ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ದಂಪತಿ...: ಜೆಡಿಎಸ್ ವಿರುದ್ಧ ಬಿಜೆಪಿ ವಾಗ್ದಾಳಿ

Update: 2023-01-02 06:03 GMT

ಬೆಂಗಳೂರು, ಜ.2: 'ಸದಾ ಕಾಲ ಸದಾರಮೆ ನಾಟಕವಾಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ; ಮಂಡ್ಯದ ಜನತೆಯಂತೂ ಇದಕ್ಕೆ ಖುದ್ದು ಸಾಕ್ಷಿ. ಮಂಡ್ಯದ ಮೈಶುಗರ್ ಮುಚ್ಚಿದ ಕಥೆ, 8000 ಕೋಟಿ ರೂ.ಗಳ ಮೊತ್ತದ ಯೋಜನೆಗಳ ಗಾಳಿಪಟ ಹಾರಿಸಿದ ಕಥೆ - ಇವುಗಳ ನೈಜ ಚಿತ್ರಣದ ಅರಿವಿರದ ಕನ್ನಡಿಗರೇ ಇಲ್ಲ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ಖುದ್ದು ದಂಪತಿಗಳು ಕೋಟೆ ಕಟ್ಟಿ ಮೆರೆಯುವ ಹುನ್ನಾರದಲ್ಲಿ, ಕಾರ್ಯಕರ್ತರಿಗೆ ಕ್ಯಾ-ರೇ ಎನ್ನದಿರುವುದು, ಹೆಗಲು ಕೊಟ್ಟ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಎಲ್ಲವನ್ನು ಜನ ಕಂಡಿದ್ದಾರೆ. ಮಂಡ್ಯ, ರಾಮನಗರದ ಅವರದೆ ಪಕ್ಷದ ಕಾರ್ಯಕರ್ತರು ಕುಮಾರಸ್ವಾಮಿಗೆ ಕನ್ನಡಿಗರಂತೆ ತೋರುವುದಿಲ್ಲವೇ?' ಪ್ರಶ್ನೆ ಮಾಡಿದೆ. 

''ಈ ಮೂರೂ ಜಿಲ್ಲೆಗಳಲ್ಲೂ ಮೆಗಾ ಡೈರಿ ಇದ್ದದ್ದು ಹಾಸನದಲ್ಲಿ ಮಾತ್ರ. ಅದೂ ಬಿಜೆಪಿ ಸರ್ಕಾರದ ಕೊಡುಗೆ. ಮಂಡ್ಯದಲ್ಲಿ ನಮ್ಮ ಸರ್ಕಾರ ಮೊನ್ನೆಯಷ್ಟೇ ಮೆಗಾ ಡೈರಿಯನ್ನು ಉದ್ಘಾಟಿಸಿದೆ. "ನಂದಿನಿ" ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ'' ಎಂದು ಆರೋಪಿಸಿದೆ. 

''MANMULನಲ್ಲಿ ಜೆಡಿಎಸ್ ನಾಯಕರದ್ದೇ ಕಾರುಬಾರಂತೆ! ಅಲ್ಲಿನ ತಾಂಡವವಾಡುತ್ತಿರುವ ಅವ್ಯವಹಾರಗಳ ಬಗ್ಗೆ
ಕುಮಾರಸ್ವಾಮಿ ದಿವ್ಯ ಮೌನ ವಹಿಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಮಂಡ್ಯದ ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆದವರು ಕುಮಾರಸ್ವಾಮಿ ಅವರಲ್ಲವೇ?'' ಎಂದು  ಪ್ರಶ್ನೆ ಮಾಡಿದೆ. 

''2019ರ ಚುನಾವಣೆಯಲ್ಲಿ ಮಂಡ್ಯದಲ್ಲಿ ಸೋಲುವ ಮುನ್ನ ಚುನಾವಣಾ ಗಿಮಿಕ್ ಆಗಿ ಘೋಷಿಸಿದ್ದ 8,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಮಂಡ್ಯದ ಜನರ ದಿಕ್ಕುತಪಿಸುಲು ಯವರು ನೀರಿನ ಮೇಲೆ ಗೀಚಿದ ಅಕ್ಷರಗಳು. ಇದು ಸ್ವಾಭಿಮಾನಿ ಮಂಡ್ಯದ ಕನ್ನಡಿಗರಿಗೆ ಕುಮಾರಸ್ವಾಮಿಯವರು ಮಾಡಿದ ಅವಮಾನ' ಎಂದು ಕಿಡಿಕಾರಿದೆ. 

Similar News