×
Ad

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಸಂತಾಪ

Update: 2023-01-02 23:23 IST

ಬೆಂಗಳೂರು. ಜ.2: ಖ್ಯಾತ ಪ್ರವಚನಕಾರರಾಗಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

''ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು.ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. 

ಸಿದ್ದರಾಮಯ್ಯ ಸಂತಾಪ: 'ಜ್ಞಾನಯೋಗಾಶ್ರಮದ ಪೀಠಾಧೀಶರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಅತೀವ ನೋವುಂಟುಮಾಡಿದೆ. ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ವೈಯಕ್ತಿಕವಾಗಿ ಮತ್ತು ನಾಡಿಗೆ ತುಂಬಿಬಾರದ ನಷ್ಟ.ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ಮತ್ತು ಭಕ್ತವೃಂದಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.' ಎಂದು ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

'ಖ್ಯಾತ ಪ್ರವಚನಕಾರರು ಹಾಗೂ ಜ್ಞಾನಕೋಶವೆಂದೇ ಪ್ರಸಿದ್ಧರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ವಿಚಾರ ಕೇಳಿ ಅತೀವ ನೋವುಂಟಾಯಿತು. ಅವರ ಸಾವು ತುಂಬಲಾಗದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಅಪಾರ ಭಕ್ತರಿಗೆ ನನ್ನ ಸಂತಾಪಗಳು.' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. 

''ತಮ್ಮ ಮಾದರಿ ಬದುಕಿನ ರೀತಿಯಿಂದಲೇ ಸಮಾಜಕ್ಕೆ ಮಾರ್ಗದರ್ಶಿ ಶಕ್ತಿಯಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಅಸ್ತಮಿಸಿದ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ ಅವರ ತತ್ವಗಳು ಎಲ್ಲರಿಗೂ ದಾರಿ ದೀಪವಾಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ಪ್ರೀತಿ ಪಾತ್ರರಿಗೆ ಲಭ್ಯವಾಗಲಿ ಎಂದು ಪ್ರಾರ್ಥಿಸುವೆ'' ಎಂದು ಮಾಜಿ ಸಚಿವ ಎಚ್.ಸಿ ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.

Similar News