ಅಮಿತ್ ಶಾ ದೇವೇಗೌಡರ ಕಾಲಿನ ಉಗುರಿಗೂ ಸಮಾನರಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2023-01-02 14:32 GMT

ಮೈಸೂರು,ಜ.2: ಜೆಡಿಎಸ್ ಕುಟುಂಬದ ಎಟಿಎಂ ಎಂದು ಹೇಳಿರುವ ಕೇಂದ್ರ ಗೃಹ ಸಚಿವ  ಅಮಿತ್ ಶಾ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕಾಲಿನ ಉಗುರಿಗೂ ಸಮ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಹೇಳುವ ಅಮಿತ್ ಶಾ ಒಂದೇ ಒಂದು ಭ್ರಷ್ಟಾಚಾರವನ್ನು ಜನರ ಮುಂದಿಡಬೇಕಿತ್ತು. ಆದರೆ ಜೆಡಿಎಸ್ ಪಕ್ಷದ ಭಯದಿಂದ ಬಾಯಿಗೆ ಬಂದಹಾಗೆ ಹೇಳಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ, ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಅಥವಾ ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕುಟುಂಬ ಒಂದೇ ಒಂದು ಭ್ರಷ್ಟಾಚಾರ ಮಾಡಿದ್ದರೆ ಸಾಭೀತುಪಡಿಸಲಿ ಎಂದು ಸವಾಲು ಹಾಕಿದರು.

ಇದೇ ಅಮಿತ್ ಶಾ ತನ್ನ ಮಗನಿಗೆ ಬಿಸಿಸಿಐ ವಾರಸುದಾರಿಕೆ ಯಾವ ಅರ್ಹತೆ ಪ್ರತಿಭೆ ಮೇಲೆ ಕೊಡಿಸಿದ್ದಾರೆ ಗೊತ್ತು. ಇವರ ಪಕ್ಷದ ಭ್ರಷ್ಟಾಚಾರದಿಂದ ಬೇಸತ್ತು ಜನ ಸಾಯುತ್ತಿದ್ದಾರೆ. ಮೊನ್ನೆ ತುಮಕೂರಿನಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದ, ನಿನ್ನೆ ಬೆಂಗಳೂರಿನಲ್ಲಿ ಇವರ ಪಕ್ಷದ ಶಾಸಕರ ಹೆಸರನ್ನು ಬರೆದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ನೀಡಿರುವ ಹೊಸ ವರುಷದ ಕೊಡುಗೆ ಎಂದು ಲೇವಡಿ ಮಾಡಿದರು.

ಮುಂಬರುವ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ಯಾರು ಇವರ ಮನೆ ಬಾಗಿಲಿಗೆ ಅರ್ಜಿ ಹಿಡಿದುಕೊಂಡು ಹೋಗಿದ್ದರು. 2008 ರಲ್ಲಿ ಇದೇ ಬಿಜೆಪಿಯವರು ಜೆಡಿಎಸ್ ಮನೆ ಬಾಗಿಲ ಬಳಿ ನಿಂತಿದ್ದರು ಎಂದು ಕುಟುಕಿದರು.

ದೆಹಲಿ ನಾಯಕರಿಂದ ರಾಜ್ಯದಲ್ಲಿ ಕಮಲ ಅರಳಲಿಲ್ಲ, ರಾಜ್ಯದ ಕೆಲವು ಸಂದರ್ಭಗಳಿಂದ ವೀರಶೈವ ಸಮುದಾಯ ಯಡಿಯೂರಪ್ಪನವರ ಜೊತೆ ನಿಂತ ಕಾರಣಕ್ಕೆ ಬಿಜೆಪಿ ಅಸ್ಥಿತ್ವಕ್ಕೆ ಬಂತು. ಆದರೆ ಅದೇ ಯಡಿಯೂರಪ್ಪ ನವರನ್ನು ಕೇಂದ್ರ ನಾಯಕರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತು. ಬಸವರಾಜ ಬೊಮ್ಮಾಯಿ ಬರಿ ಹೆಸರಿಗಷ್ಟೇ ಮುಖ್ಯಮಂತ್ರಿ ಎಲ್ಲಾ ಕೇಂದ್ರದ ನಾಯಕರು ಹೇಳಿದ ಹಾಗೆ ಕೇಳಬೇಕು ಎಂದು ಆರೋಪಿಸಿದರು.

ಕಳೆದ ಮೂರುವರ್ಷದ ಆಡಳಿತದಲ್ಲಿ ಕಮಲ ಮುದುಡಿ ಹೋಗಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಇವರ ಅಸ್ತಿತ್ವ ಕುಂದುತ್ತಿದೆ. ಹಾಗಾಗಿ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಇವರು ನೂರು ಸಲ ಬಂದು ಹೋದರು ಜೆಡಿಎಸ್ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ.ಮಂಡ್ಯಕ್ಕೆ ಅಮಿತ್ ಶಾ ಕೊಡುಗೆ ಏನು ಎಂದು ಹೇಳಲಿ. ನಮ್ಮ ಕೊಡುಗೆ ಏನು ಎಂದು ಹೇಳುತ್ತೇನೆ. ಬೇಕಿದ್ದರೆ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಐಟಿ, ಇಡಿ ಗೆ ಹೆದರಲ್ಲ: ಬಿಜೆಪಿ ವಿರುದ್ಧ ಯಾರು ಶಕ್ತಿಯುತವಾಗಿ ಇರುತ್ತಾರೊ ಅವರನ್ನು ಐಟಿ, ಇಡಿ ಮೂಲಕ ಹೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಐಟಿ,ಇಡಿ ದಾಳಿ ಮಾಡಿಸಿದರು ನಾನು ಹೆದರುವುದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಈಗಗಾಲೇ ಸಿಸೋಡಿಯಾ, ಮತ್ತು ಕೆ.ಸಿ.ಆರ್. ಪುತ್ರಿ ಮೇಲೆ ಐಟಿ ರೇಡ್ ಮಾಡಿಸಿದ್ದಾರೆ. ನನ್ನ ಮೇಲೆ ಅದ್ಯಾವ ಐಟಿ, ಇಡಿ ಕಳುಹಿಸುತ್ತಾರೊ ನೋಡುತ್ತೇನೆ ಎಂದು ಹೇಳಿದರು.

ಕೆಎಂಎಫ್ ಮಾರಲು ಸಂಚು: ಗುಜರಾತ್ ನ ಅಮುಲ್ ನೊಂದಿಗೆ ಕೆಎಂಎಫ್ ವಿಲೀನ ಮಾಡಿ ಅದನ್ನು ಮಾರಲು ಬಿಜೆಪಿಯವರು ಸಂಚು ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಕೆಎಂಎಫ್ ಉತ್ತಮವಾಗಿದೆ ಅದರ ಮೇಲೆ ಕಣ್ಣು ಹಾಕಿರುವ ಅಮಿತ್ ಶಾ ಅಮುಲ್ ನೊಂದಿಗೆ ವಿಲೀನಗೊಳಿಸಿ ಅದನ್ನು ಮಾರಲು ಹೊರಟಿದ್ದಾರೆ. ಇದಕ್ಕೆ ರಾಜ್ಯದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಸಂಕ್ರಾಂತಿ ನಂತರ ಜೆಡಿಎಸ್ ಎರಡನೇ ಪಟ್ಟಿ: ಸಂಕ್ರಾಂತಿ ನಂತರ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಮೈಸೂರು ಭಾಗದಲ್ಲಿ ಇನ್ನು 5 ಸ್ಥಾನಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ. ಯವುದೇ ಗೊಂದಲ ಉಂಟಾಗದಂತೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕೆ.ವಿ.ಮಲ್ಲೇಶ್ ಉಪಸ್ಥಿತರಿದ್ದರು.

ಜೆಡಿಎಸ್ ರಾಜ್ಯದ ರೈತರ ಎಟಿಎಂ, ಈ ನಾಡಿನ 6.5 ಕೋಟಿ ಜನರ ಎಟಿಎಂ ನಮ್ಮ ಬಗ್ಗೆ ಭ್ರಷ್ಟಾಚಾರದ ಟೀಕೆ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ.

Similar News