ಜನರೇ ಹಣ ಕೊಟ್ಟು ಮಾಧ್ಯಮಗಳನ್ನು ನಡೆಸಬೇಕು: ರಾಜ್ ದೀಪ್ ಸರ್ದೇಸಾಯಿ

Update: 2023-01-02 11:44 GMT

ರಾಜ್‌ದೀಪ್ ಸರ್ದೇಸಾಯಿ ಭಾರತದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರು. ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳು, ಲೋಕಸಭಾ ಚುನಾವಣೆಗಳು, ಗುಜರಾತ್ ಗಲಭೆಯಂತಹ ಘಟನೆಗಳನ್ನು ವರದಿ ಮಾಡಿ ಗಮನ ಸೆಳೆದವರು. ತಮ್ಮ ದಿಟ್ಟ ನಿಲುವಿನ ಕಾರಣಕ್ಕೆ ಪ್ರಭುತ್ವದ ವಿರೋಧವನ್ನೂ ಎದುರಿಸಿದವರು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೆರಡರಲ್ಲಿಯೂ ಮೂರು ದಶಕಗಳ ಅನುಭವವುಳ್ಳವರು. 1994ರಲ್ಲಿ ಎನ್‌ಡಿಟಿವಿ ಮೂಲಕ ಟಿವಿ ಪತ್ರಿಕೋದ್ಯಮ ಆರಂಭಿಸಿದ ಅವರು, ವ್ಯವಸ್ಥಾಪಕ ಸಂಪಾದಕ ಹುದ್ದೆಗೂ ಏರಿ, ಕಡೆಗೆ 2005ರಲ್ಲಿ ಅಲ್ಲಿಂದ ಹೊರಬಂದಿದ್ದರು. ಬಳಿಕ CNNIBNನ ಸ್ಥಾಪಕ ಸಂಪಾದಕರಾಗಿ ಅದು ರಿಲಯನ್ಸ್ ತೆಕ್ಕೆಗೆ ಹೋಗುವವರೆಗೆ ಅಲ್ಲಿದ್ದರು. ಈಗ ‘ಇಂಡಿಯಾ ಟುಡೇ’ ಗ್ರೂಪ್‌ನ ಸಲಹಾ ಸಂಪಾದಕರಾಗಿದ್ದಾರೆ.

‘ವಾರ್ತಾಭಾರತಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು, ಪ್ರಭುತ್ವದ ಪರ ವಾಲುವ ಪತ್ರಿಕೋದ್ಯಮ, ಮುಖ್ಯವಾಹಿನಿಯ ಮಾಧ್ಯಮವನ್ನು ಸರಿಪಡಿಸಬೇಕಿರುವ ಹೋರಾಟ, ಪರ್ಯಾಯ ಮಾಧ್ಯಮಗಳ ಸಾಧ್ಯತೆ ಮೊದಲಾದ ವಿಚಾರಗಳ ಬಗ್ಗೆಯಲ್ಲದೆ, ಇವತ್ತಿನ ಮಾಧ್ಯಮ ಸನ್ನಿವೇಶದಲ್ಲಿ ತಮ್ಮ ನಿಲುವೇನು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

► ಭಾರತದಲ್ಲಿ ಇನ್ನು ಮುಂದೆ ಪತ್ರಿಕೋದ್ಯಮವು ಉತ್ತಮ ವೃತ್ತಿ ಆಯ್ಕೆಯಾಗಿ ಕಾಣುತ್ತಿಲ್ಲ. ಉದ್ಯೋಗ ಸಂತೃಪ್ತಿ ದೂರದ ಕನಸಾಗಿದೆ, ಕಳೆದ ಮೂರು ದಶಕಗಳಿಂದ ಪತ್ರಕರ್ತ/ಸಂಪಾದಕರಾಗಿರುವ ನಿಮ್ಮ ಅಭಿಪ್ರಾಯವೇನು?

ಪತ್ರಿಕೋದ್ಯಮವು ಈಗ ಮೊದಲಿನಂತಿಲ್ಲ ಎಂದು ಹೇಳುವ ಮೂಲಕ ಯುವ ಪತ್ರಕರ್ತರನ್ನು ನಿರಾಶೆಗೊಳಿಸಲು ನಾನು ಇಷ್ಟಪಡುವುದಿಲ್ಲ. ನಾನು ಈ ಅದ್ಭುತ ವೃತ್ತಿಗೆ ಸೇರಿದಾಗ ನನಗೆ 23 ವರ್ಷ. ನಾನು ಓದಿದ್ದು ವಕೀಲಿಕೆ. ಆದರೆ ಪತ್ರಿಕೋದ್ಯಮವನ್ನು ಆರಿಸಿಕೊಂಡೆ. ಏಕೆಂದರೆ ಸುದ್ದಿ ಮತ್ತು ಪ್ರಚಲಿತ ವಿಷಯಗಳ ಬಗ್ಗೆ ನನಗೆ ಅಷ್ಟು ಮೋಹ. ನೀವು ಸುದ್ದಿಯ ಬಗ್ಗೆ ಉತ್ಸಾಹ ಹೊಂದಿದ್ದರೆ, ಪತ್ರಿಕೋದ್ಯಮವು ನಿಮಗೆ ಉತ್ತಮವಾದ ನೋಟವನ್ನು ಒದಗಿಸುತ್ತದೆ. ದುರದೃಷ್ಟವಶಾತ್, ಮೊದಲಿನಂತೆ ಇದು ಒಂದು ರೀತಿಯ ಆದರ್ಶವಾದಿ ವೃತ್ತಿಯಾಗಿ ಉಳಿದಿಲ್ಲ ಎಂಬುದು ಗೊತ್ತಿದೆ. ವ್ಯಾಪಾರವಾಗಿ ಮಾರ್ಪಟ್ಟಿದೆ, ಹಾಗಾಗಿ ಪತ್ರಿಕೋದ್ಯಮದ ಕೆಲವು ಖುಷಿಗಳು ಇಲ್ಲವಾಗಿವೆ. ಇದು ಎಲ್ಲದರಂತೆ ಮತ್ತೊಂದು ಕೆಲಸ ವಾಗಿದೆ. ನಾನು ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದು ಹೀಗಲ್ಲ, ನನ್ನ ವೃತ್ತಿಜೀವನದ ಉದ್ದಕ್ಕೂ ಸುದ್ದಿಮನೆಯಲ್ಲಿ ಕೆಲಸ ಮಾಡಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೆ. ಕಿರಿಯ ಪತ್ರಕರ್ತರು ಇದನ್ನು ಹೆಚ್ಚು ಕಷ್ಟಕರವೆಂದು ಭಾವಿಸುತ್ತಾರೆ. ಆದರೆ ನಿಮಗೆ ಸುದ್ದಿಯ ಬಗ್ಗೆ ಉತ್ಸಾಹವಿದ್ದರೆ ನೀವು ಪತ್ರಕರ್ತರಾಗಲು ಕಡೇಪಕ್ಷ ಪ್ರಯತ್ನಿಸದಿರುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ನಾನು ಈಗಲೂ ಹೇಳಬಯಸುತ್ತೇನೆ.

► ಕಳೆದ ಒಂದು ದಶಕದಲ್ಲಿ ಮಾಧ್ಯಮವು ದೇಶದಲ್ಲಿ ವಿಫಲಗೊಂಡಿದೆ ಎಂದು ಇಂದು ಹೆಚ್ಚಿನ ತಜ್ಞರು ನಂಬಿದ್ದಾರೆ ಮತ್ತು ದೇಶವು ನಾವು ಈಗ ಇರುವ ಸ್ಥಿತಿಯಲ್ಲಿರಲು ಇದು ಪ್ರಮುಖ ಕಾರಣವಾಗಿದೆ. ನಾವು ದ್ವೇಷ, ಧರ್ಮಾಂಧತೆ, ಮಹಿಳೆಯರ ವಿರುದ್ಧ ಅಪರಾಧಗಳನ್ನು ನೋಡುತ್ತೇವೆ. ಮಾಧ್ಯಮ ವಹಿಸಬೇಕಾದ ಪಾತ್ರವಿತ್ತು ಎಂದು ನೀವು ಭಾವಿಸುತ್ತೀರಾ?

ಸರಕಾರವನ್ನು ಹೊಣೆಯಾಗಿಸುವ ಪ್ರಜಾಪ್ರಭುತ್ವದ ಮೇಲಿನ ಕೆಲವು ಜವಾಬ್ದಾರಿಗಳನ್ನು ಪೂರೈಸುವಲ್ಲಿ ಮಾಧ್ಯಮಗಳು ಬಹುಶಃ ವಿಫಲವಾಗಿವೆ. ಮತ್ತು ಇದು ದಿಲ್ಲಿ ಮತ್ತು ಮಹಾರಾಷ್ಟ್ರ ಅಥವಾ ದೇಶದ ಯಾವುದೇ ನಿರ್ದಿಷ್ಟ ಭಾಗಕ್ಕೆ ಮಾತ್ರ ಸೀಮಿತವಲ್ಲ, ದೇಶಾದ್ಯಂತ ಇದೆ. ಆದರೆ ಸಮಾಜದಲ್ಲಿ ನಡೆಯುವ ಎಲ್ಲ ತಪ್ಪುಗಳಿಗೆ ಮಾಧ್ಯಮವನ್ನು ದೂಷಿಸಬೇಕಿಲ್ಲ. ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಮಹಿಳೆಯರ ವಿರುದ್ಧದ ಅಪರಾಧಗಳು, ಸರಕಾರದ ವೈಫಲ್ಯ ಎಲ್ಲಾ ಆರೋಪಗಳನ್ನು ಮಾಧ್ಯಮದ ಮೇಲೆ ಹಾಕಬೇಡಿ. ಮಾಧ್ಯಮಗಳು - ನಾನು ಹೇಳಿದಂತೆ ಅದರ ದೊಡ್ಡ ಮಟ್ಟದಲ್ಲಿ ವಿಫಲತೆಗೆ ಕಾರಣ. ಆದರೆ ಮಾಧ್ಯಮವನ್ನೇ ದೂರಬೇಕಾಗಿಲ್ಲ.

► ಕಳೆದ 8 ವರ್ಷಗಳ ಮೋದಿ ಆಡಳಿತದಲ್ಲಿ ಪ್ರಾದೇಶಿಕ ಮಾಧ್ಯಮಗಳನ್ನು ಹೊರತುಪಡಿಸಿ ಮುಖ್ಯವಾಹಿನಿಯ - ವಿಶೇಷವಾಗಿ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮಗಳು, ಪತ್ರಿಕೆಗಳು ಸಂಪೂರ್ಣವಾಗಿ ಪ್ರಭುತ್ವಕ್ಕೆ ಶರಣಾಗಿವೆ ಎಂದು ನೀವು ಭಾವಿಸುತ್ತೀರಾ? ಇದು ನಿಜವಾಗಿದ್ದರೆ, ಯಾವ ಕಾರಣಗಳಿಗಾಗಿ ಎಂದು ನೀವು ಭಾವಿಸುತ್ತೀರಿ?

ನಿಮಗೆ ಗೊತ್ತಾ, 2014ಕ್ಕಿಂತ ಮುಂಚೆಯೇ, ಮಾಧ್ಯಮವು ಸಂಪೂರ್ಣವಾಗಿ ಪ್ರಭುತ್ವದೊಂದಿಗೆ ಇತ್ತು. ಮಾಧ್ಯಮದಲ್ಲಿ ತಪ್ಪಾದ ಎಲ್ಲವೂ 2014ರಲ್ಲಿ ಪ್ರಾರಂಭವಾಯಿತೆಂಬಂತೆ ಭಾವಿಸುತ್ತೇವೆ. ಅದನ್ನು ಒಪ್ಪಿಕೊಳ್ಳಲು ನನಗೆ ತುಂಬಾ ಕಷ್ಟ. ಕೇಂದ್ರದಲ್ಲಿನ ಶಕ್ತಿಶಾಲಿ ಸರಕಾರ ಮಾಧ್ಯಮವನ್ನು ನೇರವಾಗಿ ನಿಯಂತ್ರಿಸುವಷ್ಟು ದೊಡ್ಡ ಸ್ಥಾನದಲ್ಲಿದೆ ಮತ್ತು ಹಾಗೆ ಮಾಡುವಲ್ಲಿ ಅತ್ಯಂತ ಯಶಸ್ವಿಯೂ ಆಗಿದೆ. ನಾನು ಮೊದಲೇ ಹೇಳಿದಂತೆ ಇದು ಕೇವಲ ದಿಲ್ಲಿ, ಮಹಾರಾಷ್ಟ್ರದ ಸತ್ಯವಲ್ಲ. ಎಲ್ಲಾ ರಾಜ್ಯಗಳ ರಾಜಧಾನಿ ಮತ್ತು ರಾಜ್ಯ ಸರಕಾರವೂ ಇದನ್ನು ಮಾಡುವುದು ನಿಜ. ಮಾಧ್ಯಮಗಳ ವ್ಯವಹಾರ ಮಾದರಿ ವಿಫಲವಾಗಿದೆ ಅಥವಾ ಕಷ್ಟದಲ್ಲಿದೆ. ಸರಕಾರದ ಒತ್ತಡದೆದುರು ಹೆಚ್ಚು ದುರ್ಬಲರಾಗಿದ್ದೇವೆ. ಕಳೆದ ೧೫ ವರ್ಷಗಳಲ್ಲಿ ಇಡೀ ವ್ಯವಹಾರ ಮಾದರಿ ವಿಶೇಷವಾಗಿ ದೂರದರ್ಶನ ಮತ್ತು ಸುದ್ದಿ ಮಾಧ್ಯಮ ಮತ್ತು ಮುದ್ರಣ ಮಾಧ್ಯಮ ಮತ್ತು ಡಿಜಿಟಲ್ ಎಲ್ಲವೂ ಬದಲಾಗಿದೆ. ಹಾಗಾಗಿ ಸರಕಾರದ ನಿಯಂತ್ರಣ ಸುಲಭವಾಗಿದೆ.

► 2019 ರ ಚುನಾವಣೆಯಲ್ಲಿ ಹೆಚ್ಚಿನ ಸುದ್ದಿ ವಾಹಿನಿಗಳು ಬಿಜೆಪಿ ಅಥವಾ ಮೋದಿ ಆಡಳಿತಕ್ಕಾಗಿ ಪರೋಕ್ಷವಾಗಿ ಪ್ರಚಾರ ಮಾಡಿದ್ದನ್ನು ನಾವು ನೋಡಿದ್ದೇವೆ. ನೀವು ಅದನ್ನು ಹೇಗೆ ನೋಡುತ್ತೀರಿ ಮತ್ತು ಮುಂಬರುವ ಚುನಾವಣೆಯಲ್ಲಿ ಮಾಧ್ಯಮಗಳು ಹೇಗೆ ಕೆಲಸ ಮಾಡಬೇಕು ಎಂದು ನೀವು ಭಾವಿಸುತ್ತೀರಿ.

ನೀವು ಹೇಳುವುದು ಸರಿ. ರಾಜಕೀಯ ಮತ್ತು ರಾಜಕೀಯ ಪಕ್ಷಗಳನ್ನು ಹೆಚ್ಚು ತೋರಿಸುವಾಗ ನಾವು ಅಧಿಕಾರದಲ್ಲಿರುವವರಿಗೆ ಹೆಚ್ಚಿನ ಜಾಗವನ್ನು ನೀಡುತ್ತೇವೆ ಮತ್ತು 2019ರ ಚುನಾವಣೆಯಲ್ಲಿ ಇದು ಆಗಿದೆ. ವಿರೋಧ ಪಕ್ಷಗಳಿಗೆ ಕಡಿಮೆ ಜಾಗವನ್ನು ನೀಡುತ್ತೇವೆ. ರಾಜ್ಯ ಚುನಾವಣೆಯಲ್ಲೂ ಇದು ನಡೆಯುವುದನ್ನು ನೋಡಬಹುದು. 2024ರಲ್ಲಿ ಅದು ಮತ್ತೆ ಸಂಭವಿಸಬಹುದು ಎಂದು ನಾನು ಹೆದರುತ್ತೇನೆ. ಯಾರೇ ಅಧಿಕಾರದಲ್ಲಿದ್ದರೂ, ಸರಕಾರದಲ್ಲಿರುವವರು ನಿಮ್ಮ ಮುಖ್ಯ ಜಾಹೀರಾತುದಾರರು ಮತ್ತು ಅದಕ್ಕಾಗಿಯೇ ನೀವು ಅವರ ಪರವಾಗಿರುತ್ತೀರಿ ಎಂಬ ನಂಬಿಕೆಯಿರುವುದನ್ನು ನೀವು ನೋಡುತ್ತೀರಿ. ಮಾಧ್ಯಮದ ದೊಡ್ಡ ಭಾಗವು ಅಧಿಕಾರದಲ್ಲಿರುವವರನ್ನು ಅಸಮಾಧಾನಗೊಳಿಸದಿರುವ ಕುರಿತು ಎಚ್ಚರ ವಹಿಸುತ್ತದೆ. ಇದನ್ನು ಏಕೆ ಮಾಡಿದೆ ಎಂದು ಮಾಧ್ಯಮವು ತನ್ನನ್ನು ತಾನೇ ಕೇಳಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಹೇಳುತ್ತಲೇ ಇದ್ದೇನೆ, ನಾವು ಯಾಕೆ ಪತ್ರಕರ್ತರಾಗಿದ್ದೇವೆ ಎಂದು ನಮ್ಮನ್ನು ಕೇಳಿಕೊಳ್ಳಬೇಕು ಮತ್ತು ಒಮ್ಮೆ ನಾವು ಅದಕ್ಕೆ ಪ್ರಾಮಾಣಿಕ ಉತ್ತರವನ್ನು ಕಂಡುಕೊಂಡರೆ ನಮ್ಮನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

► ಪ್ರಮುಖ ಸುದ್ದಿ ಪತ್ರಿಕೆ ಮತ್ತು ಟಿವಿ ಚಾನೆಲ್‌ಗಳ ವ್ಯವಹಾರ ಮಾದರಿಯೇ ಅವು ಆಡಳಿತ ಪಕ್ಷದ ಪರವಿರಲು ಕಾರಣವೆಂದು, ಜನರ ಬೆಂಬಲದೊಂದಿಗೆ ಚಂದಾದಾರಿಕೆಯ ಹಣದಲ್ಲಿ ನಡೆಯುವ ಪರ್ಯಾಯ ಸುದ್ದಿ ಸಂಸ್ಥೆಗಳು ಹೇಳುತ್ತವೆ. ಅದನ್ನು ಒಪ್ಪುತ್ತೀರಾ?

ನಾನು ಅದನ್ನು ಒಪ್ಪುತ್ತೇನೆ. ವ್ಯಾಪಾರ ಮಾದರಿಯು ಮುರಿದುಹೋಗಿದೆ. ಜಾಹೀರಾತುದಾರರಿಂದ ನಡೆಸಲ್ಪಡುತ್ತಿದೆ. ರಾಷ್ಟ್ರೀಯ ಅಥವಾ ಪ್ರಾದೇಶಿಕ ಮಾಧ್ಯಮವಾಗಿದ್ದರೂ ಸರಕಾರಿ ಜಾಹೀರಾತುಗಳಿಂದ ನಡೆಯುತ್ತವೆ. ಪ್ರಾದೇಶಿಕ ಮಾಧ್ಯಮವು ವಿಭಿನ್ನವಾಗಿದೆ ಎಂದು ಹೇಳಬಾರದು, ವಾಸ್ತವವಾಗಿ ಪ್ರಾದೇಶಿಕ ಮಾಧ್ಯಮಗಳು ಇನ್ನೂ ಹೆಚ್ಚು ಒಳಗಾಗುತ್ತವೆ. ಏಕೆಂದರೆ ಅವು ರಾಜ್ಯ ಸರಕಾರದ ಆದಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ, ಈ ವ್ಯವಸ್ಥೆಯಲ್ಲಿ ನಿಜವಾದ ಸ್ವತಂತ್ರ ಮಾಧ್ಯಮವನ್ನು ರಚಿಸುವುದು ಹೆಚ್ಚು ಕಷ್ಟಕರ.

► ಜನರಿಂದ ಹಣ ಪಡೆದ ಮಾಧ್ಯಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತೀಯರು ಇನ್ನೂ ಸುದ್ದಿಗಾಗಿ ಹಣ ಕೊಡುವುದಕ್ಕೆ ಒಗ್ಗಿಕೊಳ್ಳುವುದಿಲ್ಲ ಎಂಬ ವಾಸ್ತವವನ್ನು ಪರಿಗಣಿಸಿದರೆ, ಇದು ಮೋದಿ ಮಾಧ್ಯಮವನ್ನು ಎದುರಿಸಲು ಪ್ರಾಯೋಗಿಕ ಪರಿಹಾರವೇ?

► ಇದು ತುಂಬಾ ಒಳ್ಳೆಯ ಪ್ರಶ್ನೆ. ನಾವು ಸುದ್ದಿಗಾಗಿ ಹಣ ಕೊಡುವುದಕ್ಕೆ ಸಿದ್ಧರಿಲ್ಲದಿರುವುದು ಮತ್ತು ಆ ಮೂಲಕ ನಮ್ಮ ಸುಸ್ಥಿರ ಮಾದರಿಗೆ ಇದು ತುಂಬಾ ಕಷ್ಟಕರವಾಗುತ್ತದೆ ಎಂಬುದು ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. BBC ತಾನು ಮಾಡುವ ರೀತಿಯ ಪ್ರೋಗ್ರಾಮಿಂಗ್ ಅನ್ನು ಮಾಡಲು ಸಾಧ್ಯವಾಗುವುದು ಹೇಗೆಂದರೆ, ಅದರ ಬ್ರಿಟಿಷ್ ತೆರಿಗೆದಾರರು ಪರಿಣಾಮಕಾರಿಯಾಗಿ ಹಣವನ್ನು ನೀಡುತ್ತಿದ್ದಾರೆ. ಅಮೆರಿಕದಲ್ಲಿ ಜನರು ವಿಶೇಷವಾಗಿ NYT, ವಾಷಿಂಗ್ಟನ್ ಪೋಸ್ಟ್‌ನಂಥ ಪತ್ರಿಕೆಗಳಿಗೆ ಚಂದಾದಾರರಾಗಲು ಸಿದ್ಧರಿದ್ದಾರೆ. ಇಲ್ಲಿ, ಜನರು ಎಲ್ಲವನ್ನೂ ಉಚಿತವಾಗಿ ಬಯಸುತ್ತಾರೆ. ಆದ್ದರಿಂದ ಮಾಧ್ಯಮದ ದೊಡ್ಡ ಸಮಸ್ಯೆಯೆಂದರೆ, ವೆಚ್ಚ. ಚಂದಾದಾರಿಕೆಗೆ ಹೋಗುವುದು ಕಷ್ಟ. ಜನರು ನಿಮಗೆ ಚಂದಾದಾರರಾಗಲು ಉತ್ಸಾಹ ತೋರಿಸುವಂಥ ವಿಷಯವನ್ನು ಕೊಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ನಿಜವಾಗಿಯೂ ಉತ್ತರ ಕ್ರೌಡ್ ಸೋರ್ಸಿಂಗ್ ಎಂದು ನಾನು ಭಾವಿಸುತ್ತೇನೆ.

ಪತ್ರಕರ್ತರು ಸಹ ತಾವು ಕಾರ್ಯಕರ್ತರೊ ಪ್ರಚಾರಕರೊ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ನಾನು ಪ್ರಚಾರ ಮಾಡುವುದಕ್ಕಾಗಿ ಇಲ್ಲಿ ಇಲ್ಲ. ನಾನಿಲ್ಲಿ ಮೋದಿ ವಿರೋಧಿ ಪ್ರಚಾರವನ್ನಾಗಲೀ ಮತ್ತೊಂದನ್ನಾಗಲೀ ನಡೆಸಲು ಇಲ್ಲ. ಮೋದಿ ಒಳ್ಳೆಯದನ್ನು ಮಾಡಿದರೆ ಅದನ್ನು ಹೊಗಳುವ ಮನಸ್ಸೂ ನಮಗಿರಬೇಕು. ಹಾಗಾಗಿ ಧ್ರುವೀಕೃತ ಜಗತ್ತಿನಲ್ಲಿ ನಮ್ಮ ವಸ್ತುನಿಷ್ಠತೆಯನ್ನು ಉಳಿಸಿಕೊಳ್ಳುವುದು ಸವಾಲು ಎಂದು ನಾನು ಭಾವಿಸುತ್ತೇನೆ. ಇಂದು ಜಗತ್ತು ನಾವು ಎಲ್ಲೇ ಇದ್ದರೂ - ಅದು ಸುದ್ದಿಮನೆ ಅಥವಾ ಸಮಾಜವೇ ಆಗಿರಲಿ - ನೀವು ಮೋದಿ ಪರವೋ ಅಥವಾ ಮೋದಿ ವಿರೋಧಿಯೋ, ನೀವು ರಾಹುಲ್ ಪರವೋ ಅಥವಾ ರಾಹುಲ್ ವಿರೋಧಿಯೋ ಎಂದು ಕೇಳುತ್ತದೆ. ಮೋದಿ ವಿಫಲರಾದರೆ ನಾನು ಅವರನ್ನು ಟೀಕಿಸುತ್ತೇನೆ. ರಾಹುಲ್ ವಿಫಲರಾದರೆ ಅವರನ್ನು ಟೀಕಿಸುತ್ತೇನೆ.

► ಕಳೆದ ಕೆಲವು ವರ್ಷಗಳಲ್ಲಿ ಅನೇಕ ಪ್ರಮುಖ ಪತ್ರಕರ್ತರನ್ನು - ವಸ್ತುನಿಷ್ಠವಾಗಿದ್ದ ಮತ್ತು ಸರಕಾರವನ್ನು ಟೀಕಿಸುತ್ತಿದ್ದ ನಿಮ್ಮನ್ನು ಸಹ, ಕೆಲವು ರೀತಿಯಲ್ಲಿ - ಬದಿಗೆ ಸರಿಸಲಾಯಿತು ಮತ್ತು ಮುಖ್ಯವಾಹಿನಿಯ ಮಾಧ್ಯಮದಿಂದ ಹೊರಹಾಕಲಾಗಿದೆ. ಇದನ್ನು ಏಕೆ ತಡೆಯಲಾಗಲಿಲ್ಲ? ಪತ್ರಿಕೋದ್ಯಮ ಇಂದು ಏಕೆ ಸ್ವತಂತ್ರವಾಗಿಲ್ಲ?

ನನ್ನ ಮನಸ್ಸಿನಲ್ಲಿ ನನಗೆ ಸ್ಪಷ್ಟತೆ ಇದೆ. ದಿನದ ಕೊನೆಯಲ್ಲಿ ಇರುವುದು ಪತ್ರಕರ್ತನೇ ಎಂದು ನಾನು ನಂಬುತ್ತೇನೆ. ಪತ್ರಕರ್ತರು ಸಹ ತಾವು ಕಾರ್ಯಕರ್ತರೊ ಪ್ರಚಾರಕರೊ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ನಾನು ಪ್ರಚಾರ ಮಾಡುವುದಕ್ಕಾಗಿ ಇಲ್ಲಿ ಇಲ್ಲ. ನಾನಿಲ್ಲಿ ಮೋದಿ ವಿರೋಧಿ ಪ್ರಚಾರವನ್ನಾಗಲೀ ಮತ್ತೊಂದನ್ನಾಗಲೀ ನಡೆಸಲು ಇಲ್ಲ. ಮೋದಿ ಒಳ್ಳೆಯದನ್ನು ಮಾಡಿದರೆ ಅದನ್ನು ಹೊಗಳುವ ಮನಸ್ಸೂ ನಮಗಿರಬೇಕು. ಹಾಗಾಗಿ ಧ್ರುವೀಕೃತ ಜಗತ್ತಿನಲ್ಲಿ ನಮ್ಮ ವಸ್ತುನಿಷ್ಠತೆಯನ್ನು ಉಳಿಸಿಕೊಳ್ಳುವುದು ಸವಾಲು ಎಂದು ನಾನು ಭಾವಿಸುತ್ತೇನೆ. ಇಂದು ಜಗತ್ತು ನಾವು ಎಲ್ಲೇ ಇದ್ದರೂ - ಅದು ಸುದ್ದಿಮನೆ ಅಥವಾ ಸಮಾಜವೇ ಆಗಿರಲಿ - ನೀವು ಮೋದಿ ಪರವೋ ಅಥವಾ ಮೋದಿ ವಿರೋಧಿಯೋ, ನೀವು ರಾಹುಲ್ ಪರವೋ ಅಥವಾ ರಾಹುಲ್ ವಿರೋಧಿಯೋ ಎಂದು ಕೇಳುತ್ತದೆ. ಮೋದಿ ವಿಫಲರಾದರೆ ನಾನು ಅವರನ್ನು ಟೀಕಿಸುತ್ತೇನೆ. ರಾಹುಲ್ ವಿಫಲರಾದರೆ ಅವರನ್ನು ಟೀಕಿಸುತ್ತೇನೆ. ನಾವು ಎಲ್ಲರ ಟೀಕೆಗಳಲ್ಲಿ ಮುಕ್ತರಾಗಿರಲು ಶಕ್ತರಾಗಿರಬೇಕು ಮತ್ತು ಜನರು ಸರಿಯಾದ ಕೆಲಸವನ್ನು ಮಾಡಿದಾಗ ಅವರನ್ನು ಅಭಿನಂದಿಸಲೂಬೇಕು...

► ನಿಮ್ಮ ಈ ಟೀಕೆಗಳಿಗೆ ಸಂಬಂಧಿಸಿದಂತೆ ನಾನು ಮುಂದುವರಿಯಲು ಬಯಸುತ್ತೇನೆ. ಪತ್ರಕರ್ತರು ಒಂದು ಕಡೆಯನ್ನು ಆರಿಸಬೇಕಾದ ಸಮಯ ಬಂದಿದೆ ಎಂಬುದನ್ನು ಅನೇಕ ಪತ್ರಕರ್ತರು ನಂಬುತ್ತಾರೆ. ಇದು ಅಥವಾ ಅದು, ಇಲ್ಲಿ ಅಥವಾ ಅಲ್ಲಿ. ನೀವಿದನ್ನು ನಂಬುವುದಿಲ್ಲ ಅಥವಾ ಒಪ್ಪುವುದಿಲ್ಲವೆಂದಾದರೆ?

ನನಗೆ ಇದರಲ್ಲಿ ನಂಬಿಕೆ ಇಲ್ಲ. ನಾನು ಆಟಗಾರನಲ್ಲ. ಒಂದು ಕಡೆಯನ್ನು ಆರಿಸಿದಾಗ ನೀವು ಆಟಗಾರರಾಗುತ್ತೀರಿ. ಸತ್ಯ ಮತ್ತು ಸಮಗ್ರತೆಯ ಪರ ನಿಲ್ಲುವುದು, ತೊಂದರೆಗೊಳಗಾದವರು ಯಾರೇ ಆಗಿರಲಿ, ಎಂಥದೇ ಸ್ಥಿತಿಯಲ್ಲಿರಲಿ ಅವರ ಪರ ನಿಲ್ಲುವುದು ಮುಖ್ಯ. ಬಂಗಾಳದಲ್ಲಿ ದೌರ್ಜನ್ಯ ನಡೆದರೆ ದಯವಿಟ್ಟು ಅದರ ವಿರುದ್ಧ ನಿಲ್ಲಿ. ಅದು ಗುಜರಾತ್‌ನಲ್ಲಾಗಿದ್ದರೆ ಅದರ ವಿರುದ್ಧ ನಿಲ್ಲಿ. ಬಂಗಾಳವು ಗುಜರಾತ್‌ಗಿಂತ ಭಿನ್ನವಾಗಿದೆ ಎಂದೇನಲ್ಲ. ನಾನು ಸದ್ಯಕ್ಕೆ ಒಂದು ಪಕ್ಷವನ್ನು ಆಯ್ಕೆ ಮಾಡಲಾರೆ. ನಾನು ಸಂವಿಧಾನದ ಪರವಾಗಿ, ಸಂತ್ರಸ್ತರ ಪರವಾಗಿ ನಿಲ್ಲುವೆ. ಸಂವಿಧಾನವನ್ನು ಉಲ್ಲಂಘಿಸಿದರೆ ಮತ್ತು ಬಲಿಪಶುವನ್ನು ಗುರುತಿಸಿದರೆ, ಅಪರಾಧಿಗಳು ಯಾರೇ ಆಗಿರಲಿ, ಯಾವುದೇ ಪಕ್ಷ ಅಥವಾ ಸಮುದಾಯಕ್ಕೆ ಸೇರಿದವರಾಗಿರಲಿ ಅವರ ವಿರುದ್ಧ ನಿಲ್ಲುವೆ.

► ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅನೇಕ ಹಿರಿಯ ಪತ್ರಕರ್ತರು ಮುಖ್ಯವಾಹಿನಿಯ ಮಾಧ್ಯಮದಿಂದ ಹೊರಗುಳಿದ ನಂತರ ಪರ್ಯಾಯವಾಗಿ ಯೂಟ್ಯೂಬ್ ಸೇರಿದ್ದಾರೆ. ಮಾಧ್ಯಮ ಸಂಸ್ಥೆಗಳ ವ್ಯಾಪ್ತಿ ಮತ್ತು ಜನಪ್ರಿಯತೆಗೆ ಹೋಲಿಸಿದರೆ ಇದು ಎಷ್ಟು ಪರಿಣಾಮ ಬೀರಬಹುದು ಎಂದು ನೀವು ಭಾವಿಸುತ್ತೀರಿ?

ಒಳ್ಳೆಯ ಪ್ರಶ್ನೆ, ಯೂಟ್ಯೂಬ್ ಮಾಧ್ಯಮವು ಸಹ ಮುಖ್ಯವಾಗಿದೆ. ಮುಖ್ಯವಾಹಿನಿಯ ಮಾಧ್ಯಮ ಇನ್ನೂ ಸಾಕಷ್ಟು ಪ್ರಭಾವವನ್ನು ಹೊಂದಿದೆ ಎಂದು ಹೇಳುವ ಮೂಲಕ ಒಂದರ ವಿರುದ್ಧ ಒಂದನ್ನು ಹೊಂದಿಸಲು ನಾನು ಬಯಸುವುದಿಲ್ಲ. ಪತ್ರಕರ್ತರು ಉತ್ತಮ ಹೋರಾಟವನ್ನು ಮುಂದುವರೆಸಬೇಕು. ತದನಂತರ ಅವರು ಅದರಿಂದ ಹಿಂದೆ ಸರಿಯಬೇಕು. ನಾಳೆ ಏನೆಂದು ಯಾರಿಗೆ ಗೊತ್ತು? ಬಹುಶಃ ನಾಳೆ ನಾನು ಹೋರಾಟವು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಕಂಡುಕೊಂಡರೆ ನಾನು ಹಿಂತೆಗೆದುಕೊಳ್ಳಬಹುದು ಮತ್ತು ನನ್ನ ಜೀವನದಲ್ಲಿ ಏನಾದರೂ ಮಾಡಬಹುದು. ಪ್ರಮುಖ ಪತ್ರಕರ್ತರ ಯೂಟ್ಯೂಬ್ ಚಾನೆಲ್‌ಗಳು ವಿಭಿನ್ನ ವೀಕ್ಷಕರನ್ನು ಹೊಂದಬಹುದು. ಆದರೆ ನನ್ನ ಚಿಂತೆ ಏನೆಂದರೆ, ಎಲ್ಲರೂ ಮುಖ್ಯವಾಹಿನಿಯ ಮಾಧ್ಯಮವನ್ನು ಬಿಟ್ಟು ಯೂಟ್ಯೂಬ್ ಚಾನೆಲ್‌ಗಳಿಗೆ ಹೋದರೆ, ಮುಖ್ಯವಾಹಿನಿಯ ಮಾಧ್ಯಮದ ಬಿಕ್ಕಟ್ಟನ್ನು ಯಾರು ಪರಿಹರಿಸುತ್ತಾರೆ?

► ಸುತ್ತಮುತ್ತ ನಡೆಯುತ್ತಿರುವುದನ್ನು ನೋಡಿದ ನಂತರ ಮತ್ತು ಪ್ರಭುತ್ವದ ಪರವಾದ ಧಾಟಿಯ ಪತ್ರಿಕೋದ್ಯಮ ನಡೆಯುತ್ತಿರುವಾಗ ಪತ್ರಕರ್ತರಾಗಿ ಅಲ್ಲ, ವೀಕ್ಷಕರಾಗಿ ನೀವು ಇನ್ನೂ ಮುಖ್ಯವಾಹಿನಿಯ ಮಾಧ್ಯಮವನ್ನು ಬಿಟ್ಟುಕೊಟ್ಟಿಲ್ಲವೇ?

ಒಬ್ಬ ವೀಕ್ಷಕನಾಗಿ, ನಾನು ಇನ್ನೂ ದಿನಪತ್ರಿಕೆಗಳನ್ನು ಓದುತ್ತೇನೆ. ನಾನು ಟಿವಿಯನ್ನು ಹೆಚ್ಚು ನೋಡುವುದಿಲ್ಲ ಟಿವಿಯ ಪ್ರೈಮ್ ಟೈಮ್ ನ್ಯೂಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಆದರೆ ಬಿಟ್ಟುಕೊಡಬೇಕು ಎಂದರ್ಥವಲ್ಲ. ನಾವು ಉತ್ತಮ ಹೋರಾಟವನ್ನು ಮಾಡಬೇಕು ಎಂದು ನಾನು ಇನ್ನೂ ನಂಬುತ್ತೇನೆ.

► ಎಲ್ಲಾ ಜಾಗೃತಿಗಳ ಹೊರತಾಗಿಯೂ, ಜನರು ಗೋದಿ-ಮಾಧ್ಯಮ ಎಂದು ಪರಿಗಣಿಸುವ ಈ ಪ್ರೈಮ್ ಟೈಮ್ ಪತ್ರಕರ್ತರು ಕಳೆದ ಹಲವು ವರ್ಷಗಳಿಂದ ಮಾಡುತ್ತಿರುವುದನ್ನು ಮುಂದುವರೆಸಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಅವರಿಂದ ಪ್ರಭಾವಿತರಾಗಿದ್ದಾರೆ. ಪ್ರೈಮ್ ಟೈಮ್ ವೀಕ್ಷಿಸುವ ಸಾಮಾನ್ಯ ನಾಗರಿಕರೆದುರು ಭಿನ್ನವಾದುದೇನು?

ಅವರ ಬಣ್ಣ ಬಯಲು ಮಾಡುವುದು ನಿರಂತರವಾಗಿ ಆಗುತ್ತಿರಬೇಕು. ನಾವು ತಂತ್ರಜ್ಞಾನದ ಯುಗದಲ್ಲಿದ್ದೇವೆ. ತಂತ್ರಜ್ಞಾನವು ಪ್ರತಿಯೊಬ್ಬ ನಾಗರಿಕ ಪತ್ರಕರ್ತರಾಗಲು ಅನುವು ಮಾಡಿಕೊಡುತ್ತದೆ. ಮುಂದೊಂದು ದಿನ ನಾವು ನಾಗರಿಕ ಪತ್ರಿಕೋದ್ಯಮ ಮುನ್ನೆಲೆಗೆ ಬರುವುದನ್ನು ನೋಡುತ್ತೇವೆ. ಅಲ್ಲಿ ಪ್ರತಿಯೊಬ್ಬ ನಾಗರಿಕನು ತಾನು ಹೇಳಬೇಕಾದುದನ್ನು ಹೇಳಲು ಸಾಧ್ಯವಾಗುತ್ತದೆ.

► ಇದು ವೈಯಕ್ತಿಕ ಪ್ರಶ್ನೆ. 2014ರ ನಂತರ ನೀವು ಮೃದುವಾಗಿದ್ದೀರಿ ಎಂದು ಬಹಳಷ್ಟು ಜನರು ಆಭವಿಸುತ್ತಾರೆ. ಸರಕಾರದ ಪರ ಅಥವಾ ಸರಕಾರದ ವಿರುದ್ಧ ಅಲ್ಲ. ನೀವು NDTVಯಲ್ಲಿದ್ದಾಗ ಇದ್ದಂತಹ ಕಠಿಣ ನಿಲುವನ್ನು ತೆಗೆದುಕೊಳ್ಳದೆ ಇದ್ದೀರಿ. ಹೆಚ್ಚಿನ ಜನರು ಇಂದು ರಾಜ್‌ದೀಪ್ ಸರ್ದೇಸಾಯಿ NDTVಯ ರಾಜ್‌ದೀಪ್ ಸರ್ದೇಸಾಯಿ ಅಲ್ಲ ಎಂದು ಹೇಳುತ್ತಾರೆ.

ಇಲ್ಲ. ಕಠಿಣ ನಿಲುವು ತೆಗೆದುಕೊಳ್ಳಬೇಕಾದಾಗ ನಾನು ಅದನ್ನು ತೆಗೆದುಕೊಳ್ಳುತ್ತೇನೆ. ನನ್ನ ಟ್ವೀಟ್‌ಗಳಿಂದ ನೀವು ನನ್ನನ್ನು ನಿರ್ಣಯಿಸಲು ಸಾಧ್ಯವಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತೇನೆ, ನಾನು ಕಾರ್ಯಕರ್ತನೂ ಅಲ್ಲ, ಪ್ರಚಾರಕನೂ ಅಲ್ಲ. ಮತ್ತು ನಾನು ನಿಮಗೆ ಮೊದಲೇ ಹೇಳಿದಂತೆ, ಈ ಚರ್ಚೆಯಲ್ಲಿ ಒಂದು ಪಕ್ಷವನ್ನು ತೆಗೆದುಕೊಳ್ಳಲು ನಾನು ಹೋಗುವುದಿಲ್ಲ. ಈ ಚರ್ಚೆಯು ಪಕ್ಷವನ್ನು ತೆಗೆದುಕೊಳ್ಳುವ ಚರ್ಚೆಯಲ್ಲ. ಹಾಗಾಗಿ ರಾಜ್‌ದೀಪ್ ಸರ್ದೇಸಾಯಿ ನಮ್ಮ ಪಕ್ಷವನ್ನು ತೆಗೆದುಕೊಳ್ಳಲಿಲ್ಲ ಎಂದು ಜನರು ಭಾವಿಸಿದರೆ ಅದು ಸರಿ. ಆದರೆ ನಾನು ಕಠಿಣ ನಿಲುವು ತೆಗೆದುಕೊಂಡಿಲ್ಲ ಎಂದು ಜನರು ಹೇಳಿದರೆ ನಾನು ಒಪ್ಪುವುದಿಲ್ಲ. ನಾನು ಪ್ರತಿ ವಿಷಯದಲ್ಲೂ ಪಕ್ಷವನ್ನು ವಹಿಸಲು ಸಿದ್ಧನಿಲ್ಲದ ಕಾರಣ ನಾನು ಒಂದು ಕಡೆ ಬ್ಯಾಟ್ ಮಾಡಲು ಹೋಗುತ್ತಿಲ್ಲ. ಅದರರ್ಥ ನಾನು ಮೃದುವಾಗಿದ್ದೇನೆ ಎಂದೇ? ಜನರು ತಮ್ಮ ನಿಲುವು ಹೇಳಲು ಸ್ವತಂತ್ರರು. ಆದರೆ ನನ್ನ ಸ್ವಂತ ಅಭಿಪ್ರಾಯವೆಂದರೆ, ನಾವು ಎಡ-ಬಲ ಕದನಗಳಲ್ಲಿ ಸಿಕ್ಕಿಬಿದ್ದಿದ್ದೇವೆ ಮತ್ತು ಆ ಎಡ-ಬಲ ಕದನಗಳಲ್ಲಿ ಸಿಕ್ಕಿಬೀಳಲು ನಾನು ಬಯಸುವುದಿಲ್ಲ.

► ನೀವು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳಿಗೆ ಒಳಗಾಗಿದ್ದೀರಿ. ಕೆಲವೊಮ್ಮೆ ನೀವು ಎರಡೂ ಕಡೆಯಿಂದ ನಿಂದಿಸಲ್ಪಡುತ್ತೀರಿ. ಎರಡೂ ಕಡೆಯವರು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೆಲವೊಮ್ಮೆ ಕಾಂಗ್ರೆಸ್ ಜನರು ನಿಮ್ಮೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರುತ್ತಾರೆ, ಕೆಲವೊಮ್ಮೆ ಬಿಜೆಪಿಯವರು. ಒಬ್ಬ ವ್ಯಕ್ತಿಯಾಗಿ ನೀವು ಇದನ್ನು ಹೇಗೆ ಎದುರಿಸುತ್ತೀರಿ. ಅದು ನಿಮ್ಮ ಮನಸ್ಸಿನ ಮೇಲೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಮತ್ತು ಅದೇ ವಿಷಯವನ್ನು ಎದುರಿಸುತ್ತಿರುವ ಯುವ ಪತ್ರಕರ್ತರಿಗೆ ನೀವು ಯಾವ ರೀತಿಯ ಸಲಹೆಯನ್ನು ನೀಡುತ್ತೀರಿ?

ಆರಂಭದಲ್ಲಿ ನನಗೆ ತೊಂದರೆಯಾಯಿತು. ಒಂದು ರೀತಿಯ ವೈಯಕ್ತಿಕ ದಾಳಿಗಳು ನಡೆಯುತ್ತವೆ. ಆದರೆ ನನ್ನ ಆತ್ಮಸಾಕ್ಷಿಯು ಶುದ್ಧ�