ಬಿಜೆಪಿ ನಾಯಕರ ಹಣದಾಸೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?: ಸಿದ್ದರಾಮಯ್ಯ
ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ
ಬೆಂಗಳೂರು, ಜ.3: ಉದ್ಯಮಿ ಪ್ರದೀಪ್ ಆತ್ಮಹತ್ಯೆ ದುರದೃಷ್ಟಕರ. ಅವರ ಆತ್ಮಹತ್ಯೆಗೆ ಕಾರಣರಾದ ಶಾಸಕ ಅರವಿಂದ ಲಿಂಬಾವಳಿ ಸಹಿತ ಇತರೆ ಎಲ್ಲ ಆರೋಪಿಗಳನ್ನು ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಪ್ರದೀಪ್ ನಿವಾಸಕ್ಕೆ ಮಂಗಳವಾರ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದೀಪ್ ಉದ್ಯಮವೊಂದಕ್ಕೆ ಸುಮಾರು 1.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದರು, ಆದರೆ ಈವರೆಗೆ ನಯಾಪೈಸೆ ಲಾಭದ ಹಣ ಅವರ ಕೈಸೇರಿಲ್ಲ ಎಂದು ಅವರ ಪತ್ನಿ ಮಾಹಿತಿ ನೀಡಿದ್ದಾರೆ ಎಂದರು.
ಈ ವಿವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಧ್ಯಸ್ಥಿಕೆ ವಹಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ಸಾಲ ಮಾಡಿ ಹೂಡಿಕೆ ಮಾಡಿದ್ದ ಹಣವನ್ನು ವಾಪಾಸ್ ಕೊಡಿಸಬೇಕು ಎಂಬುದು ಮೃತನ ಪತ್ನಿ ನಮಿತಾ ಮನವಿಯಾಗಿದೆ. ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಿ, ಈ ಹಣವನ್ನು ವಾಪಾಸ್ ಕೊಡಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಡೆತ್ ನೋಟ್ ನಲ್ಲಿ ಆಡಳಿತದ ಪಕ್ಷದ ಶಾಸಕರ ಹೆಸರಿದೆ ಎಂಬ ಕಾರಣಕ್ಕೆ ಪೊಲೀಸರು ಅಪರಾಧಿಗಳನ್ನು ಬಂಧಿಸದಿದ್ದರೆ ಅವರು ಸಾಕ್ಷ್ಯನಾಶ ಮಾಡುವ ಸಾಧ್ಯತೆಗಳಿರುತ್ತದೆ. ಹೀಗಾದಾಗ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯವೇ? ಪೊಲೀಸರು ಮೃತನ ಮೊಬೈಲ್ ಕೊಡಿ ಎಂದು ಮಧ್ಯರಾತ್ರಿಯಲ್ಲಿ ಕುಟುಂಬದವರ ಬಳಿ ಬಂದು ಕೇಳಿದ್ದಾರೆ. ಪ್ರದೀಪ್ ಬರೆದ ಡೆತ್ ನೋಟ್ ನಲ್ಲಿ ಸಾವಿಗೆ ಕಾರಣರಾದವರ ಹೆಸರು ಸ್ಪಷ್ಟವಾಗಿರುವಾಗ ತನಿಖೆಯನ್ನು ಬೇರೆ ಆಯಾಮಗಳಿಗೆ ತಿರುಗಿಸುವ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದರು.
ಈ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಸೂಕ್ತ ತನಿಖೆ ನಡೆಸದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ಈ ಪ್ರಕರಣವು ಅದೇ ರೀತಿ ಆಗುವುದು ಬೇಡ. ತನಿಖೆಯಲ್ಲಿ ರಾಜ್ಯ ಬಿಜೆಪಿ ಸರಕಾರ ಹಸ್ತಕ್ಷೇಪ ಮಾಡಬಾರದು. ಈ ಸರಕಾರದ ಭ್ರಷ್ಟಾಚಾರದಿಂದಾಗಿ ಹಲವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ದಯಾಮರಣ ಕೋರಿ ಅರ್ಜಿ ಹಾಕಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಹಣದಾಸೆಗೆ ಇಂಥಾ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.