ಪಿರಿಯಾಪಟ್ಟಣ ಚರ್ಚ್ ಮೇಲೆ ದಾಳಿ ಪ್ರಕರಣದಲ್ಲಿ ಓರ್ವನ ಬಂಧನ: ಎಸ್ಪಿ ಸೀಮಾ ಲಾಟ್ಕರ್
''ಕಳವು ಆರೋಪಿಯಿಂದ ಬಾಲ ಯೇಸು ಮೂರ್ತಿ ಒಡಕು''
ಮೈಸೂರು,ಜ.2: ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೆಂಟ್ ಮೇರಿ ಚರ್ಚ್ ಮೇಲಿನ ದಾಳಿಗೆ ಸಂಬಂಧಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.
ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಕಳ್ಳತನ ಯತ್ನದ ವೇಳೆ ಬಾಲ ಯೇಸು ಕೆಳಗೆ ಬಿದ್ದಿದ್ದು, ಈ ಸಂಬಂಧ ವಿಶ್ವ ಎಂಬ ಪೌರಕಾರ್ಮಿಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
''ಪ್ರಕರಣದ ಸಂಬಂಧ ಮೂರು ತಂಡ ರಚನೆ ಮಾಡಲಾಗಿತ್ತು. ಬ್ಲೂ ಕಲರ್ ಹ್ಯಾಂಡ್ ಗ್ಲೌಸ್ ಸ್ಥಳದಲ್ಲಿ ಸಿಕಿತ್ತು, ಇದರ ಆಧಾರದ ಮೇಲೆ ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು'' ಎಂದರು.
''ಚರ್ಚ್‍ನಲ್ಲಿ ಪೌರಕರ್ಮಿಕನಾಗಿ ಮಾಡುತ್ತಿದ್ದ ಪಿರಿಯಾಪಟ್ಟಣದ ಮಹದೇಶ್ವರ ಬಡವಾಣೆ ನಿವಾಸಿಯಾಗಿರುವ ವಿಶ್ವನಿಗೆ ಎರಡು ತಿಂಗಳಿನಿಂದ ಚರ್ಚ್‍ನಲ್ಲಿ ಸಂಬಳ ನೀಡರಲಿಲ್ಲ. ಕ್ರಿಸ್ ಮಸ್ ಸಂಧರ್ಭದಲ್ಲಿ ಫಾದರ್ ಜೊತೆ ಮಾತನಾಡಲು ಚರ್ಚ್ಗೆ ಬಂದಿದ್ದ. ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಹುಂಡಿ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದ. ಬಾಲ ಏಸುವಿನ ಮೂರ್ತಿಯನ್ನ ಟೇಬಲ್ ಮೇಲೆ ಇಡಲಾಗಿತ್ತು. ಬಾಲ ಏಸುವಿನ ಮೂರ್ತಿ ಕೆಳಗೆ ಹಣ ಇರಬಹುದು ಎಂದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬಾಲ ಏಸುವಿನ ಮೂರ್ತಿ ಒಡೆದಿದೆ'' ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಡಾ.ನಂದಿನಿ ಹಾಜರಿದ್ದರು.