ಕೈತೋಟದ ಕಾಟ

Update: 2023-01-04 04:23 GMT

ಜನಪ್ರಿಯ ಲೇಖಕಿ ಸುಮಿತ್ರಾ ಎಲ್.ಸಿ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ.. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರಾ ಅವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ನೀಲಗಂಗಾ ದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸುಮಿತ್ರಾ ಎಲ್.ಸಿ.

ಇದೇನು ಕೈತೋಟದ ಕಾಟ ಅಂತೀರಾ, ಮನೆ ಎದುರಿಗೆ ಸುತ್ತಮುತ್ತ ಗಿಡ ಗಳಿದ್ದರೆ ಸಂತೋಷ ನಿಜ. ಬೆಳಗ್ಗೆ ಎದ್ದಾಗ ಒಮ್ಮೆ ಹೊಸ ಹೂಗಳನ್ನು ನೋಡಿದಾಗ ಆಗುವ ಸಂತೋಷಕ್ಕೆ ಯಾವುದು ಸಮವಲ್ಲ. ಕೆಲವು ಗಿಡಗಳಲ್ಲಿ ಹೊಸ ಮೊಗ್ಗು ಎಲೆಗಳು ಮೂಡಿರುತ್ತವೆ. ಅವುಗಳನ್ನು ನೋಡುವುದು ಬಗ್ಗಿರುವ ರೆಂಬೆ ನೆಟ್ಟಗೆ ಮಾಡಿ ಊರೆ ಕೋಲು ನೆಡುವುದು, ಹೀಗೆ ಖುಷಿಯ ಕೆಲಸಗಳು. ನನಗಂತೂ ಗಿಡಗಳು ಇಷ್ಟ ಅಂತ ಮನೆಯ ಸುತ್ತ ಇರುವ ಜಾಗದ ನಾಲ್ಕರಷ್ಟು ಸ್ಥಳದಲ್ಲಿ ನೆಡಬೇಕಾದ ಗಿಡಗಳನ್ನು ಇರುವಷ್ಟೇ ಜಾಗದಲ್ಲಿ ನೆಟ್ಟು ಕಾಡು ಕಾಡಾಗಿಸಿದ್ದೇನೆ.

ಸಹಜವಾಗಿಯೇ ಪೇರಳೆ ಹಣ್ಣಿನ ಗಿಡ ನೋಡಿದಾಗ ಫಲಾನುಭವಿಗಳ ಸಂಖ್ಯೆ ಜಾಸ್ತಿ. ಅಕ್ಕ ಪಕ್ಕದ ಮನೆಯವರು, ಎದುರು ಮನೆಯವರು ಎಲ್ಲರೂ ಮಧ್ಯಾಹ್ನದ ಸವಿ ನಿದ್ದೆಯಲ್ಲಿದ್ದಾಗ ನಮ್ಮ ಮನೆಯ ಹಿಂಭಾಗದಿಂದಲೂ ಅಥವಾ ಇನ್ನೆಲ್ಲಿಂದಲೋ ದಡ್ ಬಡ್ ಶಬ್ದ ಕೇಳಿಸಿದರೆ ನಮ್ಮ ಪೂರ್ವಜರು ಎಲ್ಲರ ಮನೆಯ ಕೈತೋಟವನ್ನು ಸರ್ವೇ ಮಾಡಲು ಬಂದಿದ್ದಾರೆ ಎಂದರ್ಥ.

ನಾನು ಹೊರಗೆ ಬಂದು ಅಂಗಳದಲ್ಲಿ ಮೂಲೆಯಲ್ಲಿಟ್ಟ ಒಂದು ಕೋಲು ಒಂದೆರಡು ಕಲ್ಲು ಇಟ್ಟಿಗೆ ಚೂರು ಕೈಲಿ ಹಿಡಿದು ಚಂದ್ರ ಪೆರ್ಲೆ ಮರದ ಮೇಲೆ ಕುಳಿತು ಪೇರಳೆ ಹಣ್ಣು ತಿನ್ನುತ್ತಿದ್ದ ಮಂಗಕ್ಕೆ ಗುರಿಯಿಟ್ಟು ಹೊಡೆಯುವಂತೆ ನಟಿಸಿದರೆ ಅದು ತನ್ನದೇ ಭಾಷೆಯಲ್ಲಿ ಟರ್ ಪುರ್ ಅನ್ನುತ್ತಾ ಜೂನಿಯರ್ ಕೋತಿಗಳಿಗೆ ಏನೂ ಹೆದರಬೇಡಿ ಇವರು ಹೊಡೆದ ಕಲ್ಲು ನಮ್ಮ ಕಾಲಿಗೂ ತಾಗಲ್ಲ ಅಂತ ಕೈಯಲ್ಲಿದ್ದ ಕಾಯನ್ನು ಕಾಲಿನಲ್ಲಿ ಹಿಡಿದುಕೊಂಡು ಇನ್ನೊಂದು ಕಾಯಿ ಕಿತ್ತು ತಿನ್ನತೊಡಗಿತ್ತು..ಕೆಳಗಿದ್ದ ಮರಿ ಮಂಗಗಳು ಹೂ ಬಾಳೆ ಗಿಡದ ಕಾಂಡ ವನ್ನು ಸೀಳಿ ಒಳಗಿನ ತಿರುಳು ಮೇಯುತ್ತಿದ್ದವು. ಇನ್ನೆರಡು ಪಪ್ಪಾಯಿ ಎಲೆ ಕಿತ್ತು ತಿನ್ನುತ್ತಿದ್ದವು.

ಇನ್ನೊಂದು ಮಂಗ ಮುದಿ ಸಪೋಟ ಗಿಡಕ್ಕೆ ಜೋತು ಬಿದ್ದು ಒಂದೇ ಕೊಂಬೆಯ ನಾಲ್ಕಾರು ಕಾಯಿಗಳನ್ನು ಬೋಳಿಸುವುದರಲ್ಲಿ ಮಗ್ನ ವಾಗಿತ್ತು..ಈ ಮಂಗಗಳಷ್ಟು ಲಿಂಗ ತಾರತಮ್ಯವನ್ನು ಮಾಡುವ ಬೇರೆ ಪ್ರಾಣಿಗಳಿಲ್ಲ. ಇವಕ್ಕೆ ಬಣ್ಣದ ಬಟ್ಟೆ ಧರಿಸಿದ ಹೆಂಗಸರನ್ನು ಕಂಡರೆ ಭಯವಿಲ್ಲ.. ಬರೀ ಚೆಡ್ಡಿ ಬನಿಯನ್ ಧರಿಸಿದ ಗಂಡು ಪ್ರಾಣಿಗಳನ್ನು ಕಂಡರೆ ಓಡುತ್ತವೆ. ಮಹಡಿಯ ತಾರಸಿಯಿಂದ ಕೆಳಗೆ ಬೀಳುವ ನೀರಿನ ಪೈಪ್ ಹಿಡಿದು ಜೋಕಾಲಿ ಆಡಿ ಕಿತ್ತು ಹಾಕಿದ್ದು ನಮಗೆ ತಿಳಿಯದೆ ಮೊದಲ ಮಳೆಗೆ ಹಿಂಭಾಗದ ಮನೆ ಒಳಗೆ ಮಳೆ ಸುರಿದಿತ್ತು. ನಮ್ಮ ಸಹೋದ್ಯೋಗಿಯೊಬ್ಬರ ಮನೆಯಲ್ಲಿ ಇವು ಹೂ ಹಣ್ಣು ತಿನ್ನುವುದಲ್ಲದೆ ಓವರ್ ಹೆಡ್ ಟ್ಯಾಂಕ್ ಒಳಗೆ ಇಳಿದು ಸ್ನಾನ ಬೇರೆ ಮಾಡುತ್ತಿದ್ದವು. ಈ ಮಂಗಗಳ ಕಾಟ ತಡೆಯಲಾರದೆ ಒಂದು ಪೇರಳೆ ಗಿಡವನ್ನು ಕಡಿದು ಹಾಕಿ ಇನ್ನೊಂದನ್ನು ಟ್ರಿಮ್ ಮಾಡಬೇಕಾಯಿತು.

 ಇನ್ನೊಂದು ಬಿಸಿಲು ಕಾಲದಲ್ಲಿ ಹಾವಿನ ಕಾಟ. ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಕಳೆ ತೆಗೆಯುವುದು ಯಾವುದಾದರೂ ಕಾರಣದಿಂದ ಮುಂದೆ ಹೋದರೆ ಅಲ್ಲಲ್ಲಿ ಬೆಳೆದ ಹುಲ್ಲು ಕಳೆ ಗಿಡಗಳು ದಟ್ಟವಾಗಿ ಬೆಳೆದ ದಾಸವಾಳದ ಪೊದೆಗಳು ಇವುಗಳಿಗೆ ಬಹಳ ಪ್ರೀತಿ. ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಒಂದು ದಾಸವಾಳದ ಗಿಡದ ಮೇಲೆ ಯಾವಾಗಲೂ ಒಂದು ಕೆರೆ ಹಾವು ಬಿಸಿಲು ಕಾಯಿಸುತ್ತಾ ಸುರುಳಿಸುತ್ತಿತ್ತು.

ಅಂಗಳದ ಕೊಳದಲ್ಲಿ ಒಂದು ನೀರುಹಾವು ಮಳೆಗಾಲ ಪೂರ್ತಿ ವಿಹರಿಸುತ್ತಿತ್ತು. ಅಲ್ಲಿದ್ದ ಗಪ್ಪಿ ಮೀನುಗಳನ್ನೂ ಖಾಲಿ ಮಾಡಿತು. ಸೊಳ್ಳೆ ಸಂತಾನ ನಿಯಂತ್ರಣ ಮಾಡಲು ಗಪ್ಪಿ ಮೀನು ಸಾಕಿದ್ದೆ. ಕೊಳದ ಕಪ್ಪೆಗಳ ಬಾಯಿಂದ ತಪ್ಪಿಸಿಕೊಂಡರು ಅವು ಹಾವಿನ ಬಾಯಿಗೆ ಬಿದ್ದವು. ಎರಡು ವರ್ಷಗಳ ಹಿಂದೆ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ ಮಗ ಒಂದು ಮಧ್ಯಾಹ್ನ ಹೊರಗೆ ಹೋಗಲು ಗೇಟ್ ಹತ್ತಿರ ಹೋದಾಗ ಅನಿರೀಕ್ಷಿತವಾಗಿ ಕಾಲ ಬಳಿ ನಾಗರ ಹಾವನ್ನು ನೋಡಿ ಬೆಚ್ಚಿ ಬಿದ್ದು ಭಯದಿಂದ ನಡುಗಿ ಹೋದ.

ಗಿಡ ಬೆಳೆಸಿ ಹಾವು ಸಾಕಿದ್ದೀಯ ಅಂತ ನನಗೆ ಬೈದ. ಮತ್ತೊಂದು ದಿನ ಮನೆಯ ಹಿಂದಿನ ಅಂಗಳದಲ್ಲಿ ಒಂದು ಟೆರ್ರಾ ಕೊಟ್ಟ ಪಾಟ್ ಒಳಗೆ ಕುಳಿತ ಹಾವು ಹೊರ ಹೋಗುವ ವರೆಗೂ ಕಾಯ ಬೇಕಾಯಿತು. ಇಷ್ಟೊಂದು ತಾವರೆ ಗಿಡ ಯಾಕೆ ಬೇಕು. ಅಂತ ಮನೆಯವರೆಲ್ಲ ದೂಷಿಸಿದ ಬಳಿಕ ಕೆಲವನ್ನು ಖಾಲಿ ಮಾಡಿದೆ. ನೆಲದ ಮೇಲಿನ ಕೆಲವು ಗಿಡ ಮತ್ತು ಪಾಟ್ಗಳ ಸಂಖ್ಯೆ ಯನ್ನು ಕಡಿಮೆ ಮಾಡಿದೆ.ಒಂದು ದಿನ ಬೆಳಗ್ಗೆ ವಾಕಿಂಗ್ನಿಂದ ಮರಳಿದ ಮೇಲೆ ಬಾಗಿಲ ಬಳಿ ಇದ್ದ ಚಪ್ಪಲಿಗಳ ನಡುವೆ ಏನೋ ಚಲಿಸಿದ ಹಾಗೆ ಕಾಣಿ ಸಿತು.

ನೋಡಿದರೆ ಚಿಕ್ಕ ನಾಗರ ಹಾವು. ಮತ್ತೆ ನನ್ನ ಗಿಡಗಳೇ ಅಪರಾಧಿಗಳು. ಪಾಪ. ಒತ್ತಾಗಿ ಕುಂಡಗಳನ್ನು ಜೋಡಿಸಿಟ್ಟರೆ ನಡುವೆ ತಣ್ಣಗಿರುವ ಜಾಗ ಹಾವಿಗೆ ಆಶ್ರಯ ನೀಡುವುದು ಖಚಿತ.

 ಕಳೆದ ಬೇಸಿಗೆಯಲ್ಲಿ ಒಂದು ದಿನ ಬೆಳಗ್ಗೆ ಬಾಗಿಲು ತೆರೆದಾಗ ಮೆಟ್ಟಿಲ ಬಳಿ ಎರಡು ಮೂರು ಜೇನು ಸತ್ತು ಬಿದ್ದಿದ್ದವು. ಮರು ದಿನವೂ ಮೂರು ನಾಲ್ಕು ಸತ್ತು ಬಿದ್ದಿದ್ದವು..ಸಾಲದಿದ್ದುದಕ್ಕೆ ಮನೆ ಒಳಗೂ ಎರಡು ಮೂರು ಹುಳಗಳು ಜೇಂಕರಿಸುತ್ತಿದ್ದವು. ಪೊರಕೆ ಹಿಡಿದು ಅವುಗಳನ್ನು ಹೊರಗೆ ಓಡಿಸಿ ಇವೆಲ್ಲಿಂದ ಇಷ್ಟೊಂದು ಜೇನು ಬಂದಿವೆ ಅಂತ ಸ್ವಗತ ಸಂಭಾಷಣೆ ನಡೆಸುವುದು ಕೇಳಿ ಪಕ್ಕದ ಮನೆಯ ಸವಿತಾ, ಮೇಡಂ ಮನೆಯಲ್ಲೆ ಕೂತಿವೆ ಜೇನು ಅಂದಾಗ ನಾನು ಗಾಬರಿ ಆಗಿ ಎಲ್ಲಿ ಅಂದೆ.ಅವಳು ತೋರಿಸಿದ ಕಡೆ ನೋಡಿದಾಗ ಮಹಡಿಯ ತಾರಸಿಯ ಚೆಜ್ಜಾದ ಕೆಳಗೆ ಗುಂಪಾಗಿ ಕೂತಿದ್ದವು.

ನೀವು ನೋಡಿದ್ದೀರಿ ಅಂದುಕೊಂಡೆ ಅಂದಳು. ಅವರ ಮನೆ ಮಹಡಿ ಕಟ್ಟುತ್ತಿದ್ದ ಗಾರೆ ಕೆಲಸದವರು ಹೆಜ್ಜೇನು ಅಂತ ಹೇಳಿದರು ಅಂದಳು.ಹೆಜ್ಜೇನು ಕಚ್ಚಿ ಸತ್ತವರ ಕಥೆ ಕೇಳಿದ್ದ ನನಗೆ ಭಯವಾಯಿತು. ಅವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಕಾಲು ಸೋತು ಕುಳಿತಿವೆ, ಹೋಗುತ್ತವೆ ಅಂತ ಕೆಲವರು ಹೇಳಿದರು.

ಎರಡು ಮನೆಗಳ ನಡುವೆ ಎತ್ತರಕ್ಕೆ ಬೆಳೆದ ಅಶೋಕ ವೃಕ್ಷ ಅವುಗಳಿಗೆ ಬೇಕಾದ ಮರೆ ಒದಗಿಸಿತ್ತು. ಮರದ ಮೇಲೆ ಒಂದು ಕೋಲು ಜೇನು ಕಟ್ಟಿತ್ತು. ತಿಂಗಳಾದರೂ ಹೆಜ್ಜೇನು ಅಲ್ಲಿಂದ ಕದಲಲಿಲ್ಲ. ಪಕ್ಕದ ಮನೆಯ ಕೆಲಸಗಾರರಿಗೆ ಜೇನು ಕಚ್ಚಿ ಅವರು ಅದನ್ನು ಹೊಗೆ ಹಾಕಿ ಓಡಿಸುತ್ತೇವೆ ಎಂದು ರಾತ್ರಿ ಹನ್ನೊಂದು ಗಂಟೆಗೆ ಕೆಳಗೆ ಹೊಗೆ ಮಾಡಿದರೂ ಜೇನು ಇರುವ ಎತ್ತರಕ್ಕೆ ಹೊಗೆ ಹೋಗಲಿಲ್ಲ.

ನನ್ನ ರೂಂ ಒಳಗೆ ತುಂಬಿ ರಾತ್ರಿ ನಿದ್ದೆ ಹಾಳಾಯಿತು. ಹೊಗೆಗೆ ಎದ್ದ ಜೇನು ರಸ್ತೆಯಲ್ಲಿ ಒಡಾಡುವವರಿಗೆ ಕಚ್ಚಿ ನಮ್ಮ ಮೇಲೆ ಅಪವಾದ ಬಂದರೆ ಅಂತ ನೂರಾರು ಯೋಚನೆ. ಇನ್ನು ಕೆಲವರು ಜೇನು ಮನೆಯಲ್ಲಿ ಗೂಡು ಕಟ್ಟಿದರೆ ಅದೃಷ್ಟ ಏನು ಮಾಡಬೇಡಿ ಅದಾಗಿ ಹೋಗುತ್ತವೆ ಅಂದರು. ಮನೆಯವರು ಅವು ಮಕರಂದಕ್ಕೆ ದೂರ ಹೋಗುವ ಅಗತ್ಯ ಇಲ್ಲ ಅಂಗಳ ದಲ್ಲಿಯೆ ಬೇಕಾದಷ್ಟು ಹೂ ಇವೆ. ಅದಕ್ಕೆ ಅವು ಇಲ್ಲಿ ಗೂಡು ಮಾಡಿವೆ ಇದೇನು ಮನೆ ಅಂಗಳ ವಾ ಅಥವಾ ಕಾಡೋ ಅಂತ ದೂಷಣೆ ಕೇಳಬೇಕಾಯಿತು. ಅಯ್ಯಪ್ಪ ಒಂದು ಸಲ ಈ ಜೇನು ಹೋದರೆ ಸಾಕು ಅನ್ನಿಸಿತು.ಜೇನಿನ ವಿಷಯ ತಿಳಿದ ಸ್ನೇಹಿತರ ಬಳಿ ಕೇಳಿ ಸಮಾಧಾನ ಮಾಡಿಕೊಂಡೆ.

ಅದರ ಸುದ್ದಿಗೆ ಹೋಗಬೇಡಿ. ಅವುಗಳ ಪಾಡಿಗೆ ಬಿಡಿ ಅನ್ನುವ ಉಪದೇಶ ಸಿಕ್ಕಿತು. ಹಕ್ಕಿ, ಗಿಡುಗ ಗೂಡಿಗೆ ಹೊಡೆದರೆ ಅವು ಸಿಟ್ಟಿಗೆದ್ದು ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಅಂದರು. ಹಗಲು ರಾತ್ರಿ ಜೇನು ಮೊರೆತ ಕಿವಿಯಲ್ಲಿ ಕೇಳಿ ಸ ತೊಡಗಿತು. ಅವು ಪ್ರತೀ ದಿನ ಬೆಳಗ್ಗೆ ಹತ್ತು ಗಂಟೆಯ ಸಮಯಕ್ಕೆ ಮಧು ಸಂಗ್ರಹಣೆಗೆ ಹೋಗುತ್ತಿದ್ದವು. ಜೇನಿನ ಬಗ್ಗೆ ಪುಸ್ತಕ ಬರೆಯುವಷ್ಟು ಮಾಹಿತಿ ಸಂಗ್ರಹವಾಯಿತು. ಒಂದು ದಿನ ಬೆಳಗ್ಗೆ ಪತ್ರಿಕೆಯಲ್ಲಿ ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ಒಬ್ಬರು ತೋಟದಲ್ಲಿ ಹೆಜ್ಜೇನು ದಾಳಿಗೆ ಸಿಕ್ಕಿ ಸತ್ತು ಹೋದ ಸುದ್ದಿ ಓದಿದ ಮೇಲಂತೂ ಕೆಲವರು ನಿಮ್ಮ ಮನೆಯಲ್ಲಿ ಹೆಜ್ಜೇನು ಕಟ್ಟಿದೆಯಂತೆ ತೆಗೆಸಿಬಿಡಿ ಎಂಬ ಉಪದೇಶ ಮಾಡಿದರು. ಕೆಲವರು ಮಳೆ ಜೋರು ಪ್ರಾರಂಭವಾದ ಮೇಲೆ ಹೋಗುತ್ತವೆ ಅಂದರು.

ಜುಲೈ ಕಳೆದು ಆಗಸ್ಟ್, ಸೆಪ್ಟಂಬರ್ ಕಳೆದರೂ ಅವು ಹೋಗಲಿಲ್ಲ. ಕೊನೆಗೂ ಎಂಟು ತಿಂಗಳು ಕಳೆದು ನವಮಾಸದಲ್ಲಿ ತಾವು ಸಂಗ್ರಹಿಸಿದ ಜೇನನ್ನು ತಾವೇ ಕುಡಿದು, ಒಂದು ಬೆಳಗ್ಗೆ ಎದುರು ಮನೆ ತಾರಸಿಯಲ್ಲಿ ಕುಳಿತಿದ್ದವು. ಅವು ಮರಳಿ ಬಂದರೆ ಕಷ್ಟ ಅಂತ ಅಶೋಕ ಮರವನ್ನು ಕಡಿಸಿ ಹಾಕಿದೆವು. ನನಗೆ ಬಹಳ ಸಂಕಟವಾಯಿತು. ಮನೆಯ ಬಲಭಾಗದಲ್ಲಿ ಇನ್ನೊಂದು ಅಶೋಕಮರ ಇದೆ. ಹದಿನೈದು ದಿನ ಎದುರು ಮನೆಯಲ್ಲಿಯೇ ಕುಳಿತು ಆಮೇಲೆ ಹಾರಿದವು. ಮನೆಯ ಹಿಂದೆ ಇರುವ ಔಟ್ ಹೌಸ್ನ ಛಾವಣಿಗೆ ತಾಗಿ ದೊಡ್ಡ ಕಣಜಗಳು ಗೂಡು ಕಟ್ಟಿದ್ದವು. ಪರಿಣತ ರನ್ನು ಕರೆಸಿ ತೆಗೆಸಿದೆವು.

ಬೆಳಗ್ಗೆ ಹೂ ಕೊಯ್ಯಲು ಹೋದಾಗ ಆಕಸ್ಮಿಕ ಇರುವೆ ಸಾಲಿನ ಮೇಲೆ ಕಾಲಿಟ್ಟು ಕಚ್ಚಿಸಿಕೊಂಡು ಉರಿ ತುರಿಕೆ ಅನುಭವಿಸಿದ್ದು ನೂರಾರು ಸಲ. ಏಷ್ಟೋ ಸಲ ಬೆಳಗ್ಗೆ ಪಾಟ್ ನಲ್ಲಿ ಇದ್ದ ಗಿಡಗಳು ಹೊರಗೆ ಬಿದ್ದಿರುತ್ತವೆ. ಅದು ಎರೆಹುಳ ತಿನ್ನಲು ಬರುವ ಹೆಗ್ಗಣದ ಕೆಲಸ.

ಆದರೆ ನನ್ನ ಹೂಗಿಡಗಳಲ್ಲಿ ಗೂಡು ಮಾಡಿ ಮರಿ ಮಾಡುವ ಹಕ್ಕಿಗಳಿಂದ ಸಿಗುವ ಖುಷಿ ಅಪಾರ. ಪಿಕಳಾರ ಸೂರಕ್ಕಿ, ದರ್ಜಿ ಹಕ್ಕಿ ಗಳು ಒಂದಲ್ಲ ಒಂದು ಗಿಡದಲ್ಲಿ ಗೂಡು ಮಾಡಿರುತ್ತವೆ. ಕೆನ್ನೀಲಿ ಸೂರಕ್ಕಿಗಳು ಗೊಂಬೆಯ ತುದಿಯಲ್ಲಿ ಗೂಡು ಮಾಡುತ್ತವೆ ಹಾವಿನ ಕಾಟದಿಂದ ತಪ್ಪಿಸಿಕೊಳ್ಳಲು ಈ ಉಪಾಯ. ಆಗಾಗ ಬರುವ ಕೆಂಭೂತ, ಹೊರಸಲು ಹಕ್ಕಿಗಳು ಕೊಳದ ನೀರಿನಲ್ಲಿ ಸ್ನಾನ ಮಾಡುವ ದೃಶ್ಯ ಮಜವಾಗಿರುತ್ತದೆ.

ರತ್ನ ಗಂಧಿ ಹೂವಿನ ಬೀಜಗಳನ್ನು ತಿನ್ನಲು ಬರುವ ಗಿಣಿ ಗಳು ಪೇರಳೆ ಹಣ್ಣುಗಳನ್ನು ತಿನ್ನುತ್ತವೆ. ಒಟ್ಟಿನಲ್ಲಿ ಅಂಗಳ ದಲ್ಲಿ ಒಂದು ಸಜೀವ ಲೋಕ ಇರುತ್ತದೆ. ಒಮ್ಮೊಮ್ಮೆ ಚಳಿಗಾಲದಲ್ಲಿ ಕಂಬಳಿ ಹುಳಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಆಗ ಅವುಗಳನ್ನು ಕಡ್ಡಿ ಪೊರಕೆಯಲ್ಲಿ ತೆಗೆದು ಹಾಕುವ ಕೆಲಸ. ಇಷ್ಟೆಲ್ಲ ಕ್ರಿಮಿ ಕೀಟ, ಹಾವು,ಮಂಗಗಳ ಕಾಟ ಇದ್ದರೂ ಅಂಗಳದಲ್ಲಿ ಅರಳುವ ಹೊಸ ಹೂಗಳ ಲೋಕ ಮನಸ್ಸಿಗೆ ನೀಡುವ ಸಂತಸಕೆ ಬೇರೆ ಹೋಲಿಕೆ ಇಲ್ಲ.

ನನ್ನ ಹೂಗಿಡಗಳಲ್ಲಿ ಗೂಡು ಮಾಡಿ ಮರಿ ಮಾಡುವ ಹಕ್ಕಿಗಳಿಂದ ಸಿಗುವ ಖುಷಿ ಅಪಾರ. ಪಿಕಳಾರ ಸೂರಕ್ಕಿ, ದರ್ಜಿ ಹಕ್ಕಿಗಳು ಒಂದಲ್ಲ ಒಂದು ಗಿಡದಲ್ಲಿ ಗೂಡು ಮಾಡಿರುತ್ತವೆ. ಕೆನ್ನೀಲಿ ಸೂರಕ್ಕಿಗಳು ಗೊಂಬೆಯ ತುದಿಯಲ್ಲಿ ಗೂಡು ಮಾಡುತ್ತವೆ ಹಾವಿನ ಕಾಟದಿಂದ ತಪ್ಪಿಸಿಕೊಳ್ಳಲು ಈ ಉಪಾಯ. ಆಗಾಗ ಬರುವ ಕೆಂಭೂತ, ಹೊರಸಲು ಹಕ್ಕಿಗಳು ಕೊಳದ ನೀರಿನಲ್ಲಿ ಸ್ನಾನ ಮಾಡುವ ದೃಶ್ಯ ಮಜವಾಗಿರುತ್ತದೆ. ರತ್ನ ಗಂಧಿ ಹೂವಿನ ಬೀಜಗಳನ್ನು ತಿನ್ನಲು ಬರುವ ಗಿಣಿಗಳು ಪೇರಳೆ ಹಣ್ಣುಗಳನ್ನು ತಿನ್ನುತ್ತವೆ. ಒಟ್ಟಿನಲ್ಲಿ ಅಂಗಳದಲ್ಲಿ ಒಂದು ಸಜೀವ ಲೋಕ ಸೃಷ್ಟಿಯಾಗುತ್ತದೆ.