ಇದ್ಯಾವ ಸಂಸ್ಕೃತಿ ?

Update: 2023-01-06 07:32 GMT

ಕರಾವಳಿಯ ಪ್ರಮುಖ ಮಹಿಳಾ ಸಾಹಿತಿಗಳಲ್ಲೋರ್ವರಾಗಿರುವ ಶಿಕ್ಷಕಿ-ಸಮಾಜಸೇವಕಿ ಬಿ.ಎಂ.ರೋಹಿಣಿ ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ. ಮಂಜೇಶ್ವರ,ಬಜ್ಜೋಡಿ,ಕುಡುಪು ಮತ್ತು ಬಿಕರ್ನಕಟ್ಟೆಯಂತಹ ಪ್ರದೇಶಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಎರಡು ಕಥಾ ಸಂಕಲನ, 6 ಲೇಖನ ಸಂಗ್ರಹ ಸಹಿತ ಸುಮಾರು 23 ಕೃತಿಗಳನ್ನು ಇವರು ಹೊರತಂದಿದ್ದಾರೆ. ಅವರ ಆತ್ಮಚರಿತ್ರೆ ‘ನಾಗಂದಿಗೆಯೊಳಗಿಂದ’ ಇತ್ತೀಚೆಗೆ ಪ್ರಕಟಗೊಂಡ ಮಹತ್ವದ ಕೃತಿ.

ಬಿ.ಎಂ. ರೋಹಿಣಿ,  ಕುಡುಪು

ಸಮಾಜದಲ್ಲಿ ಜನರು ಮಾಡಬಾರದ್ದನ್ನು ಮಾಡಿದಾಗ, ನೋಡಬಾರದ್ದನ್ನು ನೋಡಿದಾಗ ನಮ್ಮಜ್ಜಿ ಕಲ್ಜಿಗ (ಕಲಿಯುಗ) ಇನ್ನು ಮುಂದೆ ಮನುಷ್ಯ ಮನುಷ್ಯನನ್ನೇ ಕೊಂದು ತಿನ್ನುವಂತಹ ಕಾಲ ಬರುತ್ತದಪ್ಪಾ ಎಂದು ನಿಟ್ಟುಸಿರು ಬಿಟ್ಟು ಮೌನಕ್ಕೆ ಶರಣಾಗುತ್ತಿದ್ದಳು. ಪ್ರತೀ ಶತಮಾನದಲ್ಲೂ ಹೀಗೆ ಹೇಳುತ್ತಾ ಎಚ್ಚರಿಸುವ ಹಿರಿಯರಿದ್ದರು, ಕವಿಗಳಿದ್ದರು, ಸಂತರಿದ್ದರು, ಅನುಭಾವಿಗಳಿದ್ದರು.ಸತ್ಯವಂತರಿಗಿದು ಕಾಲವಲ್ಲ ಎಂದು ದಾಸರೇ ಹಾಡಿದ್ದಾರಲ್ಲಾ. ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆಯಲ್ಲಿ ಅಗ್ನಿರಾಜನೆಂಬರಸ ಮಗಳನ್ನೇ ಬಯಸಿ ಮದುವೆಯಾದ ಕತೆಯಿದೆ. ಪ್ರಪಂಚದ ಮಹಾಕಾವ್ಯ, ಪುರಾಣಗಳೆಲ್ಲಾ ಹಿಂಸೆ, ಕ್ರೌರ್ಯಗಳ ಮೂಲಕವೇ ಮಾನವನ ನೈತಿಕ ಪ್ರಜ್ಞೆಯನ್ನು ಎಚ್ಚರಿಸುವ ಕೆಲಸ ಮಾಡಿದೆ. ಹಾಗೆಯೇ ಪ್ರಪಂಚದ ದೇಶಗಳ ಇತಿಹಾಸವು ಯುದ್ಧಗಳಿಂದಲೇ ಸೃಷ್ಟಿಯಾಗಿದೆ.

ಅಂದರೆ ಎಲ್ಲಾ ಕಾಲದಲ್ಲೂ ಮನುಷ್ಯನ ವ್ಯವಹಾರ, ನಡೆನುಡಿಗಳಲ್ಲಿ ಕೆಡುಕುಗಳೂ ಇದ್ದವು.ಹಾಗೆಯೇ ಒಳಿತುಗಳೂ ಇದ್ದುವು. ಪ್ರತಿಯೊಂದು ಶತಮಾನಗಳಲ್ಲೂ ಮಾನವನ ಹೃದಯದೊಳಗಿನ ದೇವತೆಯನ್ನು ಎಚ್ಚರಿಸುವ, ಮೇಲೆತ್ತುವ ಕೆಲಸಗಳನ್ನು ಸಂತರು, ಮಹಾಪುರುಷರು, ಸಮಾಜ ಸುಧಾರಕರು ಮಾಡುತ್ತಾ ಬಂದಿದ್ದಾರೆ.ಆದರೂ ಅವನೊಳಗೆ ಅಡಗಿರುವ ರಾಕ್ಷಸ ಮತ್ತು ಕ್ರೂರ ಪ್ರಾಣಿಯ ಕ್ರೌರ್ಯಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ಪ್ರಪಂಚದ ಜೀವಿಗಳಲ್ಲಿ ಮನುಷ್ಯನು ಮಾತ್ರ ಸುಸಂಸ್ಕೃತ

ನೆಂದು ಬೀಗುತ್ತಾನೆ. ಹಾಗೆ ಬೀಗುವ ಅರ್ಹತೆ ಅವನಿಗೆ ಇದೆಯೇ? ಸುಸಂಸ್ಕೃತಿ ಎಂದರೇನು?

ಎಷ್ಟೊಂದು ವಿಶಾಲವೂ, ಆಳವೂ ಆದ ಅರ್ಥವುಳ್ಳ ಈ ಪದಕ್ಕೆ ಈಗ ಎಂತೆಂತಹ ವಿಪರೀತಾರ್ಥ ಮತ್ತು ವಿರೋಧಾರ್ಥಗಳು ಹುಟ್ಟಿಕೊಂಡಿವೆಯೆಂದರೆ ಸಂಸ್ಕೃತಿ ಎಂಬ ಪದವನ್ನು

ಉಚ್ಚರಿಸಲು ನಾಚಿಕೆಯೂ ಆಗುತ್ತದೆ, ಹೆದರಿಕೆಯೂ ಆಗುತ್ತದೆ. ಸಮಾಜದಲ್ಲಿ ಹೆಂಗಸರು ಮತ್ತು ಮಕ್ಕಳು ಭಯ, ಆತಂಕಗಳಿಲ್ಲದೆ ನೆಮ್ಮದಿಯಿಂದ ಬದುಕುವ ವ್ಯವಸ್ಥೆಗಳಿದ್ದರೆ ಅದು ಸುಸಂಸ್ಕೃತ ಸಮಾಜ ಎನ್ನುತ್ತಾನೆ ಹಿರಿಯ ಚಿಂತಕ ವಿಕ್ಟರ್ ಹ್ಯೂಗೋ. ಪರಸ್ಪರ ಪ್ರೀತಿ, ಗೌರವಗಳಿಂದ ಮನುಷ್ಯರು ಬಾಳುವುದೇ ನಿಜವಾದ ಸಂಸ್ಕೃತಿ ಎಂದು ನನ್ನ ನಂಬಿಕೆ. ನಾಗರಿಕ ಮಾನವ ಸುಶಿಕ್ಷಿತ ಎಂದ ಮಾತ್ರಕ್ಕೆ ಅವನನ್ನು ಸುಸಂಸ್ಕೃತ ಎನ್ನಲು ಸಾಧ್ಯವಿಲ್ಲವೆನ್ನುವುದಕ್ಕೆ ನಮ್ಮ ಕಣ್ಮುಂದೆ ನಡೆಯುತ್ತಿರುವ ಸಾವಿರಾರು ಘಟನೆಗಳು ಸಾಕ್ಷಿಯಾಗಿವೆ.

ಇತ್ತೀಚೆಗೆ ಜಿಲ್ಲಾಕಾರಾಗೃಹಕ್ಕೆ ನಾನು ಭೇಟಿ ನೀಡಿದಾಗ ಅಲ್ಲಿನ ಅಧೀಕ್ಷಕರು ಮೇಡಂ ಇಲ್ಲಿ ಮಗಳನ್ನು ಭೋಗಿಸಿದ ಅಪ್ಪನೂ ಇದ್ದಾನೆ, ತಾಯಿಯನ್ನು ಕೊಂದ ಮಗನೂ ಇದ್ದಾನೆ. ಅವರಿಗೆ ನಮ್ಮ ಸಂಸ್ಕೃತಿಯ ಅರಿವಿಲ್ಲ. ಅದನ್ನು ಕಲಿಸಬೇಕಾಗಿದೆ ಎಂದರು.ಸಂಸ್ಕೃತಿಯನ್ನು ಕಲಿಸಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು.ಮನುಷ್ಯ ನಾಗರಿಕನೆನಿಸಿಕೊಳ್ಳಲು ಬುದ್ಧಿ ಇದ್ದರೆ ಸಾಕು. ಆದರೆ ಸುಸಂಸ್ಕೃತನೆನಿಸಿಕೊಳ್ಳಲು ಹೃದಯವಂತನಾಗಿರಬೇಕಲ್ಲವೇ? ಬಹುತ್ವದ ವೈಶಿಷ್ಟ್ಯತೆಗಳನ್ನೊಳಗೊಂಡ ಬಹುಜನ ಸಮುದಾಯದಲ್ಲಿ ಯಾವ ಸಂಸ್ಕೃತಿ ಯನ್ನು ಕಲಿಸಬೇಕು? ಆಚಾರ, ಸಂಪ್ರದಾಯ, ಭಾಷೆ, ಜಾತಿ ಬೇರೆಯಾದ ಮಾತ್ರಕ್ಕೆ ಮನುಷ್ಯತ್ವವೆಂಬುದು ಬೇರೆಯಾಗುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸಬೇಕಾದ ಕಾಲ ಬಂದಿದೆ. ಪ್ರತಿಯೊಬ್ಬನು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕಾದ ತುರ್ತುಪರಿಸ್ಥಿತಿ ಬಂದಿದೆ. ಮನುಷ್ಯರಾಗಿ ಬಾಳುವುದು ಹೇಗೆಂಬುದನ್ನು ನಾವು ಮರೆತಿದ್ದೇವೆಯೇ? ದೇಶ, ಧರ್ಮ, ಜಾತಿ, ವರ್ಗಗಳ ಗಡಿಗಳಾಚೆಗೂ ನಮ್ಮನ್ನು ಪೊರೆಯುವ ಮಾನವೀಯ ಸಂಸ್ಕೃತಿಯೊಂದಿದೆಯಲ್ಲ ಅದನ್ನು ನಾವು ಕಲಿಸಬೇಕಾಗಿದೆ. ಹೃದಯದೊಳಗೆ ಇಳಿಸಬೇಕಾಗಿದೆ.

ಮಾತು ಮತ್ತು ಕೃತಿಗಳಲ್ಲಿ ಮನುಷ್ಯ ಧರ್ಮವನ್ನು ಪಾಲಿಸುವುದೇ ಮಾನವೀಯತೆಯ ಲಕ್ಷಣ. ಹಾಗೆಂದ ಮಾತ್ರಕ್ಕೆ ಅಮಾನವೀಯವಾಗಿ ವರ್ತಿಸುತ್ತಿದ್ದವರು ಹಿಂದೆ ಇರಲೇ ಇಲ್ಲವೆಂದು ಹೇಳಲಾಗದು. ಹಿಂದೆ ಕೆಲವೇ ಸ್ಥಳಗಳಲ್ಲಿ, ಕೆಲವೇ ವರ್ಗಗಳಲ್ಲಿ ಮಾನವ ದ್ವೇಷದ ಜ್ವಾಲೆ ಹಬ್ಬುತ್ತಿತ್ತು. ಈಗ ಸರ್ವಾಂತರ್ಯಾಮಿಯಾಗಿ ಪಸರಿಸುತ್ತಿರುವುದು ಪ್ರಜ್ಞಾವಂತರನ್ನು ಆತಂಕದಿಂದ ನರಳುವಂತೆ ಮಾಡಿದೆ. ಈ ಸಂದರ್ಭದಲ್ಲಿ ವರ್ಷಗಳ ಹಿಂದೆ ಆರನೆಯ ತರಗತಿಯ ವಿದ್ಯಾರ್ಥಿಯೊಬ್ಬಳು ನನ್ನಲ್ಲಿ ಕೇಳಿದ ಪ್ರಶ್ನೆಗೆ ನಾನು ಅಂದು ತಬ್ಬಿಬ್ಬಾಗಿದ್ದೆ.

ಈ ಮತ ಸ್ಥಾಪಕರು ಹುಟ್ಟದೇ ಇರುತ್ತಿದ್ದರೆ ನಾವು, ಅವರು ಎಂಬ ಭೇದ ಇರುತ್ತಿರಲಿಲ್ಲವಲ್ಲಾ ಟೀಚರ್ ಎಂದಾಗ ಒಂದು ಕ್ಷಣ ಮೌನವಾಗಿದ್ದೆ. ಅವರೆಲ್ಲಾ ಹುಟ್ಟಿದ್ದರಿಂದಲೇ ಜಗತ್ತು ಇಷ್ಟೊಂದು ಸಹನೀಯವಾಗಿದೆ ಎಂಬ ಸತ್ಯವನ್ನು ಆ ಎಳೆಯ ಮನಸ್ಸುಗಳಿಗೆ ಅರ್ಥವಾಗುವಂತೆ ಹೇಳಿದ್ದೆ.ಅದೇ ರೀತಿಯಲ್ಲಿ ನನ್ನ ಸೋದರಳಿಯ ಮೂರನೆಯ ತರಗತಿಯಲ್ಲಿದ್ದಾಗ ಕೇಳಿದ ಪ್ರಶ್ನೆಯೂ ನನ್ನನ್ನು ಇನ್ನಷ್ಟು ಯೋಚಿಸುವಂತೆ ಮಾಡಿತು. ನಮ್ಮ ದೇವರುಗಳ ಕೈಯಲ್ಲಿ ಒಂದಲ್ಲ ಒಂದು ಆಯುಧಗಳಿವೆ. ಯೇಸು ಕ್ರಿಸ್ತನ ಕೈಯಲ್ಲಿ ಯಾಕಿಲ್ಲ? ಹೌದಲ್ಲಾ, ನಾನು ಈ ನಿಟ್ಟಿನಲ್ಲಿ ಯೋಚನೆಯನ್ನೇ ಮಾಡಿರಲಿಲ್ಲವೆಂದು ಆಶ್ಚರ್ಯವೂ ಆಯಿತು.

ಜಿನ, ಬುದ್ಧರು ಶಸ್ತ್ರ ತ್ಯಜಿಸಿ, ಕ್ರಿಸ್ತ ಪೂರ್ವದಿಂದಲೇ ಅಹಿಂಸೆಯ ಪಥವನ್ನು ತೋರಿಸಿದರೂ ಪ್ರಪಂಚಕ್ಕಿನ್ನೂ ಹಿಂಸೆಯನ್ನು ತ್ಯಜಿಸಲು ಸಾಧ್ಯವಾಗಿಲ್ಲ. ಕಾಯಕವೇ ಕೈಲಾಸವೆಂದು ಸಾರಿದ ನಮ್ಮ ಬಸವಣ್ಣ ಜಾತಿ ಭೇದವನ್ನು ಹೋಗಲಾಡಿಸಲು ಮಾಡಿದ ಕ್ರಾಂತಿಯೇನಾಯಿತು? ಮೇಲ್ಜಾತಿಯ ಹುಡುಗಿಯನ್ನು ಕೆಳಜಾತಿಯ ಹುಡುಗನಿಗೆ ಮದುವೆ ಮಾಡಿಸಿದ್ದೇ ನೆಪವಾಗಿ ಕಲ್ಯಾಣ ಹೊತ್ತಿ ಉರಿಯುವಂತಾದುದು ವಿಷಾದನೀಯವಲ್ಲವೇ? ಅಂದು ನಿರಂಕುಶ ಪ್ರಭುತ್ವವಿದ್ದ ಕಾಲದಲ್ಲಾದ ಘಟನೆ ಈಗ ಈ ಶತಮಾನದಲ್ಲೂ ಮರ್ಯಾದಾಗೇಡು ಹತ್ಯೆಗಳು ನಿರಂತರವಾಗಿ ಭಾರತದಾದ್ಯಂತ ನಡೆಯುತ್ತಲೇ ಇರುವುದಕ್ಕೆ ಏನೆನ್ನಬೇಕು? ನಮ್ಮ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಾಗಲೀ, ಪುರಾಣಕತೆಗಳಾಗಲೀ ಏನನ್ನು ಹೇಳುತ್ತವೆ? ಪ್ರಪಂಚದಲ್ಲಿರುವ ಕೆಡುಕುಗಳಿಂದ ಸಮಾಜದಲ್ಲಿ ದುಷ್ಪರಿಣಾಮಗಳುಂಟಾಗುತ್ತವೆ ಎಂಬುದನ್ನು ಹೇಳುವ ಉದ್ದೇಶವನ್ನಿಟ್ಟುಕೊಂಡಿವೆಯಲ್ಲವೇ? ಮಾನವನ ಕ್ರೌರ್ಯ, ಕಾಮ ಮತ್ತು ದ್ವೇಷದ ಪರಮಾವಧಿಯನ್ನು ಕಾವ್ಯ ಪುರಾಣಗಳಲ್ಲಿ ಬರೆದವರಾರು? ನಮ್ಮ ಕವಿವರೇಣ್ಯರಲ್ಲವೇ? ಅವುಗಳನ್ನು ಓದಿ ಸಮಾಜದಲ್ಲಿ ಕೆಡುಕು ಹೆಚ್ಚಿತೋ, ಸಮಾಜದಲ್ಲಿ ಕೆಡುಕು ಹೆಚ್ಚಿ ಸಾಹಿತ್ಯ ಸೃಷ್ಟಿಯಾಯಿತೋ? ಇವೆರಡೂ ಪರಸ್ಪರ ಪೂರಕಗಳಾಗಿ ಕಾಣುತ್ತಿಲ್ಲವೇ? ಸರ್ವಜ್ಞ ಕವಿಯಂತೂ ಈ ಹಾದರದ ಕತೆಯನ್ನು, ಸೋದರರ ವಧೆಯನ್ನುಳ್ಳ ಮಹಾಕಾವ್ಯಗಳನ್ನು ಅಂದೇ ತಿರಸ್ಕರಿಸಿಬಿಟ್ಟಿದ್ದ.

ನಿರಂಕುಶ ಪ್ರಭುತ್ವವಿದ್ದ ಪುರಾತನ ಸಂಗತಿಗಳ ಚರ್ಚೆಯನ್ನು ಬಿಡೋಣ. ಈಗ ಪ್ರಜಾಪ್ರಭುತ್ವದ ಆಡಳಿತವುಳ್ಳ ಅತ್ಯುತ್ತಮವಾದ ಲಿಖಿತ ಸಂವಿಧಾನವುಳ್ಳ ಈ ಭಾರತದಲ್ಲಿ ನಡೆಯುತ್ತಿರುವ ಸಂಗತಿಗಳು ಮಧ್ಯಕಾಲೀನ ಯುಗದ ಸಂಸ್ಕೃತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿಲ್ಲವೇ? ಐದು ಶತಮಾನಗಳ ಹಿಂದೆ ಕುಂದಾಪುರದ ಕೋಟೇಶ್ವರ ದೇವಸ್ಥಾನವೊಂದರಲ್ಲಿ ಜಾತಿ ಕಲಹ ಉಂಟಾಗಿ ದೇವಸ್ಥಾನದೊಳಗೇ ಹೆಣ ಬಿದ್ದು ಮುಂದೆ ಆರು ತಿಂಗಳುಗಳ ಕಾಲ ದೇವಸ್ಥಾನದ ಬಾಗಿಲು ಮುಚ್ಚುವಂತಾಗಿದ್ದು ಇತಿಹಾಸ.

ಮುಂದೆ ಏಕದಳ ಖಾನನೆಂಬ ಅಧಿಕಾರಿಯಿಂದ ರಾಜಿ ಸಂಧಾನ ನಡೆದು ದೇವರಿಗೆ ನಿತ್ಯಪೂಜೆ ಸಲ್ಲುವಂತಾದುದಕ್ಕೆ ಶಾಸನಗಳ ಸಾಕ್ಷಿ ಇದೆ. ಇತ್ತೀಚೆಗೆ ಅಂದರೆ ಅಕ್ಟೋಬರ್ಆರರಂದು 2006ರಲ್ಲಿ ಮುಸ್ಲಿಮ್ ಧರ್ಮಗುರುವೊಬ್ಬರನ್ನು ಮಸೀದಿಯಲ್ಲೇ ತಲವಾರಿನಿಂದ ಕೊಚ್ಚಿಕೊಂದ ಘಟನೆ ನಡೆದಿದೆ. ಕರಾವಳಿಯ ರಕ್ಷಕ ದೈವಗಳಾದ ಕೊಡಮಣಿತ್ತಾಯ, ಪಿಲಿಚಾಮುಂಡಿ, ಬೊಬ್ಬರ್ಯ, ಆಲಿಭೂತಗಳಾವುವೂ ಇಲ್ಲಿ ಅವರ ರಕ್ಷಣೆಗೆ ಧಾವಿಸಲಿಲ್ಲ. ಬೊಳಿಯಾರ್ ಇಬ್ರಾಹೀಂ, ಹಸನಬ್ಬ ಮುಂತಾದವರು ಕೋಮುದ್ವೇಷಕ್ಕೆ ಆಹುತಿಯಾಗುತ್ತಾ ಹೋಗುವುದನ್ನು ಕಂಡು ನಮ್ಮ ಜಿಲ್ಲೆಯ ಜನ ಆಘಾತಕ್ಕೊಳಗಾದರು. ಪ್ರತೀಕಾರವಾಗಿ ಪ್ರಶಾಂತ್ಕುಮಾರ್, ದೀಪಕ್ ರಾವ್ ಮುಂತಾದವರೂ ಈ ದ್ವೇಷದ ಬೆಂಕಿಗೆ ಆಹುತಿಯಾದರು.

ಹಿಂಸೆಯ ಸಂಸ್ಕೃತಿಯನ್ನು ಇವರಿಗೆ ಯಾರು ಕಲಿಸಿದರು? ಯಾಕೆ ಕಲಿಸಿದರು? ಈ ದ್ವೇಷಕ್ಕೆ ಬಲಿಯಾಗಿ, ಜೈಲಿನೊಳಗೆ ನರಳುತ್ತಿರುವ ವಿಚಾರಣಾಧೀನ ಕೈದಿಗಳನ್ನು ಕಂಡೆ.ಜೈಲಿನಲ್ಲಿ ಸತ್ತಂತೆ ಬದುಕುತ್ತಿರುವ ತರುಣರನ್ನು ಕಂಡಾಗ ಕರುಳು ಕಿತ್ತಂತಹ ವೇದನೆಯುಂಟಾಗುತ್ತದೆ. ಸಂಸ್ಕೃತಿಹೀನರು ಜೈಲಿನೊಳಗಿಲ್ಲ. ಹೊರಗೇ ಹೆಚ್ಚಿದ್ದಾರೆ ಎಂದು ಹೇಳಿದರೆ ನಂಬುವವರಾರು?

ಇಂತಹ ಸಂಸ್ಕೃತಿರಕ್ಷಕರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅವರ ನುಡಿ ಮತ್ತು ಕೃತಿಗಳು ಸಾಕ್ಷಿಯಾಗಿವೆ. ದಲಿತರ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿವೆ. ಕಳೆದ ವರ್ಷದೇಶದಲ್ಲಿ 60,045 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲೂ 2,131 ಪ್ರಕರಣಗಳು ನಡೆದಿವೆ. ಜಜ್ಜಾರ್, ಅರಿಯೂರು, ಮಿರ್ಚಿಪುರ, ಧರ್ಮಾಪುರಿ ಮುಂತಾದ ಕಡೆಗಳಲ್ಲಿ ನಡೆದ ಹಿಂಸೆ ದೌರ್ಜನ್ಯಗಳನ್ನು ಯಾವ ಸಂಸ್ಕೃತಿಗೆ ಸೇರಿಸುವುದು? ದಲಿತ ಬಾಲಕನೊಬ್ಬ ನೀರುಕುಡಿದಕಾರಣಕ್ಕಾಗಿ ಪ್ರಾಣವನ್ನೇ ಕಳೆದುಕೊಂಡದ್ದು ಇದೇ ಪುಣ್ಯಭೂಮಿಯಲ್ಲಿ ಅಲ್ಲವೇ? ದನ, ಕುರಿ, ನರಿ, ನಾಯಿಗಳಿಗಾದರೂ ಈ ನಾಡಿನಲ್ಲಿ ಬದುಕುವ ಹಕ್ಕಿದೆ. ಈ ದಲಿತರಿಗೆ ಹಕ್ಕಿಲ್ಲವೇ? ಯಾರಲ್ಲಿ ಕೇಳಬೇಕು? ಶತಮಾನಗಳಿಂದ ತುಳಿತಕ್ಕೆ, ಶೋಷಣೆಗೆ ಒಳಗಾದ ಈ ಸಮುದಾಯ ಈಗೀಗ ತಮ್ಮ ಹಕ್ಕುಗಳಿಗಾಗಿ ಸಂಘಟನೆಗೊಂಡು ಪ್ರತಿಭಟಿಸುವುದೇ ಇತರರಿಗೆ ಅಪರಾಧವಾಗಿ ಕಾಣುತ್ತದೆ. ಪ್ರಗತಿಯ ಓಟದಲ್ಲಿ ಮುಂದಿದ್ದವರು ತಮ್ಮ ಹಿಂದೆ ಇದ್ದ ಇವರು ಹಿಂದೆಯೇ ಇರಬೇಕೆಂದು ಆಶಿಸುವುದು ಸಂಸ್ಕಾರವುಳ್ಳವರ ವರ್ತನೆಯಲ್ಲ.

ಕೆಂಪು ನಾಮ ಹಾಕಿಸಿಕೊಂಡ ಮಾತ್ರಕ್ಕೆ ಮನುಷ್ಯನಲ್ಲಿ ಒಳಿತನ್ನು ಬಯಸುವ ಸಂಸ್ಕೃತಿ ಮೈಗೂಡುವುದಿಲ್ಲ. ಅದು ಅಂತರಂಗದ ಪ್ರೇರಣೆಯಾಗಬೇಕು ಎಂದು ಭಾವಿಸುವುದೇ ಸಂಸ್ಕೃತಿಯಲ್ಲವೇ?

ಹೆಣ್ಣಿನ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಒಂದಲ್ಲ ಒಂದು ಕಡೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಕಳೆದ ಐದು ವರ್ಷಗಳಲ್ಲಿ 1.76 ಲಕ್ಷ ಪ್ರಕರಣಗಳು ನಡೆದಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಅದರಲ್ಲೂ ಬಲಾಢ್ಯ ಅತ್ಯಾಚಾರಿಗಳು ಮಠ ಮಂದಿರಗಳಲ್ಲಿ ರಹಸ್ಯಕಾರ್ಯಾಚರಣೆ ಮಾಡುತ್ತಾ ಸುದ್ದಿಯಾಗುತ್ತಿದ್ದಾರೆ. 2012ರಲ್ಲಿ ನಿರ್ಭಯಾ ಪ್ರಕರಣ ನಡೆದ ಬಳಿಕ ದೇಶಾದ್ಯಂತ ಸಂವೇದನಾ ಪೂರ್ಣ ಸಂಚಲನ ಉಂಟಾಯಿತು.ಬಹುಶಃ ಇನ್ನು ಮುಂದೆ ಈ ರೀತಿಯ ಅತ್ಯಾಚಾರಗಳು ನಡೆಯಲಾರವು ಎಂದು ನಾವೆಲ್ಲಾ ಭಾವಿಸಿದ್ದೆವು.

ಕಥುವಾ, ಉನ್ನಾವ್, ಹಾಥರಸ್, ಶಕ್ತಿಮಿಲ್ ಪ್ರಕರಣ ಹೀಗೆ ಈ ಸರಣಿ ದಿನನಿತ್ಯವೆಂಬಂತೆ ನಡೆಯುತ್ತಲೇ ಇರುವುದನ್ನು ಕಂಡಾಗ ನಮ್ಮ ಸಂಸ್ಕೃತಿ ರಕ್ಷಕರ ಪ್ರಯತ್ನಗಳು ಹೇಗೆ? ಯಾಕೆ ವಿಫಲವಾದುವು? ಎಂಬ ಪ್ರಶ್ನೆ ಮೂಡುತ್ತದೆ. ಅತ್ಯಾಚಾರಿಗಳ ಹಿಂಸಾ ಪ್ರವೃತ್ತಿಯನ್ನು ಕಂಡಾಗ ಮನುಷ್ಯನೊಳಗೆ ಇಂತಹ ರಾಕ್ಷಸನೋ, ಕ್ರೂರ ಮೃಗವೋ ಇರಲು ಸಾಧ್ಯವೇ ಎಂದು ಭಯಭೀತರಾಗಿದ್ದೇವೆ. 30-40 ವರ್ಷಗಳ ಹಿಂದೆಯೂ ಅತ್ಯಾಚಾರದ ಪ್ರಕರಣಗಳು ವರದಿಯಾದದ್ದಿದೆ. ಆಗ ಅವುಗಳು ಒಬ್ಬನೇ ಅತ್ಯಾಚಾರಿಯ ದೌರ್ಜನ್ಯದ ಘಟನೆಗಳಾಗಿದ್ದವು. ಈಗ ನಡೆಯುವ ಅತ್ಯಾಚಾರ ಪ್ರಕರಣಗಳು ಸಾಮೂಹಿಕ ಅತ್ಯಾಚಾರ ಪ್ರಕರಣಗಳೇ ಆಗಿರುವುದು ಮಾತ್ರವಲ್ಲ ಭೋಗಿಸಿದ ಹೆಣ್ಣನ್ನು ಕೊಂದು ಸಾಕ್ಷ್ಯ ನಾಶ ಮಾಡುತ್ತಿರುವುದು ಅತ್ಯಂತ ಭಯಾನಕ ಸುದ್ದಿಗಳಾಗಿವೆ.

ಇವರಿಗೆ ಸಂಸ್ಕೃತಿ ಕಲಿಸುವವರಾರು? ಈ ಕರಾವಳಿ ಜಿಲ್ಲೆ ಮಾತೃ ಪ್ರಧಾನ ಸಂಸ್ಕೃತಿಯುಳ್ಳದ್ದು ಎಂಬ ಅಭಿಮಾನವಿದೆ. ಎರಡು ವರ್ಷಗಳ ಹಿಂದೆ ಇಲ್ಲಿನ ತುಳು ಸಿನೆಮಾವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮಾಡುವುದು ಹೇಗೆ ಎಂಬುದನ್ನು ಸಂಭಾಷಣೆಗಳ ಮೂಲಕ ಚಿತ್ರಿಸಿ ಹಣ ಗಳಿಸುವ ವಕ್ರಮಾರ್ಗ ಹಿಡಿದದ್ದು ಯಾವ ಸಂಸ್ಕೃತಿ? ಇಲ್ಲಿನ ಮಹಿಳಾ ಸಂಘಟನೆಗಳು ಅಂದು ನಡೆಸಿದ ಯಾವ ಪ್ರತಿಭಟನೆಗೂ ಕ್ಯಾರೇ ಅನ್ನದೇ ಆ ಸಂಭಾಷಣೆಯನ್ನು ಹಾಗೆಯೇ ಉಳಿಸಿಕೊಂಡು ಚಿತ್ರಮಂದಿರದಲ್ಲಿ ಪ್ರದರ್ಶಿಸಿದ್ದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಸಂಸ್ಕೃತಿಯು ಹೀಗೆ ಬಣ್ಣ ಬದಲಾಯಿಸಿಕೊಳ್ಳುತ್ತದೆಯೇ? ಬಲ್ಲವರು ಯಾರಾದರೂ ಸಂಸ್ಕೃತಿಗೆ ಒಂದು ವ್ಯಾಖ್ಯಾನ ನೀಡುತ್ತೀರಾ?

ಸಮಾಜದಲ್ಲಿ ನಮಗಿಂತ ಕೆಳಹಂತ, ಕೆಳವರ್ಗ, ಕೆಳಜಾತಿಯವರು ವಿದ್ಯೆ, ಉದ್ಯೋಗ, ಅಂತಸ್ತುಗಳನ್ನು ಗಳಿಸುತ್ತಿರುವುದು ನಮ್ಮ ಸಂವಿಧಾನ ನೀಡಿದ ಸೌಲಭ್ಯಗಳಿಂದ.ಆದರೆ ಇದನ್ನು ಕಂಡು ಸಹಿಸುವ ಮನಸ್ಥಿತಿ ಈಗಲೂ ಇಲ್ಲವೆಂಬುದಕ್ಕೆ ಇತ್ತೀಚೆಗೆ ಬಾಲಕರ ಮೇಲೆ ನಡೆದ ಹಲ್ಲೆಗಳೇ ಸಾಕ್ಷಿ. ನನಗೆ ಶಾಲೆಯಲ್ಲಿ ಓಟದ ಸ್ಪರ್ಧೆ ನಡೆಸುತ್ತಿದ್ದ ಘಟನೆ ನೆನಪಾಗುತ್ತದೆ. ಓಟದಲ್ಲಿ ಮುಂದೆ ಇದ್ದ ಓಟಗಾರ ತನಗಿಂತ ಹಿಂದೆ ಇದ್ದ ಓಟಗಾರ ತನ್ನ ಸಮಸಮಕ್ಕೆ ಬರುತ್ತಾನೆ ಎಂದಾಗ ಅವನಿಗಡ್ಡವಾಗಿ ಓಡುವುದನ್ನು ಕಂಡಿದ್ದೇನೆ.

ಟ್ರ್ಯಾಕ್ಗಳಿಲ್ಲದ ಮೈದಾನದಲ್ಲಿ ಇಂತಹ ಓಟದ ಸ್ಪರ್ಧಿಗಳನ್ನು ನೀವೂ ಕಂಡಿರಬಹುದು. ಹಾಗೆಯೇ ದಲಿತರು ತಮಗಿಂತ ಮುಂದೆ ಸಾಗುತ್ತಿರುವುದನ್ನು ಕಂಡಾಗ ಇತರರ ಹೊಟ್ಟೆಯೊಳಗಿನ ಕಿಚ್ಚು ಭುಗಿಲೇಳುತ್ತದೆ. ಅವರ ಮನೆಗಳಿಗೆ ಬೆಂಕಿ ಹಚ್ಚುವುದು, ಹೆಂಗಸರ ಮೇಲೆ ಅತ್ಯಾಚಾರ ಮಾಡುವುದು ಮುಂತಾದ ಕ್ರೌರ್ಯಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ.

ಇನ್ನು ಎರಡು ವರ್ಷಗಳ ಹಿಂದೆ ನಡೆದ ಮೀಟೂ ಪ್ರಕರಣದ ಬಗ್ಗೆ ಹೇಳಲೇಬೇಕು. ಖ್ಯಾತನಾಮರ ಹೆಸರು ಬಹಿರಂಗಗೊಂಡಂತೆಲ್ಲಾ ಪರ ವಿರೋಧ ಚರ್ಚೆಗಳು ಪ್ರಸಾರವಾದುದನ್ನು ನಾವೆಲ್ಲಾ ಕೇಳಿದ್ದೇವೆ. ಇಲ್ಲಿ ಲೈಂಗಿಕ ಕಿರುಕುಳ ನೀಡಿದವರು ಅಪರಾಧಿಗಳಲ್ಲವೇ ಅಲ್ಲ. ಕಿರುಕುಳಗಳನ್ನು ಸಹಿಸಿದವರೇ ಘೋರ ಅಪರಾಧಿಗಳೆಂಬ ಪ್ರಹಾರಗಳಿಂದ ಮಹಿಳಾ ಲೋಕವನ್ನು ತತ್ತರಿಸುವಂತೆ ಮಾಡುವ ತಂತ್ರವಿತ್ತು ಎಂದು ಬುದ್ಧಿ ಇರುವ ಯಾರಿಗಾದರೂ ಅರ್ಥವಾಗುತ್ತಿತ್ತು ಅಲ್ಲವೇ? ಈ ವರ್ಷದ ಜನವರಿಯ 11ನೇ ತಾರೀಕಿನಂದು ತಿರುವನಂತಪುರದಲ್ಲಿ ಸಂಗಾತಿ ವಿನಿಮಯ ಗ್ಯಾಂಗನ್ನು ಬಂಧಿಸಿದ ಸುದ್ದಿ ಪತ್ರಿಕೆಯಲ್ಲಿ ಪ್ರಸಾರವಾಗಿತ್ತು. ಕೊಟ್ಟಾಯಂ, ಎರ್ನಾಕುಳಂ, ಆಲಪ್ಪುಝಗಳಲ್ಲಿರುವ ಆರೋಪಿಗಳನ್ನು ಬಂಧಿಸಿದ್ದರೆಂದು ವರದಿ ತಿಳಿಸುತ್ತದೆ.

ಇದೇ ವರ್ಷ ಫೆಬ್ರವರಿ ಎರಡನೇ ವಾರದಲ್ಲಿ ಬೆಂಗಳೂರಲ್ಲೂ ಇಂತದೇ ಸಂಗಾತಿ ವಿನಿಮಯ ಗ್ಯಾಂಗನ್ನು ಬಂಧಿಸಿದ ಸುದ್ದಿ ಇಲ್ಲಿನ ಪತ್ರಿಕೆಯಲ್ಲಿ ಪ್ರಸಾರವಾಯಿತು. ಸಂಗಾತಿ ವಿನಿಮಯ ಎಂದರೆ ಹೆಂಡತಿಯನ್ನು ಬೇರೊಬ್ಬ ಪುರುಷನೊಂದಿಗೆ ಬದಲಾಯಿಸಿಕೊಳ್ಳುವುದು.ಇದು ಒಂದು ರೀತಿಯಲ್ಲಿ ಶುಲ್ಕವಿಲ್ಲದ ಒಪ್ಪಿತ ವೇಶ್ಯಾವಾಟಿಕೆ.ಒಂದು ಕಾಲದಲ್ಲಿ ಸಹಗಮನವನ್ನೇ ಸಂಸ್ಕೃತಿ ಎಂಬ ಕ್ರೌರ್ಯವನ್ನು ಮೆರೆದ ಈ ನಾಡು ಇಂದು ಹೆಂಡತಿಯನ್ನೇ ಬದಲಾಯಿಸುವುದಕ್ಕೆ ಸಿದ್ಧವಾಗುತ್ತಿದೆ

ಎಂದರೆ ಸಂಸ್ಕೃತಿಗೆ ಯಾವ ಅರ್ಥವನ್ನು ನೀಡಲಾಗಿದೆ? ಸಹಗಮನ ಎಂದರೆ ಗೊತ್ತಿದೆಯಲ್ಲಾ.

ಗಂಡ ಸತ್ತರೆ ತನ್ನ ಹೆಂಡತಿ ಬೇರೆಯವನ ಪತ್ನಿಯಾಗಬಾರದು ಎಂದು ಅವಳನ್ನು ಒತ್ತಾಯ ಪೂರ್ವಕ ಗಂಡನ ಚಿತೆಗೆ ದೂಡಿ ಸುಡುವುದು. ಹಾಗೆ ಅವಳು ಸತ್ತರೆ ಸ್ವರ್ಗದಲ್ಲಿ ಶ್ರೇಷ್ಠ ಸ್ಥಾನ ಸಿಗುತ್ತದೆಂಬ ಆಮಿಷಗಳಿದ್ದ ಪುರಾಣಕತೆಗಳನ್ನು ಪ್ರಚಾರ ಮಾಡಿದ್ದರು. ದೇಶಾದ್ಯಂತ ಇರುವ ಮಾಸ್ತಿ ದೇವಸ್ಥಾನಗಳು, ಮಾಸ್ತಿಕಲ್ಲುಗಳು ಈ ಘಟನೆಗಳಿಗೆ ಸಾಕ್ಷಿಯಾಗಿ ತಮ್ಮ ದುರಂತ ಕತೆಗಳನ್ನು ಹೇಳುತ್ತವೆ. ತುಳುನಾಡಿನಲ್ಲೂ ಹಲವಾರು ಮಾಸ್ತಿಕಲ್ಲುಗಳಿವೆ ಎನ್ನುವುದೇ ಸೋಜಿಗದ ಸಂಗತಿ.ಇಷ್ಟೆಲ್ಲಾ ಹೇಳಿದ ಮೇಲೂ ನನಗೆ ಈಗಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೆಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತೇನೆ.

ಮನುಷ್ಯ ಮನುಷ್ಯರನ್ನು ಪರಸ್ಪರ ಪ್ರೀತಿಸದ, ಪ್ರೀತಿಯನ್ನು ಹಂಚದ ಸಮಾಜಕ್ಕೆ ಭವಿಷ್ಯವಿದೆಯೇ? ಈ ಜಗತ್ತಿನ ಪ್ರತಿಯೊಂದು ಜೀವಿಯನ್ನೂ ಗೌರವದಿಂದ ಕಾಣುವ ಮನಸ್ಥಿತಿ ಇರಬೇಕಲ್ಲವೇ? ಅಂತಹ ನಾಗರಿಕ ಸಮಾಜದ ನಿರ್ಮಾಣವಾಗಲೆಂದು ನಾನು ಆಶಿಸುತ್ತೇನೆ. ನಮ್ಮೆಲ್ಲರ ಆಶಯವೂ ಇದೇ ಎಂಬ ನಂಬಿಕೆ ನನಗಿದೆ.ಅಂತಹ ಸಂಸ್ಕಾರವನ್ನು ಮೊದಲು ನಮ್ಮ ಮನೆ ಮಂದಿಯಿಂದ ಪ್ರಾರಂಭಿಸೋಣ.

ನಮ್ಮ ಮಕ್ಕಳು ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕಬೇಕೆಂಬುದನ್ನು ಬಯಸುವವರು ಎಲ್ಲರೂ ತಮ್ಮ ಮನೆ ಮಂದಿಯನ್ನು ಸೌಹಾರ್ದದ ಹಾದಿಯಲ್ಲಿ ಮುನ್ನಡೆಸೋಣ. ನಾವು ಕಟ್ಟಿಕೊಂಡ ಎಲ್ಲ ಬಂಧನಗಳನ್ನು ಕಿತ್ತು, ಕೆಡುಕುಗಳಿಂದ ದೂರ ಸರಿಯುವ ಪ್ರಯತ್ನದಲ್ಲಿ ಎಲ್ಲರೂ ಖಂಡಿತಾ ಕೈ ಜೋಡಿಸುತ್ತಾರೆ. ಈ ನಂಬಿಕೆ ನಮ್ಮೆಲ್ಲರದ್ದೂ ಆಗಿರಲಿ.