ಎಲುಗನೆಂಬ ಪ್ರಧಾನಿಯೂ, ಚವುಡನೆಂಬ ಪ್ರೇತಾತ್ಮವೂ...

Update: 2023-01-05 15:49 GMT

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ, ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ‘ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ‘ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು.  ಕುಂ. ವೀರಭದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಜೊತೆಗೆ ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ ಅಲ್ಲದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ  ಸಾಹಿತ್ಯ  ಪರಿಷತ್ತು  ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.

ಕುಂ. ವೀರಭದ್ರಪ್ಪ

ಸ್ವರ್ಗಲೋಕ ತನ್ನ ಪ್ರತಿಸ್ಪರ್ಧಿ ನರಕಲೋಕ ಹಲವು ಯೋಜನಗಳಷ್ಟು ದೂರವಿದೆ ಎಂದು ಭಾವಿಸಿತ್ತು. ಆದರೆ ಆ ಪಾಪಿಗಳ ಲೋಕ ತೀರಾ ಹತ್ತಿರವಿದೆ ಎಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿತ್ತು. ಆರಂಭದಲ್ಲಿ ಅದು ಅದನ್ನು ನಿರ್ಲಕ್ಷಿಸಿತ್ತು. ಅದಕ್ಕೂ ಹಿಂದೆ ಆ ಎರಡೂ ಲೋಕಗಳ ಸ್ಥಳೀಯ ಆಡಳಿತ ವ್ಯವಸ್ಥೆ ಕುರಿತಂತೆ, ಆತ್ಮಗಳ ಕೊಡುಕೊಳ್ಳುವಿಕೆ ಕುರಿತಂತೆ ಒಂದು ಸುತ್ತಿನ ಮಾತುಕತೆ ಸಹ ನಡೆದಿತ್ತು. ಅಕಸ್ಮಾತ್ ನಿಮ್ಮ ಲೋಕದವರು ನಮ್ಮ ಲೋಕದ ಗಡಿ ಉಲ್ಲಂಘಿಸಿದರೆ ಯಾರು ಹೊಣೆ ಎಂದು ನರಕಲೋಕದ ಮುಖ್ಯ ಆಡಳಿತಾಧಿಕಾರಿ ಪಂ ಸಣ್ಣೀರ ಆಕ್ಷೇಪ ಸಲ್ಲಿಸಿದನು, ಅದಕ್ಕೆ ಸ್ವರ್ಗಲೋಕದ ಆಡಳಿತಾಧಿಕಾರಿ ಡಾ. ದೊಡ್ಡೀರ ಮತ್ತವನ ಸಹೋದ್ಯೋಗಿಗಳು ನಗಾಡಿದ್ದರು.

ಅವರಲ್ಲಿ ನೈರ್ಮಲ್ಯಾಧಿಕಾರಿ ಪೈಕಿ ಓಬಲೇಸು ನಮ್ಮ ಸ್ವರ್ಗವಾಸಿಗಳು ಗಡಿರೇಖೆ ಉಲ್ಲಂಘಿಸುವುದೊತ್ತಟ್ಟಿಗಿರಲಿ, ನಮ್ಮ ಪ್ರಜಾನಿಕದ ಕಟ್ಟಕಡೆಯ ವ್ಯಕ್ತಿಯ ಆತ್ಮ ಸಹ ನಿಮ್ಮ ಲೋಕವಿರುವ ದಿಕ್ಕಿನ ಕಡೆ ತಲೆ ಹಾಕಿ ಮಲಗುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆ ಮಾತಿಗೆ ಬೆಂಬಲವಾಗಿ ಸ್ವರ್ಗಲೋಕದ ಅಧೀಕ್ಷಕ ದುರ್ಗಪ್ಪ ನಿಮ್ಮ ಲೋಕದವರು ಗಡಿ ರೇಖೆಯ ಬಳಿ ನಿಂತು ನಮ್ಮ ಲೋಕದ ಕಡೆ ದೃಷ್ಟಿ ಹಾಯಿಸಿದರೆ ನಾವು ಹಿಡಿದು ವಿಚಾರಣೆಗೊಳಪಡಿಸುತ್ತೇವೆ, ಏಕೆಂದರೆ ಇದು ನಮ್ಮ ಲೋಕದ ಪಾವಿತ್ರ್ಯ ಹಾಗೂ ನೈರ್ಮಲ್ಯದ ಪ್ರಶ್ನೆ ಎಂದು ಖಾರವಾಗಿ ಹೇಳಿದ. ಅವರ ಮಾತಿನಿಂದ ಸೂಕ್ಷ್ಮಮತಿ ಸಣ್ಣೀರನ ಮನಸ್ಸಿಗೆ ನೋವಾಯಿತು, ಆತ ತಲೆ ತಗ್ಗಿಸಿ ಅಯ್ಯೋ ನತದೃಷ್ಟ ಲೋಕವೇ ಎಂದು ಸ್ವಗತವಾಗಿ ಮರುಗಿದ. ತಮ್ಮ ಸಹಚರರ ಕಡೆ ಪ್ರಶ್ನಾರ್ಥಕ ನೋಟ ಬೀರಿದನು.

ಆತನ ಮನದಿಂಗಿತ ಅರ್ಥ ಮಾಡಿಕೊಂಡ ಶಿಕ್ಷಾಸಂಹಿತೆ ವಿಭಾಗದ ಮುಖ್ಯಸ್ಥ ತಿಂದಪ್ಪ ನಮ್ಮ ನರಕಲೋಕವನ್ನು ನಿಮ್ಮ ಹರಿತ ನುಡಿಗಳಿಂದ ಅಪಹಾಸ್ಯ ಮಾಡದಿರಿ ಸನ್ಮಾನ್ಯರೆ, ನಮ್ಮ ಲೋಕಕ್ಕೆ ಆಗಮಿಸುವ ಪಾಪಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ, ಪಾಪಿಗಳಿರುವ ಕಡೆ ರೋಗರುಜಿನ ಸಂಕಟ ನೋವು ಸಾಮಾನ್ಯ. ಲೋಕದ ವಿಸ್ತೀರ್ಣ ಹೆಚ್ಚಿಸುವಂತೆಯೂ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡುವಂತೆಯೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿರುವೆವು. ಅಲ್ಲಿಯವರೆಗೆ ನಮ್ಮ ಲೋಕದ ನಿವಾಸಿಗಳಿಂದ ಚಿಕ್ಕಪುಟ್ಟ ತೊಂದರೆಗಳು ಸಂಭವಿಸಿದರೆ ಕ್ಷಮಿಸಿರೆಂದು ವಿನಂತಿಸುವೆನು ಎಂದು ಹೇಳಿದ.

ಆತನ ಮಾತಿನಿಂದ ಕೊಟ್ರಪ್ಪ ಮತ್ತಾತನ ಸಂಗಡಿಗರ ಮನಸ್ಸಿಗೆ ನೋವಾಯಿತು. ಪರಿಸ್ಥಿತಿ ಹೀಗಿರುವಾಗ ಖಾರವಾಗಿ ಮಾತಾಡುವುದು ಸರಿ ಅಲ್ಲವೆಂದು ಭಾವಿಸಿದನು. ಮುಖ್ಯಾಡಳಿತಾಧಿಕಾರಿಯ ಕಣ್ಸನ್ನೆಯನ್ನು ಸ್ವರ್ಗಲೋಕದ ರಕ್ಷಣಾಧಿಕಾರಿ ಠೊಣ್ಣಿ ಅರ್ಥ ಮಾಡಿಕೊಂಡು ನಿಮ್ಮ ಸಂಕಟ ನಮಗೆಲ್ಲ ಅರ್ಥವಾಯಿತು, ಆದರೆ ನಮ್ಮ ಲೋಕನಿವಾಸಿಗಳು ನಿಮ್ಮ ಪ್ರಜೆಗಳ ಹಾಗೆ ಪಾಪಿಗಳಲ್ಲ ಪುಣ್ಯವಂತರು, ಅವರಿಗೆ ಕಿಂಚಿತ್ ನೋವಾಗದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ನಿಮ್ಮವರನ್ನು ನೀವು ನಿಯಂತ್ರಿಸಲು ಕಠಿಣ ಕಾನೂನು ಜಾರಿಗೊಳಿಸಿದರೆ ಸಾಕು ಎಂದು ಮನವಿ ಮಾಡಿಕೊಂಡ.

ಇಂಥ ಆಡಳಿತಾತ್ಮಕ ಮಾತುಕತೆಗಳು ಒಂದೆ ಎರಡೆ, ಹಲವು ಸಲ ನಡೆದರೂ ಪ್ರಯೋಜನವಾಗಲಿಲ್ಲ, ಅಲ್ಲದೆ ನರಕಲೋಕಕ್ಕೆ ಸತ್ಯಯುಗದಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು, ಆ ಕಾಲದಲ್ಲಿ ಪಾಪಿಗಳ ಪ್ರಮಾಣ ಅತ್ಯಲ್ಪವಿತ್ತು, ಆ ಕಾಲದ ಉಭಯಲೋಕಗಳ ವರಿಷ್ಠರಿಗೆ ಭವಿಷ್ಯದ ಅರಿವು ಇರಲಿಲ್ಲ. ಆದರೆ ಯುಗದಿಂದ ಯುಗಕ್ಕೆ ಪಾಪಿಗಳ ಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿತು, ಆದರೆ ಕಲಿಯುಗದಲ್ಲಿ ಅದರ ಪ್ರಮಾಣ ಗರಿಷ್ಠ ಮಟ್ಟ ತಲುಪಿತು, ಅದರಲ್ಲೂ ಇತ್ತೀಚಿನ ದಶಕಗಳಲ್ಲಿ ನರಕಲೋಕದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಯಿತು, ನರಕಲೋಕದಲ್ಲಿನ ನಿವಾಸಿಗಳು ಸಂಘಟಿತರಾಗುವುದು, ಮೂಲಭೂತ ಸೌಕರ್ಯಗಳಿಗೆ ಹೋರಾಡುವುದು, ಇದು ಹೇಳಿಕೇಳಿ ನರಕ, ಕುಂದುಕೊರತೆಗಳು ಸಹ ಶಿಕ್ಷೆಯ ಒಂದು ಭಾಗ ಎಂದು ತಿಳಿಯಿರಿ ಎಂಬಂಥ ಮಾತುಗಳನ್ನು ಕೇಳಿಸಿಕೊಳ್ಳುವುದು ಮಾಮೂಲಾಯಿತು.

ಕಾಲ ಉರುಳಿದಂತೆ ನರಕಲೋಕದಲ್ಲಿನ ಪಾಪಿಗಳು ರೋಸಿದರು. ನೆರೆ ಸ್ವರ್ಗಲೋಕದಲ್ಲಿ ತಮ್ಮಿಂದ ತೊಂದರೆಗೀಡಾಗಿ ಅಕಾಲಮೃತ್ಯುವಿಗೀಡಾಗಿರುವವರು ಸುಖಸಂತೋಷದಿಂದಿರುವುದು ಎಂದರೇನು? ಅದಕ್ಕೆ ಕಾರಣಕರ್ತರಾದ ತಾವು ಈ ದರಿದ್ರಲೋಕದಲ್ಲಿ ಅಷ್ಟಕಷ್ಟಗಳನ್ನು ಅನುಭವಿಸುವುದೆಂದರೇನು? ಇದು ಯಾವ ನ್ಯಾಯ! ಎಂದು ತುಲನಾತ್ಮಕವಾಗಿ ಯೋಚಿಸಲಾರಂಭಿಸಿದರು. ಆದರೆ ತಮ್ಮ ಪಂಚೇಂದ್ರಿಯಗಳ ಪೈಕಿ ಯಾವ ಇಂದ್ರಿಯ ಸಹ ಅದನ್ನು ಅನುಭವಿಸಿರಲಿಲ್ಲ, ಸಮಾಧಾನಕರ ಅಂಶವೆಂದರೆ ಉಭಯಲೋಕಗಳ ಗಡಿರೇಖೆ ಭದ್ರವಾಗಿರಲಿಲ್ಲ. ಕಳೆದ ಕೆಲವು ಯುಗಗಳಿಂದ ಭದ್ರತಾಸಿಬ್ಬಂದಿಯ ನೇಮಕಾತಿ ನಡೆದಿರಲಿಲ್ಲ, ಆ ಪುರಾತನಯುಗದ ಕಾವಲುಗಾರರು ಏಕತಾನತೆಯಿಂದ ರೋಸಿದ್ದರು, ಮುಂದಿನ ದಿನಗಳಲ್ಲಿ ಹಿರಿಯ ತಲೆಮಾರಿನ ಕುಖ್ಯಾತ ಪಾಪಿಗಳನ್ನು ಗಡಿರೇಖೆಯ ರಕ್ಷಣೆಗೆ ನಿಯೋಜಿಸಲಾಯಿತು.

ಇಂಥ ಕೆಲವು ನ್ಯೂನತೆಗಳಿಂದ ನರಕಲೋಕದ ಆಡಳಿತದ ಗುಣಮಟ್ಟ ಕುಸಿಯಿತು. ಬುದ್ಧಿವಾದ ಹೇಳುವವರು, ಉಪಯುಕ್ತ ಸಲಹೆ ಸೂಚನೆ ನೀಡುವವರು ಇಲ್ಲವಾದರು. ಹೀಗಾಗಿ ನರಕಲೋಕದ ಕೆಲವು ನಿಷ್ಣಾತ ಪಾಪಿಗಳು ಗಡಿರೇಖೆ ಉಲ್ಲಂಘಿಸಿ ಸ್ವರ್ಗಲೋಕದೊಳಗೆ ನುಸುಳಲಾರಂಭಿಸಿದರು, ಅದೂ ಪುಣ್ಯವಂತರ ಮುಖವಾಡ ಧರಿಸಿ! ಮಹಾಸಜ್ಜನರಂತೆ ವೇಷಮರೆಮಾಚಿ! ಪುನುಗುಬೆಕ್ಕುಗಳು ಛದ್ಮವೇಷಧರಿಸಿದ್ದರೂ ಅವುಗಳ ದೇಹದಿಂದ ಪರಿಮಳ ಯಾವ ರೀತಿ ಪಸರಿಸುವುದೊ ಅದೇ ಪ್ರಕಾರ ಪಾಪಿಗಳು ಮಾರುವೇಷದಲ್ಲಿದ್ದರೂ ಅವರವರ ಶರೀರದ ಶ್ವೇದರಂಧ್ರಗಳ ಮೂಲಕ ಪಾಪಗಳ ಪರಿಣಾಮ ನಿಧಾನವಾಗಿ ಸ್ವರ್ಗಲೋಕದ ಸಜ್ಜನಿಕೆಯನ್ನು ಹಾಳುಗೆಡುವಲಾರಂಭಿಸಿತು.

ಹಂತಹಂತವಾಗಿ ಅರಿಷಡ್ವರ್ಗಗಳು ಕೆರಳಲಾರಂಭಿಸಿದವು, ಜಿತೇಂದ್ರಿಯರು ಚಿತ್ತಚಾಪಲ್ಯಕ್ಕೊಳಗಾದರು. ಋಷಿಸದೃಶರಂತಿದ್ದವರು ಇನ್ನೋರ್ವ ಪುಣ್ಯವಂತರ ಪತ್ನಿಯರ ಸಂಗವನ್ನಾಪೇಕ್ಷಿಸಲಾರಂಭಿಸಿದರು, ಮಹಾದಾನಿಗಳೆನ್ನಿಸಿದ್ದವರು ಪರರ ಧನವನ್ನು ಕಳವು ಮಾಡಲಾರಂಭಿಸಿದರು! ಇಂಥ ದುಷ್ಕೃತ್ಯಗಳಿಂದ ಅಲ್ಲಿನ ಪುಣ್ಯಭಾಜನರು ಆಡಳಿತ ವ್ಯವಸ್ಥೆ ವಿರುದ್ಧ ದಂಗೆ ಎದ್ದರು. ಇದರಿಂದ ಅಲ್ಲಿನ ಗೃಹ ಇಲಾಖೆ ಎಚ್ಚೆತ್ತಿತು. ಸ್ವರ್ಗಲೋಕದ ಗೂಢಚಾರ ಸಂಸ್ಥೆ ಛಪ್ಪನ್ನಾರು ಲೋಕಗಳಲ್ಲಿ ಹೆಸರು ಮಾಡಿತ್ತಷ್ಟೆ, ಅದರ ಕ್ಷಿಪ್ರ ಕಾರ್ಯಾಚರಣೆಯಿಂದ ಒಂದೇ ದಿವಸದಲ್ಲಿ ಅಸಂಖ್ಯಾತ ನರಕಲೋಕ ಮೂಲದ ಛದ್ಮವೇಷಧಾರಿಗಳು ಬಂಧಿಸಲ್ಪಟ್ಟರು. ಅವರೆಲ್ಲ ಆಯಕಟ್ಟಾದ ಸ್ಥಳಗಳನ್ನಾಕ್ರಮಿಸಿ ದುಷ್ಕೃತ್ಯವೆಸಗತೊಡಗಿದ್ದರು.

+ಅವರ ಪಾಪಕೃತ್ಯಗಳು ಸ್ವರ್ಗ ಲೋಕದಲ್ಲೆಲ್ಲಾ ಹರಡಿವೆ ಎಂಬ ಸಂಗತಿ ತಿಳಿದು ಅಲ್ಲಿನ ಪ್ರಧಾನಮಂತ್ರಿ ಕ್ಯಾತೇಗೌಡ ದಿಗ್ಭ್ರಾಂತರಾದರು. ಸ್ವರ್ಗಲೋಕದ ಪ್ರಥಮಪ್ರಜೆ ನಿರ್ದೇಶನದಂತೆ ತಜ್ಞರಸಮಿತಿಯನ್ನು ನೇಮಿಸಲಾಯಿತು. ಆ ಸಮಿತಿ ಹಲವು ಮಾಸಗಳ ಕಾಲ ಬೌದ್ಧಿಕವಾಗಿ ಶ್ರಮಿಸಿ ಸರಕಾರಕ್ಕೆ ವರದಿ ಸಲ್ಲಿಸಿತು, ಆ ವರದಿಯಲ್ಲಿ ಏನಿತ್ತೆಂದರೆ..

ಪಾಪ ಸಂಬಂಧೀ ರೋಗಾಣುಗಳಿಗೆ ಚುಚ್ಚುಮದ್ದು ಕಂಡು ಹಿಡಿಯುವುದು, ಆ ಚುಚ್ಚುಮದ್ದನ್ನು ಸ್ವರ್ಗಲೋಕವಾಸಿಗಳ�