ಬಿಜೆಪಿ ಸುಳ್ಳಿನ ವಿಶ್ವ ವಿದ್ಯಾಲಯ: ಡಿ.ಕೆ.ಶಿವಕುಮಾರ್

''ಕಾಂಗ್ರೆಸ್ ನಲ್ಲಿ ಯಾವುದೇ ಕಿತ್ತಾಟವಿಲ್ಲ, ಸ್ಪರ್ಧೆ ಇದೆ...''

Update: 2023-01-02 12:45 GMT

ಹುಬ್ಬಳ್ಳಿ, ಜ. 2: ‘ಬಿಜೆಪಿ ಸುಳ್ಳಿನ ವಿಶ್ವವಿದ್ಯಾಲಯ. ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರಗಳೇ ಅಧಿಕಾರದಲ್ಲಿವೆ. ಮೂರುವರೆ ವರ್ಷಗಳಿಂದ ಏನನ್ನೂ ಮಾಡದ ಬಿಜೆಪಿ, ಮಹದಾಯಿ ಡಿಪಿಆರ್ ಒಪ್ಪಿಗೆ ಪಡೆದಿದ್ದೇವೆಂದು ಹೇಳುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೋರ್ಟ್‍ನಲ್ಲಿ ಯಾರು ಕೇಸ್ ಹಾಕಿದ್ದಾರೋ, ಅವರಿಂದ ವಾಪಸ್ ತೆಗೆಸಿ ಈ ಯೋಜನೆ ಜಾರಿಗೆ ತರಬಹುದಾಗಿತ್ತಲ್ಲವೇ? ಅವರ ಮಂತ್ರಿ ರಾಜೀನಾಮೆ ನೀಡುವುದಾಗಿ ಹೇಳಿದ್ದರಂತೆ. ಅವರು ರಾಜೀನಾಮೆ ನೀಡಲಿ ಯಾರು ಬೇಡ ಎಂದವರು?’ ಎಂದು ಟೀಕಿಸಿದರು. 

‘ಬಿಜೆಪಿಯ 26 ಮಂದಿ ಸಂಸದರಿದ್ದರೂ ಪ್ರಧಾನಿ ಬಳಿ ಈ ವಿಚಾರವಾಗಿ ಚರ್ಚೆ ಮಾಡದೆ, ಇರುವ ಅಡೆ-ತಡೆ ನಿವಾರಿಸಿ ಕೆಲಸ ಆರಂಭಿಸದೆ, ಬರೀ ಖಾಲಿ ಮಾತುಗಳನ್ನಾಡುತ್ತಿದ್ದಾರೆ. ಆಕ್ಷೇಪಣಾ ಅರ್ಜಿ ಹೊರತುಪಡಿಸಿ ಯೋಜನೆಯ ಉಳಿದ ಕೆಲಸಗಳನ್ನು ಆರಂಭಿಸಬಹುದಲ್ಲವೇ? ನಿಮ್ಮ ರಾಜ್ಯದಲ್ಲಿ ನಿಮ್ಮ ಹಣದಲ್ಲಿ ಕೆಲಸ ಮಾಡಲು ಯಾರು ತಡೆಯುತ್ತಾರೆ. ನೀರು ತರುವ ಸ್ಥಳ ಹೊರತುಪಡಿಸಿ ಉಳಿದ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದಲ್ಲವೇ? ಚುನಾವಣೆ ಬಂತು, ನಾವು ಧ್ವನಿ ಎತ್ತುತ್ತೇವೆ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿದರೆ ಹೇಗೆ?’ ಎಂದು ಶಿವಕುಮಾರ್ ದೂರಿದರು.

ಮೋಸ: ‘ಮೀಸಲಾತಿ ವಿಚಾರದಲ್ಲೂ ಇದೇ ರೀತಿ ಸುಳ್ಳು ಹೇಳುತ್ತಿದ್ದು, ಪಂಚಮಸಾಲಿ ಸಮುದಾಯದ ಸ್ವಾಮೀಜಿ ಹೇಳಿದಂತೆ ‘ತಲೆಗೆ ತುಪ್ಪ’ ಸವರಿದರೆ ನಾಲಿಗೆಯಿಂದ ಅದರ ರುಚಿಯು ಸವಿಯಲು ಸಾಧ್ಯವಿಲ್ಲ, ಮೂಗಿನಿಂದ ಅದರ ಸುವಾಸನೆಯನ್ನೂ ಗ್ರಹಿಸಲು ಸಾಧ್ಯವಿಲ್ಲ. ಹೀಗೆ ಪಂಚಮಸಾಲಿಗಳು ಹಾಗೂ ಒಕ್ಕಲಿಗರ ತಲೆಗೆ ತುಪ್ಪ ಸವರಿದ್ದಾರೆ. ನಿಮ್ಮ ಕೈಯಲ್ಲಿ ಸಾಧ್ಯವಿದ್ದರೆ ಮಾಡುತ್ತೇವೆಂದು ಹೇಳಿ, ಆಗದಿದ್ದರೆ ಆಗುವುದಿಲ್ಲ ಎಂದು ಹೇಳಿ. ಸುಮ್ಮನೆ ಜನರನ್ನು ತಪ್ಪುದಾರಿಗೆಳೆದು ಬೊಮ್ಮಾಯಿ ಅವರು ಯಾಕೆ ಗೊಂದಲ ಸೃಷ್ಟಿಸುತ್ತಿದ್ದಾರೆ? ಎಂದು ಅವರು ಟೀಕಿಸಿದರು.

ನಾವು ರಚಿಸಿದ ನಾಗಮೋಹನ್ ದಾಸ್ ಸಮಿತಿ ವರದಿಯೂ ಅದನ್ನೇ ಹೇಳಿದೆ. ನಾವು ಅದಕ್ಕೆ ಬೆಂಬಲ ಸೂಚಿಸಿದ್ದು, ನಮ್ಮಿಂದ ಯಾವುದೇ ತಕರಾರು ವ್ಯಕ್ತವಾಗಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಮೀತಿ ಮೀರುತ್ತೇನೆ ಎಂದಿದ್ದೀರಿ. ನೀವು ಎಲ್ಲರಿಗೂ ನ್ಯಾಯ ಕೊಡಿ. ಒಕ್ಕಲಿಗ ಸ್ವಾಮೀಜಿಗಳು ಸಚಿವ ಆರ್. ಅಶೋಕ್‍ಗೆ ಕೊಟ್ಟ ಪತ್ರದಲ್ಲಿ ಏನು ಮನವಿ ಮಾಡಲಾಗಿದೆ? ಸಿಎಂ ಯಾಕೆ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಪ್ರಕಟಿಸುತ್ತಿಲ್ಲ? ಇಷ್ಟು ದಿನಗಳ ಕಾಲ ಮಾತನಾಡುತ್ತಿದ್ದ ಯತ್ನಾಳ್, ಅರವಿಂದ ಬೆಲ್ಲದ್ ಅವರು ಈಗ ಯಾಕೆ ಮಾತನಾಡುತ್ತಿಲ್ಲ?’ ಎಂದು ಅವರು ಪ್ರಶ್ನಿಸಿದರು.

‘ಬಿ’ ರಿಪೋರ್ಟ್ ಬರೆಯುತ್ತಾರೆ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್‍ಐಆರ್ ಆಗಿದ್ದು, ಕಾನೂನು ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕು, ಕೈಗೊಳ್ಳಲಿ. ಆದರೆ ಅವರು ಆದಷ್ಟು ಬೇಗ ‘ಬಿ’ ರಿಪೋರ್ಟ್ ಬರೆಯುತ್ತಾರೆ. ಬಿಜೆಪಿ ಸರಕಾರ ಎಂತೆಂತಹ ಸಚಿವರುಗಳಿಗೇ ‘ಬಿ’ ರಿಪೋರ್ಟ್ ಬರೆದಿದ್ದು, ಲಿಂಬಾವಳಿ ಅವರ ಪ್ರಕರಣದಲ್ಲೂ ಬರೆಯುತ್ತಾರೆ. ಅದು ನಮಗೆ ಗೊತ್ತಿದೆ’ ಎಂದು ಅವರು ಛೇಡಿಸಿದರು.

ಅವಕಾಶವಿಲ್ಲ: ‘ಪಕ್ಷದಲ್ಲಿ ಯಾವುದೇ ಕಿತ್ತಾಟವಿಲ್ಲ, ಸ್ಪರ್ಧೆ ಇದೆ. ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲೂ ಪ್ರಬಲ ಸ್ಪರ್ಧೆ ಇದೆ ಎಂದಾದರೆ ನಮ್ಮ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿದೆ ಯೋಚಿಸಿ. ಯಾರು ಅವರ ವಿರುದ್ದ ಸ್ಪರ್ಧಿಸಲು ಸೂಕ್ತ ವ್ಯಕ್ತಿ ಎಂದು ಪಕ್ಷ ತೀರ್ಮಾನಿಸಲಿದೆ. ಪಕ್ಷದಲ್ಲಿ ಯಾವುದೇ ಒಳಒಪ್ಪಂದಕ್ಕೆ ಅವಕಾಶವಿಲ್ಲ. ಅದೇನಿದ್ದರು ಬೇರೆ ಪಕ್ಷದಲ್ಲಿ. ನನ್ನ ಅಧ್ಯಕ್ಷತೆಯಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್‍ಗೆ ಅವಕಾಶವಿಲ್ಲ’ ಎಂದು ಅವರು ತಿಳಿಸಿದರು.

‘ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯವಿದೆ. ಇನ್ನು ಯಾರೂ ಅರ್ಜಿ ಕೊಟ್ಟಿಲ್ಲ. ಅರ್ಜಿ ಕೊಟ್ಟ ನಂತರ ಹೇಳುತ್ತೇನೆ. ಕಾಂಗ್ರೆಸ್‍ನಲ್ಲಿ ಬಣಗಳಿಲ್ಲ. ಬಿಜೆಪಿಯಲ್ಲಿ ಜಗದೀಶ್ ಶೆಟ್ಟರ್, ಬೆಲ್ಲದ್ ಕ್ಷೇತ್ರಗಳಲ್ಲಿನ ಬಣಗಳ ಬಗ್ಗೆ ನಿಮಗೆ ಗೊತ್ತಿದೆಯಾ? ನಮ್ಮಲ್ಲಿ ಅಧಿಕಾರ ಇಲ್ಲ, ಅಧಿಕಾರ ಪಡೆಯಬೇಕೆಂದು ಸ್ಪರ್ಧೆ ಇದ್ದರೆ, ಅವರಲ್ಲಿ ಅಧಿಕಾರ ಇದೆ, ಅಧಿಕಾರದಿಂದ ಇಳಿಸಲು ಸ್ಪರ್ಧೆ ಇದೆ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Similar News