ಇದು ನನ್ನ ‘ಅರಿವಿನ ಪಯಣ’

Update: 2023-01-03 07:31 GMT

ಹಿರಿಯ ಪತ್ರಕರ್ತರಾಗಿರುವ ಜಿ.ಎನ್. ಮೋಹನ್ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳ ನಡುವೆ ಸಮನ್ವಯ ಸಾಧಿಸಿದವರು. ಸ್ವತಃ ಲೇಖಕರು, ಪ್ರಕಾಶಕರಾಗಿಯೂ ಗುರುತಿಸಿಕೊಂಡವರು. ಕವಿಯಾಗಿಯೂ ಗಮನ ಸೆಳೆದಿರುವ ಮೋಹನ್ ಅವರ ಕವನ ಸಂಕಲನ ‘ಪ್ರಶ್ನೆ ಇರುವುದು ಶೇಕ್ಸ್ಪಿಯರ್ನಿಗೆ’. ಅವರ ‘ನನ್ನೊಳಗಿನ ಹಾಡು ಕ್ಯೂಬಾ’ ಅಪಾರ ಓದುಗರನ್ನು ಪಡೆದ ಪ್ರವಾಸ ಕಥನ. ಪಿ. ಸಾಯಿನಾಥ್ ಬರಹಗಳು ಕನ್ನಡಕ್ಕೆ ಚಿರಪರಿಚಿತವಾಗುವಲ್ಲಿ ಮೋಹನ್ ಅವರ ಅನುವಾದದ ಕೊಡುಗೆ ದೊಡ್ಡದು. ‘ಅವಧಿ’ ವೆಬ್ಸೈಟ್ ಮೂಲಕ ಕನ್ನಡವನ್ನು ಮನ, ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ‘ಬಹುರೂಪಿ’ಯ ಪುಸ್ತಕಗಳ ಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. 

‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್’ (ಬರ ಅಂದ್ರೆ ಎಲ್ಲರಿಗೂ ಇಷ್ಟ) ಕೃತಿಯ ಮೂಲಕ ಓದುಗರ ಎದೆ ಹೊಲಗಳಿಗೆ ನಡೆದು ಕೊಂಡು ಬಂದ ಪಿ. ಸಾಯಿನಾಥ್ ಈ ದೇಶ ಕಂಡ ವಿಭಿನ್ನ ಪತ್ರಕರ್ತ. ಗ್ರಾಮೀಣ ಬದುಕಿಗೆ ಕನ್ನಡಿ ಹಿಡಿಯುವ ಇವರ ಪ್ರಯತ್ನ ಜಗತ್ತಿನ ಗಮನ ಸೆಳೆದಿದೆ. ‘ದಿ ಲಾಸ್ಟ್ ಹೀರೋಸ್’ ಇವರ ಎರಡನೆಯ ಕೃತಿ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನಾಮಿಕವಾಗಿ ಉಳಿದ ಸ್ವಾತಂತ್ರ್ಯ ಹೋರಾಟದ ಚೇತನಗಳನ್ನು ಇಲ್ಲಿ ಪರಿಚಯಿಸಿದ್ದಾರೆ. ಈ ಕೃತಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಕೃತಿಯನ್ನು ನಾನೇಕೆ ಬರೆದೆ ಎಂದು ಸಾಯಿನಾಥ್ ವಿವರಿಸಿದ್ದಾರೆ. ಅದು ಇಲ್ಲಿದೆ...

‘ನನ್ನ ನೆನಪಿದೆಯಾ?’ ಅಂತ ನನ್ನ ತಾತನ ಮುಂದೆ ನಿಂತಿದ್ದ ಆ ಅಪರಿಚಿತ ವ್ಯಕ್ತಿ ಕೇಳಿದ.
ತಾತಯ್ಯ (ತೆಲುಗಿನಲ್ಲಿ ತಾತನನ್ನು ‘ತಾತಯ್ಯ’ ಅಂತ ಕರೆಯುತ್ತಾರೆ). ತನ್ನೆದುರು ನಿಂತಿದ್ದ ಆ ವ್ಯಕ್ತಿಯನ್ನೇ ದಿಟ್ಟಿಸಿ ನೋಡಿದ. ಅವರಿಗೆ ಈತನನ್ನು ಯಾವುದೋ ಕಾಲದಲ್ಲಿ ಬಲ್ಲೆ ಎಂದು ಅನಿಸುತ್ತಿತ್ತು. ಆದರೆ ನಿಖರವಾಗಿ ಯಾರು, ಯಾವಾಗ ಎಂದು ಹೇಳಲಾಗುತ್ತಿರಲಿಲ್ಲ.

‘ನೀವು ನನಗೆ ಗೊತ್ತು, ಖಂಡಿತ ಗೊತ್ತು ಆದರೆ ನಿಮ್ಮ ಹೆಸರು ನೆನಪಿಸಿಕೊಳ್ಳಲು ಕಷ್ಟ ಪಡುತ್ತಿದ್ದೇನೆ’ ಎಂದರು.
ಬಂದಿದ್ದ ಆ ವ್ಯಕ್ತಿ ಎದ್ದು ನಿಂತು ತಾತಯ್ಯನಿಗೆ ಕೆಲವು ಸಂಖ್ಯೆಗಳನ್ನು ಹೊತ್ತಿದ್ದ ಒಂದು ತುಣುಕು ಬಟ್ಟೆಯನ್ನು ನೀಡಿದರು. ತಾತಯ್ಯ ಒಮ್ಮೆ ಅದನ್ನು ನೋಡಿದವರೇ ಜೋರಾಗಿ ನಕ್ಕರು.

ಈಗ ಅವರಿಗೆ ಎದುರಿಗಿದ್ದ ವ್ಯಕ್ತಿ ಯಾರು ಎಂಬ ಗುರುತು ಹತ್ತಿತ್ತು. ‘‘ಇದನ್ಯಾಕೆ ಇನ್ನೂ ಇಟ್ಟುಕೊಂಡಿದ್ದೀರಾ’’ ಎಂದು ನನ್ನ ಅಂಗೈನಲ್ಲಿದ್ದ ಆ ವಸ್ತುವನ್ನೇ ನೋಡುತ್ತಾ ತಾತಯ್ಯ ಕೇಳಿದರು.

‘‘ನೀನು ಮತ್ತು ಇನ್ನೂ ಕೆಲವರ ಬಗ್ಗೆ ನಾನು ಒಂದು ಕಣ್ಣಿಟ್ಟಿದ್ದೆ. ನೀವು ನಿಮ್ಮ ಬದುಕಿನಲ್ಲಿ ಏನು ಆಗುತ್ತೀರಿ ಎಂದು ಗಮನಿಸುತ್ತಿದ್ದೆ. ಹಾಗಾಗಿ ನೀವು ಆರೇಳು ಮಂದಿಯ ಈ ನಂಬರ್ ಗಳನ್ನು ಇಟ್ಟುಕೊಂಡಿದ್ದೆ’’ ಎಂದು ಆ ಹಿರಿಯರು ಹೇಳಿದರು.


ಆಮೇಲೆ ನಮ್ಮ ಕಡೆ ತಿರುಗಿದ ಅವರು ‘‘ನಾನು ನಿಮ್ಮ ತಾತನನ್ನು ಜೈಲಿಗೆ ಹಾಕಿದ್ದೆ ಗೊತ್ತಾ- ಒಳ್ಳೆಯವರಾಗಿರಿ’’ ಎಂದರು.


ಬಂದಿದ್ದ ಆ ವ್ಯಕ್ತಿ ಸುಮಾರು ಮೂರು ದಶಕಗಳ ಹಿಂದೆ ನನ್ನ ತಾತ ಜೈಲಿನಲ್ಲಿದ್ದಾಗ ವಾರ್ಡನ್ ಆಗಿದ್ದವರು. ಈಗ ಇಷ್ಟು ದಿನಗಳ ಕಾಲ ಒಂದು ನೆನಪಿನ ಕಾಣಿಕೆಯಾಗಿ ತಮ್ಮೊಡನೆ ಇರಿಸಿಕೊಂಡಿದ್ದ ಕೈದಿಯ ಸಂಖ್ಯೆಯಲ್ಲಿದ್ದ ಆ ವಸ್ತ್ರವನ್ನು ನೀಡಲು ಬಂದಿದ್ದರು.


ಈ ಭೇಟಿ ನನ್ನ ತಾತಯ್ಯನಿಗೆ ಮರೆಯಲಾಗದ ದಿನವಾಗಿ ಹೋಯಿತು. ಆದರೆ ನಾನು ಮಾತ್ರ ಬೆರಗಾಗಿ ನಿಂತಿದ್ದೆ.


ನೀವು ಇನ್ನೂ ನಾಲ್ಕು ವರ್ಷ ತುಂಬದವರಾಗಿದ್ದರೆ.. ನಿಮ್ಮ ತಾತ ಒಬ್ಬ ಜೈಲುಹಕ್ಕಿ, ಹಲವಾರು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಕೈದಿ ಎಂದು ಗೊತ್ತಾಗುವುದಿದೆಯಲ್ಲಾ ಅದು ಕಸಿವಿಸಿ ಉಂಟುಮಾಡುವ ಸಂಗತಿ.


ಇದಲ್ಲದೆ, ಒಬ್ಬ ಮಾಜಿ ಕೈದಿ ಇದ್ದಕ್ಕಿದ್ದಂತೆ ಅದೇಗೆ ಒಬ್ಬ ಮಹತ್ವದ ವ್ಯಕ್ತಿಯಾದ ಎನ್ನುವುದು ಇನ್ನೂ ಕುತೂಹಲಕರ.


ನಾನು ಈ ಬಗ್ಗೆ ವಿವರಣೆ ಬೇಕು ಎಂದು ತಾತಯ್ಯನ ಮುಂದೆ ಬೇಡಿಕೆ ಇಟ್ಟೆ.
ಆ ವಾರ್ಡನ್ ಹೋದ ನಂತರ ನನ್ನ ತಾತಯ್ಯ ಆ ವಸ್ತ್ರವನ್ನು, ಅದರಲ್ಲಿದ್ದ ನಂಬರ್ ಗಳನ್ನೇ ಕಣ್ಣೆವೆ ಮುಚ್ಚದಂತೆ ನೋಡುತ್ತಾ ಕುಳಿತಿದ್ದರು. ಅವರ ಕಣ್ಣುಗಳು ಒದ್ದೆಯಾಗಿದ್ದವು. ಅವರು ಯಾವುದೋ ನೆನಪುಗಳಲ್ಲಿ ಕಳೆದು ಹೋಗಿದ್ದರು. 


ಅವರು ನನ್ನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದರು. ಆ ತಕ್ಷಣವೇ ಅಲ್ಲ- ಸತತ ಹಲವು ವರ್ಷಗಳ ಕಾಲ ಹಾಗೂ ಹಲವಾರು ಮಾತುಕತೆಯಲ್ಲಿ. ಯಾಕೆಂದರೆ ನನ್ನ ಬಳಿ ಅಷ್ಟೊಂದು ಮುಗಿಯದ ಪ್ರಶ್ನೆಗಳಿದ್ದವು.


ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ನನ್ನ ಅರಿವಿನ ಪಯಣ ಹೀಗೆ ಆರಂಭವಾಯಿತು. 
ನನ್ನ ತಾತ ಬ್ರಿಟಿಷರ ಜೈಲುಗಳಲ್ಲಿ ಹಲವು ವರ್ಷ ಕಳೆದಿದ್ದರು. ಆ ಮೊದಲೇ ಅವರು ಕಾನೂನು ವ್ಯಾಸಂಗ ಮಾಡುತ್ತಿದ್ದ ಐರ್ಲ್ಯಾಂಡ್ ನಿಂದ ಅವರನ್ನು ವಾಪಸ್ ಕಳುಹಿಸಲಾಗಿತ್ತು. ಬ್ರಿಟಿಷರ ಆಡಳಿತದ ವಿರುದ್ಧ ಪ್ರಚಾರಾಂದೋಲನ ನಡೆಸುತ್ತಿದ್ದ ಅಲ್ಲಿನ ಭಾರತೀಯರ ಗುಂಪುಗಳಲ್ಲಿ ನಮ್ಮ ತಾತ ಅತ್ಯಂತ ಸಕ್ರಿಯರಾಗಿದ್ದರು.

ಐರ್ಲ್ಯಾಂಡ್ ನ ಈಸ್ಟರ್ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದ ಕ್ರಾಂತಿಕಾರಿಗಳಿಗೆ ನನ್ನ ತಾತ ತೀರಾ ಹತ್ತಿರವಾಗಿದ್ದರು. 1916 ಜೂನ್  1ರಂದು ಒಂದು ತಿಂಗಳ ನೋಟಿಸು ಕೊಟ್ಟು ಐರ್ ಲ್ಯಾಂಡ್ ಹಾಗೂ ಯುನೈಟೆಡ್ ಕಿಂಗ್ಡಂನಿಂದ ಹೊರಹೋಗುವಂತೆ ತಿಳಿಸಲಾಯಿತು.

ಭಾರತಕ್ಕೆ ವಾಪಸಾದ ಅವರು ಇಲ್ಲಿನ ರಾಷ್ಟ್ರೀಯ ಚಳವಳಿಯ ಜೊತೆ ತಮ್ಮನ್ನು ಗುರುತಿಸಿಕೊಂಡರು. ಹಾಗೆ ಆ ಚಳವಳಿಯಲ್ಲಿ ಭಾಗವಹಿಸುವುದರ ಮೂಲಕ ಅವರು ಹಲವಷ್ಟು ಕಲಿತರು. ಸ್ವಾತಂತ್ರ್ಯ ಸಿಕ್ಕ ನಂತರ 1974ರ ವರೆಗೆ ನಿವೃತ್ತಿ ಬದುಕಿಗೆ ಸರಿಯುವವರೆಗೆ ಅವರು ಯಾವುದೇ ಸಾರ್ವಜನಿಕ ಹುದ್ದೆಯನ್ನಾಗಲೀ, ಅಧಿಕಾರದ ಪದವಿಗಳಿಗಾಗಲೀ ಹೋಗಲಿಲ್ಲ. 1980 ರಲ್ಲಿ ತಾತ ನಿಧನ ಹೊಂದಿದರು.

ನನ್ನ ತಾತ ಯಾವಾಗಲು ಹೇಳುತ್ತಿದ್ದ ‘ತನ್ನಂತಹ ಅನುಕೂಲಸ್ಥರಲ್ಲದ, ಈ ಸ್ವಾತಂತ್ರ್ಯದ ಕನಸು ನನಸಾಗುವಂತೆ ಮಾಡಿದ ಆ ಲಕ್ಷಗಟ್ಟಲೆ ಜನಸಾಮಾನ್ಯರ ಬಗ್ಗೆ’ ನನಗೆ ತೀವ್ರ ಕುತೂಹಲವಿತ್ತು.

ಅವರು ಯಾರು ಎಂದು ನನಗೆ ಕುತೂಹಲವಿತ್ತು. ಆದರೆ ನಾನು ಬೆಳೆದಂತೆಲ್ಲಾ ಅಂತಹವರಲ್ಲಿ ಕೆಲವರು ಆಗೀಗ ನನ್ನ ತಾತನನ್ನು ನೋಡಲು ಬಂದು ಹೋಗುತ್ತಿದ್ದರು ಎಂದು ಗೊತ್ತಾಯಿತು. ಅವರ ಕಥೆಗಳನ್ನು ಕೇಳಲು, ಅವರ ಬದುಕಿನ ಬಗ್ಗೆ ತಿಳಿಯಲು ನನಗೆ ಎಂದೂ ಸುಸ್ತು ಆವರಿಸಲಿಲ್ಲ. 

ಅವರು ಹಾಗೂ ಅವರಂತಹ ಲಕ್ಷಾಂತರ ಮಂದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಲ್ಪ ಅಥವಾ ಯಾವುದೇ ಪ್ರತಿಫಲವಿಲ್ಲದೆ ಹೋರಾಡಿದರು, ಬಲಿದಾನವಾದರು.

ನಾನು ಕಾಲೇಜಿಗೆ ಹೋಗಲು ಶುರು ಮಾಡಿದ ನಂತರ ಅಂತಹ ಹಲವರನ್ನು ಭೇಟಿ ಮಾಡಿದೆ. ನಾನು ವಿಶ್ವವಿದ್ಯಾಲಯದಲ್ಲಿ ಚರಿತ್ರೆ ಅಧ್ಯಯನ ಮಾಡುವಾಗ ಬ್ರಿಟಿಷರ ವಿರುದ್ಧ ನಡೆದ ಅನೇಕ ಸಮರಗಳು ನಗರಗಳಲ್ಲಲ್ಲ, ಗ್ರಾಮೀಣ ಪ್ರದೇಶಗಳಿಂದ ಆರಂಭವಾಗಿದ್ದವು ಎನ್ನುವುದು ಮನವರಿಕೆಯಾಯಿತು.

ಹಾಗೆ ನಾನು ಕಲಿತ ಕೆಲವು ಸಂಗತಿಗಳೆಂದರೆ:1857 ರಲ್ಲಿ ಕಲ್ಕತ್ತಾ ಹಾಗೂ ಬಾಂಬೆ (ಈಗ ಕೋಲ್ಕೊತಾ ಹಾಗೂ ಮುಂಬೈ) ಯ ಶ್ರೀಮಂತರು ಬ್ರಿಟಿಷರನ್ನು ನೇರವಾಗಿಯೇ ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ ವಸಾಹತುಷಾಹಿಗಳ ಯಶಸ್ಸಿಗಾಗಿ ಪ್ರಾರ್ಥನಾ ಸಭೆಗಳನ್ನು ನಡೆಸಿದ್ದರು. ಬ್ರಿಟಿಷರ ವಿರುದ್ಧ ಅವರ ವಸಾಹತುಷಾಹಿ ಸೇನೆಯಲ್ಲಿದ್ದ ನಮ್ಮ ಸಾವಿರಾರು ಸೈನಿಕರು ತಿರುಗಿ ಬೀಳುತ್ತಿದ್ದ ಸಮಯದಲ್ಲಿಯೇ ಇದೂ ಘಟಿಸುತ್ತಿತ್ತು.

ನಂತರದ ದಶಕಗಳಲ್ಲಿ, ಕೋಲ್ಕೊತಾದಲ್ಲಿ 1857ಕ್ಕೂ ಒಂದು ವರ್ಷ ಮುಂಚೆಯೇ ಛತ್ತೀಸ್ಗಡದಲ್ಲಿ ವೀರ ನಾರಾಯಣ ಸಿಂಗ್ ನೇತೃತ್ವದಲ್ಲಿ ಜರುಗಿದ ಸಮರದ ಬಗ್ಗೆ, 1913-15 ರ ವೇಳೆಯಲ್ಲಿ ಪಂಜಾಬ್ ನ್ನು ಕೇಂದ್ರವಾಗಿಟ್ಟುಕೊಂಡು ಜರುಗಿದ ರೋಮಾಂಚಕ ಗದ್ಧರ್ ಚಳವಳಿಯ ಬಗ್ಗೆ, 1922-24ರಲ್ಲಿ ಆಂಧ್ರಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ನೇತೃತ್ವದ ಮೂರನೆಯ ರಂಪಾ ಸಮರದ ಬಗ್ಗೆ ಹಾಗೂ ಇನ್ನೂ ಇಂತಹ ನಮ್ಮ ಚರಿತ್ರೆಯಲ್ಲಿನ ಅನೇಕ ಹೋರಾಟಗಳು ಜರುಗಿದ್ದರ ಬಗ್ಗೆ ನಾನು ತಿಳಿಯುತ್ತಾ ಹೋದೆ. 


1997ರಲ್ಲಿ ಭಾರತ ಸ್ವಾತಂತ್ರ್ಯಕ್ಕೆ 50 ವರ್ಷ ತುಂಬಿದಾಗ ನಾನು ಜಗತ್ತಿನ ಪ್ರಬಲ ಸಾಮ್ರಾಜ್ಯಗಳ ವಿರುದ್ಧ ವೀರೋಚಿತ ಹೋರಾಟಕ್ಕೆ ನಾಂದಿ ಹಾಡಿದ್ದ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದೆ. ಛತ್ತೀಸ್ಗಡದ ಸೋನಾಖಾನ್, ಆಂಧ್ರದ ರಂಪಾಚೋಡಾವರಂ, ಕೇರಳದ ಕಳ್ಳಿಯಸ್ಸೇರಿ ಹಾಗೂ ಇನ್ನಷ್ಟು ಅಂತಹ ಹಳ್ಳಿಗಳು. ಭಾರತ ಸ್ವಾತಂತ್ರ್ಯದ 50ನೇ ವರ್ಷದ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾಗಾಗಿ ‘ಮರೆತು ಹೋದ ಸ್ವಾತಂತ್ರ್ಯ’ ಎನ್ನುವ ಸರಣಿಯನ್ನು ಬರೆದೆ.
ನನ್ನ ಈ ಪುಸ್ತಕ ಓದುಗರಿಗೆ ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಪ್ರಯತ್ನ. ಈಗ ಸ್ವಾತಂತ್ರ್ಯದ 75ನೆಯ ವರ್ಷದಲ್ಲಿ.

ಈ ಕಥೆಗಳು ನಾವು ತಿಳಿದಿರಲೇಬೇಕಾದಂತಹವು.

15 ಅಥವಾ 16 ವ್ಯಕ್ತಿಗಳು (ಅದರಲ್ಲಿ ಕೆಲವರು ಇನ್ನೂ ಬದುಕಿದ್ದಾರೆ) ಎನ್ನುವುದು ತುಂಬಾ ಪುಟ್ಟ ಸಂಖ್ಯೆ ಎನ್ನುವುದು ನನಗೆ ಗೊತ್ತಿದೆ. ಆದರೆ ಅವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಲಕ್ಷಾಂತರ ಅನಾಮಿಕರ ಪ್ರತಿನಿಧಿಗಳು.

1993 ರವರೆಗೆ, ನಾನು ಸಂಪೂರ್ಣವಾಗಿ ಗ್ರಾಮೀಣ ವರದಿಗಳಿಗೆ ಒಡ್ಡಿಕೊಳ್ಳುವವರೆಗೆ ದೇಶಾದ್ಯಂತ ಇಳಿಸಂಜೆಯಲ್ಲಿ ಇರುವ ಇಂತಹ ಹೋರಾಟಗಾರರನ್ನು ಭೇಟಿ ಮಾಡುತ್ತಿದ್ದೆ. ಹೀಗೆ ಪ್ರತೀ ಬಾರಿ ಭೇಟಿಯಾದಾಗಲೂ ಒಬ್ಬ ಸಾಮಾನ್ಯರೊಳಗೆ ಇರುವ ಅಸಾಮಾನ್ಯರನ್ನು ಕಂಡೆ. ನಂತರದ ಹಲವು ವರ್ಷಗಳ ಕಾಲ ನಾನು ಅವರನ್ನು ಭೇಟಿ ಮಾಡಿ, ಅವರನ್ನು ಸಂದರ್ಶಿಸಿ, ಅವರ ಕಥೆಗಳನ್ನು ದಾಖಲಿಸಿಕೊಳ್ಳಲು ಯತ್ನಿಸಿದೆ. ಆದರೆ ಇದನ್ನು ನಿರಂತರವಾಗಿ ಮಾಡಲು ಸೋತೆ. 1990 ರ ನಂತರ ಕೃಷಿ ಸಮಸ್ಯೆಗಳು ಕೇಂದ್ರ ಸ್ಥಾನವನ್ನು ಆಕ್ರಮಿಸಿದವು. 2004 ರಿಂದ 2014 ರ ವರೆಗೆ ‘ದಿ ಹಿಂದು’ ಪತ್ರಿಕೆಯ ಗ್ರಾಮೀಣ ವ್ಯವಹಾರಗಳ ಸಂಪಾದಕನಾಗಿ ಈ ಕೃಷಿ ಬಿಕ್ಕಟ್ಟುಗಳತ್ತ ಗಮನ ಕೊಡಬೇಕಾಯಿತು. ಆದರೂ ಸಹ ನಾನು ಕೆಲವು ಹೋರಾಟಗಾರರ ಹಳ್ಳಿಗಳಿಗೆ ಭೇಟಿ, ಕೆಲವೊಮ್ಮೆ ಮರು ಭೇಟಿ ಕೊಡಲು ಸಾಧ್ಯವಾಗುವಂತೆ ನೋಡಿಕೊಂಡೆ.

ಈ ಸರಣಿಯ ವರದಿಗಳಿಗಾಗಿ ನಾನು ಮೊದಲ ಸುತ್ತಿನ ಭೇಟಿ ಆರಂಭಿಸಿದ್ದು 2002ರಲ್ಲಿ. ನಂತರದ ವರ್ಷಗಳಲ್ಲಿ ನಾನು ಬೇರೇನೋ ಮಾಡುತ್ತಿದ್ದಾಗಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಹೋರಾಟಗಾರರನ್ನು ಹುಡುಕಿ ಓಡುತ್ತಲೇ ಇದ್ದೆ. ಇಲ್ಲವೆ ಅವರೇ ನನಗೆ ಸಿಗುತ್ತಿದ್ದರು. ಇಂತಹ ಹಳ್ಳಿಗಳಿಗೆ ನಾನು ಕೊಟ್ಟ ಕೊನೆಯ ಸುತ್ತಿನ ಭೇಟಿ ಈ ಮಾರ್ಚ್ ಹಾಗೂ ಎಪ್ರಿಲ್ 2022 ರಲ್ಲಿ.

1997ರಲ್ಲಿ ಭಾರತ ಸ್ವಾತಂತ್ರ್ಯಕ್ಕೆ 50 ವರ್ಷ ತುಂಬಿದಾಗ ನಾನು ಜಗತ್ತಿನ ಪ್ರಬಲ ಸಾಮ್ರಾಜ್ಯಗಳ ವಿರುದ್ಧ ವೀರೋಚಿತ ಹೋರಾಟಕ್ಕೆ ನಾಂದಿ ಹಾಡಿದ್ದ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದೆ. ಛತ್ತೀಸ್ಗಡದ ಸೋನಾಖಾನ್, ಆಂಧ್ರದ ರಂಪಾಚೋಡಾವರಂ, ಕೇರಳದ ಕಳ್ಳಿಯಸ್ಸೇರಿ ಹಾಗೂ ಇನ್ನಷ್ಟು ಅಂತಹ ಹಳ್ಳಿಗಳು. ಭಾರತ ಸ್ವಾತಂತ್ರ್ಯದ 50ನೇ ವರ್ಷದ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾಗಾಗಿ ‘ಮರೆತು ಹೋದ ಸ್ವಾತಂತ್ರ್ಯ’ ಎನ್ನುವ ಸರಣಿಯನ್ನು ಬರೆದೆ. ನನ್ನ ಈ ಪುಸ್ತಕ ಓದುಗರಿಗೆ ಮರೆತು ಹೋದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಪ್ರಯತ್ನ.