರಡೂ ದಿನವೂ ಅವರ ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಂತಹ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್-ಜೆಡಿಎಸ್‍ನವರು ಚುನಾವಣೆ ಹತ್ತಿರ ಬರುವ ಕಾರಣ ಗಿಮಿಕ್ ಮಾಡಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಕೆಎಂಎಫ್, ಅಮೂಲ್ ಜತೆ ವಿಲೀನದ ಪ್ರಸ್ತಾಪ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Similar News