ಕುವೆಂಪು ಅವರ ಆಕ್ಟಿವಿಸ್ಟ್ ದಾರ್ಶನಿಕತೆ

Update: 2023-01-02 09:01 GMT

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಹಮತ್ ತರೀಕೆರೆ, ಕನ್ನಡ ಸಾಹಿತ್ಯ ಲೋಕದ ಜಂಗಮ. ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರು, ವಿಮರ್ಶಕರು ಎಂದು ಗುರುತಿಸಿಕೊಂಡಿರುವ ಇವರ ‘ಮರದೊಳಗಿನ ಕಿಚ್ಚು’ ಕೃತಿ ನೆಲಮೂಲಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ. ‘ಕತ್ತಿಯಂಚಿನ ದಾರಿ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ತಿರುಗಾಟ ಮತ್ತು ಅದರಿಂದ ದಕ್ಕಿದ ಅನುಭವಗಳ ನೆಲೆಯಲ್ಲಿ ಅವರು ಬರೆದ ಬರಹಗಳು ಪ್ರವಾಸಿ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ನೀಡಿವೆ. ಕರ್ನಾಟಕದ ಸೂಫಿಗಳ ಕುರಿತಂತೆ ಅವರು ಬರೆದಿರುವ ಅಧ್ಯಯನ ಕೃತಿ, ಕನ್ನಡತನದ ವ್ಯಾಖ್ಯಾನವನ್ನು ಹಿಗ್ಗಿಸಿದೆ. ‘ಅಂಡಮಾನ್ ಕನಸು’, ‘ಕರ್ನಾಟಕದ ನಾಥಪಂಥ’, ‘ಧರ್ಮಪರೀಕ್ಷೆ’ ಸೇರಿದಂತೆ, 15ಕ್ಕೂ ಅಧಿಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಇವರ ಸಾಧನೆಗಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವು ಗೌರವಗಳು ಸಂದಿವೆ.

ಕುವೆಂಪು ದರ್ಶನವು ತನ್ನ ಅಭಿವ್ಯಕ್ತಿಗಾಗಿ ‘ವಿಭೂತಿತತ್ವ’ ‘ವಿಶ್ವಮಾನವತತ್ವ’ ‘ಅನಿಕೇತನ’ ‘ಆತ್ಮಶ್ರೀಗಾಗಿ ನಿರಂಕುಶತಮತಿ’ ‘ಸಂಸ್ಕೃತಿ ಕ್ರಾಂತಿ’ ‘ಪೂರ್ಣದೃಷ್ಟಿ’ ‘ಸರ್ವೋದಯ’ ‘ಸಮನ್ವಯ’ ‘ವಿಶ್ವಪಥ’ ‘ಮನುಜಮತ’ ಮೊದಲಾದ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಂಡಿತು. ಇವೆಲ್ಲವೂ ಅವರ ಆಕ್ಟಿವಿಸ್ಟ್ ದರ್ಶನದ ಪರಿಕಲ್ಪನೆಗಳೇ ಆಗಿವೆ. ಅವರು ಡೆಮಾಕ್ರಸಿಯ ಮೂಲಭೂತ ತತ್ವಗಳನ್ನು ಸೂಕ್ಷ್ಮವಾಗಿ ಸಾಹಿತ್ಯ ಕೃತಿಗಳ ಮೂಲಕ ಮತ್ತು ಚಿಂತನೆಗಳ ಮೂಲಕ ಬಿತ್ತಲು ಪ್ರಯತ್ನಿಸಿದರು.

ಕುವೆಂಪು ಕನ್ನಡದ ದೊಡ್ಡ ಪ್ರತಿಭೆಯ ಲೇಖಕರೆಂಬುದು ಅವರನ್ನು ಓದಿರುವ ಎಲ್ಲರಿಗೂ ತಿಳಿದಿದೆ. ಆದರೆ ಅವರೊಬ್ಬ ಆಕ್ವಿವಿಸ್ಟ್ ದಾರ್ಶನಿಕ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಜ, ಕುವೆಂಪು ಎಂದೂ ಬೀದಿಗಿಳಿದು ಹೋರಾಟ ಮಾಡಿದವರಲ್ಲ. ಆದರೆ ಕರ್ನಾಟಕದ ಸಾಮಾಜಿಕ ನ್ಯಾಯ, ರೈತ, ಮಾತೃಭಾಷಾ, ಜಾತಿವಿನಾಶ, ವಿಚಾರವಾದಿ, ವೌಢ್ಯವಿರೋಧಿ ಚಳವಳಿಗಳ ಹಿಂದೆ ಅವರ ಚಿಂತನೆಗಳಿವೆ. ಮಹತ್ವದ ಎಲ್ಲ ಬರಹಗಾರರಲ್ಲೂ ಅವರದ್ದೇ ಆದ ಒಂದು ಲೋಕದೃಷ್ಟಿ ಇರುತ್ತದೆ. ಈ ಲೋಕದೃಷ್ಟಿಯ ಹಿಂದೆ ಭಿತ್ತಿಯಾಗಿ ಯಾವುದಾದರೂ ಒಂದು ದರ್ಶನ ಅಥವಾ ಸಿದ್ಧಾಂತ ಕೂಡ ಇರುತ್ತದೆ. 

ಇಲ್ಲಿ ದರ್ಶನ (ಫಿಲಾಸಫಿ) ಎಂದರೆ, ಲೋಕರಚನೆ ಮತ್ತು ಅದರ ಪರಿವರ್ತನೆ ಕರಿತು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಮತ್ತು ಉತ್ತರ ಹುಡುಕುವ ಬೌದ್ಧಿಕವಾದ ತರ್ಕಬದ್ಧ ತತ್ವ. ಈ ದರ್ಶನ ಇಲ್ಲವೇ ಸಿದ್ಧಾಂತಗಳು ಒಂದಿರಬಹುದು. ಹಲವು ಸೇರಿಕೊಂಡು ಒಂದಾಗಿರಬಹುದು. ಇವು ಸ್ವಂತಿಕೆಯುಳ್ಳ ಮತ್ತು ಲೋಕಪರಿವರ್ತನೆಯಲ್ಲಿ ನಂಬಿಕೆಯಿಟ್ಟ ಲೇಖಕರಲ್ಲಿ ಯಾಂತ್ರಿಕವಾಗಿ ಪ್ರತಿಬಿಂಬಿತವಾಗುವುದಿಲ್ಲ. ಅವರ ಸಾಮಾಜಿಕ ಅನುಭವ, ಬದುಕಿದ ಚಾರಿತ್ರಿಕ ಸನ್ನಿವೇಶ ಹಾಗೂ ಸಾಮಾಜಿಕ ರಾಜಕೀಯ ನಂಬಿಕೆಯ ಹಿನ್ನೆಲೆಗಳ ಕುಲುಮೆಯಲ್ಲಿ ಕರಗಿಕೊಂಡು ಮರುಹುಟ್ಟು ಪಡೆಯುತ್ತವೆ. 

ಹೀಗೆ ಮರುಹುಟ್ಟುಗೊಂಡ ದರ್ಶನ ಮತ್ತು ಸಿದ್ಧಾಂತಗಳ ಬೇರುಗಳ ಮೇಲೆ ಚಿಗುರು ಬಿಟ್ಟಂತೆ ಅಥವಾ ಹೂಹಣ್ಣು ತಳೆದಂತೆ, ಅವರ ಚಿಂತನೆ, ಕವಿತೆ, ಕಾದಂಬರಿ, ನಾಟಕ, ಕ್ರಿಯೆಗಳು ಮೂಡುತ್ತವೆ. ಒಮ್ಮೆ ರೂಪುಗೊಂಡ ದರ್ಶನ ಅಥವಾ ಸಿದ್ಧಾಂತಗಳು ಅವರಲ್ಲಿ ಯಥಾಸ್ಥಿತಿಯಲ್ಲಿ ಜಡವಾಗಿ ಇರುವುದಿಲ್ಲ. ಅವರು ಅವನ್ನು ತಮ್ಮ ವೈಯಕ್ತಿಕ ಮತ್ತು ಬರಹದ ಬದುಕಿನಲ್ಲಿ ನಿರಂತರ ಬೆಳೆಸುತ್ತಲೂ ಪರಿವರ್ತಿಸುತ್ತಲೂ ಇರುತ್ತಾರೆ. 

ಕೆಲವೊಮ್ಮೆ ತಾವು ಪ್ರೇರಣೆ ಪಡೆದ ಮೂಲ ದರ್ಶನದ ಮಾತೃಕೆಗೆ ಹೊಸಸೇರ್ಪಡೆಯನ್ನು ಮಾಡುತ್ತಲೂ ಇರುತ್ತಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಕುವೆಂಪು ಅವರು, ಅರವಿಂದ, ಟಾಗೂರ್, ವರ್ಡ್ಸ್ ವರ್ತ್, ಟಾಲ್‌ಸ್ಟಾಯ್, ಪರಮಹಂಸ, ವಿವೇಕಾನಂದ ಮೊದಲಾದ ಸಾಧಕರಿಂದಲೂ: ಉಪನಿಷತ್ತು, ಭಗವದ್ಗೀತೆ ಮೊದಲಾದ ಪಠ್ಯಗಳಿಂದಲೂ; ಸಮಾಜವಾದ, ಅದ್ವೈತ ಮೊದಲಾದ ತತ್ವಸಿದ್ಧಾಂತಗಳಿಂದಲೂ ಪ್ರೇರಣೆ ಪಡೆದವರು. 

ಭಾರತದ ಮೇಲ್ಜಾತಿಗಳ ಸಾಂಸ್ಕೃತಿಕ ಸೊತ್ತಿನಂತಿದ್ದ ತಾತ್ವಿಕಧಾರೆ ಮತ್ತು ಪಠ್ಯಗಳಿಂದಲೇ ತಮ್ಮ ದರ್ಶನಕ್ಕೆ ಬೇಕಾದ ಮೂಲಧಾತುವನ್ನು ಅವರು ಹೆಕ್ಕಿಕೊಂಡರು. ಸಾಂಪ್ರದಾಯಿಕ ಎನ್ನಬಹುದಾದ ಪಠ್ಯ ಮತ್ತು ತತ್ವಗಳನ್ನು ತಮ್ಮ ಸಮಾಜವಾದಿ ಆಶಯಕ್ಕಾಗಿ ಕ್ರಾಂತಿಕಾರಕವಾಗಿ ಮಾರ್ಪಡಿಸಿಕೊಂಡರು. 

ಅವರು ಹೊಸತಲೆಮಾರಿನ ಲೇಖಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ (‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’) ಹಿರೀಕರು ಧರಿಸುತ್ತಿದ್ದ ಆಭರಣವನ್ನು ಎಸೆಯದೆ, ಅದರಲ್ಲಿರುವ ಚಿನ್ನವನ್ನು ಕರಗಿಸಿ ಹೊಸ ಒಡವೆ ಮಾಡಿಕೊಳ್ಳಲು ಕೊಡುವ ರೂಪಕಾರ್ಥದ ಸೂಚನೆಯು ಮಾರ್ಮಿಕವಾಗಿದೆ. ಅವರಿಗೆ ಬಸವಣ್ಣ ಕವಿಗಿಂತ ಮುಖ್ಯವಾಗಿ ಸಮಾಜಸುಧಾರಕನಾಗಿ ಕಾಣುವುದು ಈ ಅರ್ಥದಲ್ಲೇ. ಅವರ ಪ್ರಕಾರ ಪ್ಲೇಟೊ ಅರಿಸ್ಟಾಟಲ್ ಮೊದಲಾದ ಪಾಶ್ಚಾತ್ಯ ತತ್ವಶಾಸ್ತ್ರಿಗಳಿಗೆ ಆಧ್ಯಾತ್ಮಿಕ ಆಯಾಮವಿಲ್ಲ. ಪಾಶ್ಚಾತ್ಯ ತತ್ವಶಾಸ್ತ್ರವು ಅತಿತರ್ಕದಿಂದ ಅನುಭಾವಹೀನವಾಗಿದೆ. 

‘‘ಕಾಂಟ್ ಹೆಗಲ್ ಮುಂತಾದ ದರ್ಶನಗಳಲ್ಲಿ ಬೌದ್ಧಿಕತೆಯಿದೆ. ಭಾರತೀಯರಲ್ಲಿ ಇರುವಂತೆ ಅನುಭಾವವಿಲ್ಲ’’. ‘‘ಭಾರತೀಯ ತತ್ವಶಾಸ್ತ್ರದ ಅಗಾಧತೆ ಮುಂದೆ ಸಾರ್ತ್ರೆ ಗೀರ್ತ್ರೆ ಏನೂ ಅಲ್ಲ’’ ಎಂದೂ ಅವರು ನಂಬಿದ್ದರು.

ಅವರಿಗೆ ತಮಗೆ ಬೇಕಾದ ಫಿಲಾಸಫಿಯು ಪಶ್ಚಿಮದ ಫಿಲಾಸಫರ್‌ಗಳಿಗಿಂತ ಕವಿಗಳಲ್ಲಿ ಕಂಡಿತು. ತಮಗೆ ಪ್ರಿಯವಾದ ಕಾವ್ಯರ್ಷಿ ವರ್ಡ್ಸ್‌ವರ್ತನನ್ನು ಶೇಕ್ಸ್‌ಪಿಯರನ ಜತೆಗಿಟ್ಟು ನೋಡುತ್ತ ಅವರು ‘‘ನೀನೊಂದು ಪರ್ಣಕುಟಿ ಆತನೋ ಪಿರಿಯ ಸಂತೆ’’ ಎನ್ನುತ್ತಾರೆ. ದರ್ಶನವನ್ನು ಕಲೆಯ ಜತೆ ಬ್ಲೆಂಡ್ ಮಾಡುವ ವಿಧಾನವನ್ನು ಕುವೆಂಪು ಸಾಹಿತ್ಯ ಮಾಡಿತು. ಕಲೆಯೂ ಅವರಲ್ಲಿ ದರ್ಶನವನ್ನು ಧರಿಸುವ ಬೊಗಸೆಯಾಯಿತು. 

ಭಾರತೀಯ ಮತ್ತು ಪಾಶ್ಚಿಮಾತ್ಯ ದರ್ಶನಗಳಲ್ಲಿ ಜೀವಪರವಾದ ಧಾರೆಗಳನ್ನು ಅವರು ಎಚ್ಚರಿಕೆಯಿಂದ ಆರಿಸಿಕೊಂಡರು ಅವನ್ನು ಬೆಸೆದುಕೊಂಡರು. ಅವರೊಂದು ಕಡೆ ‘‘ನನ್ನ ಸಾಹಿತ್ಯ ಓದುವವರಿಗೆ ದರ್ಶನದ ಹಿನ್ನೆಲೆಯಿರಬೇಕು. ಇಲ್ಲದಿದ್ದರೆ ಬೇರೆ ಬೀಗದ ಕೈತೆಗೆದುಕೊಂಡು ಬೀಗ ತೆಗೆದಂತೆ’’ ಎಂದು ಹೇಳುವುದುಂಟು; ವಿಭೂತಿಯ ಕವಿಯು ಸೌಂದರ್ಯದ ಕೆಚ್ಚಲಿನ ಮೂಲಕ ಹೊಮ್ಮುವ ಹಾಲಿನಂತೆ ದರ್ಶನವನ್ನು ಜನರಿಗೆ ಕೊಡುವ ಕಾರಣ, ಅದು ಲೋಕಪ್ರಿಯವಾಗಿದೆ ಎಂದು ಭಾವಿಸುವುದುಂಟು. 

ಹೀಗೆ ಹಲವು ಮೂಲಗಳಿಂದ ತಾತ್ವಿಕ ಪ್ರೇರಣೆ ಪಡೆದ ಕುವೆಂಪು, ತಮ್ಮ ಕಾಲದ ಭಾರತಕ್ಕೆ ಜಾತಿಮತದ ಹಂಗಿಲ್ಲದ ಪುರೋಹಿತಶಾಹಿ ಹೇರಿಕೆಯಿಲ್ಲದ ಫಿಲಾಸಫಿಯನ್ನು ರೂಪಿಸಿದರು. ಕನ್ನಡಿಗರಿಗೆ ನಿರ್ಮತೀಯವಾದ ಮಾನವೀಯ ದರ್ಶನವನ್ನು ತಮ್ಮ ವೈಚಾರಿಕ ಬರಹ ಮತ್ತು ಕಲಾಕೃತಿಗಳ ಮೂಲಕ ಕಟ್ಟಿಕೊಡಲು ಯತ್ನಿಸಿದರು. 

ಇದಕ್ಕೆ ಕಾರಣ, ಭಾರತದಲ್ಲಿ ದರ್ಶನವು ಮತ ಜಾತಿಗೆ ಲಗತ್ತಾಗಿರುವುದು. ನಮ್ಮ ಹೆಚ್ಚಿನ ದಾರ್ಶನಿಕರು ಮತಾಚಾರ್ಯರೂ ಆಗಿರುವುದು. ಭಾರತದಲ್ಲಿ ಅದ್ವೈತವು ಮಾಯಾವಾದಕ್ಕೂ ಲೋಕನಶ್ವರವಾದಕ್ಕೂ ವರ್ಣಧರ್ಮ ಸಮರ್ಥನೆಗೆ ಕಾರಣವಾಗಿರುವುದು. ಆದರೆ ಈ ಸಾಂಪ್ರದಾಯಿಕ ದರ್ಶನಗಳು ಟಾಗೂರ್, ಕುವೆಂಪು, ನಾರಾಯಣ ಗುರು ಮೊದಲಾದವರಲ್ಲಿ ಸಮಾಜವಾದಿ ತತ್ವವಾದ; ಜಾತಿ ವರ್ಣ ಮತ ವೌಢ್ಯಗಳನ್ನು ವಿರೋಧಿಸುವ ಸಾಧನಗಳಾದ ಚರಿತ್ರೆಯೂ ನಮ್ಮ ಮುಂದಿದೆ. 

ಕುವೆಂಪು ದಾರ್ಶನಿಕ ವಿಚಾರಗಳನ್ನು ತಮ್ಮ ಮೂರ್ತ ಸಾಮಾಜಿಕ ಅನುಭವಗಳ ಜತೆಗೂ, ತಮ್ಮ ಕಾಲದ ರಾಜಕೀಯ ವಿದ್ಯಮಾನಗಳ ಜತೆಗೂ ಅರ್ಥಪೂರ್ಣವಾಗಿ ಬ್ಲೆಂಡ್ ಮಾಡಿದರು. ಅವರಿಗೆ ಆರ್ನಾಲ್ಡ್-ವರ್ಡ್ಸ್‌ವರ್ತ್ ಕವಿಗಳ ಕಾವ್ಯದ ಬಗ್ಗೆ ಇದ್ದಷ್ಟೇ ಆಸಕ್ತಿ, ರಶ್ಯನ್ ಕ್ರಾಂತಿ, ಲೆನಿನ್, ಸೋವಿಯತ್ ರಶ್ಯದ ಪ್ರಯೋಗಗಳ ಬಗ್ಗೆಯೂ ಇತ್ತು. ಭಾರತದ ಸಮಾಜ ಸುಧಾರಣ ಚಳವಳಿಗಳ ಬಗ್ಗೆ ಇತ್ತು. 

ಅವರು ಭಾರತದ ಪಾರಂಪರಿಕ ಅದ್ವೈತ ದರ್ಶನವನ್ನು ಯೂರೋಪಿನ ಆಧುನಿಕತೆ, ವಿಜ್ಞಾನ ಮತ್ತು ವೈಚಾರಿಕತೆಗಳ ಜತೆ ಅದ್ಭುತವಾಗಿ ಕಸಿಗೊಳಿಸಿದರು. ಹೀಗೆ ಆಯ್ಕೆ, ಕೂಡಿಕೆ ಮತ್ತು ಹೊಸಹುಟ್ಟು ಪಡೆದುಕೊಂಡ ಕುವೆಂಪು ಲೋಕದೃಷ್ಟಿ ಅಥವಾ ಜೀವನ ದರ್ಶನವು, ಮೂರು ಸ್ತರಗಳಲ್ಲಿ ಪ್ರಕಟವಾಯಿತು. 

1. ಸ್ವತಂತ್ರ ಚಿಂತನೆಯ ರೂಪದಲ್ಲಿ. ಇದನ್ನು ಅವರ ಭಾಷಣಗಳಲ್ಲಿ ನೋಡಬಹುದು. 2. ಕತೆ, ಕಾವ್ಯ, ಮಹಾಕಾವ್ಯ, ಕಾದಂಬರಿ ಮೊದಲಾದ ಕಲಾಭಿವ್ಯಕ್ತಿಯಲ್ಲಿ. 3. ಅವರ ವ್ಯಕ್ತಿತ್ವ ಮತ್ತು ಬದುಕಿನಲ್ಲಿ. ಅವರೊಳಗಿನ ಚಿಂತಕ, ಕಲಾವಿದ ಹಾಗೂ ವ್ಯಕ್ತಿ ಬೇರೆಬೇರೆಯಲ್ಲ. ಲೋಕದೃಷ್ಟಿಯು ಪ್ರಕಟವಾದ ಈ ಮೂರೂ ರೂಪಸ್ತರಗಳ ನಡುವೆ ವಿಶಿಷ್ಟವಾದ ಆಂತರಿಕ ಸಂಬಂಧವಿದೆ. ಅವರ ಈ ದರ್ಶನ ಅಥವಾ ಲೋಕದೃಷ್ಟಿಯನ್ನು ವ್ಯಕ್ತಿ ವಿಮೋಚನೆ, ತಾರತಮ್ಯ ನಿರಾಕರಣೆ, ಲೋಕಪ್ರೀತಿ, ರೂಪಾಂತರ, ಸೀಮೋಲ್ಲಂಘನೆ, ಕ್ರಿಯಾಶೀಲತೆ ಆದರ್ಶಸಮಾಜ ಎಂದು ಕರೆಯಬಹುದು.

1. ವ್ಯಕ್ತಿವಾದವು ಮೂಲತಃ ನವ್ಯ ಸಾಹಿತ್ಯದ ಮುಖ್ಯ ತತ್ವಗಳಲ್ಲಿ ಒಂದು, ಆದರೆ ನವೋದಯದ ಕುವೆಂಪು ಅವರಲ್ಲಿ ಕೂಡ ವಿಶಿಷ್ಟವಾದ ವ್ಯಕ್ತಿವಾದವಿದೆ. ವ್ಯಕ್ತಿಗಳು ತಮ್ಮನ್ನು ತಾವು ಅರಿತು ಪ್ರಬುದ್ಧರಾಗಬೇಕು. ಇದಕ್ಕಾಗಿ ನಿರಂಕುಶಮತಿತ್ವವನ್ನು ಮತಿಗೌರವವನ್ನು ಗಳಿಸಬೇಕು. ಅದನ್ನು ದೊಡ್ಡ ಚಿಂತನೆಗಳಿಗೆ ಒಡ್ಡಿಕೊಂಡೊ, ಸ್ವತಂತ್ರವಾಗಿ ವಿಚಾರ ಮಾಡಿಯೊ, ಅಧ್ಯಯನದಿಂದಲೊ ಪಡೆಯಬೇಕು. ಇದು ಸಾಧಕರು ತಮ್ಮನ್ನು ತಾವು ಅರಿಯುವ ಅಹಂ ಬ್ರಹ್ಮಾಸ್ಮಿ ಹಂತದ ಮೊದಲ ಮೆಟ್ಟಿಲು ಕೂಡ. 

ಹೀಗೆ ತಮ್ಮನ್ನು ವಿಮೋಚನೆಗೊಳಿಸಿಕೊಂಡ ವ್ಯಕ್ತಿಗಳು, ತಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ಸಮಾಜವನ್ನು ಬಂಧಿಸಿರುವ ವಿಚಾರ ಮತ್ತು ಆಚರಣೆಗಳು ಯಾವುವೆಂದು ಅರಿಯಬೇಕು. ಅವುಗಳಿಂದ ತಮ್ಮ ಸಮುದಾಯವನ್ನೂ ವಿಮೋಚನೆಗೊಳಿಸುವುದಕ್ಕೆ ಯತ್ನಿಸಬೇಕು. ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಣಗಳಲ್ಲಿರುವ ಕ್ರಾಂತಿಗೆ ಆಹ್ವಾನಕೊಡುವ ಧಾಟಿಯುಳ್ಳ ‘ಗುಡಿಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ’ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಇತ್ಯಾದಿ ಹೇಳಿಕೆಗಳನ್ನು ಗಮನಿಸಬೇಕು. ಇದೊಂದು ವೈಚಾರಿಕ ಪ್ರಜ್ಞೆ ಮತ್ತು ಹೋರಾಟದ ಕ್ರಿಯೆಗಳ ಜೋಡಿಪರಿಕಲ್ಪನೆ.

ಈ ಹಿನ್ನೆಲೆಯಲ್ಲಿ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯ ಮತ್ತು ‘ಮದುಮಗಳು’ ಕಾದಂಬರಿಯ ಚಿನ್ನಯ್ಯನ ಪಾತ್ರಗಳು ಪ್ರಾತಿನಿಧಿಕವಾಗಿವೆ. ಈ ಇಬ್ಬರೂ ಸ್ವತಃ ವಿಮೋಚಿತರು ಮತ್ತು ವಿಮೋಚನೆಗೊಂಡು ತಮ್ಮ ಆಸುಪಾಸಿನ ಜನರ ವಿಮೋಚನೆಯ ಕದನಕಣಕ್ಕೆ ಇಳಿದವರು. ಇವರ ಹೋರಾಟಗಳು ಕುವೆಂಪು ಸ್ವಂತ ಬಾಳಲ್ಲಿ ಮಾಡಿದ ಹೋರಾಟಗಳನ್ನು ಹೋಲುತ್ತವೆ. ನಿರಂಕುಶಮತಿಗಳಾಗುವ ಪ್ರಜ್ಞಾವಂತರು ಸಮಾಜವನ್ನೂ ನಿರಂಕುಶಮತಿಗೊಳಿಸಲು ಯತ್ನಿಸುವುದು ಅವರ ಸಾಮಾಜಿಕ ಹೊಣೆಗಾರಿಕೆ ಎಂಬುದು ಇಲ್ಲಿನ ನಂಬಿಕೆ. 

ಇದು 19ನೇ ಶತಮಾನದ ಸುಧಾರಣಾವಾದಗಳಿಂದಲೂ, ವಿವೇಕಾನಂದರಿಂದಲೂ ಕುವೆಂಪು ಪಡೆದುಕೊಂಡ ನಂಬಿಕೆ ಕೂಡ. ಮಾರ್ಕ್ಸ್‌ವಾದವು ‘ಪರಿಸರ ಬದಲಿಸಿರಿ, ವ್ಯಕಿಗಳು ತಾವಾಗಿಯೇ ಬದಲಾಗುತ್ತಾರೆ’ ಎನ್ನುತ್ತದೆ. ಭಾರತದ ಸುಧಾರಣಾವಾದಗಳು ವಿಮೋಚಿತ ವ್ಯಕ್ತಿಗಳು ತಮ್ಮ ಸಾಮುದಾಯಿಕ ಪ್ರಜ್ಞೆಯಿಂದ ಪರಿಸರವನ್ನು ಬಿಡುಗಡೆಗೊಳಿಸುವರು; ಈ ವಿಮೋಚನ ಪ್ರಜ್ಞೆಯು ಆಧುನಿಕ ಶಿಕ್ಷಣದಿಂದಲೂ ದೇಶಪ್ರೇಮದಿಂದಲೂ ಬರುವುದು ಎಂದು ನಂಬುತ್ತವೆ. 

2. ವಿಮೋಚಿತ ವ್ಯಕ್ತಿಯ ಸವಾಲೆಂದರೆ, ತನ್ನ ಪ್ರಜ್ಞಾವಂತಿಕೆ ಬಳಸಿ ಸಮಾಜವನ್ನು ಬಂಧಿಸಿರುವ ಬಂಧನಗಳನ್ನು ಅರಿಯುವುದು ಮತ್ತು ಅವುಗಳನ್ನು ಮುರಿಯುವುದು. ಬಳಿಕ ಅವನ್ನು ಮುರಿಯುವಂತೆ ಸಾಮಾನ್ಯ ಜನರನ್ನು ಪ್ರೇರೇಪಿಸುವುದು. ಇಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಗಳು ಬಹಳ ಮುಖ್ಯವಾದವು. ಕುವೆಂಪು ಪ್ರಕಾರ ಭಾರತದ ದೊಡ್ಡ ಬಂಧನಕಾರಿ ಸಂಗತಿಯೆಂದರೆ ‘ಮತ. 

ಅಂದರೆ ಹುಟ್ಟಿನ ಆಧಾರದಲ್ಲಿ ಕೆಲಸ ಮಾಡುವ ವರ್ಣ ಜಾತಿ ವರ್ಗಗಳ ನೆಲೆಯಲ್ಲಿ ಹುಟ್ಟಿದ ತಾರತಮ್ಯಗಳು. ಕುವೆಂಪು ಚಿಂತನೆಯಲ್ಲಿ ಈ ‘ಮತ’ವು ಆತ್ಯಂತಿಕವಾದ ನಿರಾಕರಣೆಗೆ ಒಳಗಾಗುತ್ತದೆ. 

3. ಸಮಾಜದಲ್ಲಿರುವ ತಾರತಮ್ಯ ನಿರಾಕರಿಸುವ ಮತ್ತು ಪ್ರತಿರೋಧಿಸುವ ಕ್ರಿಯೆ ಸಾರ್ಥಕಗೊಳ್ಳುವುದು, ಅವುಗಳ ತುಳಿತಕ್ಕೆ ಸಿಕ್ಕ ದಮನಿತರನ್ನು ಪ್ರೀತಿಸುವುದರಿಂದ. ಅವರ ಬದುಕನ್ನು ಆಸ್ಥೆಯಿಂದ ಕಾಣಿಸುವುದರಿಂದ. ಎಂತಲೇ ಕುವೆಂಪು ಸಾಹಿತ್ಯವು ಸಾಮಾಜಿಕವಾಗಿ, ಆರ್ಥಿಕವಾಗಿ ಕೆಳಸ್ತರದ ಪಾತ್ರಗಳಲ್ಲಿ ಜೀವಂತಿಕೆಯನ್ನು ಶೋಧಿಸುತ್ತದೆ. 

ಈ ಹಿನ್ನೆಲೆಯಲ್ಲಿ ಅವರ ಸಾಹಿತ್ಯ ಕಾಣಿಸುವ ಸೇಸಿ ಗುತ್ತಿ ನಾಗಿ, ಕರಿಸಿದ್ಧ ಮೊದಲಾದ ವ್ಯಕ್ತಿಗಳ; ಗೊಬ್ಬರ ಸಗಣಿಯ ಹುಳ, ಹೀರೇಹೂವು ಮೊದಲಾದ ವಸ್ತುಗಳ; ಕೋಳಿ ನಾಯಿ ಎಮ್ಮೆಯಂತಹ ಪ್ರಾಣಿಪಕ್ಷಿಗಳ ಚಿತ್ರಣವನ್ನು ಗಮನಿಸಬೇಕು. ಜೀತದಾಳು ರಂಗನ ಮನೆಯ ಒಂದು ಎಮ್ಮೆಯನ್ನು ಕುರಿತ ಅವರ ಕತೆ ‘ಶ್ರೀಮನ್ಮೂಕವಾಗಿತ್ತು’, ಸಾಮಾನ್ಯತೆಯ ಘನತೀಕರಣದ ಪ್ರತೀಕವಾಗಿದೆ. 

ಅವರ ಚಿಂತನೆಯಲ್ಲಿ ರೈತ ‘ನೇಗಿಲಯೋಗಿ’ ಆಗುತ್ತಾನೆ; ಸಾಮಾನ್ಯ ‘ಶ್ರೀಸಾಮಾನ್ಯ’ ಆಗುತ್ತಾನೆ. ಈ ಪರಿಭಾಷೆಗಳು ಸಾಮಾನ್ಯತೆಯನ್ನು ಘನತೀಕರಿಸಲೆಂದೇ ರೂಪುಗೊಂಡಂತಹವು. ಈ ಘನತೀಕರಣವು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಆರಂಭದಲ್ಲಿ ‘‘ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದಕ್ಕೂ ಮೊದಲಿಲ್ಲ; ಯಾವುದಕ್ಕೂ ತುದಿಯಿಲ್ಲ; ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ; ಕೊನೆಮುಟ್ಟುವುದೂ ಇಲ್ಲ! ಇಲ್ಲಿ ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ; ನೀರೆಲ್ಲ ಊ ತೀರ್ಥ’’ ಎಂಬ ಹೇಳಿಕೆಯಲ್ಲಿ ಹರಳುಗಟ್ಟಿಕೊಂಡು ಪ್ರಕಟವಾಗುತ್ತದೆ. ಕುವೆಂಪು ಸಾಹಿತ್ಯ ಪ್ರತಿಪಾದಿಸುವ ಈ ಚಲನಶೀಲತೆಯು ಮನುಷ್ಯರಿಗೆ ಮೀಸಲಲ್ಲ. ಲೋಕದ ಸಮಸ್ತ ‘ಬೆಟ್ಟಹೊಳೆ ಹಕ್ಕಿ ಮಿಗ ಮೀನು ಮರ’ಗಳಿಗೂ ಸಂಬಂಧಪಟ್ಟಿದ್ದು.

4. ಪರಿವರ್ತನೆ ಅಥವಾ ರೂಪಾಂತರವು ಕುವೆಂಪು ದರ್ಶನದಲ್ಲಿರುವ ಮುಖ್ಯ ತತ್ವ. ಇಲ್ಲಿ ಜೀವವು ಸಾಧನೆಯಿಂದ ತಾನೇ ಶಿವನಾಗುವ ಊರ್ಧ್ವಮುಖಿ ಬೆಳವಣಿಗೆ ಅಥವಾ ಪರಿವರ್ತನೆಯ ಆಯಾಮಗಳಿವೆ. ಕುವೆಂಪು ಅವರು ಗಾಢವಾಗಿ ಪ್ರಭಾವಿತವಾಗಿದ್ದ ಅದ್ವೈತ ದರ್ಶನದಲ್ಲಿ ಜೀವ-ದೇವಗಳ ಭೇದವು ನಿರಾಕರಣೆಯಾಗುತ್ತದೆ. 

ಅಗಲಿರುವ ಇವೆರಡೂ ಅಂಶಗಳು ಮಿಲನಗೊಳ್ಳುವುದು ಕೂಡ ಮುಖ್ಯ. ತನ್ನ ತಾನರಿ ಯುವ ಹಂತದ ಬಳಿಕ ಸಾಧಕರು ತಾವೇ ಪರತತ್ವವಾಗುವ ಅವಸ್ಥೆಯಿದು. ಇಲ್ಲಿ ಕುವೆಂಪು ಆಧ್ಯಾತ್ಮಿಕವಾಗಿ ಭಾರತದ ಅನುಭಾವವಾದಿಗಳಿಗೆ ಆರೂಢರಿಗೆ ಶರಣರಿಗೆ ಹತ್ತಿರವಾಗುವರು. ಭಾರತದ ಅದ್ವೈತವು ಪ್ರತಿಪಾದಿಸಿದ ಸಾಧಕರು ತಾವೇ ಶಿವನಾಗುವುದು ಷಟ್ಕರ್ಮ ನಿರ್ವಾಣದ ಪರಿಕಲ್ಪನೆ ಅವರಿಗೆ ಇಷ್ಟವಾಗಿದ್ದು ಈ ಕಾರಣಕ್ಕೆ. 

ಈ ರೂಪಾಂತರ ತತ್ವದ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯದಲ್ಲಿ ಬರುವ ಯಾನ ಅಥವಾ ಯಾತ್ರೆಗಳ ಕಲ್ಪನೆಯನ್ನು ಗಮನಿಸಬೇಕು. ಅಲ್ಲಿ ಮತ್ತೆಮತ್ತೆ ನದಿಯ ಹರಿವಿನ ವರ್ಣನೆ ಬರುತ್ತದೆ. ಬಂಡೆಯೊಂದು ಸುಂದರ ಮೂರ್ತಿಯಾಗುವ ಕನಸನ್ನು ಕಾಣುವ ‘ಶಿಲಾತಪಸ್ವಿ’ ಕವನವೂ ಇದೇ ಆಶಯವುಳ್ಳದ್ದು; ದುಡಿವವರ್ಗಕ್ಕೆ ಸೇರಿದ ಪಾತ್ರಗಳು ಕವಿಗಳಂತೆ ಭಾವುಕವಾಗಿ ನಿಸರ್ಗದಲ್ಲಿ ಮೈಮರೆವ ಸನ್ನಿವೇಶಗಳು ಕೂಡ ಇಂತಹವೇ; ‘ರಾಮಾಯಣ ದರ್ಶನಂ’ನಲ್ಲಿ ಬರುವ ‘ಪಾಪಿಗೂ ಉದ್ಧಾರವಿಹುದೌ ಸೃಷ್ಟಿಯ ಮಹದ್‌ವ್ಯೆಹ ರಚನೆಯೊಳ್’ ಎಂಬ ಹೇಳಿಕೆಯೂ ಇದೇ ಅರ್ಥದ್ದು. ಕುವೆಂಪು ಸಾಹಿತ್ಯದಲ್ಲಿ ಕೇಡಿನ ಪ್ರತೀಕಗಳಾದ ಪಾತ್ರಗಳು -‘ಶೂದ್ರತಪಸ್ವಿ’ಯ ಬ್ರಾಹ್ಮಣ, ‘ರಾಮಾಯಣ ದರ್ಶನಂ’ನ ರಾವಣ, ‘ಕಾನೂರು ಹೆಗ್ಗಡಿತಿ’ಯ ಚಂದ್ರೇಗೌಡ ಆದಿಯಾಗಿ- ಬದಲಾಗುತ್ತವೆ. ಮಾನವ ಬದುಕಲ್ಲಿ ಸಂಭವಿಸುವ ಈ ಬದಲಾವಣೆಯನ್ನು ಒಂದು ತತ್ವಪ್ರಣಾಳಿಕೆಯಾಗಿ ‘ಅನಿಕೇತನ’ ಕವನವು ಮಂಡಿಸುತ್ತದೆ. 

ಅದರಲ್ಲಿ ಸ್ಥಗಿತತೆಗೆ ವಿರುದ್ಧವಾದ ‘ಮನೆಯನೆಂದೂ ಕಟ್ಟದಿರು ಕೊನೆಯನೆಂದೂ ಮುಟ್ಟದಿರು’ ಎಂಬ ನೇತ್ಯಾತ್ಮಕ ಕ್ರಿಯಾಸೂಚನೆಗಳಿವೆ. ಅಲ್ಲಿರುವ ‘ಆಗು’ ‘ದಾಟು’ ‘ಏರು’ ‘ಮೀಟು’ ‘ಮೀರು’ ‘ತೂರು’ ಎಲ್ಲವೂ ಕ್ರಿಯೆ ಮತ್ತು ಪ್ರಕ್ರಿಯೆತತ್ವ ಸೂಚಕ ಶಬ್ದಗಳು. ‘ಆಗು’ ಎಂಬ ಕ್ರಿಯಾಪದವು ಕವನದಲ್ಲಿ ಹದಿನೈದು ಬಾರಿ ಬರುತ್ತದೆ.

ಕುವೆಂಪು ನಿತ್ಯನಾರಕಿಯ ಪರಿಕಲ್ಪನೆಯುಳ್ಳ ಮಾಧ್ವತತ್ವವನ್ನು ಯಾಕೆ ವಿರೋಧ ಮಾಡಿದರು ಎಂದು ಇಲ್ಲಿ ಸ್ಪಷ್ಟವಾಗುತ್ತದೆ. ಮಾನವ ಚೈತನ್ಯವು ತನ್ನ ಪರಿತಾಪದಿಂದಲೊ ದುಡಿಮೆಯಿಂದಲೊ ಸ್ಥಗಿತತೆಯನ್ನು ಕಳೆದು ಚಲನೆ ಮಾಡುತ್ತದೆ ಎಂದು ನಂಬಿದ ಅವರಿಗೆ, ಜೀವಗಳು ತಮ್ಮ ಹಿಂದಿನ ಕರ್ಮಫಲದಿಂದ ಬದಲಾವಣೆಯೇ ಸಾಧ್ಯವಾಗದ ಅವಸ್ಥೆಗೆ ಹೋಗುವ ಗ್ರಹಿಕೆ ಒಪ್ಪಿಕೊಳ್ಳುವುದು ಕಷ್ಟವಾಯಿತು. 

ಇದರ ವಿರೋಧಿಸುವಾಗ ಅವರು ಬಸವಣ್ಣನವರ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ತತ್ವಕ್ಕೆ ಸಮೀಪವಾಗುತ್ತಾರೆ. ಕುವೆಂಪು ಅವರಂತೆ ಬಸವಣ್ಣ ಕೂಡ ಅದ್ವೈತಿಯಾಗಿದ್ದರು ಎಂಬುದು ಆಕಸ್ಮಿಕವಲ್ಲ. ‘‘ವಿಜ್ಞಾನ ಪ್ರಪಂಚದಲ್ಲಿ ಹೊಸದಾಗಿ ಕಂಡುಹಿಡಿದ ಸತ್ಯಗಳು ಹಳೆಯ ಅರ್ಧಸತ್ಯಗಳಿಗಿಂತಲೂ ಮಾನ್ಯವಾಗುವುದಾದರೆ, ಧರ್ಮಪ್ರಪಂಚದಲ್ಲೇಕೆ ಹಾಗಾಗಬಾರದು? ವೇದ ಅನಾದಿಯಾದರೆ ಅನಂತವೂ ಆಗಿರುವುದಿಲ್ಲವೇ? ವೇದ ಪೂರೈಸಿದ ಗ್ರಂಥವಲ್ಲ. ವೇದ ಕಟ್ಟಕಡೆಯ ಅಧ್ಯಾಯ ಅಂದಿಗೇ ಮುಗಿದಿಲ್ಲ. ಅದು ಇಂದಿಗೂ ನಾಳೆಗೂ ಮುಂದುವರಿಯುತ್ತದೆ. ಹಾಗೆ ಋಷಿಗಳೂ ಆಚಾರ್ಯರೂ ಅಂದಿಗೇ ಪೂರೈಸಿಲ್ಲ. ಕೊನೆಗಂಡಿಲ್ಲ. ಇಂದಿಗೂ ನಾಳೆಗೂ ಬರುತ್ತಲೇ ಇರುತ್ತಾರೆ’’ ಎಂದು ಕುವೆಂಪು ತಮ್ಮದೊಂದು ಭಾಷಣದಲ್ಲಿ ಹೇಳುವರು. 

ಅವರ ಚಿಂತನೆಯಲ್ಲಿ ವ್ಯಕ್ತಿ, ಸನ್ನಿವೇಶಗಳು ಚಲಿಸುವ ಆಶಯಗಳು ಮತ್ತೆಮತ್ತೆ ಬರುತ್ತವೆ. ಈ ಚಲನಶೀಲತೆಯ ಭಾಗವಾಗಿಯೇ ಅವರ ಕೃತಿಗಳಲ್ಲಿ ಯಾನ ಅಥವಾ ಪ್ರಯಾಣವು ಬರುತ್ತದೆ. ಮಾನವ ಬದುಕಿನಲ್ಲಿ ವಿವಿಧ ಹಂತಗಳನ್ನು ದಾಟುವುದಕ್ಕೆ ಪ್ರೇರೇಪಿಸುವ ಯಾನವು ಅವರಲ್ಲಿ ಹಲವು ರೂಪಗಳಲ್ಲಿದೆ. ಯೋಗ ಸಾಧನೆಯಲ್ಲಿ ಸಾಧಕರು ಹಂತಗಳನ್ನು ದಾಟುವ ಪರಿಕಲ್ಪನೆಯಲ್ಲಿದೆ. ಕುವೆಂಪು ಪ್ರಕಾರ ಸಾಮಾನ್ಯ ವ್ಯಕ್ತಿಯು ವಿಭೂತಿ ಅವಸ್ಥೆಗೇರಬಹುದು. 

5. ವೈಯಕ್ತಿಕವಾಗಿ ಕಾರಂತರಂತೆ ಕುವೆಂಪು ಭೌತಿಕವಾಗಿ ದೇಶಾಟನೆ ಮಾಡಿದವರಲ್ಲ. ಆದರೆ ದಾರ್ಶನಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಅವರೊಬ್ಬ ಮಹಾಯಾತ್ರಿಕ. ‘ರಾಮಾಯಣ ದರ್ಶನಂ’ನಲ್ಲಿ ಬರುವ ಅರ್ಪಣೆಯ ಭಾಗದಲ್ಲಿ ಜಗತ್ತಿನ ಎಲ್ಲ ಆಚಾರ್ಯರಿಗೆ ಆಹ್ವಾನಿಸುವ ಮತ್ತು ವಂದಿಸುವ ಭಾಗದಲ್ಲಿ ಒಂದು ಬೌದ್ಧಿಕ ಯಾನವಿದೆ. ಅವರು ತಮ್ಮಿಂದು ಪದ್ಯದಲ್�