ಭಾವಕೋಶ ಅರಳುವ ಪರಿ

Update: 2023-01-03 12:36 GMT

ಅಗ್ರಹಾರ ಕೃಷ್ಣಮೂರ್ತಿ

ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು 1953ರ ಜನವರಿ 18 ರಂದು, ತುಮಕೂರು ಜಿಲ್ಲೆಯ ಜೆಟ್ಟಿ ಅಗ್ರಹಾರದಲ್ಲಿ ಜನಿಸಿದರು. ಎಪ್ಪತ್ತರ ದಶಕದಲ್ಲಿ ಹಲವು ಎಳೆಯ ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡರ ಶಿಷ್ಯರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ, ಬೆಂಗಳೂರಿನಲ್ಲಿ ಕನ್ನಡ ಎಂ.ಎ. ಪದವೀಧರರು. ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವು ವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರು ಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ‘ಬೆಳ್ದಿಂಗ್ಳಪ್ಪನ ಪೂಜೆ’ ಕೃತಿ ಹಾಗೂ ‘ನೀರು ಮತ್ತು ಪ್ರೀತಿ’ ಕಾದಂಬರಿ ಪ್ರಕಟಿಸಿದ್ದು, ಕಾದಂಬರಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

ನಮ್ಮ ಮನದಾಳದಲ್ಲಿ ಅನಂತಕಾಲದಿಂದ ಹುದುಗಿ ಹೋಗಿರುವ ಲೆಕ್ಕವಿಲ್ಲದಷ್ಟು ಮಧುರ ಕಟುಮಧುರ ಸಂಗತಿಗಳು ನೆನಪಿಗೆ ಬಂದು ಸಂತೋಷ, ಉಲ್ಲಾಸ ಅಥವಾ ಕ್ಲೇಶ, ಖಿನ್ನತೆಯನ್ನುಂಟು ಮಾಡುವ ಪರಿ ಅಚ್ಚರಿಯನ್ನುಂಟು ಮಾಡುತ್ತದೆ. ಯಾವುದು ಹಳೆಯದು ಯಾವುದು ತಾಜಾ ಎಂಬ ಲೆಕ್ಕಾಚಾರವಿಲ್ಲದೆ ಸಣ್ಣ ಕಾರಣ ಸಿಕ್ಕರೂ ಪಾತಾಳಗರಡಿಯಂತೆ ಭಾವಕೋಶದಾಳಕ್ಕಿಳಿದು ನೆನಪನ್ನು ಮೇಲೆತ್ತಿ ಮನಃಪಟಲದ ಮುಂದೆ ನಿಲ್ಲಿಸಿಬಿಡುತ್ತದೆ. ದೂರ ಬೆಟ್ಟದ ತುದಿಯ ಒಂಟಿಮರ, ಯಾವುದೋ ಪಕ್ಷಿಯ ಕೂಗು, ಎದುರಿಗೆ ಬಂದವರ ಚಹರೆ, ದನಿ, ‘ಸಂಜೆ ಹೊತ್ತು ಗ್ರೀನ್ ಟೀ ಕುಡಿಯುವಾಗ ನಿನ್ನ ನೆನಪು ಯಾಕಾಗಬೇಕು!’ ಎಂದು ಯಾರಿಂದಲೋ ಎಂದೋ ಬಂದಿದ್ದ ಮೆಸೇಜ್ ಇರಬಹುದು, ಯಾವುದೋ ಗೀತೆ, ಸುದ್ದಿ ಪತ್ರಿಕೆ, ಪುಸ್ತಕಗಳಲ್ಲಿನ ನೂರೆಂಟು ಸಂಗತಿಗಳಲ್ಲಿ ಯಾವುದೇ ಅಂಶ ಪಾತಾಳಗರಡಿಯ ಕೆಲಸ ಮಾಡಿಬಿಡುತ್ತದೆ.

ಕೆಲವು ದಿನಗಳ ಹಿಂದೆ ಜಪಾನಿನ ಪ್ರಸಿದ್ಧ ಲೇಖಕ ಹರುಕಿ ಮುರಕಮಿ ಬರೆದ ಕತೆಗಳ ಸಂಕಲನ (ಕಿನೊ ಮತ್ತು ಇತರ ಕತೆಗಳು, ಅನುವಾದ: ಮಂಜುನಾಥ ಚಾರ್ವಾಕ, ಋತುಮಾನ ಪ್ರಕಾಶನ, 2022) ಕೈಗೆ ಸಿಕ್ಕಿತು. ಇದು ಅತ್ಯುತ್ತಮ ಕತೆಗಳ ಸೊಗಸಾದ ಅನುವಾದ. ಇಲ್ಲಿ ಅದನ್ನು ಕುರಿತು ಬರೆಯುತ್ತಿಲ್ಲ; ಮುಂದೆ ಎಂದಾದರೂ ಬರೆಯಬಹುದು. ಪುಸ್ತಕ ಸಿಕ್ಕ ಕೂಡಲೆ ಓದಲು ತೊಡಗುವ ಮುನ್ನ ಅಭ್ಯಾಸಬಲದಲ್ಲಿ ಹೆಬ್ಬೆರಳಿನಡಿಯಿಂದ ಪುಟಗಳನ್ನು ಜಾರಿಸುತ್ತಿದ್ದಾಗ ‘ಆನೆಯೊಂದರ ಕಣ್ಮರೆ’ ಎಂಬ ಕತೆ ನನ್ನನ್ನು ಹಿಡಿದು ನಿಲ್ಲಿಸಿತು. ಆ ಗಳಿಗೆಯಲ್ಲೇ ಕತೆಯನ್ನು ಓದಲು ಪ್ರಾರಂಭಿಸಿಬಿಟ್ಟೆ.

ಹಾಗೆ ನೋಡಿದರೆ ಅದು ಸಂಕಲನದ ಏಳನೆಯ ಕತೆ. ದೈತ್ಯ ಆನೆಯ ಕಣ್ಮರೆ ಎಂದರೇನು, ಹೇಗೆ ಯಾಕೆ ಕಣ್ಮರೆಯಾಯ್ತು ಎಂಬ ಸಹಜ ಕುತೂಹಲ ನನ್ನನ್ನು ಸೆಳೆದುದಕ್ಕಿಂತಲೂ ಹೆಚ್ಚಾಗಿ ನನ್ನ ಭಾವಕೋಶದಾಳಕ್ಕೆ ಪಾತಾಳಗರಡಿಯಾದ ಅಂಶವೆಂದರೆ ಜಪಾನ್ ಲೇಖಕ ಮತ್ತು ಆನೆ ಎಂಬೀ ಕಾಂಬಿನೇಷನ್! ಈ ಹಿಂದೆ ಆನೆಗಳನ್ನು ಖುದ್ದಾಗಿ ಅನೇಕ ಸಂದರ್ಭಗಳಲ್ಲಿ ಕಂಡಿದ್ದೇನೆ. ಆರೇಳು ವರ್ಷ ದಿಲ್ಲಿಯಲ್ಲಿದ್ದಾಗ ಕಚೇರಿಗೆ ಹೋಗುವಾಗ ಯಮುನಾ ನದಿ ದಡದಲ್ಲಿ ಪ್ರತಿದಿನ ಒಂದು ಸಾಕಿದ ಆನೆ ಕಣ್ಣಿಗೆ ಬೀಳುತ್ತಿತ್ತು. ಆನೆ ಕುರಿತ ಕತೆಗಳು, ಪತ್ರಿಕೆಯ ವರದಿಗಳು, ಜಂಬೂಸವಾರಿ, ಕೇರಳದ ದೇವಳಗಳ ಆನೆಗಳ ಮೆರವಣಿಗೆ ಮುಂತಾದ ಯಾವ ಸಂಗತಿಗಳೂ ಹೀಗೆ ನನ್ನ ಒಂದು ಹಳೆಯ ನೆನಪನ್ನು ಉದ್ದೀಪಿಸಿರಲಿಲ್ಲ.

ಎಂಟು ಹತ್ತು ದಿನಗಳ ಕಾಲ ಟೋಕಿಯೊ ಒಳಗೊಂಡಂತೆ ಜಪಾನಿನ ಒಂದೆರಡು ನಗರಗಳಲ್ಲಿ ಅಡ್ಡಾಡಿದ ಸಂದರ್ಭದಲ್ಲೂ ನೆನಪಿಗೆ ಬಂದಿರಲಿಲ್ಲ. ಆನೆ ಮತ್ತು ಜಪಾನ್ ಬಿಡಿಬಿಡಿಯಾಗಿ ಎದುರಾದಾಗ ಯಾವ ಪರಿಣಾಮವನ್ನೂ ಬೀರದೆ ಅವೆರಡು ಜೋಡಿಯಲ್ಲಿ ಎದುರಾದಾಗ ದ್ಯುತಿಸಂಶ್ಲೇಣೆಯಂತೆ ರಾಸಾಯನಿಕ ಕ್ರಿಯೆಯೊಂದು ಮನದೊಳಗುಂಟಾಯಿತು! ಈ ಆಕರ್ಷಣೆಯ ಕಾರಣ ತಿಳಿಸುವ ಮುನ್ನ ಮುರಕಮಿಯ ಕತೆ ಬಗ್ಗೆ ಕೆಲವು ಮಾತುಗಳು ಅಗತ್ಯವೆನಿಸುತ್ತದೆ. ಕತೆಯ ನಾಯಕ ಒಂದು ಮುಂಜಾನೆ ದಿನಪತ್ರಿಕೆಯಲ್ಲಿ ಟೋಕಿಯೊ ನಗರದ ಆನೆಯೊಂದು ಕಣ್ಮರೆಯಾಗಿರುವ ಸುದ್ದಿಯನ್ನು ಓದುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ.

ಭಾರೀ ಸರಪಳಿಯಲ್ಲಿ ಬೀಗ ಹಾಕಿ ಬಂಧಿಸಲ್ಪಟ್ಟಿದ್ದ ಆನೆ ಮತ್ತು ಅದರ ಕಾವಲುಗಾರ ಕಣ್ಮರೆಯಾಗಿರುವ ಸುದ್ದಿ ಅದು. ಸರಪಳಿಗೆ ಹಾಕಿದ್ದ ಬೀಗ ಕೂಡ ಹಾಗೇ ಇರುತ್ತದೆ. ನಗರದ ಜನತೆಗೆ ಇದು ಭಯಭೀತ ಸಂಗತಿ. ನಗರಪಾಲಿಕೆ ಕೆಲವು ಕಾರಣಗಳಿಗಾಗಿ ಸರ್ಕಸ್ಸಿನಿಂದ ಹೊರಬಿದ್ದ ಆನೆಯೊಂದನ್ನು ಸಾಕುವ ಹೊಣೆ ಹೊತ್ತ ದಿನದಿಂದಲೂ ಅದರ ಬಗೆಗೆ ಎಲ್ಲ ಮಾಹಿತಿಗಳನ್ನು ನಾಯಕ ದಾಖಲೆ ಮಾಡುತ್ತಿರುತ್ತಾನೆ. ಆನೆಯನ್ನು ಇರಿಸಿದ್ದ ಮನೆಯ ಹಿಂದಿದ್ದ ಕಡಿದಾದ ಗುಡ್ಡದಲ್ಲಿ ಒಮ್ಮೆ ಓಡಾಡುವಾಗ ಮೇಲಿನ ಕಿಟಕಿಯ ಮೂಲಕ ಆನೆ ಈ ನಾಯಕನ ಕಣ್ಣಿಗೆ ಬಿದ್ದಿರುತ್ತದೆ. ಹಾಗಾಗಿ ಆಗಾಗ ಅಲ್ಲಿಗೆ ಭೇಟಿ ಕೊಡುವುದು ಅವನ ರೂಢಿಯಾಗಿರುತ್ತದೆ. ಕಣ್ಮರೆಯ ದಿನದ ಸಂಜೆ ಕೂಡ ಅವನು ಗುಡ್ಡದಲ್ಲಿ ಕುಳಿತು ಆನೆ ಮತ್ತು ಕಾವಲುಗಾರನನ್ನು ಗಮನಿಸುತ್ತಾನೆ.

ಆ ಸಂಜೆ ಆಶ್ಚರ್ಯವೆನಿಸುವಂತೆ ಆನೆ ಮತ್ತು ಕಾವಲುಗಾರನ ಶರೀರದಲ್ಲಿ ವಿಚಿತ್ರ ಬದಲಾವಣೆಗಳು ಉಂಟಾಗತೊಡಗುತ್ತವೆ. ದೈತ್ಯ ಆನೆ ನಿಧಾನವಾಗಿ ತನ್ನ ಗಾತ್ರವನ್ನು ಕಳೆದುಕೊಳ್ಳುತ್ತಾ, ಕಾವಲುಗಾರನ ಗಾತ್ರ ಕ್ರಮಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ಈ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ನಿಧಾನವಾಗಿ ಕತ್ತಲಾವರಿಸಿಕೊಂಡು ಏನೇನೂ ಕಾಣದಂತಾಗುತ್ತದೆ. ಮರುದಿನ ಆನೆ ಮತ್ತು ಕಾವಲುಗಾರ ಕಣ್ಮರೆಯಾಗಿರುವ ಸುದ್ದಿ ನೋಡುತ್ತಾನೆ. ಮಾಧ್ಯಮಗಳಲ್ಲಿ ನಾನಾ ಸಿದ್ಧಾಂತಗಳು, ಊಹಾಪೋಹಗಳು ಹಬ್ಬುತ್ತವೆ. ಪತ್ರಿಕೆಗಳ ಪ್ರಕಾರ ಕಾಣೆಯಾಗುವ ಮುನ್ನ ಕೊನೆಯದಾಗಿ ಆನೆಯನ್ನು ಕಂಡಿದ್ದವರು ಒಂದು ಶಾಲೆಯ ಮಕ್ಕಳು. ಅವರು ಆನೆಯ ಚಿತ್ರ ಬರೆಯಲು ಅಲ್ಲಿಗೆ ಬಂದಿರುತ್ತಾರೆ. ಅವರೆಲ್ಲ ಹೋದಮೇಲೆ ಕಾವಲುಗಾರ ಬಾಗಿಲು ಮುಚ್ಚಿರುತ್ತಾನೆ.

ಮುರಕಮಿಯ ಈ ಶ್ರೇಷ್ಠ ಕತೆ ಇನ್ನಿತರ ವಿವರಗಳಲ್ಲಿ ಬೆಳೆಯುತ್ತದೆ. ಟೋಕಿಯೊ ನಗರದ ವ್ಯಕ್ತಿತ್ವವನ್ನೇ ಕಣ್ಮರೆಯ ರೂಪಕದ ಮೂಲಕ ಮುರಕಮಿ ಕಟ್ಟಿಕೊಡುತ್ತಾನೆ. ನಾಯಕ ತನ್ನ ವೃತ್ತಿ ಸಂಬಂಧದ ಪಾರ್ಟಿಯೊಂದರಲ್ಲಿ ಒಬ್ಬಳು ಮಹಿಳೆಯನ್ನು ಭೇಟಿಯಾಗುತ್ತಾನೆ. ಅವರಿಬ್ಬರ ಪರಿಚಯದ ಮಾತುಕತೆಯ ನಡುವೆ ನಾಯಕ ಆನೆಯ ಸಂಗತಿಯನ್ನು ತಿಳಿಸುತ್ತಾನೆ. ಮುರಕಮಿ ಆ ಇಡೀ ಪ್ರಸಂಗವನ್ನು ಅತ್ಯಂತ ಶಕ್ತ ರೀತಿಯಲ್ಲಿ ನಿರ್ಮಾಣಮಾಡಿದ್ದಾನೆ. ಅನೇಕ ಸೂಕ್ಷ್ಮ ನೆಲೆಯಲ್ಲಿ ಕತೆ ಬೆಳೆಯುತ್ತದೆ.

ಇದಿಷ್ಟು ಕತೆಯ ಸ್ಥೂಲ ತಿರುಳು. ನಾನು ಸಾಹಿತ್ಯ ಕಲೆ ಅಥವಾ ಸೌಂದರ್ಯಾತ್ಮಕ ನೆಲೆಯಲ್ಲಿ ಕತೆಯನ್ನು ಆಸ್ವಾದಿಸಿದ್ದು ನಿಜವೇ ಆಗಿದ್ದರೂ, ಪ್ರಾರಂಭದಿಂದ ಮುಕ್ತಾಯದವರೆಗೂ ನನ್ನ ಮನಸ್ಸಿನಲ್ಲಿ ನಾನಾ ನಮೂನೆಯ ಪ್ರಶ್ನೆಗಳು ಏಳುತ್ತಿದ್ದವು! ಕತೆಯನ್ನು ಆಸ್ವಾದಿಸಲು ಇಂಥ ಪ್ರಶ್ನೆಗಳ ಅಗತ್ಯವಿಲ್ಲವೆಂಬುದು ಬೇರೆ ಮಾತು, ಇರಲಿ. ಈ ಕತೆ ಬರೆದಾಗ ಮುರಕಮಿಗೆ ಎಷ್ಟು ವಯಸ್ಸಾಗಿತ್ತು, ಕತೆಯನ್ನು ಯಾವ ವರ್ಷ ಬರೆದದ್ದು, ಆ ಆನೆಯ ವಯಸ್ಸೆಷ್ಟು, ಅದನ್ನು ಎಲ್ಲಿಂದ ಟೋಕಿಯೊ ಸರ್ಕಸ್ಸಿಗೆ ತರಲಾಗಿತ್ತು, ಆ ಕಾವಲುಗಾರ ಯಾರಿಂದ ಆನೆ ಸಾಕುವುದನ್ನು ಕಲಿತಿದ್ದ ಇತ್ಯಾದಿ ಹಲವು ಪ್ರಶ್ನೆಗಳು ತಲೆಯಲ್ಲಿ ಸುಳಿಯತೊಡಗಿದವು.

 ಅದಕ್ಕೆ ಕಾರಣವನ್ನು ಈಗ ತಿಳಿಸುತ್ತೇನೆ. ಸುಮಾರು ನಾಲ್ಕೈದು ದಶಕಗಳ ಹಿಂದೆ (1975/76) ಕಬಿನಿ ಜಲಾಶಯಕ್ಕೆ ಹೋಗಿದ್ದೆ. ಆಗಷ್ಟೇ (1974) ಜಲಾಶಯ ನಿರ್ಮಾಣಗೊಂಡು ಅದರ ಎಡದಂಡೆ ಬಲದಂಡೆ ಇತ್ಯಾದಿ ಕೆಲಸಗಳು ನಡೆಯುತ್ತಿದ್ದವು. ನೀರನ್ನು ಸಂಗ್ರಹಿಸಲು ಪ್ರಾರಂಭಿಸಿರಲಿಲ್ಲವೆಂದು ನನ್ನ ನೆನಪು. ಅಲ್ಲಿ ನನ್ನ ಅಣ್ಣ ನರಸಿಂಹಮೂರ್ತಿ ಇಂಜಿನಿಯರ್ ಆಗಿದ್ದರು. ಜಲಾಶಯದ ಹಿಂದಿನ ಹೆಗ್ಗಡದೇವನ ಕೋಟೆ ಅರಣ್ಯ ಪ್ರದೇಶಕ್ಕೆ ಅವರೇ ನನ್ನನ್ನು ಕರೆದುಕೊಂಡು ಹೋಗಿದ್ದರು.

ನದಿಯ ನೀರನ್ನು ಸಂಗ್ರಹಿಸಲು ಪ್ರಾರಂಭಿಸಿದ ಮೇಲೆ ಅಣೆಕಟ್ಟೆಯ ಹಿಂದೆ ಎಷ್ಟು ದೂರದವರೆಗೆ ನೀರು ನಿಲ್ಲಬಹುದು ಎಂಬ ಸರ್ವೇ ಮಾಡಲು ಅವರು ತಮ್ಮ ಸಹಾಯಕರು ಮತ್ತು ಸಲಕರಣೆಗಳೊಂದಿಗೆ ಕಾಡು ಹೊಕ್ಕರು. ಅಲ್ಲಿ ಒಂದು ಆನೆ ಮತ್ತು ಅದರ ಮಾವುತನಿದ್ದ. ಆತನ ಬಳಿ ಲೋಕಾಭಿರಾಮದ ಮಾತಾಡುತ್ತ ನಾನು ಅಲ್ಲೇ ಉಳಿದೆ. ಮಾತಿನ ನಡುವೆ ಆನೆಯ ಮೇಲೆ ಕೂರುವಿರಾ ಅಂದ. ನನಗೆ ಆಸಕ್ತಿ ಇತ್ತೋ ಇಲ್ಲವೊ ಈಗ ನೆನಪಿಲ್ಲ. ಆದರೆ ಅಣ್ಣ ಬರುವವರೆಗೆ ಬಹಳಷ್ಟು ಕಾಲ ಕಳೆಯಬೇಕಾಗಿತ್ತು.

ಒಂದು ಹೊಸ ಅನುಭವವೂ ಆದೀತೆಂದು ಒಪ್ಪಿದೆ. ಅದರ ಮೇಲೆ ಹತ್ತುವ ಅನುಕೂಲಕ್ಕಾಗಿ ನಿಂತಿದ್ದ ಆನೆಗೆ ಕೂರಲು ಸಂಜ್ಞೆ ಮಾಡಿದ. ಕಾಡಿನೊಳಗೆ ಸ್ವಲ್ಪಹೊತ್ತು ಅಡ್ಡಾಡಿಸಿ ಕೆಳಗಿಳಿಸಿದ. ಅವನಿಗೆ ಐದು ರೂಪಾಯಿಗಳ ಒಂದು ಹಸಿರುನೋಟಿನ ಇನಾಂ ಕೊಟ್ಟೆ. ಆಗಿನ ಕಾಲಕ್ಕೆ ಅದು ಕಡಿಮೆಯೇನಾಗಿರಲಿಲ್ಲ. ಈಗಿನ ನೂರು ರೂಪಾಯಿಗಳಿಗೆ ಸರಿಸಮವಿದ್ದೀತು. ಆದರೆ ಆತನಿಗೆ ಅದರಿಂದ ಸಂತೋಷವಾದಂತೆ ಕಾಣಲಿಲ್ಲ. ಹೆಚ್ಚುಕಡಿಮೆ ಅವನು ಅದನ್ನು ಹಿಂದಕ್ಕೇ ಕೊಟ್ಟುಬಿಡುವಂತೆ ಗೊಣಗುತ್ತಾ ‘ಇದೇನು ಬರೀ ಐದು ರೂಪಾಯಿ ಕೊಡ್ತೀರಿ, ನಾನು ಫಾರಿನ್ಗೆಲ್ಲಾ ಹೋಗಿ ಬಂದಿದೀನಿ,’ ಅಂದುಬಿಟ್ಟ! ಒಂದು ಕ್ಷಣ ಅಯೋಮಯವೆನಿಸಿದರೂ ಕುತೂಹಲದಿಂದ ಅದರ ಹಕೀಕತ್ತು ಕೇಳಿದೆ.

ಪ್ರಧಾನಮಂತ್ರಿ ನೆಹರೂ ಜಪಾನ್ ದೇಶಕ್ಕೆ ಒಂದು ಆನೆಯನ್ನು ಉಡುಗೊರೆ ಕೊಟ್ಟಿದ್ದು, ಅದನ್ನು ಜಪಾನಿಗೆ ಬಿಟ್ಟು ಬರಲು ಈ ಮಾವುತನನ್ನು ಕಳುಹಿಸಲಾಗಿತ್ತಂತೆ! ಈತ ಸ್ವಲ್ಪ ಕಾಲ ಅಲ್ಲಿದ್ದು ಬಂದಿದ್ದನೆಂಬ ಸಂಗತಿ ತಿಳಿಸಿ ನನ್ನನ್ನು ಚಕಿತಗೊಳಿಸಿದ್ದ. ಯಾವಾಗಾದರೂ ಒಂದ್ಸಲ ಫಾರಿನ್ನಿಗೆ ಹೋಗಿ ಬರಲೇಬೇಕೆಂಬ ಅಭೀಪ್ಸೆ ನನ್ನ ಮನದಾಳದೊಳಗಿತ್ತು! ಕಾಡಿನ ಮಾವುತನೊಬ್ಬ ಅದರ ಜೊತೆಗೊಂದಿಷ್ಟು ಹೊಟ್ಟೆಕಿಚ್ಚನ್ನೂ ಹಚ್ಚಿದ್ದಿರಬಹುದು! ಆಗ ಒಂದು ಜ್ಞಾನೋದಯವೂ ಆಯಿತೆನ್ನಬೇಕು; ಆನೆಗಳನ್ನೂ ಉಡುಗೊರೆಯಾಗಿ ಕೊಡಬಹುದು ಮತ್ತು ಜಪಾನ್ ಆನೆಗಳಿರುವ ದೇಶವಲ್ಲವೆಂಬುದು! ನಾನು ಅವನಿಗೆ ಹೆಚ್ಚಿಗೆ ದುಡ್ಡು ಕೊಟ್ಟೆನೊ ಇಲ್ಲವೊ ನೆನಪಿಲ್ಲ. ಬಹುಶಃ ಕೊಡಲಿಲ್ಲವೆನಿಸುತ್ತದೆ.

ಸುಮಾರು ನಾಲ್ಕೈದು ದಶಕಗಳ ಹಿಂದಿನ ಈ ನೆನಪು ಲೇಖಕ ಮುರಕಮಿಯ ಕತೆಯ ಮೂಲಕ ನನ್ನಲ್ಲಿ ಅರಳತೊಡಗಿತು. ಕತೆ ಓದುತ್ತಿರುವಾಗಲೇ ನನ್ನ ಫೋಟೊಗಳ ಸಂಗ್ರಹದಲ್ಲಿ ನಾನು ಮಾವುತನ ಜೊತೆ ಆನೆಯ ಮೇಲೆ ಕುಳಿತಿದ್ದ ಒಂದು ಫೋಟೊ ಇದ್ದದ್ದು ಕೂಡ ನೆನಪಾಗುತ್ತಿತ್ತು. ದಿನವಿಡೀ ಕುಳಿತು ಹುಡುಕಿದೆ.

ನನ್ನ ನೆನಪು ನಿಖರವಾಗಿತ್ತು; ಫೋಟೊ ಸಿಕ್ಕಿತು! ಸ್ವಲ್ಪ ನಾಚಿಕೆಯೂ ಅಂಕುರಿಸಿತು! ಆವೇಳೆಗಾಗಲೇ ಎಂಎ ಮುಗಿಸಿದ್ದ ನಾನು ಚಿಕ್ಕ ಮಕ್ಕಳಂತೆ ಆನೆ ಮೇಲೇರಿ ಕುಳಿತಿದ್ದುದನ್ನು ಕಂಡು! ಯಾವುದೇ ಫೋಟೊ ಅಥವಾ ಆಲ್ಬಂ ಸಿಕ್ಕರೂ ಮೊದಲು ನಮ್ಮನ್ನು ನಾವು ಹುಡುಕಿ ನೋಡಿಕೊಳ್ಳುವುದೇ ಸತ್ಯವಲ್ಲವೇ! ಆದರೆ ತಕ್ಷಣ ಮೊಬೈಲಿನಲ್ಲಿ ಅದನ್ನು ಸ್ಕ್ಯಾನ್ ಮಾಡಿ ಮಾವುತನ ಮುಖ ಚಹರೆಯನ್ನು ಹಿಗ್ಗಲಿಸಿ ಹಿಗ್ಗಲಿಸಿ ಮೊದಲಬಾರಿಗೆ ಅವನನ್ನು ನೋಡಿದೆ! ಆಗ ಅವನಿಗೆ ವಯಸ್ಸು ಎಷ್ಟಾಗಿದ್ದೀತು ಎಂದು ಅಂದಾಜು ಮಾಡತೊಡಗಿದೆ. ಗಟ್ಟಿಮುಟ್ಟಾಗಿದ್ದು ಅಲ್ಪಸ್ವಲ್ಪ ಬಿಳಿಗಡ್ಡ ಇದ್ದಂತೆ ಫೋಟೊದಲ್ಲಿ ಕಂಡ. ನನ್ನ ಅಂದಾಜಿನ ಪ್ರಕಾರ 35-40 ರ ಒಳಗೇ ಇದ್ದೀತು.

 ಮುರಕಮಿಯ ಕತೆಯ ಪ್ರಭಾವ ಕುತೂಹಲವನ್ನು ಇನ್ನೂ ಹೆಚ್ಚು ಮಾಡಿತು. ಕಾರಣ ಇಪ್ಪತ್ತೊಂದನೆಯ ಶತಮಾನದ ಆದಿಭಾಗವನ್ನು ಕಳೆಯುತ್ತಿರುವ ನಮ್ಮೆಲ್ಲರಿಗೂ ಒದಗಿಬಂದಿರುವ ಅಂತರ್ಜಾಲ ಅಥವಾ ವೆಬ್ ಎನ್ನುವ ವರ ಮತ್ತು ಶಾಪ. ಶಾಪದ ಬಗ್ಗೆ ಹೆಚ್ಚು ವಿವರಿಸಬೇಕಿಲ್ಲ. ನನ್ನೀ ಲೇಖನವೇ ಅಚಾನಕ್ಕಾಗಿ ಮುರಕಮಿಯ ಆನೆಯ ರೀತಿಯಲ್ಲಿ ಸ್ಕ್ರೀನ್ ಮೇಲಿಂದ ಕಣ್ಮರೆಯಾಗಿಬಿಟ್ಟಿತ್ತು! ನೆನಪಿನಿಂದ ಮತ್ತೊಮ್ಮೆ ಬರೆಯತೊಡಗಿದೆ! ವರ ನಿಜಕ್ಕೂ ವರವೇ! ಮಾವುತ ಹೇಳಿದ್ದನ್ನು ನಾನೆಂದೂ ಗೂಗಲ್ನಲ್ಲಿ ಹುಡುಕಿರಲಿಲ್ಲ. ಅದರ ಅಗತ್ಯವೂ ಬಿದ್ದಿರಲಿಲ್ಲ. ಈಗ ಜಪಾನಿ ಲೇಖಕನ ಆನೆ ಹುಡುಕುವಂತೆ ಮಾಡಿತು. ಅಲ್ಲಿ ಸಿಕ್ಕ ಮಾಹಿತಿ ನನ್ನ ನೆನಪಿನ ಗಣಿಗೆ ಒಂದು ವರವೇ ಹೌದು!

 ಹೆಗ್ಗಡದೇವನ ಕೋಟೆ ಕಾಡಿನ ಮಾವುತ ಹೇಳಿದ ಹಕೀಕತ್ತಿಗೆ ಚಾರಿತ್ರಿಕ ಹಿನ್ನೆಲೆ ಮತ್ತು ಪುರಾವೆ ಗೂಗಲ್ನಲ್ಲಿ ಸಿಕ್ಕವು. ಅನೇಕ ಎಂಟ್ರಿಗಳು, ಚಿತ್ರಗಳು ಅಲ್ಲಿವೆ. ಅವುಗಳಲ್ಲಿ ಪಲ್ಲವಿ ಅಯ್ಯರ್ ಬರೆದಿರುವ ‘ಓರಿಯೆಂಟಿಂಗ್: ಆನ್ ಇಂಡಿಯನ್ ಇನ್ ಜಪಾನ್’ ಎಂಬ ಪುಸ್ತಕದ ಭಾಗವೊಂದನ್ನು ‘ದಿ ಪ್ರಿಂಟ್’ ಎಂಬ ಅಂತರ್ಜಾಲ ಪತ್ರಿಕೆ 7 ಆಗಸ್ಟ್ 2021 ರಲ್ಲಿ ಪ್ರಕಟಿಸಿದೆ. ಅದರಲ್ಲಿನ ಮುಖ್ಯಾಂಶಗಳ ಜೊತೆಗೆ ನನ್ನ ಬರಹವನ್ನು ಮುಂದುವರಿಸಬಹುದು. ಯುದ್ಧಾನಂತರದ ಭಾರತ-ಜಪಾನ್ ನಡುವಿನ ಸ್ನೇಹ ಸೌಹಾರ್ದ ಕುರಿತಂತೆ ಒಂದು ಆನೆಯ ವಿಷಯ ತಿಳಿಸದಿದ್ದರೆ ತುಂಬಾ ತಪ್ಪೆನಿಸುತ್ತದೆ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ 1949 ರಲ್ಲಿ ಒರಟಾದ ದಪ್ಪ ಚರ್ಮದ ಪ್ರಾಣಿಯೊಂದರ ಮೂಲಕ ಒಂದು ಚತುರ ರಾಜತಾಂತ್ರಿಕತೆಯನ್ನು ಕೈಗೊಳ್ಳುತ್ತಾರೆ. ತಮ್ಮ ಮಗಳ ಹೆಸರನ್ನೇ ಹೊತ್ತ ‘ಇಂದಿರಾ’ ಎಂಬ ಆನೆಯೊಂದನ್ನು ಜಪಾನಿನ ಮಕ್ಕಳಿಗಾಗಿ ಟೋಕಿಯೊದ ವ್ಯೆನೊ ಮೃಗಾಲಯಕ್ಕೆ ಉಡುಗೊರೆಯಾಗಿ ಕಳಿಸಿಕೊಡುವುದರ ಮೂಲಕ. ಆ ಆನೆ ಮೃಗಾಲಯದ ಅತಿ ಆಕರ್ಷಕ ಪ್ರಾಣಿಯಾಗುವುದಲ್ಲದೆ ಭಾರತ ಜಪಾನ್ ನಡುವಿನ ದೀರ್ಘಾವಧಿ ಕಾಲದ ಸ್ನೇಹ ಸಂಕೇತವಾಗುತ್ತದೆ. ಆದರೆ ಈ ಘಟನೆ ಅತೀವ ನೋವಿನ ಸಂದರ್ಭದಲ್ಲಿ ಜರುಗುತ್ತದೆ ಎಂಬುದು ಒಂದು ದೊಡ್ಡ ದುರಂತ.

ಆ ದುರಂತದಲ್ಲಿ ಆಮೊದಲು ಭಾರತದ ರಾಯಭಾರಿಗಳಾಗಿದ್ದ ಇನ್ನೆರಡು ಆನೆಗಳೂ ಸೇರುತ್ತವೆ. ತೊಂಕಿ ಮತ್ತು ಜಾನ್ ಎಂಬ ಒಂದು ಗಂಡು ಮತ್ತು ಹೆಣ್ಣಾನೆಗಳ ಜೋಡಿಯನ್ನು ಮೃಗಾಲಯ ಭಾರತದಿಂದ 1924 ರಲ್ಲಿ ಪಡೆದಿರುತ್ತದೆ. ಹತ್ತು ವರ್ಷಗಳ ನಂತರ ಥಾಯ್ಲೆಂಡಿನ ಮತ್ತೊಂದು ಆನೆ ಅವೆರಡರ ಜೊತೆ ಸೇರುತ್ತದೆ.

ಆ ದುರಂತ ಯಾವುದು? ಎರಡನೆಯ ಮಹಾ ಯುದ್ಧದ ಸಂದರ್ಭದಲ್ಲಿ ಅಮೆರಿಕ ಜಪಾನಿನ ಹಿರೋಶಿಮಾ, ನಾಗಾಸಾಕಿ ಮುಂತಾದ ಕಡೆ ಬಾಂಬ್ ದಾಳಿ ಮಾಡುತ್ತಿತ್ತು. ಅಂಥ ಹೊತ್ತಲ್ಲಿ ಮೃಗಾಲಯದಲ್ಲಿದ್ದ ‘ಹೆಚ್ಚು ಅಪಾಯಕಾರಿ’ ಪ್ರಾಣಿಗಳು ತಪ್ಪಿಸಿಕೊಂಡು ಹೋಗಿ ಅನಾಹುತಗಳಾಗಬಹುದೆಂದು ಅವುಗಳನ್ನು ಉಪವಾಸ ಕೆಡವಿ ಸಾಯಿಸಬೇಕೆಂದು ಆಡಳಿತ ವ್ಯವಸ್ಥೆ ತೀರ್ಮಾನ ಮಾಡುತ್ತದೆ. ಅದರ ಪರಿಣಾಮದಿಂದ ಜಪಾನಿನಲ್ಲಿದ್ದ ಮೂರೂ ಆನೆಗಳು ಹತವಾಗುತ್ತವೆ.

ಯುದ್ಧಕಾಲದ ಈ ದುರಂತ ಛಾಯೆ ಮರೆಯಾಗುವುದು ನಮ್ಮ ಮೈಸೂರಿನ ಅರಣ್ಯ ಪ್ರದೇಶದಿಂದ ಪ್ರಯಾಣ ಮಾಡಿ ಜಪಾನಿನ ವ್ಯೆನೊ ಮೃಗಾಲಯಕ್ಕೆ ‘ಇಂದಿರಾ’ ಆಗಮಿಸಿದಾಗಲೇ. ಅದಕ್ಕೆ ಮುಖ್ಯ ಕಾರಣ ಜಪಾನಿನ ಏಳನೆಯ ತರಗತಿಯ ಇಬ್ಬರು ಮಕ್ಕಳು ಜಪಾನ್ ಪಾರ್ಲಿಮೆಂಟಿಗೆ ಒಂದು ಮನವಿ ಕೊಟ್ಟು ನಾವು ಮೃಗಾಲಯದಲ್ಲಿ ಆನೆಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ, ನೀವ್ಯಾಕೆ ಒಂದು ಹೊಸ ಆನೆಯನ್ನು ತರಿಸಬಾರದು ಎಂದು ಕೇಳಿರುತ್ತಾರೆ. ಆ ಮಕ್ಕಳ ಮನವಿ ಸಾರ್ವಜನಿಕರ ನಡುವೆ ದೊಡ್ಡ ಚರ್ಚೆಯ ವಸ್ತುವಾಗುತ್ತದೆ.

ಆಗ ಜಪಾನ್ ಸರಕಾರ ಸುಮಾರು ಒಂದು ಸಾವಿರ ಮಕ್ಕಳಿಂದ ಪತ್ರಗಳನ್ನು ಭಾರತದ ಪ್ರಧಾನಮಂತ್ರಿಯವರಿಗೆ ನೇರವಾಗಿ ಬರೆಯಿಸಿ, ಅವುಗಳನ್ನು ನೆಹರೂ ಅವರಿಗೆ ಕಳಿಸಿ, ಒಂದು ಬದಲಿ ಆನೆಯ ಬೇಡಿಕೆಯಿಡುತ್ತಾರೆ. ನೆಹರೂ ಒಪ್ಪುತ್ತಾರೆ. ದಿನಾಂಕ 25 ಸೆಪ್ಟಂಬರ್ 1949 ರಂದು ವ್ಯೆನೊ ಮೃಗಾಲಯಕ್ಕೆ ‘ಇಂದಿರಾ’ ಬಂದಾಗ ಅಲ್ಲಿ ಮಿತಿ ಮೀರಿದ ಉತ್ಸಾಹ ಕಂಡುಬರುತ್ತದೆ. ಆನೆ ‘ಇಂದಿರಾ’ಳ ಮಾತೃಭಾಷೆ ಕನ್ನಡ. ಆನೆಯನ್ನು ನೋಡಿಕೊಳ್ಳಬೇಕಾಗಿದ್ದ ಜಪಾನಿನ ಸುಗಯ ಮತ್ತು ಶಿಬುಯ ಇಬ್ಬರಿಗೂ ಆನೆಯ ಜೊತೆ ಹೋಗಿದ್ದ ಇಬ್ಬರು ಮೈಸೂರು ರಾಜ್ಯದ ಮಾವುತರು ಎರಡು ತಿಂಗಳುಗಳ ಕಾಲ ತರಬೇತಿ ಕೊಟ್ಟು ಹಿಂದಿರುಗುತ್ತಾರೆ. ಮುಂದಿನ ಸುಮಾರು ಮೂರು ದಶಕಗಳ ಕಾಲ ‘ಇಂದಿರಾ’ ಜಪಾನೀಯರ ಅಚ್ಚುಮೆಚ್ಚಿನ ಮತ್ತು ಭಾರತ ಜಪಾನ್ನ ಸೌಹಾರ್ದದ ಸೇತುವಾಗಿರುತ್ತದೆ.

ಪ್ರಧಾನಮಂತ್ರಿ ನೆಹರೂ ಮತ್ತು ಇಂದಿರಾ ಗಾಂಧಿ ಇಬ್ಬರು 1957 ರಲ್ಲಿ ಜಪಾನಿಗೆ ಭೇಟಿ ಕೊಟ್ಟು ‘ಇಂದಿರಾ’ಳನ್ನು ಮುಕ್ತ ಕಾಣುತ್ತಾರೆ. ಅವರ ಭೇಟಿಯ ಸುದ್ದಿ ಜಪಾನಿನ ಮಾಧ್ಯಮಗಳಲ್ಲಿ ಎಲ್ಲಕಡೆ ಹಬ್ಬುತ್ತದೆ. ‘ಇಂದಿರಾ’ 1983ರಲ್ಲಿ ಸಾವನ್ನಪ್ಪುತ್ತದೆ (ಇಂದಿರಾ ಗಾಂಧಿಯವರ ಹತ್ಯೆ 1984ರಲ್ಲಾಗುತ್ತದೆ).

ಬಾಲ್ಯಕಾಲದಿಂದಲೂ ನೆಹರೂ ನನ್ನ ಐಕಾನ್! ಈಚೆಗಂತೂ ಅವರ ನಿಂದಾಸ್ತುತಿಗಳನ್ನು ಕೇಳಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ನನ್ನ ಹೀರೋ ಆಗಿದ್ದಾರೆ. ಸಂತೋಷವೆಂದರೆ ಮೊನ್ನೆ ನವೆಂಬರ್ 14 ರಂದು ನಮ್ಮ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಇಬ್ಬರೂ ನೆಹರೂ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಾಯ್ತುಂಬ ಹೊಗಳಿದರು (ತೊಟ್ಟಿಲ ಮಗುವನ್ನು ಚಿವುಟುವವರ ಚೇಷ್ಟೆಗಳನ್ನು ಕಂಡರೆ ಅತೀವ ಬೇಸರವಾಗುತ್ತದೆ ಎಂಬ ಮಾತು ಬೇರೆ..). ಕಾಕತಾಳೀಯವೆಂಬಂತೆ ನಾನು ಈ ಲೇಖನವನ್ನು ಬರೆಯಲು ಪ್ರಾರಂಭಿಸಿದ್ದು ಈ ಸಲದ ನೆಹರೂ ಜನ್ಮದಿನದಂದೇ! ನೆಹರೂ ಆನೆ ಕಳಿಸುವಾಗ ಜಪಾನಿನ ಮಕ್ಕಳಿಗೆ ಬರೆದ ಪತ್ರ ಚಾರಿತ್ರಿಕವಾಗಿ ಬಹಳ ಮುಖ್ಯವಾದದ್ದು.

ನೆಹರೂ ಬರೆಯುತ್ತಾರೆ, ಇಂದಿರಾ ಬಹಳ ಒಳ್ಳೆಯ ಆನೆ, ತುಂಬಾ ಸಾಧು. ಜಪಾನ್ ಮತ್ತು ಭಾರತದ ಮಕ್ಕಳು ಬೆಳೆದು ದೊಡ್ಡವರಾದಾಗ, ಅವರು ಕೇವಲ ತಮ್ಮ ತಮ್ಮ ಮಹಾನ್ ದೇಶಗಳಿಗೆ ಮಾತ್ರ ಸೇವೆ ಸಲ್ಲಿಸದೆ ಏಶ್ಯ ಮತ್ತು ಇಡೀ ಜಗತ್ತಿನ ಪರಸ್ಪರ ಶಾಂತಿ ಮತ್ತು ಸಹಕಾರಕ್ಕಾಗಿ ಸೇವೆ ಸಲ್ಲಿಸುವರೆಂಬ ಭರವಸೆ ನನಗಿದೆ. ಆದ್ದರಿಂದ ನೀವು ಇಂದಿರಾ ಎಂಬ ಈ ಆನೆ ಭಾರತದ ಮಕ್ಕಳ ಪ್ರೀತಿ ಮತ್ತು ಸೌಹಾರ್ದದ ಸಂದೇಶವನ್ನು ಹೊತ್ತು ತಂದಿರುವುದಾಗಿ ಭಾವಿಸಬೇಕು. ಆನೆ ಒಂದು ಶ್ರೇಷ್ಠ ಪ್ರಾಣಿ. ಅದು ಬುದ್ಧಿವಂತ ಮತ್ತು ಶಾಂತಚಿತ್ತ, ಅತ್ಯಂತ ಬಲಶಾಲಿಯಾದರೂ ಸೌಮ್ಯ. ನಾವೆಲ್ಲರೂ ಈ ಗುಣಗಳನ್ನು ಬೆಳೆಸಿಕೊಳ್ಳುವ ಭರವಸೆ ನನಗಿದೆ.

ಎರಡನೇ ಮಹಾಯುದ್ಧಾನಂತರ ಜಪಾನ್ ನೆಲ ಕಚ್ಚಿತ್ತು. ಅಂಥ ದೇಶದ ಜನರಿಗೆ ಮುತ್ಸದ್ದಿ ನಾಯಕ ಕೊಟ್ಟ ಅತೀವ ಭರವಸೆಯ ಮಾತುಗಳು ಎಂದಿಗಿಂತಲೂ ಹೆಚ್ಚಾಗಿ ಈ ಹೊತ್ತಿಗೆ ಪ್ರಸ್ತುತವಾಗಿವೆ.

ಗೂಗಲ್ ನಲ್ಲಿ ಜಾಲಾಡುವಾಗ ಇನ್ನೂ ಕೆಲವು ಮಾಹಿತಿಗಳು, ಫೋಟೊಗಳು ಕಂಡವು. ಒಂದು ಫೋಟೊದಲ್ಲಿ ಟೋಕಿಯೊದ ಬೀದಿಯೊಂದರಲ್ಲಿ ಜನರ ಜೊತೆ ಮೃಗಾಲಯಕ್ಕೆ ಸಾಗುತ್ತಿರುವ ಆನೆಯ ಮೇಲೆ ಹೆಗ್ಗಡದೇವನ ಕೋಟೆಯ ಕಾಡಿನಿಂದ ಆನೆಯನ್ನು ಕರೆದೊಯ್ದ ಇಬ್ಬರು ಮಾವುತರು ಒಬ್ಬರ ಹಿಂದೊಬ್ಬರು ರಾಜಗಾಂಭೀರ್ಯದಲ್ಲಿ ಕುಳಿತಿದ್ದಾರೆ! ಅವರಿಬ್ಬರಲ್ಲಿ 47 ವರ್ಷಗಳ ಹಿಂದೆ ನನ್ನ ಜೊತೆ ಕುಳಿತಿದ್ದವ ಯಾರಿರಬಹುದೆಂದು ಗೂಗಲ್ ಫೋಟೊವನ್ನು ಹತ್ತಾರು ಸಲ ನಿರುಕಿಸಿ ನೋಡಿ ಮುಂದೆ ಕುಳಿತ ಆಸಾಮಿಯೇ ಇರಬೇಕೆಂಬ ಅಂದಾಜಿಗೆ ಬಂದಿದ್ದೇನೆ! ಅಂದು