×
Ad

ಸಕಲೇಶಪುರ: ಗ್ರಾಮಸ್ಥರು ತೋಡಿದ ಖೆಡ್ಡಾಕ್ಕೆ ಬಿದ್ದ ಮರಿ ಆನೆ

ಆನೆಯನ್ನು ಹೊರ ತೆಗೆದು ಕಾಡಿಗೆ ಕಳುಹಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

Update: 2023-01-02 15:08 IST

ಸಕಲೇಶಪುರ: ಜ, 2:  ಖೆಡ್ಡ ತೋಡಿ ಕಾಡಾನೆಯನ್ನು ಬೀಳಿಸಿ ಸರಕಾರದ ಗಮನ ಸೆಳೆಯುವಲ್ಲಿ ತಾಲೂಕಿನ ಹೊಸಕೊಪ್ಪಲಿನ ಗ್ರಾಮಸ್ಥರು ಸಫಲವಾಗಿದ್ದಾರೆ. 

ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಆನೆ ಮತ್ತು ಮಾನವ ಸಂಘರ್ಷದ ಕುರಿತು ರೈತ ಪರ ಕಾಳಜಿಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹೊಸಕೊಪ್ಪಲಿನಲ್ಲಿ ಜನರು ಆನೆಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ಉದ್ದೇಶದಿಂದ ಖೆಡ್ಡಾ ತೋಡುವ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

'ಆನೆ ಕಾಟ ತಾಳಲಾರದೆ ಅರಣ್ಯ ಇಲಾಖೆಯ ಹಾಗೂ ಸರ್ಕಾರದ ನಿರ್ಲಕ್ಷ್ಯತನಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು, ಖೆಡ್ಡಾಕ್ಕೆ ಬಿದ್ದಿರುವ ಆನೆಗೆ ನೀರು ಮತ್ತು ಆಹಾರ ಒದಗಿಸಲಾಗಿದೆ' ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

'ಗ್ರಾಮದಲ್ಲಿ ಆನೆಗಳಿಗೆ ತೊಂದರೆ ನೀಡುವ ಉದ್ದೇಶ ನಮ್ಮದಲ್ಲ. ಆನೆಗಳನ್ನು ಸುರಕ್ಷಿತವಾಗಿ ಹಿಡಿದುಕೊಡುತ್ತೇವೆ. ಅವುಗಳನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು. ಯಾವುದೇ ಕಾರಣಕ್ಕೂ ಈ ಆನೆಯನ್ನು ಮೇಲಕ್ಕೆ ಎತ್ತಿ ಮತ್ತೆ ಕಾಡಿಗೆ ಹೋಗಲು ಬಿಡುವುದಿಲ್ಲ. ಅರಣ್ಯ ಇಲಾಖೆಯವರು ಈ ಆನೆಯನ್ನು ಇಲ್ಲಿಂದ ಸ್ಥಳಾಂತರ ಮಾಡಬೇಕು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಖೆಡ್ಡದಿಂದ ಕಾಡಿಗೆ ಕಾಡಾನೆ: ಖೆಡ್ಡಕ್ಕೆ ಬಿದ್ದ ಆನೆಯನ್ನು ಖೆಡ್ಡದಿಂದ ಹೊರ ತೆಗೆದ ಅರಣ್ಯ ಇಲಾಖೆ ಅಧಿಕಾರಿಗಳು ಮರಳಿ ಅರಣ್ಯಕ್ಕೆ ಕಳುಹಿಸಿದ್ದಾರೆ. ಜೆಸಿಬಿ ಮೂಲಕ ಆನೆಯನ್ನು ಮೇಲೆತ್ತಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಬಂದೋ ಬಸ್ತ್ ನಲ್ಲಿ ಈ ಕಾರ್ಯ ನಡೆದಿದೆ.

Similar News