ಅಧಿಕಾರ ಕೊಟ್ಟರೂ ಕೆಲಸ ಮಾಡದ ಕುಮಾರಸ್ವಾಮಿ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2023-01-02 11:54 GMT

ಬೆಂಗಳೂರು, ಜ.2: ಹಿಂದಿನ ಚುನಾವಣೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಡಲಾಗಿತ್ತು. ಅವರು ಕೆಲಸವನ್ನೂ ಮಾಡುತ್ತಿರಲಿಲ್ಲ, ಜನರ ಕೈಗೂ ಸಿಗುತ್ತಿರಲಿಲ್ಲ. ಈ ಬಾರಿ ಯಾರನ್ನು ಕುಂದಿಸಬೇಕು, ಯಾರನ್ನು ಕೂರಿಸಬೇಕು ಎನ್ನುವುದು ಮತದಾರರಿಗೆ ಗೊತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.

ಸೋಮವಾರ ಮಾಗಡಿ ತಾಲೂಕಿನ ಸಂಕೀಘಟ್ಟ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಬರಿ ಕೆಂಪೇಗೌಡರ ಜಪ ಮಾಡುತ್ತಿದ್ದರು ಅಷ್ಟೇ. ಅವರ ಸಮಾಧಿ ಇರುವ ಕೆಂಪಾಪುರದಲ್ಲಿ ಪೂಜೆ ಮಾಡಿ ಹೋದವರು, ಆಮೇಲೆ ನಾಪತ್ತೆಯಾದರು ಎಂದು ಟೀಕಿಸಿದರು.

ಸಮಾಧಿ ಅಭಿವೃದ್ಧಿಗೆ ಒಂದು ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಬಿಜೆಪಿ ಸರಕಾರ ಕೆಂಪೇಗೌಡರ ನೆನಪನ್ನು ಚಿರಸ್ಥಾಯಿಯಾಗಿ ಮಾಡಿದೆ. ಶ್ರೀರಂಗ ನೀರಾವರಿ ಯೋಜನೆಗೆ ನಮ್ಮ ಸರಕಾರವು 175 ಕೋಟಿ ರೂ.ಕೊಟ್ಟಿದೆ. ಕುಮಾರಸ್ವಾಮಿ ಕೈಯಲ್ಲಿ 20 ವರ್ಷವಾದರೂ ಈ ಕೆಲಸ ಆಗುತ್ತಿರಲಿಲ್ಲ. ಮಂಚನಬೆಲೆ ಯೋಜನೆಯ ಕತೆಯೂ ಅಷ್ಟೇ ಎಂದು ಅಶ್ವತ್ಥನಾರಾಯಣ ಹೇಳಿದರು.

65 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಟಿಟಿಸಿ, ಸಂಸ್ಕೃತ ವಿವಿ ಕ್ಯಾಂಪಸ್,  ಕುದೂರಿನಲ್ಲಿ ಕೈಗಾರಿಕಾ ಪ್ರದೇಶ ರಚನೆ, ಮಾಗಡಿ-ಸೋಮವಾರಪೇಟೆ ಚತುಷ್ಪಥ ರಸ್ತೆ ಇವೆಲ್ಲವೂ ಬಿಜೆಪಿ ಸರಕಾರವು ಜಿಲ್ಲೆಗೆ ಕೊಟ್ಟಿರುವ ಯೋಜನೆಗಳಾಗಿವೆ. ಕುಮಾರಸ್ವಾಮಿ ಇದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದು ಅವರು ಕುಟುಕಿದರು.

ನಂದಿನಿ-ಅಮೂಲ್ ವಿಲೀನ ಇಲ್ಲ: ಕೆಎಂಎಫ್ ‘ನಂದಿನಿ' ಮತ್ತು ಗುಜರಾತಿನ ಅಮೂಲ್ ಬ್ರ್ಯಾಂಡ್ ಎರಡನ್ನೂ ವಿಲೀನ ಮಾಡುವ ಯಾವ ಚಿಂತನೆಯೂ ಇಲ್ಲ. ತಮ್ಮ ಸಹೋದರ ಎಚ್.ಡಿ.ರೇವಣ್ಣನವರೇ ಕೆಎಂಎಫ್ ಅಧ್ಯಕ್ಷರಾಗಿದ್ದರು. ಸಹಕಾರ ಕ್ಷೇತ್ರದ ನಿಯಮಗಳಡಿ ವಿಲೀನಕ್ಕೆ ಅವಕಾಶವೇ ಇಲ್ಲ ಎನ್ನುವುದನ್ನು ಕುಮಾರಸ್ವಾಮಿ ಮೊದಲು ತಿಳಿದುಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದರು.

ಈ ಹಿಂದೆ ರೇವಣ್ಣ ಕೆಎಂಎಫ್ ನಲ್ಲಿ ಇದ್ದಾಗಲೂ ಅಮೂಲ್ ನವರಿಗೆ ನಂದಿನಿ ವತಿಯಿಂದ ಐಸ್ ಕ್ರೀಂ ತಯಾರಿಸಿ ಕೊಡಲಾಗುತ್ತಿತ್ತು. ಸಹಕಾರ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಉತ್ಪಾದನೆ ಆಧರಿಸಿ ಪರಸ್ಪರ ಕೊಡುಕೊಳ್ಳುವಿಕೆ ನಡೆಯುತ್ತದೆ. ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ಈ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದು ಅವರು ಹೇಳಿದರು.

Similar News