ಬಣ ಮತ್ತು ಪಂಗಡಗಳಾಚೆ ದಲಿತ ಜಾತಿಗಳ ಐಕ್ಯತೆ ಸಾಧ್ಯವೇ?

Update: 2023-01-03 17:36 GMT

ಡಾ. ಮೂಡ್ನಾಕೂಡು ಚಿನ್ನಸ್ವಾಮಿ,  ಬೆಂಗಳೂರು

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಎಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಅಂಬೇಡ್ಕರ್ ಪೀಠದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ದಲಿತ ಬಂಡಾಯ ಸಾಹಿತ್ಯದೊಂದಿಗೆ ಬೆಸೆದುಕೊಂಡು ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಂಸ್ಕೃತಿ, ಸಮಾಜ ಸೇವೆ ಮತ್ತು ರಂಗಭೂಮಿಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ, ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ 38 ಪುಸ್ತಕಗಳನ್ನು ಹೊರತಂದಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತಿವ್ಯವಸ್ಥೆ ಅನೇಕ ಸ್ಥಿತ್ಯಂತರಗಳನ್ನು ಕಂಡಿದೆ. ಅದಕ್ಕೆ ಕಾರಣ ಭಾರತದ ಸಂವಿಧಾನ. ಕೆಲವು ಧನಾತ್ಮಕ ಅಂಶಗಳನ್ನು ಹೆಸರಿಸುವುದಾದರೆ ದಲಿತ ಮತ್ತು ಹಿಂದುಳಿದ ವರ್ಗಗಳ ಶಿಕ್ಷಣ ಮಟ್ಟದಲ್ಲಿ ಹೆಚ್ಚಳ. ಮೀಸಲಾತಿಯ ಕಾರಣದಿಂದ ಉದ್ಯೋಗ ಪಡೆದವರ ಸಂಖ್ಯೆಯಲ್ಲಿ ಹೆಚ್ಚಳ. ಸಾಮಾಜಿಕವಾಗಿ ಸಮಾನರೆಂದು ಗುರುತಿಸಿಕೊಳ್ಳುತ್ತಿರುವುದು. ಸಂಘಟನಾತ್ಮಕವಾಗಿ ತಮ್ಮ ಅಸ್ತಿತ್ವವನ್ನು ನಿರೂಪಿಸಿಕೊಳ್ಳುತ್ತಿರುವುದು. ಸಾಂಸ್ಕೃತಿಕವಾಗಿ ತಮ್ಮ ಅಸ್ಮಿತೆಯನ್ನು ಹೊರಜಗತ್ತಿಗೆ ತೋರುತ್ತಿರುವುದು. ಇವೆಲ್ಲವೂ ಕಳೆದ 75 ವರ್ಷಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣದಿದ್ದರೂ ಒಂದು ಹಂತದ ಪ್ರಾತಿನಿಧ್ಯ ಸಮಾಜದ ಎಲ್ಲ ಅಂಗಗಳಲ್ಲೂ ಇಣುಕುತ್ತಿರುವುದು ಸಂವಿಧಾನದ ಕೊಡುಗೆಗಳೇ ವಿನಃ ಬೇರೇನೂ ಅಲ್ಲ. ಜೌಗುನೆಲದಲ್ಲಿ ಪೈರು ಮೊಳಕೆಯೊಡೆಯುತ್ತಿರುವುದು ಬದಲಾವಣೆಯ ಸಂಕೇತವೇ ಆಗಿದೆ. ರಾಜಕೀಯ ಪ್ರಾತಿನಿಧಿತ್ವ ಢಾಳಾಗಿ ಕಾಣಿಸಿಕೊಂಡರೂ ಅವರ ಕೊಡುಗೆ ಅಷ್ಟೇನು ಗಮನಾರ್ಹವಾದುದಲ್ಲ ಎಂದು ಹೇಳಬಹುದು.

ಯಾಕೆಂದರೆ ಬಹುಪಕ್ಷೀಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಮಾದರಿ (Voting pattern) ಪ್ರಬಲ ಜಾತಿಗಳ ಹಿಡಿತಕ್ಕೆ ತಕ್ಕಂತೆ ಹೊಂದಿಕೊಂಡಂತಿದೆ. ಇನ್ನೊಂದರ್ಥದಲ್ಲಿ ಜಾತಿವ್ಯವಸ್ಥೆ ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸಿದೆ. ಪರಿಣಾಮವಾಗಿ ಮೀಸಲು ಕ್ಷೇತ್ರದಿಂದ ಆರಿಸಿ ಬರುವವರು ಮೇಲ್ಜಾತಿಗಳ ಹಂಗಿಗೊಳಗಾಗಿರುತ್ತಾರೆ, ಹಾಗಾಗಿ ತಥಾಕಥಿತ ಗುಲಾಮಿ ಮನಸ್ಥಿತಿಯನ್ನು ಹೊಂದಿರುತ್ತಾರೆ ಅಥವಾ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ಆದ್ದರಿಂದ ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ಮೀಸಲು ರಾಜಕೀಯ ಪ್ರತಿನಿಧಿ ಸ್ವತಂತ್ರನೂ ಅಲ್ಲ, ಸಶಕ್ತನೂ ಅಲ್ಲ ಎಂಬಂಥ ಪರಿಸ್ಥಿತಿ ಇದೆ.

ಹಿಂದೂ ಧರ್ಮದ ಮಾಯಲಾರದ ಹುಣ್ಣು - ಅಸ್ಪಶ್ಯತೆ

ಅಸ್ಪಶ್ಯತೆಯ ಆಚರಣೆಯೂ ಅನೇಕ ಸ್ಥಿತ್ಯಂತರಗಳಿಗೆ ಒಳಗಾಗಿದೆ. ಸರಕಾರದ ಉನ್ನತ ಸ್ಥಾನಗಳಲ್ಲಿ ಅಸ್ಪಶ್ಯರು ಆಸೀನರಾಗಿದ್ದಾರೆ. ಸಾಂವಿಧಾನಿಕ ಸ್ಥಾನಗಳನ್ನು ಅಲಂಕರಿಸಿರುವ ದಲಿತ ರಾಜಕಾರಣಿಗಳಿದ್ದಾರೆ. ಆದರೆ ಅವರೂ ಮೇಲ್ವರ್ಗದ ಮತ್ಸರದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪಾರಂಪರಿಕತೆಯನ್ನು ಗೌರವಿಸಲೆಂದೋ ಏನೋ ಒಂದು ರೀತಿಯ ಒಳ ಒಪ್ಪಂದದ ಮೂಲಕ ಅಸ್ಪಶ್ಯತೆ ಆಚರಣೆಯಲ್ಲಿದೆ. ನಗರ ಪ್ರದೇಶಗಳಲ್ಲಿ ಬಾಹ್ಯಾಚರಣೆಯಲ್ಲಿ ಗೋಚರವಾಗದಿರಬಹುದು, ಭೌತಿಕವಾಗಿ ಸ್ವಲ್ಪ ಸಡಿಲಗೊಂಡಂತೆ ಕಾಣಿಸಿಕೊಳ್ಳಬಹುದು. ಆದರೆ ಮಾನಸಿಕವಾಗಿ ಗಟ್ಟಿಗೊಳ್ಳುತ್ತಿದೆ. ಹಿಮಾಚಲದಿಂದ ಕನ್ಯಾಕುಮಾರಿಯವರೆಗೂ ಯಾವುದೇ ನಗರಗಳಲ್ಲಿ ಅಸ್ಪಶ್ಯರು ಬಾಡಿಗೆ ಮನೆಯನ್ನು ಪಡೆದುಕೊಳ್ಳುವುದು ಕಷ್ಟ. ಪ್ರಸಕ್ತ ಸಂದರ್ಭದಲ್ಲಿ ಜಾತಿಪ್ರಜ್ಞೆ ಎಲ್ಲ ಕ್ಷೇತ್ರದಲ್ಲೂ ಜಾಗೃತವಾಗಿದೆ.

ಈ ಲೇಖನವನ್ನು ಬರೆಯುವ ಹೊತ್ತಿಗೆ ನನ್ನ ಜಿಲ್ಲೆ ಚಾಮರಾಜನಗರದ ಹೆಗ್ಗೊಟಾರ ಎಂಬ ಹಳ್ಳಿಯಲ್ಲಿ ಮದುವೆಗೆಂದು ಬಂದಿದ್ದ ಪರ ಊರಿನ ಮಹಿಳೆ ತನ್ನ ಊರಿಗೆ ಹಿಂದಿರುಗುವಾಗ ಲಿಂಗಾಯತರ ಬೀದಿಯನ್ನು ದಾಟಿ ಹೋಗಬೇಕಾಗಿತ್ತು. ಬಾಯಾರಿಕೆಯೆನಿಸಿ ಕಣ್ಣಿಗೆ ಕಂಡ ನೀರಿನ ತೊಂಬೆಯ ನಲ್ಲಿಯನ್ನು ತಿರುಗಿಸಿ ನೀರು ಕುಡಿದಳು. ಅದನ್ನು ನೋಡಿದ ಮೇಲ್ಜಾತಿ ಜನ ತೊಂಬೆ ಮೈಲಿಗೆಯಾಯಿತೆಂದು ಬೊಬ್ಬೆ ಹೊಡೆದರು, ಇಡೀ ತೊಂಬೆಯ ನೀರನ್ನು ಖಾಲಿ ಮಾಡಿಸಿದರು. ಗೋಮೂತ್ರದಿಂದ ಶುದ್ಧೀಕರಣ ಶಾಸ್ತ್ರ ಮಾಡಿದರು.

ದೇಶ ಮುಂದುವರಿಯುತ್ತಿದೆ ಎಂದು ತುತ್ತೂರಿ ಊದುತ್ತಿರುವವರಿಗೆ ಈ ಅನಾಗರಿಕ ನಡೆ, ಸಾಂಸ್ಕೃತಿಕ ಹಿನ್ನಡೆ ಅಂದನಿಸುವುದೇ ಇಲ್ಲ. ಇದು ಲಕ್ಷ ಪ್ರಕರಣಗಳಲ್ಲಿ ಒಂದಾಗಿ ಸರಕಾರದ ಕಡತ ಸೇರುತ್ತದೆ. ಚೋದ್ಯದ ವಿಷಯವೇನೆಂದರೆ ಆ ಊರು ಒಬ್ಬ ಸಂಸದರಾಗಿದ್ದ ಸಂಭಾವಿತ ರಾಜಕಾರಣಿಯನ್ನು ದೇಶಕ್ಕೆ ಕೊಟ್ಟಿದೆ. ಅಲ್ಲಿನ ಮೇಲ್ಜಾತಿ ಜನ ಆ ಸಂಸದರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು?

ಜಾತಿಪದ್ಧತಿ ಈಗ ಹೆಚ್ಚು ಮಾನಸಿಕವಾಗುತ್ತಿದೆ ಎಂದು ಹೇಳಿದೆ. ಬಾಬಾಸಾಹೇಬ ಅಂಬೇಡ್ಕರ್ ಯೆಹೂದಿ ಮತ್ತು ಕ್ರೈಸ್ತ ಧರ್ಮೀಯರ ಸಂಬಂಧ ಕುರಿತು ಹೇಳುವಾಗ ಕುತೂಹಲದಾಯಕವಾದ ಒಂದು ಉದಾಹರಣೆಯನ್ನು ಕೊಡುತ್ತಾರೆ. ಅವರ ಸ್ನೇಹಿತ ಜಾನ್ಸ್ಮಿತ್ ನ ಬಳಿ ಒಂದು ಐರ್ಲ್ಯಾಂಡ್ ಮೂಲದ ಮಿಶ್ರತಳಿ ನಾಯಿ ಇರುತ್ತದೆ. ಅದರ ಹೆಸರು ಪ್ಯಾಡಿ. ಪ್ಯಾಡಿಗೆ ಸ್ಕಾಟ್ಲ್ಯಾಂಡ್ ಮೂಲದ ಬಿರುಗೂದಲ ನಾಯಿಗಳನ್ನು ಕಂಡರೆ ಆಗುವುದಿಲ್ಲ. ಒಂದು ನಾಯಿ ಹತ್ತಿರ ಬಂದರೂ ಸುತ್ತಮುತ್ತಲ ಪ್ರದೇಶ ಗಡಚಿಕ್ಕುವಂತೆ ತನ್ನ ಅಟ್ಟಹಾಸ ಮತ್ತು ತಿರಸ್ಕಾರವನ್ನು ವ್ಯಕ್ತಪಡಿಸುತ್ತದೆ. ಜಾನ್ಸ್ಮಿತ್ಗೆ ಈ ಅಭ್ಯಾಸವು ಇಷ್ಟವಾಗುವುದಿಲ್ಲ. ಅದನ್ನು ತಡೆಗಟ್ಟಲು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಾನೆ.

ಪ್ಯಾಡಿಯ ಅವಕೃಪೆಗೆ ಒಳಗಾದ ಸ್ಕಾಟ್ಲ್ಯಾಂಡ್ ಮೂಲದ ಬಿರುಗೂದಲ ನಾಯಿಗಳು ಎಂದೂ ತಾವಾಗೇ ಮೊದಲು ಶಬ್ದ ಮಾಡುವಂತಹವಲ್ಲ. ತಮ್ಮ ಪಾಡಿಗೆ ಶಾಂತವಾಗಿ ಸಂಚರಿಸುವ ನೆರೆಹೊರೆಯವು ಅವು. ಈ ಉದಾಹರಣೆ ಸವರ್ಣೀಯರು ಮತ್ತು ಅಸ್ಪಶ್ಯರಿಗೆ ಅನ್ವಯವಾಗುತ್ತದೆ ಅಲ್ಲವೆ? ಪಾಪ, ಅವರು ಅಸ್ತಿತ್ವದಲ್ಲಿರುವುದೇ ಅವರ ಮೇಲೆರಗುವುದಕ್ಕೆ ಸಮಂಜಸವಾದ ಕಾರಣವಾಗುತ್ತದೆಯೆ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ! ರಾಜಸ್ಥಾನದ ಶಾಲೆಯೊಂದರಲ್ಲಿ 9 ವರ್ಷದ ದಲಿತ ಬಾಲಕ ಮುಖ್ಯಗುರುಗಳ ನೀರಿನ ಮಡಕೆಯಿಂದ ನೀರು ಕುಡಿದ ಎಂಬ ಕಾರಣಕ್ಕೆ ಆ ಬಾಲಕನನ್ನು ಮಾರಣಾಂತಿಕವಾಗಿ ಥಳಿಸಿದರು.

ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯರು ಊಳಿಗಮಾನ್ಯ ಜಾತಿಗಳ ಪುಂಡ ಯುವಕರ ದಬ್ಬಾಳಿಕೆ, ದೌರ್ಜನ್ಯಕ್ಕಾಗಿಯೆ ಹುಟ್ಟಿದವರು ಎಂಬ ಅಲಿಖಿತ ನಿಯಮ ಜಾರಿ ಇದ್ದಂತೆ ತೋರುತ್ತದೆ. ಇತ್ತೀಚೆಗೆ ಬೆಳಕಿಗೆ ಬಂದ ಲಖಿಂಪುರ ಘಟನೆಯಂತೆ ಅಪಹರಣಗೈದು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಹೆಣಗಳನ್ನು ಮರಕ್ಕೆ ನೇತು ಹಾಕಿ ಪರಾರಿಯಾಗುವುದು ತೀರಾ ಸಾಮಾನ್ಯ ಎನ್ನುವಂತೆ ಘಟನೆಗಳು ವರದಿಯಾಗುತ್ತಲೇ ಇರುತ್ತವೆ.

ಇಷ್ಟೆಲ್ಲಾ ಅನ್ಯಾಯ, ಅನಾಚಾರಗಳು ತಮ್ಮ ವಿರುದ್ಧ ನಡೆಯುತ್ತಿದ್ದಾಗ್ಯೂ ದಲಿತರು ಪ್ರತಿರೋಧ ತೋರುವುದಿಲ್ಲವಲ್ಲ ಯಾಕೆ? ಎಂಬ ಪ್ರಶ್ನೆ ನನ್ನನ್ನು ಆಗಾಗ ಕಾಡುತ್ತಿರುತ್ತದೆ. ಜನಸಂಖ್ಯೆಯ ಸುಮಾರು ಕಾಲುಭಾಗದಷ್ಟಿರುವ ಜನರಿಗೆ ಅಪಮಾನವನ್ನು ಸಹಿಸಿಕೊಂಡು ಬಾಳುವ ತಾಳ್ಮೆ ಇದೆಯೆ ಅಥವಾ ಭಯವೆ? ಇದು ಶತಮಾನಗಳ ಕಾಲ ದಾಸ್ಯದಲ್ಲಿ ರಕ್ತಗತವಾಗಿರುವ ಗುಲಾಮಗಿರಿಯೆ? ಅಲ್ಲ, ಇದಕ್ಕೆ ಕಾರಣ ಮೇಲೆ ಹೇಳಿದ ಹಾಗೆ ದಲಿತರು ರಾಜಕೀಯವಾಗಿ ನಿಷ್ಕ್ರಿಯರಾಗಿರುವುದು.

ಪೂನಾ ಒಪ್ಪಂದದ ಮೂಲಕ ಅವರು ದಲಿತರಿಗೆ ನೀಡಿರುವುದು ಗುಲಾಮಿ ಪ್ರಾತಿನಿಧ್ಯ. ಅಂಬೇಡ್ಕರ್ ಮಂಡಿಸಿದ ಪ್ರತ್ಯೇಕ ಚುನಾಯಕಗಳನ್ನು ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ವಿರೋಧಿಸಿದರು; ನಂತರ ನಡೆದುದೇ ಮೀಸಲಾತಿ ಸಂಧಾನವಾದ ಪೂನಾ ಒಪ್ಪಂದ. ಉತ್ತರಪ್ರದೇಶದ ಹಾಥರಸ್ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಬರ್ಬರ ಅತ್ಯಾಚಾರದ ಘಟನೋತ್ತರ ಕಾನೂನು ಬಾಹಿರ ನಡಾವಳಿಯನ್ನು ಒಮ್ಮೆ ಗಮನಿಸಿದರೆ ಆಡಳಿತದ ಮೇಲಿನ ಬಲಾಢ್ಯ ಜಾತಿಗಳ ಹಿಡಿತ ಹೇಗಿದೆಯೆಂದು ತಿಳಿಯುತ್ತದೆ. ಇಂತಹ ಅಸಂಖ್ಯಾತ ಘಟನೆಗಳು ನಡೆಯುತ್ತಲೇ ಇದ್ದರೂ ಒಬ್ಬನೇ ಒಬ್ಬ ದಲಿತ ಶಾಸಕ ಅಥವಾ ಸಂಸದ ಅವುಗಳನ್ನು ಅಮಾನವೀಯ ಎಂದು ಖಂಡಿಸಿದ, ಧ್ವನಿ ಎತ್ತಿದ ಉದಾಹರಣೆ ಇಲ್ಲ. ಆದ್ದರಿಂದಲೇ ರಾಜಕೀಯ ಮೀಸಲಾತಿಯನ್ನು ಗುಲಾಮಿ ಪ್ರಾತಿನಿಧ್ಯ ಎಂದು ಕರೆಯಲು ನಾನು ಹಿಂಜರಿಯಲಾರೆ.

ಜಾತಿ ಎಂದರೆ ಒಡೆಯುವುದು,

ವಿಭಜಿಸುವುದು, ಬೋಗೀಕರಣಗೊಳಿಸುವುದು

ಅನ್ಯಾಯಗಳ ವಿರುದ್ಧ ಪ್ರತಿರೋಧ ಕಾಣಿಸಿಕೊಳ್ಳದಿರುವುದಕ್ಕೆ ಜಾತಿಯೇ ಕಾರಣ ಎಂಬುದು ಸುಸ್ಪಷ್ಟ. ಈಗ ದಲಿತರು ಎಂದು ಕರೆದುಕೊಳ್ಳುವ ಅನುಸೂಚಿತ ಜಾತಿಗಳಲ್ಲಿ 101 ಜಾತಿಗಳಿವೆ. ಅವೆಲ್ಲವೂ ಒಂದೊಂದು ದ್ವೀಪಗಳು. ಒಂದು ಸಾಮುದಾಯಿಕ ಸಂಸರ್ಗ ಅಷ್ಟೂ ಜಾತಿಗಳ ಮಧ್ಯೆ ಏರ್ಪಡುವುದೇ ಇಲ್ಲ. ಪ್ರತಿಯೊಂದು ಜಾತಿಯೂ ತನ್ನದೇ ಆದ ಅಸ್ಮಿತೆಯನ್ನು, ಸಂಸ್ಕೃತಿಯನ್ನು ತಳಸಂಸ್ಕೃತಿ ಎಂದು ಬೀಗಲು ನಾಚಿಕೆ ಪಟ್ಟುಕೊಳ್ಳುವದಿಲ್ಲ. ಎಂದರೆ ಕ್ಷುದ್ರ ದೇವತೆಗಳ ಆರಾಧನೆ, ಕೋಣನ ಬಲಿ, ಮದ್ಯ ಮಾಂಸಗಳ ಸೇವನೆ ಇತ್ಯಾದಿ ಬಿಂಬಿಸಿಕೊಳ್ಳಲು ಮತ್ತು ಅದು ತಮ್ಮವರೊಳಗೇ ಶ್ರೇಷ್ಠವಾದದ್ದು ಎಂದು ಬೀಗಲು ನಾಚಿಕೆಪಟ್ಟುಕೊಳ್ಳುವುದಿಲ್ಲ. ಜಾತಿ ಎಂದರೆ ಒಡೆಯುವುದು, ವಿಭಜಿಸುವುದು. ಆದಕಾರಣ ಒಂದುಗೂಡದಿರುವಿಕೆ ಒಂದು ನೇತ್ಯಾತ್ಮಕ ಅಂಶವಾಗಿದ್ದರೂ ಅದು ಜಾತಿ ಕಟ್ಟಳೆಯೇ ಆಗಿದೆ.

ಜಾತಿಪದ್ಧತಿಯಲ್ಲಿ ಗುಣಾತ್ಮಕ ಅಂಶಗಳನ್ನು ಹುಡುಕಲು ಸಾಧ್ಯವಿಲ್ಲ ಎಂಬುದು ಬೇರೆ ಮಾತು. ಜಾತಿ ಎಂದರೆ ರಕ್ತಸಂಬಂಧಿ ಎಳೆಯಿಂದ ಹುಟ್ಟಿನಿಂದಲೇ ಬಂಧಿಸಿದ ಮತ್ತು ವಿವಾಹದಲ್ಲಿ ಮುಂದುವರಿಯುವ [Endogomous) ಒಂದು ಸಣ್ಣ ಗುಂಪು. ವರ್ಣ/ ಜಾತಿಗಳು ಪಿರಮಿಡ್ ಆಕಾರದಲ್ಲಿ ರೂಪ ತಾಳಿದ್ದರೂ ಮೇಲಿನ ಅರ್ಧ ಭಾಗದಲ್ಲಿರುವ ಸಣ್ಣ ಗುಂಪುಗಳೇ ಬಲಾಢ್ಯ ಜಾತಿಗಳು. ಅವರು ವರ್ಣವ್ಯವಸ್ಥೆಯ ಮೇಲಿನ ಮೂರು ಹಂತಗಳಲ್ಲಿರುವವರು. ಜ್ಞಾನ ಮತ್ತು ಸಂಪತ್ತಿನ ವಾರಸುದಾರರು.

ಕೆಳಗಿನ ಅರ್ಧ ಭಾಗದ ದೊಡ್ಡ ಗುಂಪುಗಳೂ ಶಕ್ತಿಹೀನರೆ. ನಾಲ್ಕನೆಯದಾದ ಶೂದ್ರ ವರ್ಣದವರಲ್ಲಿ ಕೆಲವು ಜಮೀನ್ದಾರಿ ಒಕ್ಕಲು ಜಾತಿಗಳು ಭೂಮಿಯ ಒಡೆತನದ ಕಾರಣಕ್ಕಾಗಿ ಬಲಾಢ್ಯರಾಗಿದ್ದಾರೆ. ಆದರೆ ಅವರ್ಣೀಯರೆನಿಸಿಕೊಂಡ ದಲಿತ ಜಾತಿಗಳು ಐತಿಹಾಸಿಕವಾಗಿ ಅಕ್ಷರ, ಅಧಿಕಾರ, ಭೂಮಿ ಒಡೆತನದಿಂದ ವಂಚಿತ ಸಮುದಾಯಗಳು. ದುರದೃಷ್ಟವಶಾತ್ ಅಸ್ಪಶ್ಯ ಜಾತಿಗಳೂ ವೈದಿಕ ಪ್ರಣೀತ ಶ್ರೇಣೀಕೃತ ಅಸಮಾನತೆಯುಳ್ಳ ಜಾತಿಪದ್ಧತಿಯನ್ನೇ ಅನುಸರಿಸುತ್ತಿವೆ. ತಮ್ಮತಮ್ಮಲ್ಲಿಯೇ ಮೇಲು ಕೀಳುಗಳನ್ನು ಆರೋಪಿಸಿಕೊಂಡು ದೂರ ಉಳಿದಿವೆ. ಜಾತಿಗಳು ಎಂಡಾಗಮಿಕ್ ಆದುದರಿಂದ ಸಹಜವಾಗಿಯೆ ಬೋಗೀಕರಣಗೊಳ್ಳುತ್ತವೆ [Compartmentalising). ಜಾತಿಗಳ ಮಧ್ಯೆ ಅಟ್ಟುಣ್ಣುವುದು, ಮದುವೆಯಲ್ಲಿ ಕೊಡುಕೊಳ್ಳುವುದು ಇಲ್ಲದಿರುವಾಗ ಒಂದು ಗುಂಪು ಇನ್ನೊಂದು ಗುಂಪಿಗೆ ಅನ್ಯರಾಗಿಯೇ ಉಳಿಯುತ್ತಾರೆ. ವರ್ಣಾಶ್ರಮವನ್ನು ಸೃಷ್ಟಿಸಿದವನು ಎಂಥ ಚಾಣಾಕ್ಷನಿರಬೇಕು! ವರ್ಣಗಳು ಜಾತಿಗಳಾಗಿ ಸಾವಿರ ಹೋಳುಗಳಾದರೂ ಅವು ಬೋಗಿಗಳಾಗಿಯೆ ಅಸ್ತಿತ್ವ ತಾಳಬೇಕು!! ವರ್ಣಗಳ ಮಧ್ಯೆ ಹಿಂದೆ ಅಂತರ್ಚಲನೆ ಇತ್ತು ಎನ್ನುವುದು ನೆಪಮಾತ್ರ. ವಿಶ್ವಾಮಿತ್ರನಂತಹ ಒಂದೆರಡು ಉದಾಹರಣೆಗಳನ್ನು ಬಿಟ್ಟರೆ ಮತ್ತೆಲ್ಲೂ ಕಾಣಬರುವುದಿಲ್ಲ. ಅದರಲ್ಲೂ ಅದು ದ್ವಿಜ ವರ್ಣಗಳ ಮಧ್ಯೆಯೆ ನಡೆದಿರಬೇಕು. ಜಾತಿಯ ಮೂಲ ಲಕ್ಷಣಗಳೇನು ಎಂದರೆ; ಮೊದಲನೆಯದು ಸ್ವಜಾತಿ ಮೋಹ, ಎರಡನೆಯದು ಅನ್ಯಜಾತಿಗಳ ಮೇಲೆ ಅನುಮಾನ, ಈರ್ಷ್ಯೆ. ಮೇಲಿನವನಿಗೆ ಕೆಳಗಿನವನ ಮೇಲೆ ದೂಷಣೆ, ಅಸಹನೆ, ಪ್ರತಿಷ್ಠೆ. ಕೆಳಗಿನವನಿಗೆ ಮೇಲಿನವನ ಮೇಲೆ ಅಸೂಯೆ, ದ್ವೇಷ, ವಂಚಕರೆಂಬ ಭಾವನೆ. ಈ ಭಾವನೆಗಳು ದಲಿತ ಜಾತಿಗಳಲ್ಲೂ ಬೇರೂರಿರುವುದರಿಂದ ಒಂದುಗೂಡುವುದು ಕ್ಲಿಷ್ಟಕರವಾಗಿದೆ.

ಧರ್ಮಾಂತರದ ಅನಿವಾರ್ಯತೆ

ಹಾಗಾದರೆ ಇವರು ಒಂದುಗೂಡುವುದು ಸಾಧ್ಯವಿಲ್ಲವೆ? ಇದೆ. ಅದಕ್ಕೆ ಅಂಬೇಡ್ಕರ್ ಸ್ಪಷ್ಟ ಉತ್ತರ ಒದಗಿಸಿದ್ದಾರೆ. ಅದುವೇ ಧರ್ಮಾಂತರ. ಭಾರತೀಯವೇ ಆದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದು. ಅದರಿಂದ ಎರಡು ಅನುಕೂಲಗಳಿವೆ. ಒಂದು, ನೆಲಮೂಲ ಧರ್ಮವಾದ್ದರಿಂದ ಹಿಂದೂ ಸವರ್ಣೀಯರ ದ್ವೇಷ, ಅಸೂಯೆಗಳಿಂದ ಪಾರ್ಶ್ವಿಕವಾಗಿಯಾದರೂ ತಪ್ಪಿಸಿಕೊಳ್ಳಬಹುದು. ಎರಡು, ಅಸ್ಪಶ್ಯತೆಯ ಕಳಂಕವನ್ನು ನಿವಾರಿಸಿಕೊಳ್ಳಬಹುದು. ಅಸ್ಪಶ್ಯತೆಯ ಉಗಮಸ್ಥಾನವೇ ಹಿಂದೂ ದೇವಸ್ಥಾನಗಳು. ಒಂದು ಎಳೆಗೂಸು ಸಹ ದೇಗುಲದಲ್ಲಿ ಲಕ್ಷ್ಮಣ ರೇಖೆಯನ್ನು ದಾಟಲಾಗುವುದಿಲ್ಲ. ದಾಟಿದರೆ ಅಲ್ಲೋಲ ಕಲ್ಲೋಲವಾಗುತ್ತದೆ.

ಧಾರ್ಮಿಕ ಸ್ಥಳಗಳಲ್ಲಿ ಜಾತಿ ಮೀರುವುದೆಂದರೆ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆಯಲ್ಲವೆ? ಆದರೆ ಪ್ರತಿಯೊಬ್ಬರೂ ಧರ್ಮಾಂತರಗೊಳ್ಳುವಾಗ ಮೂಲ ಜಾತಿಯ ಕವಚವನ್ನು ಕಳಚಿಟ್ಟು ಹೊರಬರಬೇಕಾಗುತ್ತದೆ. ಬುದ್ಧಗುರು ಹೇಳಿರುವಂತೆ ನದಿಗಳು ಒಂದು ಪ್ರಾಂತದಲ್ಲಿ ಹರಿಯುವಾಗ ಅವುಗಳಿಗೆ ಹೆಸರಿರುತ್ತದೆ. ಸಮುದ್ರವನ್ನು ಸೇರುವಾಗ ತಮ್ಮ ಹೆಸರು ಮತ್ತು ಅಸ್ಮಿತೆಯನ್ನು ಕಳೆದುಕೊಳ್ಳುತ್ತವೆ. ಅದೊಂದು ವಿಶಾಲವಾದ ಸಾಗರ. ಬೌದ್ಧಧರ್ಮವೂ ಈಗ ತನ್ನ ಗುಣಲಕ್ಷಣಗಳಿಂದಲೇ ವಿಶಾಲವಾಗಿ ಬೆಳೆದು ಜಾಗತಿಕ ಧರ್ಮವಾಗಿದೆ.

ಹಿಂದೆ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳಿಗೆ ದಲಿತರು ಮತಾಂತರಗೊಂಡಿದ್ದಾರೆ. ಅವರು ಅಸ್ಪಶ್ಯತೆಯಿಂದ ಮುಕ್ತರಾಗಿದ್ದಾರೆ. ಕೆಲವು ಅಪವಾದಗಳು ಇರಬಹುದು, ಆದರೆ ಅಲ್ಲಿಯೂ ಅಸ್ಪಶ್ಯತೆ ಇದೆ ಎಂಬುದು ಪೂರ್ಣ ಸತ್ಯವಲ್ಲ.

ಬಾಬಾಸಾಹೇಬರು ಬೌದ್ಧಧರ್ಮವನ್ನೆ ಯಾಕೆ ಒಪ್ಪಿಕೊಂಡರು ಎನ್ನುವುದಕ್ಕೆ ಅಪಾರ ಹಿನ್ನೆಲೆಯಿದೆ. ಅವರ ಒಂದು ಪ್ರಖ್ಯಾತ ಹೇಳಿಕೆ ಜನಜನಿತವಾಗಿದೆ. ‘ನಾನು ಹಿಂದೂವಾಗಿ ಹುಟ್ಟಿದೆ, ಆದರೆ ಹಿಂದೂವಾಗಿ ಸಾಯಲಾರೆ’. ಇದು 1935 ರಲ್ಲಿ ಯೆವೋಲಾದಲ್ಲಿ ನೀಡಿದ ಹೇಳಿಕೆ. ಅವರಿಗಾಗಿದ್ದ ಜಾತಿ ತಾರತಮ್ಯ ಮತ್ತು ಅಸ್ಪಶ್ಯತೆಯ ಗಾಯದ ಆಳವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

1956, ಅಕ್ಟೋಬರ್ 14 ರಂದು ಬೌದ್ಧಧರ್ಮವನ್ನು ಒಪ್ಪಿ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ದೀಕ್ಷೆ ಪಡೆದುಕೊಂಡರು. ಈ ಮಧ್ಯೆ ತಮ್ಮ ರಾಜಕೀಯ ಮತ್ತು ಅಧ್ಯಯನದ ಒತ್ತಡಗಳ ನಡುವೆಯೂ ಅವರು ಎಲ್ಲ ಧರ್ಮಗಳನ್ನು ತಳಸ್ಪರ್ಶಿಯಾಗಿ ಅಭ್ಯಾಸಮಾಡಿದರು. ಅತ್ಯಂತ ವೈಚಾರಿಕವಾದ, ವೈಜ್ಞಾನಿಕವಾದ ಧರ್ಮವನ್ನು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಗಳಿರುವ ಧರ್ಮವನ್ನು ನಮಗೆ ಕೊಟ್ಟರು. ಹಿಂದೂ ಧರ್ಮದಲ್ಲಿ ಇವೆಲ್ಲವೂ ಗೈರುಹಾಜರಾಗಿವೆ. ಅವರ ಮತಾಂತರದ ಭಾಷಣದಲ್ಲಿ ಒಂದು ಮಾತಿದೆ. ‘ಇಂದು ನನಗೆ ಮಹದಾನಂದವಾಗಿದೆ, ನಾನು ಉಚ್ಚನಾಗಿದ್ದೇನೆ.

ನನಗೆ ನರಕದಿಂದ ಬಿಡುಗಡೆಯಾಗಿದೆ.’ ಮುಂದುವರಿದು ಹೇಳುತ್ತಾರೆ ‘ಹಿಂದೂ ಧರ್ಮದಲ್ಲಿ ಉಳಿದುಕೊಂಡರೆ ಯಾರೂ ಯಾವ ವಿಧದಲ್ಲೂ ಏಳಿಗೆಯಾಗುವುದಿಲ್ಲ’. ಹಿಂದೂ ಧರ್ಮದ ಅಂತಸ್ತುಗಳಿಂದಾಗಿ ಉನ್ನತ ವರ್ಣಗಳಿಗೆ ಮತ್ತು ಜಾತಿಗಳಿಗೆ ಮಾತ್ರ ಪ್ರಯೋಜನವಾಗಿದೆಯೆಂಬುದು ವಾಸ್ತವ. ಆದರೆ ಇತರರಿಗೆ ಏನು ಪ್ರಯೋಜನ?

 ಡಿಸೆಂಬರ್ 31, 1937 ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಮಾತಂಗ ಸಮಾವೇಶದಲ್ಲಿ ಬಾಬಾಸಾಹೇಬರು ದಲಿತ ಜಾತಿಗಳಿಗೆ ನೀಡಿದ ಎಚ್ಚರಿಕೆ ಹೀಗಿದೆ: ಮೊದಲಿಗೆ ಮಹಾರ್, ಚಮ್ಮಾರ, ಮಾಂಗ್, ಭಂಗಿ ಇತ್ಯಾದಿ ವಿವಿದ ಅಸ್ಪಶ್ಯ ಜಾತಿಗಳಲ್ಲಿ ಏಕತೆ ಇಲ್ಲದಿರುವುದು ದುರದೃಷ್ಟ ಸಂಗತಿಯಾಗಿದೆ. ಈ ಅನೈತಿಕತೆಗೆ ನೈಜ ಕಾರಣ ಹಿಂದೂ ಸಮಾಜದಲ್ಲಿರುವ ಜಾತಿಭೇದವೇ ಆಗಿದೆ. ಮಹಾರ್, ಮಾಂಗ್, ಚಮ್ಮಾರ ಅಥವಾ ಭಂಗಿಗಳು ಈ ಜಾತಿ ತಾರತಮ್ಯಗಳಿಗೆ ಜವಾಬ್ದಾರರಲ್ಲ. ಜಾತಿ ತಾರತಮ್ಯವೆಂಬುದು ಮೇಲಿನಿಂದ ಹರಿದುಬಂದ ಗಟಾರದ ಗಂಗೆಯಾಗಿದೆ.

ಇದು ನಮ್ಮಡೆಗೆ ಹರಿದುಬಂದಿರುವ ನರಕವಾಗಿದೆ. ಅವರು ಅಸ್ಪಶ್ಯರ ಅಜ್ಞಾನದ ಲಾಭ ಪಡೆದುಕೊಂಡು ಅಸ್ಪಶ್ಯರೊಳಗಿನ ಭಿನ್ನತೆಗಳನ್ನು ಬಲಿಷ್ಠಗೊಳಿಸಲು ಶ್ರಮಿಸುತ್ತಾರೆ. ನಮ್ಮೊಳಗಿನ ಜಾತಿ ಭೇದವನ್ನು ತೊಡೆದುಹಾಕಬೇಕಾದದ್ದು ಹಾಗೂ ಜಾತಿ ತಾರತಮ್ಯ ಸಿದ್ಧಾಂತವು ನಮ್ಮೊಳಗೆ ನುಸುಳದಂತೆ ತಡೆಗಟ್ಟಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದನ್ನು ಸಾಧಿಸದೇ ನಾವು ಏಳಿಗೆ ಹೊಂದುವುದು ಅಸಾಧ್ಯ.

ದಲಿತರು ಮತ್ತು ಹಿಂದುಳಿದ ಜಾತಿಗಳು ಮುಖ್ಯವಾಗಿ ಎರಡು ವಿಷಯಗಳನ್ನು ಅರಿತುಕೊಳ್ಳ

ಬೇಕು. ಏನೆಂದರೆ ಒಂದು, ಅಂಬೇಡ್ಕರ್ ನಮಗೆ ಸಿಕ್ಕ ಬಹುದೊಡ್ಡ ಆಸ್ತಿ. ಜಗತ್ತಿನ ಜ್ಞಾನಿಗಳಲ್ಲಿ ಪ್ರಮುಖರು. ಅಂಥ ದಾರ್ಶನಿಕ ವ್ಯಕ್ತಿಯ ಮಾರ್ಗದರ್ಶನ ಅಮೂಲ್ಯವಾದದ್ದು. ಎರಡು, ಬೌದ್ಧಧರ್ಮ ವಿಶಾಲ ಮಾನವೀಯ ಅನುಕಂಪೆಯಿಂದ ಜಗತ್ತಿನಾದ್ಯಂತ ಪಸರಿಸಿ ವಿಶ್ವಧರ್ಮವೆನಿಸಿಕೊಂಡಿದೆ. ಇದು ನಮಗೆ ಅಂಬೇಡ್ಕರ್ ಮೂಲಕ ಅನಾಯಾಸ ಸಿಕ್ಕ ವರವಾಗಿದೆ. ಈ ಎರಡು ಅಂಶಗಳನ್ನು ಮನನ ಮಾಡಿಕೊಂಡರೆ ಈ ಜಾತಿಧರ್ಮದ ಅವಮಾನದಿಂದ, ಅತ್ಯಾಚಾರದಿಂದ, ಅವಹೇಳನದಿಂದ ಹೊರಬರಬಹುದು ಮತ್ತು ಸ್ವಾಭಿಮಾನದ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು.

ಜಾತಿಗಣತಿ ಯಾಕಿಲ್ಲ?

ಜಾತಿಗಣತಿ ಕುರಿತಾಗಿ ಇಲ್ಲಿ ಉಲ್ಲೇಖಿಸಲೇಬೇಕು. ಭಾರತದಲ್ಲಿ ಜಾತಿಗಣತಿ ಕಡೆಯದಾಗಿ ನಡೆದದ್ದು 1931ರಲ್ಲಿ. ಆ ನಂತರ ಯಾಕೆ ನಿಂತುಹೋಯಿತು ಎನ್ನುವುದು ನಿಗೂಢ. ಹಲವು ವರ್ಷಗಳಿಂದ ಕೆಲವು ರಾಜ್ಯಗಳು ಜಾತಿಗಣತಿಗಾಗಿ ಒತ್ತಾಯಿಸುತ್ತಿವೆ. ಆದರೆ ಆಳುವ

ವರ್ಗಕ್ಕೆ ಅದರ ಬಗ್ಗೆ ತಾತ್ಸಾರವಿದೆ. ಕರ್ನಾಟಕದಲ್ಲಿ ಜಾತಿಗಣತಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನಡೆದಿದೆ. ಆದರೆ ಆ ವರದಿಯನ್ನು ಮಂಡಿಸಲು ಅವರಿಗೆ ಧೈರ್ಯ ವಾಗಲಿಲ್ಲ. ಯಾವುದೇ ಪಕ್ಷದ ಸರಕಾರ ಬರಲಿ, ಅದನ್ನು ಬಹಿರಂಗ ಮಾಡುವುದಿಲ್ಲ. ಕಾರಣ, ಸತ್ಯ ಕಣ್ಣಿಗೆ ರಾಚುವಂತೆ ಹೊರಬೀಳುತ್ತದೆ. ಮಾನವ ಅಭಿವೃದ್ಧಿಯ ಸೂಚ್ಯಂಕಗಳಲ್ಲಿ ಬಡತನ, ಹಸಿವು ಯಾವುದನ್ನೇ ತೆಗೆದುಕೊಂಡರೂ ಅತ್ಯಂತ ಕೆಳಗಿರುವವರು ದಲಿತರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮರೇ ಆಗಿರುತ್ತಾರೆ. ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಜಾತಿವಾರು ಸಮೀಕ್ಷೆಯ ವರದಿ ಸೋರಿಕೆಯಾಗಿದೆಯೆಂದು ಇತ್ತೀಚಿನ ಸುದ್ದಿ.

ನ್ಯ