ದಲಿತ ಸಮುದಾಯವೊಂದರ ಸಾಂಸ್ಕೃತಿಕ ಅವಲೋಕನ 'ದಕ್ಲಕಥಾ ದೇವಿಕಾವ್ಯ'

ರಂಗ ವಿಮರ್ಶೆ

Update: 2023-01-03 05:17 GMT

‘ದಕ್ಲ ಕಥಾ ದೇವಿ ಕಾವ್ಯ’ ನಾಟಕ, ಅಸ್ಪಶ್ಯ ಮತ್ತು ಅತಿ ತಳ ಸಮುದಾಯವಾದ ದಕ್ಲ ಸಮಾಜದ ಆಚರಣೆ, ನಂಬುಗೆ, ಬಯಕೆ, ಹಸಿವು, ಆಕ್ರೋಶ, ಪ್ರತಿರೋಧವನ್ನು ಅತ್ಯಂತ ಆಪ್ತವಾಗಿ ಚಿತ್ರಿಸುತ್ತದೆ. ತಮಟೆ, ಅರಿಯ ಲಯ ಹಾಗೂ ದಕ್ಲರಿಗೆ ಸಹಜವಾಗಿ ಒದಗಿದ ಹಾಡುಗಳು ನಾಟಕದ ಉದ್ದಕ್ಕೂ ಇವೆ.

ದಕ್ಲ ಸಮುದಾಯವನ್ನು ಅದರ ಸಾಂಸ್ಕೃತಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ನಾಟಕ ತಳಸಮುದಾಯಗಳನ್ನು ಒಟ್ಟಾರೆಯಾಗಿ ಇವತ್ತಿನ ಸಮಾಜ ನೋಡುತ್ತಿರುವ ಪರಿಯನ್ನು ಸೂಚಿಸುತ್ತದೆ. ಕನ್ನಡ ಸಾಹಿತ್ಯದ ಮಹತ್ವದ ಬರಹಗಾರರು ಮತ್ತು ದಲಿತ ಚಿಂತಕರಾದ ಕೆ.ಬಿ. ಸಿದ್ದಯ್ಯನವರ ಖಂಡಕಾವ್ಯ ಹಾಗೂ ಕಥನಗಳನ್ನು ಈ ನಾಟಕ ಆಧರಿಸಿದೆ. ಲಕ್ಷ್ಮಣ್ ಕೆ.ಪಿ. ಈ ನಾಟಕದ ನಡೆಯನ್ನು ತೋರಿದ್ದಾರೆ. ಅನುಭವೀ ನಟನಟಿಯರ ದಂಡೇ ಈ ನಾಟಕದ ರಂಗದ ಮೇಲಿದೆ.

ದಕ್ಲರ ಬದುಕಿನ ಹಲವು ಆಯಾಮಗಳನ್ನು ಆತ್ಮಕತೆಯೊಂದರ ಧಾಟಿಯಲ್ಲಿ ನಾಟಕ ನಿರೂಪಿಸುತ್ತದೆ. ದಕ್ಲರ ಕಲ್ಪನೆಯಲ್ಲಿ ದೇವರು ಅಥವಾ ದೇವಿಯರೆಂದರೆ ಯಾರು ಮತ್ತು ಅವರು ಹೇಗಿರುತ್ತಾರೆ ಹಾಗೂ ಆ ದೇವಸ್ವರೂಪಿಯ ಜೊತೆಗೆ ದಕ್ಲರಿಗೆ ಬೆಸದುಬಂದ ಸಾವಯವ ಸಂಬಂಧವು ಯಾವ ಬಗೆಯದು ಎನ್ನುವುದನ್ನು ಸ್ವಾರಸ್ಯವಾಗಿ ನಾಟಕ ತೋರಿಸುತ್ತದೆ.

ದಲಿತರ ಮತ್ತು ಅತ್ಯಂತ ತಳಸಮುದಾಯಗಳ ಪದ್ಧತಿಗಳನ್ನು, ಸಂಪ್ರದಾಯಗಳನ್ನು ಅವುಗಳ ನೈಜ ರೂಪದಲ್ಲಿಯೇ ರಂಗದ ಮೇಲೆ ತರುವಾಗ ಬೇಕಿರುವ ದಕ್ಷತೆ ಮತ್ತು ಬದ್ಧತೆಯೂ ನಾಟಕಕ್ಕಿದೆ. ಆಧುನಿಕ ಕಾಲಗಟ್ಟದಲ್ಲಿ ವಾಡಿಕೆಗಳು, ರೂಢಿಗಳು ಮುಖಾಮುಖಿಯಾದಾಗ ಸಂಭವಿಸುವ ವಿಶಿಷ್ಟ ಮತ್ತು ಹೊಸ ಬಗೆಯ ಸಾಂಸ್ಕೃತಿಕ ಆವಿಷ್ಕಾರಗಳನ್ನೂ ನಾಟಕ ದಾಖಲಿಸುತ್ತದೆ. ಜಾತಿ ಕಟ್ಟುಪಾಡುಗಳ ಕರಾಳ ಅಸ್ತಿತ್ವವನ್ನು ಪ್ರಶ್ನಿಸುತ್ತಲೇ ಅದರಾಚೆಗಿರುವ ಮನುಷ್ಯ ಸಹಜವಾದ ಜೀವನವನ್ನೂ ಅರಿಯುವ ಪ್ರಯತ್ನ ನಾಟಕದುದ್ದಕ್ಕೂ ನಡೆಯುತ್ತದೆ.

ದಕ್ಲ ಸಮುದಾಯ ಪರಿಭಾವಿಸುವಂತೆ ಭೂಮಿ ಹುಟ್ಟಿದ ಬಗೆ, ಜೀವ ಹುಟ್ಟಿದ ಕಥೆ, ದಕ್ಲದೇವಿಯ ಪುರಾಣ, ದಕ್ಲಯ್ಯ, ದಕ್ಲಯ್ಯನ ಎಡ ಹಾಗೂ ಬಲ ಮಕ್ಕಳು ಮತ್ತು ಆ ಮಕ್ಕಳ ಜತೆಗೂಡಿ ದಕ್ಲಯ್ಯನು ದೇವಿಯ ಕೃಪೆಯಿಂದ ಪಡೆದ ಶೀಂದಿ ಸರೋವರ ಹಾಗೂ ಆ ಸರೋವರವನ್ನು ಮಕ್ಕಳೊಟ್ಟಿಗೆ ದಕ್ಲನು ಕಂಠಮಟ್ಟ ಕುಡಿವ ಕಥೆ, ಹೀಗೆ ಹಲವಾರು ಕುತೂಹಲಕರ, ರೋಚಕ ಸನ್ನಿವೇಶಗಳನ್ನು ನಿರೂಪಿಸುವ ನಾಟಕ ಆ ಸನ್ನಿವೇಶಗಳ ಮೂಲಕವೇ ಮೊನಚು ಒಳನೋಟಗಳನ್ನು ನೀಡುತ್ತದೆ.

ಹಸಿವು ಮತ್ತು ಅತ್ಯಂತ ಕನಿಷ್ಠ ಬಯಕೆಗಳನ್ನು ಈಡೇರಿಸಿಕೊಳ್ಳಲು ಅಸ್ಪಶ್ಯರೆನಿಸಿಕೊಂಡ ಸಮುದಾಯಗಳು ಇಂದು ಪಡಬೇಕಾದ ಪಡಿಪಾಟಲುಗಳ ವಿವರಣೆಗಳು ಆಧುನಿಕ ಸಮಾಜದ ಮನುಷ್ಯತ್ವರಹಿತ ಹೃದಯಹೀನ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಮೇಲ್ಪದರದ ಸಮುದಾಯವಷ್ಟೇ ಅಲ್ಲದೆ ಅಸ್ಪಶ್ಯ ಸಮಾಜದವರಿಂದಲೂ ಅಸ್ಪಶ್ಯತೆಗೊಳಗಾದ ದಕ್ಲ ಸಮುದಾಯದ ಚಿತ್ರಣದ ನೆಪದಲ್ಲಿ ಆಧುನಿಕ ಜಗತ್ತು ದಲಿತರಿಗೆ ತೋರುತ್ತಿರುವ ಕೃತ್ರಿಮ ಸೈರಣೆ ಮತ್ತು ಇವತ್ತಿನ ಕಾಲ ತಲುಪಿರುವ ಅಸಮಾನತೆಯ ಕ್ರೂರ ಪರಾಕಾಷ್ಠೆಯನ್ನು ನಾಟಕ ಎತ್ತಿಹಿಡಿಯುತ್ತದೆ.

 ನಾಟಕದ ಸಾಮರ್ಥ್ಯವಿರುವುದು ಕೇವಲ ಕೆ.ಬಿ. ಅವರ ಸಾಹಿತ್ಯದಲ್ಲಷ್ಟೇ ಅಲ್ಲ ಬದಲಿಗೆ ಲಕ್ಷ್ಮಣ್ ಕೆ.ಪಿ. ಅವರಿಗಿರುವ ಆದ್ಯತೆ ಮತ್ತು ರಂಗಭೂಮಿಯ ಮೇಲಿನ ಹಿಡಿತ ಹಾಗೂ ಈ ನಾಟಕದ ನಟನಟಿಯರಿಗಿರುವ ಅದ್ಭುತ ನಟನಾ ಕೌಶಲ್ಯಗಳಲ್ಲಿ. ಇಲ್ಲಿನ ಎಲ್ಲಾ ಪಾತ್ರಧಾರಿಗಳೂ ಸ್ವತಃ ಸಂಗೀತಗಾರರೂ ಹಾಗೂ ವಾದ್ಯ ಪ್ರವೀಣರೂ ಆಗಿದ್ದಾರೆ.

ಕೆಲವು ಕಷ್ಟದ ಲಯನಾದಗಳು ಮತ್ತು ಜಾನಪದ ಧಾಟಿಯ ಮಟ್ಟುಗಳು ನಟನಟಿಯರ ಬಾಯಲ್ಲಿ ಸರಾಗವಾಗಿ ಹಾಡಾಗುತ್ತವೆ. ಈಗಾಗಲೇ ತಮ್ಮ ನಟನೆಗೆ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿರುವ ನಟಿ ಬಿಂದು ರಕ್ಷಿದಿ ನಾಟಕಕ್ಕೆ ಮೆರುಗು ಕೊಡುತ್ತಾರೆ. ದಕ್ಲನ ಪಾತ್ರದಲ್ಲಿ ಸಂತೋಷ್ ದಿಂಡಗೂರ್ ಅವರ ನಟನೆ ಪರಿಣಾಮಕಾರಿಯಾಗಿದ್ದು ಅವರ ನಟನೆಯೇ ನಾಟಕಕ್ಕೆ ಒಂದು ಬಂಧವನ್ನು ನೀಡುತ್ತದೆ. ರಮಿಕ ಚೈತ್ರ, ನರಸಿಂಹರಾಜು ಬಿ.ಕೆ., ಭರತ್ ಡಿಂಗ್ರಿಯರ ನಟನೆಯು ಗಮನಾರ್ಹವಾಗಿದೆ. ಅಷ್ಟೇ ಅಲ್ಲದೆ ರಂಗದ ಹಿಂದೆ ಮಂಜುನಾಥ್ ನಾರಾಯಣ್ - ಬೆಳಕು, ಶ್ವೇತಾರಾಣಿ - ವಸ್ತ್ರ ವಿನ್ಯಾಸ, ಚಂದ್ರಶೇಖರ ಕೆ. ನೇಪಥ್ಯ ಹಾಗೂ ಮನೋಜ್ ಕುಮಾರ್ ಎಂ. ಪ್ರಚಾರವೂ ನಾಟಕವನ್ನು ಇನ್ನಷ್ಟು ಚೆಂದಗಾಣಿಸಿವೆ.

ನಾಟಕದುದ್ದಕ್ಕೂ ಹಲವು ಆಚರಣೆಗಳು ಪ್ರೇಕ್ಷಕರೆದುರು ತೆರೆದುಕೊಳ್ಳುತ್ತಾ ಹೋಗಿ ಕಡೆಯಲ್ಲಿ ನಟರು ಮತ್ತು ಪ್ರೇಕ್ಷಕರ ನಡುವಿನ ಅಂತರವೂ ಕಡಿಮೆಯಾಗುವ ಹಾಗೆ ನಾಟಕದ ವಿನ್ಯಾಸವಿದೆ. ಪ್ರೇಕ್ಷಕರೂ ನಾಟಕದ ಪಾಲುದಾರರಾಗಿ ನಾಟಕದ ಪಾತ್ರಗಳ ಜತೆ ಅನುಸಂಧಾನಗೊಳ್ಳುವ ಸಾಧ್ಯತೆಯನ್ನು ನಾಟಕದ ಸಂಯೋಜನೆ ಪ್ರೇಕ್ಷಕರಿಗೆ ಕಲ್ಪಿಸುತ್ತದೆ. ದಕ್ಲರ ನಡೆ-ನುಡಿ ಹಾವ ಭಾವ ಮತ್ತು ಅವರ ದೈನಂದಿನ ಬದುಕಿನ ಸಮೀಪ ನೋಟ ನಾಟಕದಾದ್ಯಂತ ಹರಡಿದೆ.

ಒಮ್ಮೆ ರಂಗದಮೇಲೆ ಬಂದ ಮೇಲೆ ನಾಟಕ ಮುಗಿಯುವವರೆಗೂ ರಂಗದ ಮೇಲೆ ಹಾಜರಿರುವ ನಟರು ಎಲ್ಲಿಯೂ ರಂಗದಲ್ಲಿ ಅಪ್ರಸ್ತುತವಾಗುವುದಿಲ್ಲ. ಬೆಳಕಿನ ಸಂಯೋಜನೆ ಈ ಬಗೆಯ ವಿನ್ಯಾಸಕ್ಕೆ ಸಹಕಾರಿಯಾಗಿದೆಯಾದರೂ ನಟರ ಸ್ಟೇಜ್ ಪ್ರೆಸೆನ್ಸ್ ಇಲ್ಲಿ ಮುಖ್ಯವಾಗುತ್ತದೆ. ನಾಟಕದ ಶೈಲಿ ಸಂಗೀತನಾಟಕದಂತಿದ್ದರೂ, ಆಧುನಿಕ ರಂಗಭೂಮಿಯ ರೂಢಿಗತ ಸಂಗೀತ ನಾಟಕವಲ್ಲವಿದು.

ಬದಲಿಗೆ ದಲಿತರ ಜೀವನದ ಭಾಗವಾಗಿರುವ ಹಾಡುಪಾಡುಗಳು ದಲಿತರೇ ಹೇಳುವ ಕಥೆಯಾಗಿಯಷ್ಟೇ ಇರದೆ ದಲಿತರ ಜೀವನದ ಒಂದು ಅವಿಭಾಜ್ಯ ಭಾಗವಾಗಿ ಒದಗುತ್ತದೆ. ನಾಟಕ ನಿಂತಿರುವುದು ನಟರೇ ಹಾಡಿ ನುಡಿಸಿ ಕುಣಿಯುವ ಇಂತಹ ಸಂಗೀತದ ಮೇಲೆ. ಅಷ್ಟೇ ಅಲ್ಲದೆ ಇಂತಹ ಹಾಡು ಪಾಡುಗಳೇ ಒಂದು ಸಮುದಾಯದ ಪುರಾಣಗಳಿಗೆ ಹೊಸ ಆಯಾಮವನ್ನು ನೀಡಿ ಅವುಗಳನ್ನು ಆಧುನಿಕ ಕಾಲಘಟ್ಟಕ್ಕೆ ಮುಖಾಮುಖಿಗೊಳಿಸುತ್ತವೆ.

ಕೇವಲ ದಕ್ಲರ ದೇವಿಯ ಪುರಾಣದ ಕಥಾನಕಕ್ಕೆ ಮಾತ್ರ ಸೀಮಿತಗೊಳ್ಳದ ನಾಟಕ ದಕ್ಲನ ಪಾತ್ರದ ಮುಖಾಂತರ ಪುರುಷ ಪ್ರಧಾನ ಮನಸ್ಥಿತಿಯನ್ನು ಹಾಗೂ ಹಸಿದವನ ಬೇಗೆಯಲ್ಲಿ ಬೇಯುತ್ತಿರುವಾಗಲೂ ಅಸುನೀಗದ ಪುರುಷ ಅಹಂಕಾರವನ್ನು ಗಟ್ಟಿದ್ವನಿಯಲ್ಲಿ ಚಿತ್ರಿಸುತ್ತದೆ. ಜೀವದಾಳದಲ್ಲಿ, ಬದುಕಿನ ಅಂತರಾಳದಲ್ಲಿ ಮನುಷ್ಯತ್ವದ ಬೆಳಕನ್ನು ಕಾಣಲು ತಾಯಿಗುಣವಿದ್ದರೆ ಮಾತ್ರ ಸಾಧ್ಯವೆಂದು ತೋರಿಸುತ್ತದೆ. ಪುರುಷತ್ವದ ಅಮಲಿನಲ್ಲಿದ್ದ ದಕ್ಲಯ್ಯನಿಗೆ ಹೆಣ್ಣಾಗಿ ನೋಡು ಎನ್ನುವ ದಕ್ಲದೇವಿಯ ಕಿವಿಮಾತು ಇವತ್ತು ಸೊಕ್ಕಿರುವ ಗಂಡು ಸಮಾಜಕ್ಕೇ ಹೇಳಿದಂತಿದೆ. ಕರುಣೆ, ಮನುಷ್ಯತ್ವ ಮತ್ತು ಕರುಣೆಯ ಜೀವದುಸಿರು ಹುಟ್ಟಲು ಬೇಕಿರುವುದು ತಾಯಿಕರುಳೇ ಹೊರತು ಗಂಡು ದರ್ಪವಲ್ಲವೆನ್ನುತ್ತದೆ ಈ ನಾಟಕ.

ಸುಮಾರು ಒಂದೂಮುಕ್ಕಾಲು ತಾಸು ರಂಗದ ಮೇಲೆ ನಡೆಯುವ ನಾಟಕ ದಕ್ಲರ ಮುಖಾಂತರ ಅಸ್ಪಶ್ಯರ ಸಾಂಸ್ಕೃತಿಕ ಜೀವನ ಮತ್ತು ರಾಜಕೀಯ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಅವಲೋಕಿಸುತ್ತದೆ.