ಬಾಲ್ಯಕಾಲ ಸಖ

Update: 2023-01-05 09:36 GMT

ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು 1958 ಸೆಪ್ಟಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ ಸಂಪಾದಕಿಯಾಗಿದ್ದರು. ಮುಂಬೈ ಲೇಖಕಿಯರ ಸಂಘದ ಸೃಜನಾಗೆ ‘ಕಥೆ ಹೇಳೆ’ ಎಂಬ ಸಂಕಲನದ ಸಂಪಾದನೆ, ಮುಂಬೈ ಪತ್ರಿಕೆ ‘ನೇಸರು’ ಸಂಪಾದಕಿಯಾಗಿದ್ದರು. ಹೆಣ್ಣೊಬ್ಬಳ ದನಿ, ಕಥಾಮಾನಸಿ, ಆಧುನಿಕ ಕನ್ನಡ ಸಣ್ಣ ಕಥೆಗಳು, ಒಂದು ಸ್ತ್ರೀವಾದ ಅಧ್ಯಯನ ಮುಂತಾದವು ಇವರ ಪ್ರಮುಖ ಕೃತಿಗಳು. ಗಿರಿಜಾ ಶಾಸ್ತ್ರಿ ಅವರಿಗೆ ಹರಿಹರಶ್ರೀ ಪ್ರಶಸ್ತಿ, ಕುವೆಂಪು ಕಾವ್ಯ ಪ್ರಶಸ್ತಿ, ಸುಶೀಲಶೆಟ್ಟಿ ಸ್ಮಾರಕ ಪ್ರಶಸ್ತಿ ಹಾಗೂ ಸಂಕ್ರಮಣ ಪ್ರಶಸ್ತಿಗಳು ಲಭಿಸಿವೆ.

ಗಿರಿಜಾ ಶಾಸ್ತ್ರಿ

‘‘ನೀನು ಅವರ ಜೊತೆಯಲ್ಲೆಲ್ಲಾ ಆಟ ಆಡಿಕೊಂಡು ಬಂದಿದ್ದೀಯ ನನ್ನನ್ನು ಮುಟ್ಟಬೇಡ! ದೇವರ ದೀಪ ಹಚ್ಚಬೇಕು’’ ಕತ್ತಲು ಇಳಿಯುತ್ತಿದ್ದ ಹಾಗೆ ಹಕ್ಕಿಗಳು ಗೂಡು ಸೇರುವಾಗ ಅಮ್ಮ ಹೇಳುತ್ತಿದ್ದ ಮಾತುಗಳು ಇವು. ಅದು ಅರವತ್ತರ ದಶಕ. ಆಗ ನನಗೆ ಏಳೋ ಎಂಟೋ ವರುಷ. ಅಸ್ಪಶ್ಯತೆಯ ಕ್ರೌರ್ಯ ಸಮಾಜದ ಮನಸ್ಸಿಗೆ ಇಳಿಯದ ಕಾಲ. ಹಾಗೆ ಇರುವುದೇ ಸಹಜವಾಗಿ ಕಾಣುತ್ತಿದ್ದ ಕಾಲ. ಸ್ಪಶ್ಯರು ತಾವಾಗಿಯೇ ಹತ್ತಿರ ಬಂದರೂ ಅಸ್ಪಶ್ಯರು ದೂರ ಸರಿಯುತ್ತಿದ್ದರು. ಹಾಗೆಂದು ಮನೆಯ ಹೊರಗೆ ಆಡಲು ಬಿಡದೇ ನಮ್ಮನ್ನು ಕಟ್ಟಿ ಹಾಕುತ್ತಿರಲಿಲ್ಲ. ಅಪ್ಪನಿಗಂತೂ ಇದರ ಧ್ಯಾಸವೇ ಇರಲಿಲ್ಲ. ಅವರದೇ ಅಧ್ಯಯನದ ಲೋಕದಲ್ಲಿದ್ದರು. ಅಮ್ಮನದೇ ಅಲ್ಪ ಸ್ವಲ್ಪ ನಿಯಂತ್ರಣ.

 ನಾವು ಮನೆಯ ಹೊರಗಲ್ಲ! ಒಳಗೂ ನಾವು ಅಸ್ಪಶ್ಯರಾಗಿದ್ದೆವು. ನಮ್ಮ ಅಜ್ಜಿಗೆ ನಾವೇ ಅಸ್ಪಶ್ಯರು. ಅವಳು ನಮ್ಮನ್ನು ಮುದ್ದಾಡುವುದಿರಲಿ, ಮುಟ್ಟಿ ತಡವಿ ಮಾತನಾಡಿಸಿದ ನೆನಪೂ ಇಲ್ಲ. ನಾವು ಏಳುವ ಹೊತ್ತಿಗೆ ಮಡಿಯುಟ್ಟು ಅಡುಗೆ ಮನೆ ಸೇರುತ್ತಿದ್ದಳು, ನಾವು ಮಲಗಿದ ಮೇಲೆ ಮಲಗಲು ಬರುತ್ತಿದ್ದಳು. ಅವಳನ್ನು ನಾವು ಅಕಸ್ಮಾತ್ ಮುಟ್ಟಿ ಬಿಟ್ಟರೆ ಅವಳು ಮತ್ತೊಮ್ಮೆ ಮಡಿಯುಟ್ಟು ಬರಬೇಕಾಗಿತ್ತು. ಎಳೆಯ ವಯಸ್ಸಿನಲ್ಲೇ ನಮಗೆಲ್ಲ ಇದು ಅಭ್ಯಾಸವಾಗಿರುತ್ತಿತ್ತು.

 ಮಡಿ, ಮೈಲಿಗೆ ಎರಡರಲ್ಲೂ ಅಸ್ಪಶ್ಯತೆಯೇ! ಆದರೆ ಅದರ ವ್ಯತ್ಯಾಸ ತಿಳಿಯದ ವಯಸ್ಸಿನ ಆ ಆಡುಂಬೊಲದಲ್ಲಿ ಎಲ್ಲ ಜಾತಿಯವರೂ ಇದ್ದರು. ಜಗಳ, ಕದನ, ಆಟ, ಕಾಗೆಎಂಜಲ ತಿನಿಸು, ಟೂ ಬಿಡುವುದು ಮತ್ತೆ ಸೇರುವುದು, ಎಲ್ಲವೂ ಜಾತಿಯ ಸೋಂಕಿಲ್ಲದೆ,
ಸ್ಪರ್ಶ, ಅಸ್ಪಶ್ಯತೆಯ ಹಂಗಿಲ್ಲದೆ ಒಬ್ಬರ ಮೇಲೊಬ್ಬರು ಬಿದ್ದು ಹೊಯ್ದಾಡುತ್ತಿದ್ದೆವು. ನನ್ನ ಗೆಳೆಯ ಗೆಳತಿಯರ ಗುಂಪಿನಲ್ಲಿ ಎದುರುಗಡೆ ಮನೆಯ ಹುಡುಗ ಸೋಮುವೂ ಒಬ್ಬ. ಅವನೊಬ್ಬನೇ ಸ್ನೇಹ ಮತ್ತು ಜಗಳಕ್ಕೆ ಹತ್ತಿರವಾಗಿದ್ದವನು. ಅವನಿಗೂ ನನ್ನದೇ ವಯಸ್ಸು. ಅವನು ಬ್ರಾಹ್ಮಣ ಜಾತಿಗೆ ಸೇರಿದವನಾದ್ದರಿಂದ ಅವನ ಜೊತೆ ಆಡುವುದಕ್ಕೆ ಮನೆಯಲ್ಲಿ ಆಕ್ಷೇಪವೇನೂ ಇರಲಿಲ್ಲ. ಲಿಂಗತಾರತಮ್ಯದ ವಾಸನೆಯಂತೂ ಇರಲೇ ಇಲ್ಲ. ಮರಹತ್ತುವುದು, ಮಾವಿನ ಕಾಯಿಗೆ ಕಲ್ಲುತೂರುವುದು, ಹೂವು ಆರಿಸುವುದು, ಜಾರುಬಂಡೆ ಜಾರುವುದು ಎಲ್ಲದಕ್ಕೂ ಅವನ ಜೊತೆ. ಒಮ್ಮೆ ಸೀಬೆ ಮರಕ್ಕೆ ಎಸೆದ ಕಲ್ಲು ಸೋಮುವಿನ ಮನೆಯ ಬಾಗಿಲಿಗೇ ಬಡಿದಿತ್ತು. ಯಾರೋ ಅದು ಸೋಮೂ ಎಂದು ಬಾಗಿಲು ತೆರೆದು ಬಂದ ಅವರಕ್ಕನ ಕಣ್ಣಿಗೆ ಬೀಳದಂತೆ ಇಬ್ಬರೂ ಬಚ್ಚಿಟ್ಟುಕೊಂಡಿದ್ದೆವು.

 ಎಲ್ಲದಕ್ಕೂ ‘ಧೀ’ ಎಂದು ಮುನ್ನುಗ್ಗುವ, ಬಾಯಿ ಜೋರಿನ ಹುಡುಗಿಯಾಗಿದ್ದೆ ನಾನು. ಆಟದಲ್ಲಿ ಮೋಸವಾದರಂತೂ ಹುಚ್ಚು ನಾಯಿಯಂತೆ ಮೈಮೇಲೆ ಎಗರಿ ಹೋಗುತ್ತಿದ್ದೆ. ಗಂಡು ಹುಡುಗ ಅವನು! ಅವನನ್ನು ಹಣೀತೀಯೇನೇ?. ಮನೆಯಲ್ಲಿ ಹೆಣ್ಣಾಗಿ ಬೆಳೆಸದಿದ್ದರೇನು? ಸಮಾಜ ಬೆಳೆಸುತ್ತದಲ್ಲ! ಹೆಣ್ಣು ಮೇಲಾಗುವುದನ್ನು ಜನ ಸಹಿಸುತ್ತಿರಲಿಲ್ಲ. ಹಾಗೆ ನನಗಾದ ಅನ್ಯಾಯವೂ ಕಾಣುತ್ತಿರಲಿಲ್ಲ. ನಾನು ಬಾಲ್ಯದಲ್ಲೇ ಬಂಡಾಯದ ಹುಡುಗಿಯಾಗುವುದಕ್ಕೆ ಹೀಗೆ ಅನೇಕ ಕಾರಣಗಳು.

ಆದುದರಿಂದಲೋ ಏನೋ ನಾನು ಬಾಲ್ಯದಲ್ಲಿ ಮಡಕೆ ಕುಡಿಕೆಗಳನ್ನು ಇಟ್ಟು ಕೊಂಡು ‘ಅಮ್ಮನಾಟ, ಮನೆಯ ಆಟ ಆಡಿದ್ದಕ್ಕಿಂತ ‘ಮರಕೋತಿ, ಸೈಕಲ್ ಸವಾರಿ’ ಮಾಡಿದ್ದೇ ಹೆಚ್ಚು. ಆದ್ದರಿಂದ ನನಗೆ ಗೆಳತಿಯರು ಹೆಚ್ಚಿರಲಿಲ್ಲ. ಗೆಳೆಯರೂ ಇರಲಿಲ್ಲ. ಬಾಲ್ಯದಲ್ಲಿ ಸೋಮುವನ್ನು ಬಿಟ್ಟರೆ ಬೇರೆ ಯಾವ ಗೆಳೆಯನ ನೆನಪೂ ಆಗುವುದಿಲ್ಲ.

 ನಮ್ಮ ಮನೆ ಇದ್ದುದು ಹಳೇ ಅಗ್ರಹಾರದಲ್ಲಿ. ಎದುರಿಗೆ ಎಸ್.ಎನ್. ಪಂಡಿತರ ಗಲ್ಲಿ. ಒಂದು ಮೈಲು ದೂರದಲ್ಲೇ ಮೈಸೂರು ಅರಮನೆಯ ಮದ್ದಿನ ಮನೆ. ಅಲ್ಲಿ ದೊಡ್ಡ ದೊಡ್ಡ ತೋಪುಗಳನ್ನು ಇಟ್ಟಿರುತ್ತಿದ್ದರು. ಅರಮನೆಯ ಶುಭಸಮಾಚಾರಗಳನ್ನು ಏನಾದರೂ ತಿಳಿಸಬೇಕಾದರೆ ಮದ್ದಿನ ಮನೆಯಿಂದ ಇಪ್ಪತ್ತೊಂದು ಸಲ ಗುಂಡು ಹಾರಿಸುತ್ತಿದ್ದರು.

ನಾನು ಮತ್ತು ಸೋಮು ಉಸಿರುಕಟ್ಟಿಕೊಂಡು ಗದ್ದುಗೆ ತಲುಪಿ, ಶಂಕರಮಠ ದಾಟಿ, ಉತ್ತರಾದಿ ಮಠ ಹಾಯ್ದು, ಆನೆ ಕರುಹಟ್ಟಿ ಬದಿಯಲ್ಲೇ ಸರಿದು, ಮದ್ದಿನ ಮನೆ ತಲುಪುವ ಹೊತ್ತಿಗೆ ಸರಿಯಾಗಿ ಕೊನೆಯ ಗುಂಡಿನ ಢಮ್ ಸದ್ದು ಕೇಳಿಸುತ್ತಿತ್ತು. ಅಸಾಧ್ಯವೆನ್ನುವುದೇ ಇಲ್ಲ ಎನ್ನುವ ಹುಮ್ಮಸ್ಸಿನ ವಯಸ್ಸು. ಬೀಸುತ್ತಿದ್ದ ಗಾಳಿ, ಏದುಸಿರು, ಗುರಿ ಸಾಧಿಸಿದ ಖುಷಿ ಎಲ್ಲವೂ ಇದೀಗ ಮೈತುಂಬಿಕೊಂಡಂತೆ ಭಾಸವಾಗುತ್ತಿದೆ. ಈ ಮಾತಿಗೆ ಆಗಲೇ ಆರು ದಶಕಗಳು ಸರಿದು ಹೋಗಿವೆ.

ಯಾಕೆ? ಮುಖ ಊದಿಸಿಕೊಂಡು ಕೂತಿದೀಯ? ಅಣ್ಣನೋ ಅಕ್ಕನೋ ಛೇಡಿಸುತ್ತಿ ದ್ದರು. ಯಾಕೆಂದರೆ ನಾನು ಸುಮ್ಮನೆ ಮೌನವಾಗಿ ಕುಳಿತುಕೊಳ್ಳುವ ಜಾಯಮಾನದವಳೇ ಆಗಿರಲಿಲ್ಲ. ಬಾಲ್ಯದಲ್ಲೇ ಹಕ್ಕು ಸ್ಥಾಪಿಸುವ ಹಟ, ಪಾಟಿ ಸವಾಲು. ಸೋಮುವಿನ ಜೊತೆಗೂ ಹತ್ತಿದ ಜಗಳ ಹರಿಯುತ್ತಿರಲಿಲ್ಲ. ಮಾರಾಮಾರಿ ಕುಸ್ತಿಯಾಗಿ ಕೋಪ ಮಾಡಿಕೊಂಡು ಮನೆಗೆ ಬರುವುದಕ್ಕಿಲ್ಲ, ಹಿಂದೆಯೇ ಏನೂ ಆಗಿಲ್ಲವೆಂಬಂತೆ ಸೋಮುವಿನ ಸವಾರಿ. ಮಾತಿಗೊಮ್ಮೆ ಅವನು ನನ್ನನ್ನು ‘ಲೇ ಗಿರಿಜಾ, ಲೇ ಗಿರಿಜಾ’ ಎನ್ನುತ್ತಿದ್ದ. ಮನೆಯವರೆಲ್ಲಾ ಅದನ್ನೇ ಹೇಳಿ ಆಡಿಕೊಳ್ಳುತ್ತಿದ್ದರು. ನಾನೂ ಅವನಿಗೆ ಯಾವುದೇ ಮುಲಾಜಿಲ್ಲದೇ ‘ಹೋಗೋಲೋ’ ಎನ್ನುತ್ತಿದ್ದೆ. ಅದೆಲ್ಲಿ ಹುಟ್ಟಿ ಬಿಟ್ಟಳೋ ಹಸುವಿನ ಹುಟ್ಟೆಯಲ್ಲಿ ಹುಲಿ ಎಂದು ಅಪರೂಪಕ್ಕೆ ಅಪ್ಪನ ಆಕ್ಷೇಪಣೆ ಇರುತ್ತಿತ್ತು. ಸೋಮು ಆಗ ಕಿಸಕ್ಕನೆ ನಕ್ಕಿದ್ದನೇ?

ನಾನು ಮೈಸೂರಿನ ‘ಅಕ್ಕನ ಬಳಗ’ ಶಾಲೆಯಲ್ಲಿ ಓದುತ್ತಿದ್ದಾಗ ಅವನು ದಳವಾಯಿ ಶಾಲೆಯಲ್ಲಿ ಓದುತ್ತಿದ್ದ. ಖಾಕಿ ಚಡ್ಡಿ, ಬಿಳಿ ಅಂಗಿಯ ಸಮವಸ್ತ್ರದಲ್ಲಿ ಅವನು ಹೊರಟನೆಂದರೆ ‘ದಳವಾಯಿ ದೊಡ್ಡಿ ಹರಕಲ್ ಚಡ್ಡಿ’ ಎಂದು ಕೂಗುತ್ತಿದ್ದೆ. ಮೂಗಿನ ಹೊಳ್ಳೆಗಳನ್ನು ಅರಳಿಸಿ, ಹಲ್ಲುಮುಡಿ ಕಚ್ಚಿ ಗುದ್ದುವಂತೆ ಕೈ ಮುಂದು ಮಾಡುತ್ತಿದ್ದ. ಆ ಕಾಲದಲ್ಲಿ ದಳವಾಯಿ ಶಾಲೆ, ಮಕ್ಕಳ ಬಾಯಲ್ಲಿ ಹೀಗೆಯೇ ‘ಪ್ರಸಿದ್ಧವಾಗಿತ್ತು’. ಶಾಲೆಗೆ ಹೋಗುತ್ತಿದ್ದೆವಷ್ಟೇ ಪಾಠದ ವಿಷಯವಾಗಿ ಒಂದು ದಿನವಾದರೂ ಮಾತನಾಡಿದ ನೆನಪೇ ಇಲ್ಲ. ಮನೆಯವರೂ ಹೋಂ ವರ್ಕ್ ಮಾಡಿದ್ಯಾ? ಏನು ಓದಿದೆ? ಉಹ್ಞು ಸುತರಾಂ ಮೂಗು ತೂರಿಸುತ್ತಿರಲಿಲ್ಲ! ಹಾಗೆ ನೋಡಿದರೆ ಮನೆ ಪಾಠವೇ ಇರಲಿಲ್ಲ. ಬರೀ ಆಟ ಊಟ ಓಟವೇ! ಬ್ಲೇಕ್‌ನ ಅಪ್ಪಟ ಮುಗ್ಧ ಹಾಡಿನ ಲೋಕ. ನಮ್ಮಿಬ್ಬರ ಮನೆಯ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಕೆಳಗೆ ಎಳೆದುಕೊಂಡರೆ ಮೇಲಕ್ಕಿಲ್ಲ. ಮೇಲಕ್ಕೆ ಎಳೆದರೆ ಕೆಳಕ್ಕಿಲ್ಲ. ಹಾಸು ಹೊದೆಯಲು ಇದ್ದದ್ದು ಬಡತನವೊಂದೇ. ಅವರ ಮನೆಯಲ್ಲೂ ನಾಲ್ಕೈದು ಜನ ಮಕ್ಕಳು. ನಮ್ಮ ಮನೆಯಲ್ಲೂ ನಾವು ಐದು ಜನ. ಕೊರತೆಯಲ್ಲೇ ಬದುಕಿದವರು ನಾವು. ಮನೆಯಿಂದ ದಾರಿದ್ರ್ಯ ತೊಲಗಿದರೂ, ಮನಸ್ಸಿನಿಂದ ತೊಲಗಬೇಕಲ್ಲಾ? ಚಿಂದಿಗಿರಿ ಮಾಡಬೇಡ ಎಂದು ಮಕ್ಕಳು ಇಂದು ಮೂತಿ ತಿವಿಯುತ್ತಾರೆ.

ಸತ್ಯಾ..! ದಿಂಬು ತೊಗೊಂಡು ಬಾರೋ ಮೂಲೆಯಲ್ಲಿ ಚಾಪೆ ಹಾಸಿಕೊಂಡು ಕುಳಿತ ಸೋಮುವಿನ ತಂದೆ ಅವರಣ್ಣನಿಗೆ ಆದೇಶ ಮಾಡುತ್ತಿದ್ದ ಮಾತು, ಚಿತ್ರ ಮಾತ್ರ ಯಾಕೆ ಮನಸ್ಸಿನ ಆಳದಲ್ಲಿ ಊರಿಬಿಟ್ಟಿದೆ ಎಂದು ಅರ್ಥವಾಗುವುದಿಲ್ಲ.

 ನಮ್ಮ ಮನೆಯಲ್ಲಾಗಲೀ, ಅವರ ಮನೆಯಲ್ಲಾಗಲೀ ‘ದಿಂಬು’ ಎಂದರೆ ಹಳೆ ಬಟ್ಟೆಗಳನ್ನೆಲ್ಲಾ ಸೇರಿಸಿ ಮಾಡಿದ ಒಂದು ಗಂಟು ಅಷ್ಟೇ. ಎಣ್ಣೆ ಜಿಡ್ಡಿನಿಂದ ಕಮಟುಗಟ್ಟಿದ ಗಂಟು! ಒಮ್ಮೊಮ್ಮೆ ‘ಗಂಟು ತೊಗೊಂಡು ಬಾ’ ಎಂದೂ ಹೇಳುವುದಿತ್ತು. ಇಲ್ಲಿ ಏನು ನಿಮ್ಮಜ್ಜನ ಗಂಟು ಇದೆಯಾ? ಎಂಬ ಮಾತು ಹಿರಿಯರ ಮಾತಿನ ಚಕಮಕಿಯಲ್ಲಿ ಆಗಾಗ ನುಸುಳುತ್ತಿದ್ದುದೂ ಉಂಟು. ಎಳೆ ವಯಸ್ಸಿನ ಮಕ್ಕಳಾದ ನಮಗೂ ಎರಡು ‘ಗಂಟುಗಳ’ ನಡುವಿನ ಅಗಾಧ ವ್ಯತ್ಯಾಸ ಚೆನ್ನಾಗಿ ಗೊತ್ತಿರುತ್ತಿತ್ತು.

 ಒಂದು ಪೈಸೆಗೆ ಕಳ್ಳೇಕಾಯಿ ಮಿಠಾಯಿ (ಚಿಕ್ಕಿ) ಒಂದು ತುಂಡು. ಕೊಟ್ಟ ದುಡ್ಡಿಗೆ ತಕ್ಕಂತೆ ಮಿಠಾಯಿ ಮುರಿದುಕೊಡುತ್ತಿದ್ದ ಬದಿಯ ಅಂಗಡಿಯ ಕಾಕ. (ಮೈಸೂರಿನ ಕಡೆ, ಬ್ಯಾರಿ ಗಳಿಗೆ ಕಾಕಾ- ಕಾಕನ ಅಂಗಡಿ ಎನ್ನುತ್ತಾರೆ) ಎರಡು ಪೈಸೆಗೆ ಸ್ವಲ್ಪ ದೊಡ್ಡ ಹಾಲುಕೋವ.

 ಒಂದೆರಡು ಪೈಸೆ ಅಕಸ್ಮಾತ್ ಸಿಕ್ಕರೆ ಕೊಂಡುಕೊಳ್ಳುತ್ತಿದ್ದುದು ಇವನ್ನೇ. ಅಮ್ಮನೇನಾದರೂ ಸಾಮಾನು ತರಲು ಕಳುಹಿಸಿದರೆ ಈ ಮಿಠಾಯಿಗಳು ಲಂಚದ ರೂಪದಲ್ಲಿ ಸಿಗುತ್ತಿದ್ದವು. ಹಾಗೆಂದು ಲಂಚವನ್ನು ಯಾರೂ ‘ಇಕೋ’ ಎಂದು ಕೊಡುತ್ತಿರಲಿಲ್ಲ. ಅಮ್ಮನಿಗೆ ಹೇಳದೆಯೇ ಸಾಮಾನಿನ ಲೆಕ್ಕದಲ್ಲಿ ಗುಟ್ಟಾಗಿ ಗುಳುಂ ಮಾಡಿಬಿಡುತ್ತಿದ್ದ ಲಂಚವದು. ಮನೆಗೆ ಯಾರಾದರೂ ಅತಿಥಿಗಳು ಬಂದ ಸಮಯದಲ್ಲಿ ಅಮ್ಮ ಲೆಕ್ಕ ಕೇಳುತ್ತಿರಲಿಲ್ಲವಲ್ಲ? ಆಮೇಲೆ ನೋಡಿಕೊಂಡರಾಯಿತು, ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯಸ್ಸು! ಕಾಗೆ ಎಂಜಲು ಮಾಡಿಕೊಂಡು ನಾನು ಸೋಮು ಇಬ್ಬರೂ ಮಿಠಾಯಿ ಹಂಚಿಕೊಳ್ಳುತ್ತಿದ್ದೆವು. ಕಾಗೆ ಎಂಜಲೆಂದರೆ ಹಾಕಿರುವ ಅಂಗಿತುದಿಯೊಳಗೆ ಮಿಠಾಯಿಯನ್ನಿಟ್ಟು ಕಡಿದು ಪಾಲು ಮಾಡಿಕೊಳ್ಳುವುದು. ಇದು ಆ ಕಾಲದ ಮಕ್ಕಳದೇ ಮಡಿಯ ರೀತಿ!

ನಾನು ಮನೆಯಿಂದ ಹೊರಗೆ ಬಂದರೆ ಸಾಕು, ಪಂಜರದಿಂದ ಹೊರ ಬರುವ ಖುಷಿಯಲ್ಲಿ ಅವನೂ ಬರುತ್ತಿದ್ದ. ಒಮ್ಮೊಮ್ಮೆ ಇಬ್ಬರಿಗೂ ಒಟ್ಟಿಗೆ ಅಂಗಡಿಗೆ ಹೋಗುವ ಕೆಲಸ ಎದುರಾಗುತ್ತಿತ್ತು. ಆಗಂತೂ ಇಬ್ಬರಿಗೂ ಕಳ್ಳೇಕಾಯಿ ಮಿಠಾಯಿಯ ಸಮಾರಾಧನೆಯೇ!

 ಈಗಲೂ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಮಾಡುವಾಗಲೆಲ್ಲಾ ಲೋನಾವಳ ನಿಲ್ದಾಣ ಬಂದರೆ ಸಾಕು ‘’ಚಿಕ್ಕಿ..ಚಿಕ್ಕಿ ಲೋನಾವಳ ಚಿಕ್ಕಿ’ ಎಂದು ಮೂತಿಗೆ ಹಿಡಿಯುತ್ತಾರೆ. ಚೆಂದದ ರಟ್ಟಿನ ಪೆಟ್ಟಿಗೆಯಲ್ಲಿ ಎಷ್ಟೊಂದು ಬಗೆಯ ಚಿಕ್ಕಿಗಳು! ಹೀಗೆ ಪ್ರಯಾಣಮಾಡುವಾಗ ಪ್ರತೀ ಸಲವೂ ಲೋನಾವಳ ನಿಲ್ದಾಣದಲ್ಲಿ ಸೋಮು ಬಂದೇ ಬರುತ್ತಾನೆ. ಏಳನೆಯ ತರಗತಿಯಲ್ಲಿದ್ದಾಗ ನಾವು ಮೈಸೂರು ಬಿಟ್ಟು ಬೆಂಗಳೂರಿಗೆ ಬಂದೆವು. ಬೆಂಗಳೂರಿನ ಶಾಲೆಯ ಹೊಸ ಗೆಳೆಯ ಗೆಳತಿಯರ ಗರ್ದಿಯಲ್ಲಿ ಸೋಮು ಹಿನ್ನೆಲೆಗೆ ಸರಿದುಬಿಟ್ಟ.

 ನಾನು ಎಂ.ಎ. ಮಾಡುವಾಗ ಬೆಂಗಳೂರಿನ ನಮ್ಮ ಮನೆಗೊಮ್ಮೆ ಬಂದಿದ್ದ. ಆವೇಳೆಗೆ ಬ್ಲೇಕ್‌ನ ಮುಗ್ಧಹಾಡು ಮರೆತು ಹೋಗಿತ್ತು. ‘ಕುರಿಮರಿ’ಯ ಜಾಗದಲ್ಲಿ ‘ಹುಲಿ’ ನುಸುಳುತ್ತಿತ್ತು.
ಕ್ಯಾಂಪಸ್ ಮೆಟ್ಟಿಲು ಹತ್ತಿದ ಅಮಲು ಬೇರೆ ತಲೆಗೇರಿತ್ತು. ಬಾಲ್ಯದ ಸಂಪರ್ಕವೂ ಕಡಿದು ಹೋಗಿತ್ತು. ಬ್ಲೇಕ್, ಮಿಲ್ಟನ್, ಅನಂತಮೂರ್ತಿ, ದೇಸಾಯಿ, ಎಜ್ರಾಪೌಂಡ್ ಬೌದ್ಧಿಕ ಚರ್ಚೆಗೆ
ಬೇರೊಬ್ಬ ಗೆಳೆಯ ದೊರೆತಿದ್ದ. ಸೋಮುವಿನ ಜೊತೆ ಔಪಚಾರಿಕ ಮಾತುಗಳು ಕೇವಲ ಗಂಟಲಿ
ನಿಂದ ಬಂದಿದ್ದವು. ಕಾಗೆ ಎಂಜಲ ನೆನಪೇ ಅಸಹ್ಯವೆನಿಸಿತು. ಅವನು ಹೊರಟು ಹೋದ.

 ಈಗ ಎಲ್ಲಿರುವನೋ? ನನ್ನ ಹಾಗೆ ಅವನೂ ಮಕ್ಕಳು ಮೊಮ್ಮಕ್ಕಳೆಂಬ ಆನಂದಸಾಗರದಲ್ಲಿ ಮುಳುಗೇಳುತ್ತಿರಬಹುದೇ! ಸಂಸಾರ ಕಮರಿಯಲ್ಲಿ ಬಿದ್ದಿರಬಹುದೇ? ಅಥವಾ....