ಚಪ್ಪಲಿಗಳು...

Update: 2023-01-06 09:29 GMT

ಫಾತಿಮಾ ರಲಿಯಾ ಹೊಸ ತಲೆಮಾರಿನ ಮಹತ್ವದ ಲೇಖಕಿ. ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಸಮುದಾಯದಿಂದ ಬಂದಿರುವ ಫಾತಿಮಾ ಬರಹದಲ್ಲಿ ಬ್ಯಾರಿ ಸಾಂಸ್ಕೃತಿಕ ಸೊಗಡನ್ನು ಕಾಣಬಹುದು ಅಹರ್ನಿಶಿ ಪ್ರಕಾಶನ ಹೊರ ತಂದ ಅವರ ‘ಕಡಲು ನೋಡಲು ಹೊರಟವಳು’ ಪ್ರಬಂಧ ಸಂಕಲನ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಫಾತಿಮಾರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದಲ್ಲದೆ ಅವರ ಕವನ ಸಂಕಲನದ ಹಸ್ತಪ್ರತಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ.ರಾ. ಬೇಂದ್ರೆ ಸಾಹಿತ್ಯಪ್ರಶಸ್ತಿಯನ್ನು ಪಡೆದಿದೆ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಕಥಾ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಫಾತಿಮಾ ರಲಿಯಾ ಹೆಜಮಾಡಿ

‘ವಿಧಾನ ಸೌಧದಿಂದ ಇನ್ನೂರು ಮುನ್ನೂರೋ ಮೀ. ಇರುವ ಮಸೀದಿಗೆ ಹೋಗೋಕೆ ರಿಕ್ಷಾ ಯಾಕೆ ಬೇಕು?’ ಎನ್ನುವ ಪುಟ್ಟ ವಾಗ್ವಾದ ಮುಗಿಯುವಷ್ಟರಲ್ಲಿ ನಮ್ಮನ್ನು ಹೊತ್ತ ಆಟೋ ಮಸೀದಿ ಮುಂದೆ ನಿಂತಿತ್ತು. ಆಟೊದಿಂದ ಇಳಿದು ನಾಲ್ಕೂ ಕಡೆ ತಿರುಗಿ ನೋಡಿದರೆ ನಮ್ಮ ಕರಾವಳಿಯ ಮಸೀದಿಗೂ ಇದಕ್ಕೂ ಅಜಗಜಾಂತರವಿದೆ ಅನ್ನಿಸಿತು. ಸಾಮಾನ್ಯವಾಗಿ ಮಸೀದಿಯ ಸುತ್ತಮುತ್ತ ಮಹಿಳೆಯರನ್ನು ಕಾಣದ, ಕಂಡರೂ ಶುಕ್ರವಾರದ ಜುಮಾ ದಿನ ಮಾತ್ರ ಮಕ್ಕಳ ಮದುವೆಗೋ, ಓದಿಗೋ, ದುಡಿಯಲಾರದ ಗಂಡನ ಅಸಹಾಯಕತೆಗೋ ತಮ್ಮ ತಮ್ಮ ಊರಿನ ಮಸೀದಿಗಳ ಲೆಟರ್ಹೆಡ್ ಹಿಡಿದುಕೊಂಡು ಸಹಾಯಕ್ಕಾಗಿ ಯಾಚಿಸುವ ಮಹಿಳೆಯರನ್ನು ಮಾತ್ರ ಕಂಡಿದ್ದ ನನಗೆ ಬೆಂಗಳೂರಿನ ಈ ಮಸೀದಿಯಲ್ಲಿ ಚಪ್ಪಲಿ ಕಾಯುತ್ತಿದ್ದ ಮಹಿಳೆಯರನ್ನು ಕಂಡು ಬೇರೆಯದೇ ಲೋಕವನ್ನು ಕಂಡಂತಾಗಿತ್ತು. ಚಪ್ಪಲಿ ಕಳಚಿಟ್ಟು ಮಸೀದಿಯ ಒಳ ಹೋಗುವ ಎಲ್ಲರಲ್ಲೂ ನಮಾಝಿಗೆ ಸೇರಿಕೊಳ್ಳುವ ಧಾವಂತವಿದ್ದರೆ ಹೊರಗೆ ಕೂತು ಚಪ್ಪಲಿ ಕಾಯುವ ಮಹಿಳೆಯರಲ್ಲಿ ಶತಮಾನಗಳಿಂದಲೂ ಒಂದು ತಾಳ್ಮೆ ನೆಲೆ ನಿಂತಿದೆಯೇನೋ ಅನ್ನಿಸುತ್ತಿತ್ತು.

ಉದ್ದಕ್ಕೆ ಚಾಚಿಕೊಂಡಿರುವ ಕರಿ ರಸ್ತೆ, ಅದಕ್ಕೆ ಅಂಟಿಕೊಂಡಂತೆ ತೀರಾ ಸನಿಹದಲ್ಲಿರುವ ಮಸೀದಿ, ಅದರ ಮುಂಭಾಗದ ಜನನಿಬಿಡ ಜ್ಯೂಸ್ ಸೆಂಟರ್ ಮತ್ತು ಇವೆಲ್ಲಕ್ಕೂ ಪುಟವಿಟ್ಟಂತೆ ಮೆಟ್ಟಿಲ ಬಳಿ ಕೂತ ಹೆಂಗಳೆಯರು... ಆ ಇಡೀ ಪ್ರದೇಶ ಲೌಕಿಕ ಅಲೌಕಿಕವಾಗುವ, ಅಲೌಲಕಿಕ ಲೌಕಿಕವಾಗುವ ಒಂದು ಬಿಂದುವಿನಂತೆ ಕಾಣಿಸುತ್ತಿತ್ತು.

ಚಪ್ಪಲಿ ಕಳಚಿ ನಾನು ಒಳ ಹೋಗಬೇಕು ಎನ್ನುವಷ್ಟರಲ್ಲಿ ಒಬ್ಬ ಮಹಿಳೆ ನನ್ನ ಕುರಿತು ‘ಕ್ಯಾ ತುಮ್ ನಮಾಝ್ ಪಡನೆ ಜಾ ರಹೆ ಹೊ?’ ಅಂತ ಕೇಳಿದ್ರು. ಎರೆಡರಡು ಬಾರಿ ಕೇಳಿಸ್ಕೊಂಡ್ರೂ ಅರ್ಥ ಆಗದ ನಾನು ಪಿಳಿಪಿಳಿ ಕಣ್ಣು ಬಿಡ್ತಿದ್ರೆ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ... ಅಂತ ಮೆಲ್ಲ ಗುನುಗಲು ಶುರುವಿಟ್ಟುಕೊಂಡ್ರು. ನಾನು ‘ಮಸೀದಿಯ ಅಂಗಳದಲ್ಲಿ ಸಿನೆಮಾ ಹಾಡಾ’ ಅಂತಂದುಕೊಂಡು ಗಾಬರಿಯಿಂದ ಆ ಕಡೆ ಈ ಕಡೆ ನೋಡುತ್ತಿದ್ದರೆ ಅವರೇ ನನ್ನ ಕರೆದು ಹತ್ತಿರ ಕೂರಿಸಿ ‘ಚೂರು ಇದನ್ನು ನೋಡ್ಕೊಳ್ತಿರು’ ಅಂತಂದು ಚಪ್ಪಲಿ ರಾಶಿಯ ಮಧ್ಯದಿಂದ ಎದ್ದು ಹೋದ್ರು. ನಂಗೆ ಒಂದೆಡೆ ಗಾಬರಿ, ಇನ್ನೊಂದೆಡೆ ಯಾರಾದ್ರೂ ನೋಡಿದ್ರೆ ಏನಂದುಕೊಂಡಾರು ಎಂಬ ಗಲಿಬಿಲಿ. ಈಗ ಬರ್ತೇನೆ ಎಂದು ಎದ್ದು ಹೋಗಿ ಹತ್ತು ನಿಮಿಷ ಆದ್ರೂ ಅವರ ಸುದ್ದಿಯೇ ಇಲ್ಲ ಎಂದಾದಾಗ ಅಲ್ಲಿಂದೆದ್ದು ಮೆಲ್ಲ ಜಾಗ ಖಾಲಿ ಮಾಡೋಣ ಅಂದ್ಕೊಂಡೆ. ಆದ್ರೆ ಮಸೀದಿಯ ಒಳ ಹೋಗಿರುವ ಗಂಡ ಪತ್ತೆಯೇ ಇರ್ಲಿಲ್ಲ.

ಸುಮ್ಮನೆ ಕೂತು ಇಬ್ಬರನ್ನೂ ಕಾಯುವ ಹೊರತು ನನಗೆ ಬೇರೆ ದಾರಿಯೇ ಇರಲಿಲ್ಲ. ‘ಇವರಿಬ್ಬರಲ್ಲಿ ಒಬ್ರಾದ್ರೂ ಬೇಗ ಬರ್ಲಪ್ಪ’ ಅಂತ ಕಾಣದ ದೇವರಿಗೆ ಮೊರೆ ಇಡುತ್ತಾ ಆಗಾಗ ಕತ್ತು ಎತ್ತರಿಸಿ ನೋಡ್ತಿದ್ದೆ. ನಿಧಾನಕ್ಕೆ ಕೈ ಕಾಲು ಬೀಸ್ತಾ ಮಹಿಳೆ ಬರ್ತಾ ಇರೋದು ಕಾಣಿಸ್ತು. ‘ಅಬ್ಬಾ!’ ಎಂದು ಉಸಿರು ಬಿಡುವಷ್ಟರಲ್ಲಿ ಅವರು ಬಂದು ನನ್ನನ್ನು ಚೂರು ಆ ಕಡೆ ಸರಿಸಿ ಪಕ್ಕ ಕೂತಾಗಿತ್ತು.

ಏನಮ್ಮಾ ಎಷ್ಟು ವರ್ಷದಿಂದ ಕೆಲ್ಸ ಮಾಡ್ತಿದ್ದೀರಾ? ಕೇಳಿದೆ. ಎಷ್ಟು ವರ್ಷದಿಂದ ಅಂದ್ರೆ ಹುಟ್ಟಿದಂದಿನಿಂದ ರಪ್ಪನೆ ಬಂದ ಉತ್ತರಕ್ಕೆ ನನ್ನಲ್ಲಿ ಮರು ಪ್ರಶ್ನೆ ಇರಲಿಲ್ಲ. ತುಸು ಹೊತ್ತು ಕಳೆದು ಅವರೇ ನಾನು ಇಲ್ಲಿಯೋಳಲ್ಲ, ದೂರದ ಬಿಜಾಪುರದಿಂದ ಬಂದಿದ್ದೇನೆ. ಅಲ್ಲಿ ಅಪ್ಪ ವರದಕ್ಷಿಣೆಯಾಗಿ ಕೊಟ್ಟ ಎರಡೆಕರೆ ಜಮೀನಿದೆ. ಆದ್ರೆ ಹಾಳಾದ ನೀರೇ ಇಲ್ಲ ಎಂದು ಲೊಚಗುಟ್ಟಿದ್ರು. ಊರಲ್ಲಿ ಎರಡೆಕರೆ ಜಮೀನಿರೋ ಈ ಮಹಿಳೆ ಇಲ್ಲಿ ಬಂದು ಚಪ್ಪಲಿ ಕಾಯ್ತಿದೀನಿ ಅಂದ್ರೆ ನಾನು ನಂಬಬೇಕೋ ಬೇಡ್ವೋ ಎಂಬುವುದು ಅರ್ಥವಾಗದೇ ಮತ್ತೆ ಅವರನ್ನು ಪಿಳಿಪಿಳಿ ನೋಡಿದೆ.

ಅದ್ಯಾಕೆ ಹಾಗೆ ನೋಡ್ತೀಯಾ, ಆ ಚಪ್ಲಿ ಇಲ್ ಕೊಡು ಎಂದು ನನ್ನ ಕೈಯಿಂದ ಕಸಿದುಕೊಂಡಂತೆ ಚಪ್ಪಲಿ ತೆಗೆದುಕೊಂಡ ಅವರು ಅದನ್ನು ಮಸೀದಿಯಿಂದ ಹೊರಬಂದ ಚಪ್ಪಲಿ ಮಾಲಕನ ಕೈಗೆ ಕೊಟ್ಟು ದುಡ್ಡು ಇಸಿದುಕೊಂಡು ಸೊಂಟದಲ್ಲಿ ಸಿಕ್ಕಿಸಿಕೊಂಡ ಪುಟ್ಟ ಚೀಲದೊಳಕ್ಕೆ ಸೇರಿಸಿದರು. ಆಮೇಲೆ ಮತ್ತೂ ಮೂರು ನಾಲ್ಕು ಮಂದಿಯ ಚಪ್ಪಲಿಯನ್ನು ಕರಾರುವಾಕ್ಕಾಗಿ ಅವರಿಗೆ ಕೊಟ್ಟು ದುಡ್ಡು ಚೀಲದೊಳಕ್ಕೆ ಸೇರಿಸುವುದನ್ನು ಕಂಡು ನಾನು ಬೆರಗಾಗಿದ್ದೆ.

ಆ ಬೆರಗನ್ನು ಮತ್ತಷ್ಟು ಹೆಚ್ಚಿಸುವಂತೆ ಅವರು ನಮ್ಮಪ್ಪನಿಗೆ ನಾವು ಆರು ಮಂದಿ ಹೆಣ್ಮಕ್ಳು. ಓದ್ಸಿಲ್ಲ, ಬರ್ಸಿಲ್ಲ, ಆದ್ರೆ ಮದುವೆ ಮಾತ್ರ ಗಡದ್ದಾಗಿ ಮಾಡ್ಕೊಟ್ಟಿದ್ದಾರೆ. ಸತ್ತಾಗ ಹೊದಿಯೋಕೆ ಬಟ್ಟೆ ಒಂದು ಬಿಟ್ಟು ಅಪ್ಪ ಅಳಿಯಂದ್ರಿಗೆ ಕೊಡದೇ ಇರೋದು ಏನೂ ಇಲ್ಲ. ಆದ್ರೆ ಏನ್ಮಾಡೋಣ ಮಳೆ ಬರ್ದೇ ಕೈ ಕೊಟ್ರೆ ಭೂಮ್ತಾಯಿ ಆದ್ರೂ ಏನ್ ಮಾಡೋಕೆ ಸಾಧ್ಯ ಎಂದು ಆಕಾಶ ದಿಟ್ಟಿಸಿದ್ರು.

ಒಂದೆಡೆ ನಮ್ಮಲ್ಲಿ ವರದಕ್ಷಿಣೆ ಇಲ್ಲ, ವಧುದಕ್ಷಿಣೆ ಕಡ್ಡಾಯ, ಸರಳ ವಿವಾಹಕ್ಕೆ ಮಾತ್ರ ಪ್ರೋತ್ಸಾಹ ಇರುವುದು ಅಂತೆಲ್ಲಾ ನಾವು ಎಷ್ಟೇ ಬೊಂಬಡ ಬಜಾಯಿಸಿದ್ರೂ ‘ಸತ್ತಾಗ ಹೊದಿಯೋಕೆ ಒಂದು ಬಟ್ಟೆ ಬಿಟ್ಟು ಉಳಿದದ್ದೆಲ್ಲಾ ನಮ್ಮಪ್ಪ ಕೊಟ್ಟಿದ್ದಾರೆ’ ಎನ್ನುವಲ್ಲಿ ಎಷ್ಟು ಆಕ್ರೋಶ ಇರಬೇಕು ಅನ್ನಿಸಿತು. ವರದಕ್ಷಿಣೆ, ವರೋಪಚಾರ ಎನ್ನುವುದೆಲ್ಲಾ ನಮ್ಮ ಕರಾವಳಿಯಲ್ಲಿ ಈಗ ಮೊದಲಿನಷ್ಟು ಇಲ್ಲದೇ ಹೋದರೂ ಹೇರಿಕೊಂಡು ಬರುವ ಚಿನ್ನದಿಂದ ಮನೆ ಸೊಸೆಯ ಅಂತಸ್ತು, ಸ್ಥಾನಮಾನ ಅಳೆಯೋ ಪದ್ಧತಿ ಇನ್ನೂ ಒಳಗಿಂದೊಳಗೆ ಚಾಲ್ತಿಯಲ್ಲಿದೆ.

ಇನ್ನು ಈ ಮಟ್ಟಿಗಿನ ಶಿಕ್ಷಣ, ಆರ್ಥಿಕ ಪ್ರಗತಿ ಕಾಣದ ಕರ್ನಾಟಕದ ಮತ್ತು ದೇಶದ ಉಳಿದೆಡೆ ಯಾವ ಪರಿಸ್ಥಿತಿ ಇರಬಹುದು ಎನ್ನುವುದನ್ನು ನೆನೆಸಿಕೊಂಡರೇ ಭಯವಾಗುತ್ತದೆ. ಇಲ್ಲಿ ಈಗಲೂ ಅತ್ಯಧಿಕ ಕ್ರೌಡ್ ಫಂಡಿಂಗ್ ನಡೆಯೋದು ಹೆಣ್ಣು ಮಕ್ಕಳ ಮದುವೆ ವಿಷಯಕ್ಕೇ. ಹಾಗೆಯೇ ಮಧ್ಯಮ ವರ್ಗದ, ಕೆಳ ಮಧ್ಯಮ ವರ್ಗದ ಹೆಣ್ಣು ಮಕ್ಕಳ ಓದುವ ಕನಸಿಗೆ ಕಲ್ಲು ಹಾಕೋದೇ ದೊಡ್ಡವರ ಇಷ್ಟೆಲ್ಲಾ ಫೀಸ್ ಕಟ್ಟಿ ಈ ದುಬಾರಿ ಕೋರ್ಸ್ ಮಾಡಿಸ್ಬೇಕಾ, ಅದೇ ದುಡ್ಡಿಂದ ಚಿನ್ನ ಕೊಂಡ್ರೆ ಮದುವೆಗಾಗುತ್ತಲ್ಲಾ ಅನ್ನುವ ಉದ್ಗಾರಗಳು.

ಇತ್ತೀಚೆಗೆ ಕೆಲ ಹೆಣ್ಣು ಮಕ್ಕಳೇ ಚಿನ್ನ ಬೇಡ ಎಂದು ಧಿಕ್ಕರಿಸುವ, ಮಹರ್ಗೂ ಚಿನ್ನ ಬೇಡ ಎನ್ನುವ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಸಮಾಧಾನದ ಸಂಗತಿಯಾದರೂ ಆ ಸಂಖ್ಯೆ ತುಂಬಾ ಕಡಿಮೆ ಎನ್ನುವುದು ನೆನಪಲ್ಲಿಟ್ಟುಕೊಳ್ಳಬೇಕಾಗಿದೆ.

ಮತ್ತೆ ಮಹಿಳೆಯ ವಿಚಾರಕ್ಕೆ ಬರುವುದಾದರೆ ಸಾಕಷ್ಟು ಭೂಮಿ ಇದ್ದ, ಆದ್ರೆ ಆ ಭೂಮಿಯಲ್ಲಿ ಬೆಳೆ ತೆಗೆಯಲಾರದ ಅಪ್ಪನ ಮಗಳಾಕೆ. ಆರನೇ ಹೆಣ್ಣು ಮಗು ಹುಟ್ಟಿದ ನಂತರ ಜಿಲ್ಲಾಸ್ಪತ್ರೆಯ ‘ದೊಡ್ಡಾಕ್ಟ್ರು’ ಇನ್ನು ಗರ್ಭ ಧರಿಸಿದ್ರೆ ಮಗು ಮತ್ತು ತಾಯಿ ಇಬ್ಬರ ಜೀವಕ್ಕೂ ಅಪಾಯವಿದೆ ಎಂದು ಹೇಳಿದ ನಂತ್ರ ಊರವರಿಗೂ, ಕುಟುಂಬಕ್ಕೂ ಮುಚ್ಚಿಟ್ಟು ‘ಆಪ್ರೇಸನ್’ ಮಾಡಿಸ್ಕೊಂಡು ಇವರಮ್ಮ ಬದುಕಿಗೆ ಮರಳಿದ್ರಂತೆ.

ಅಪ್ಪನ ತಮ್ಮಂದಿರೆಲ್ಲಾ ಕಂಠಪೂರ್ತಿ ಕುಡಿದು ಬಂದು ಸಂತಾನ ಹರಣ ಚಿಕಿತ್ಸೆ ಮಾಡ್ಸಿಕೊಳ್ಳುವುದು ಹರಾಂ, ನೀವ್ಯಾವತ್ತೂ ಅದಕ್ಕೆ ಅವಕಾಶ ಕೊಡ್ಬೇಡಿ ಅಂದು ಅಪ್ಪನ ಬಳಿ ಅಲವತ್ತುಕೊಳ್ಳುತ್ತಿದ್ದರೆ ಅಮ್ಮ ನಡುಮನೆಯಲ್ಲಿ ಬಾಯಿಗೆ ಸೆರಗು ತುಂಬಿಸಿಕೊಂಡು ಒಮ್ಮೆ ಇವರನ್ನೆಲ್ಲಾ ಇಲ್ಲಿಂದ ಸಾಗ ಹಾಕು ಖುದಾ ಎಂದು ಬೇಡಿಕೊಳ್ಳುತ್ತಿದ್ದರು ಎಂದು ಈಗ ಹೇಳಿ ಛಿಲ್ಲನೆ ನಗುತ್ತಾರೆ ಈಕೆ. ಈಗಾದ್ರೆ ನಿಮ್ಗೆ ಅಡುಗೆಗೆ ಗ್ಯಾಸ್ ಒಲೆ ಇದೆ, ನಾವು ಅಕ್ಕ ತಂಗೀರು ಮತ್ತು ಅಮ್ಮ ಹಸಿ ಕಟ್ಟಿಗೆ ಇಟ್ಟು ಹೊತ್ತಿಸುತ್ತಿದ್ದ ಒಲೆ ಊದಿ ಊದಿ ಅಡುಗೆ ಮಾಡಿ ಸುಸ್ತಾಗುವ ಹೊತ್ತಿಗೆ ವಕ್ಕರಿಸಿಕೊಳ್ಳುತ್ತಿದ್ದ ಚಿಕ್ಕಪ್ಪಂದಿರಿಗೆ ಮತ್ತೆ ಅದೇ ಒಲೆಯನ್ನು ಊದಿ ಬೇಯಿಸಿ ಹಾಕಬೇಕಲ್ಲಾ ಎಂದು ದುಃಖ ನುಂಗಿಕೊಂಡೇ ಮತ್ತೆ ಅಡುಗೆ ಮಾಡಲು ನಿಂತುಕೊಳ್ಳುತ್ತಿದ್ದೆವು.

ಎಂಥಾ ಕಾಲ ಅದು! ಮಾತೆತ್ತಿದರೆ ಹೆಣ್ಣು ಹೀಗೆಯೇ ಇರಬೇಕು ಎಂದು ಫರ್ಮಾನು ಹೊರಡಿಸಿಬಿಡುತ್ತಿದ್ದರು, ಹಾಗೆ ನೋಡುವುದಾದರೆ ಈಗಿನ ಗಂಡಸರು ಎಷ್ಟೋ ವಾಸಿ, ನಿಮ್ಮನ್ನು ನಮ್ಮಷ್ಟು ಗೋಳು ಹೊಯ್ದುಕೊಳ್ಳುವುದಿಲ್ಲ ಎಂದರು. ನಾನೂ ಹೌದೆಂದು ತಲೆಯಾಡಿಸಿದೆ.

ಒಂದು ಕ್ಷಣ ನನ್ನ ಅಜ್ಜಿ, ಮುತ್ತಜ್ಜಿ ಹೊಗೆಯುಗುಳುವ ಒಲೆಯ ಮುಂದೆ ಕಣ್ಣನ್ನು ಕೆಂಡದುಂಡೆಗಳನ್ನಾಗಿ ಮಾಡಿಕೊಂಡು ದೊಡ್ಡ ಕುಟುಂಬಕ್ಕೆ ಅಡುಗೆ ಮಾಡುತ್ತಿದ್ದುದು, ಅನಿರೀಕ್ಷಿತ ಅತಿಥಿಗಳಿಗೆ ಹೊಟ್ಟೆ ತುಂಬಾ ಉಣ್ಣಿಸಿ ತಾವೇ ಅರೆಹೊಟ್ಟೆಯಲ್ಲಿರುತ್ತಿದ್ದುದು, ಮನೆಯ ಆಳು ಕಾಳು, ಹಸು ಕರು ಇವನ್ನೆಲ್ಲಾ ನೋಡಿಕೊಂಡು ಬದುಕುತ್ತಿದ್ದುದು ಎಲ್ಲಾ ಕಣ್ಣ ಮುಂದೆ ಬಂದಂತಾಯಿತು.

ಒಮ್ಮೆ ಮಧ್ಯಾಹ್ನದ ಒಂದು ಗಂಟೆ ಅಡುಗೆಗೆ ಹನ್ನೆರಡೂ ಮುಕ್ಕಾಲಕ್ಕೆ ನೂರೈವತ್ತು ಬೂತಾಯಿ ಮೀನು ತಂದು ಊಟದ ಹೊತ್ತಿಗೆ ಮೀನು ಹುರಿಯಲಿಲ್ಲವೆಂದು ಮನೆಯಲ್ಲಿ ದೊಡ್ಡ ಜಗಳವಾದದ್ದೂ ನೆನಪಾಯಿತು. ಹಾಗೆ ನೋಡುವುದಾದರೆ, ಈ ವಿಚಾರದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತಾಡಬಲ್ಲ, ತಮ್ಮ ಬೇಕು ಬೇಡಗಳನ್ನು ಸ್ಪಷ್ಟ ಧ್ವನಿಯಲ್ಲಿ ಹೇಳಬಲ್ಲ ಈಗಿನ ಹುಡುಗಿಯರ ಬದುಕೇ ಎಷ್ಟೋ ವಾಸಿ ಅನ್ನಿಸುತ್ತದೆ. ‘ಮಿ ಟೈಮ್’ ಅಂದು ನಮಗಾಗಿ ದಿನದ ಒಂದಿಷ್ಟು ಹೊತ್ತನ್ನು ಅತ್ಯಂತ ಜತನದಿಂದ ಎತ್ತಿಟ್ಟುಕೊಳ್ಳುವ ನಾವು ಮತ್ತು ಮಧ್ಯರಾತ್ರಿಯಾದರೂ ಅಂತಹ ಪುಟ್ಟ ಪುಟ್ಟ ಖಾಸಗಿ ಸಮಯವನ್ನೂ ದಕ್ಕಿಸಿಕೊಳ್ಳಲಾರದೆ ಒಂದಿಡೀ ಬದುಕನ್ನು ಕಳೆದುಬಿಡುವ ನಮ್ಮ ಅಮ್ಮ, ಅಜ್ಜಿಯಂದಿರ ಬದುಕನ್ನು ತುಲನೆ ಮಾಡಿ ನೋಡಿದರೆ ಆ ಹೊತ್ತಲ್ಲಿ ಹೆಣ್ಣು ಬದುಕಿಗೇಕೆ ಈ ಪರಿ ಜಂಜಡಗಳನ್ನು ಹೇರಿದ್ದರು ಎಂದು ದಿಗಿಲಾಗುತ್ತದೆ.

ಅಪ್ಪ ವರದಕ್ಷಿಣೆಯಾಗಿ ಕೊಟ್ಟ ಭೂಮಿಯಲ್ಲಿ ಬೆಳೆ ತೆಗೆಯಲು ಸಾಧ್ಯವಿಲ್ಲದಾಗಿಯೋ ಅಥವಾ ಮೈ ಬಗ್ಗಿಸಿ ದುಡಿಯದ ಗಂಡನನ್ನು ಕಟ್ಟಿಕೊಂಡು ಊರಲ್ಲಿ ಏಗಲಾರೆ ಅನ್ನಿಸಿತೋ ಏನೋ ಊರು ಬಿಟ್ಟು ಬಂದ ಅವರು ಬೆಂಗಳೂರಲ್ಲಿ ನೆಲೆ ನಿಂತರು. ತನ್ನತ್ತ ನಾಲ್ಕೂ ಕಡೆಯಿಂದ ಬರುವ ನಿರಾಶ್ರಿತರನ್ನು, ನಿರುದ್ಯೋಗಿಗಳನ್ನು ಬಾಚಿ ತಬ್ಬಿಕೊಂಡು ಸಾಂತ್ವನ ಹೇಳುವ, ನಿರಾಳ ಬದುಕು ಕಟ್ಟಿಕೊಳ್ಳಲು ನೆರವಾಗುವ ಆ ಮಹಾನಗರಕ್ಕೆ ಇವರದೊಂದು ಸಂಸಾರ ಭಾರವಾಗುತ್ತದೆಯೇ? ಅವರನ್ನು ಪೊರೆಯಲೂ ಬೆಂಗಳೂರು ಟೊಂಕ ಕಟ್ಟಿ ನಿಂತು ಬಿಟ್ಟಿತು.

ಗಂಡ ಆಗಾಗ ಕೆಲಸ ಕದಿಯುತ್ತಿದ್ದರೂ ಸರಾಗ ಬದುಕಿಗೇನೂ ತೊಂದರೆ ಇರಲಿಲ್ಲ. ಬೀದಿ ಬದಿ ವ್ಯಾಪಾರ ಬದುಕನ್ನು ನಿಧಾನವಾಗಿ ಕಟ್ಟಿಕೊಡುತ್ತಿತ್ತು, ನಗರದ ಆರ್ದ್ರತೆ ಮತ್ತು ಕಟುಕತನ ಎರಡನ್ನೂ ಇಷ್ಟಿಷ್ಟಾಗಿ ಅರಗಿಸಿಕೊಂಡು ಬದುಕನ್ನು ಒಂದು ಹಂತಕ್ಕೆ ತರುವಷ್ಟರಲ್ಲಿ ಕೊರೋನ ರೂಪದಲ್ಲಿ ಅದೇ ಬದುಕು ಮಕಾಡೆ ಮಲಗಿಬಿಟ್ಟಿತು. ಒಂದೆಡೆ ವ್ಯಾಪಾರ ಇಲ್ಲದ ಸಂಕಷ್ಟ, ಮತ್ತೊಂದೆಡೆ ಇಷ್ಟು ಜತನದಿಂದ ಕಟ್ಟಿಕೊಂಡ ಬದುಕು ಕೆಲವೇ ಕೆಲವು ದಿನಗಳ ಅಂತರದಲ್ಲಿ ಕೊರಕೊಲೊಂದಕ್ಕೆ ಬಿದ್ದುಬಿಟ್ಟ ಸಂಕಟದಲ್ಲಿ ಗಂಡ ಕುಡಿತ ಕಲಿತುಕೊಂಡು ಬಿಟ್ಟ.

ಅಪ್ಪನಿಗಿಲ್ಲದ ಕುಡಿತದ ಚಟ ಚಿಕ್ಕಪ್ಪಂದಿರ ರೂಪದಲ್ಲಿ ಅವರನ್ನು ಯಾವ ಪರಿ ಹಿಂಸಿಸಿತ್ತೆಂದರೆ ಆ ಪದ ಕೇಳಿದರೆ ದೂರ ಓಡಿ ಬಿಡುವಂತಾಗುತ್ತಿತ್ತು. ಆದ್ರೆ ಬದುಕು ಅವರನ್ನು ಮತ್ತೊಮ್ಮೆ ಅದೇ ತಿರುವಿನಲ್ಲಿ ಬಂದು ನಿಲ್ಲಿಸಿತ್ತು. ಹಿಂದಕ್ಕೂ ಚಲಿಸಲಾಗದ, ಮುಂದಕ್ಕೂ ಚಲಿಸಲಾಗದ ವಿಚಿತ್ರ ತಿರುವದು. ಕೆಲವೇ ಕೆಲವು ದಿನಗಳಲ್ಲಿ ಗಂಡ ಕೊರೋನ ಹೊಡೆತಕ್ಕೆ ಸಿಕ್ಕೋ, ಕುಡಿತದ ಕಾರಣದಿಂದಲೋ ತೀರಿಹೋದರು. ಒಮ್ಮೆ ಬದುಕಿನಲ್ಲಿ ಆಸಕ್ತಿಯೇ ಕಳೆದುಹೋದರೂ ಮತ್ತೆ ಮಕ್ಕಳ ಮುಖ ನೋಡಿ ಮೈ ಕೊಡವಿ ಎದ್ದೆ. ದಿನಾ ಬೆಳಗ್ಗೆ, ಸಂಜೆ ಗಾಡಿಯಲ್ಲಿ ತರಕಾರಿ ತುಂಬಿ ಮಾರಾಟ ಮಾಡುತ್ತೇನೆ, ಉಳಿದ ಸಮಯದಲ್ಲಿ ಇಲ್ಲಿ ಬಂದು ಕೂತು ಚಪ್ಪಲಿ ಕಾಯುತ್ತೇನೆ ಎಂದು ನಿಟ್ಟುಸಿರಿಟ್ಟರು.

ಮತ್ತೆ ಮಕ್ಕಳು?

ಊರಲ್ಲಿದ್ದಾರೆ ತಾಯಿ

ಅವರ ಊಟ, ತಿಂಡಿ? ಕಷ್ಟ ಆಗಲ್ವಾ?

ಏನು ಬೆಂಗ್ಳೂರಲ್ಲಿ ಒಬ್ರೇ ದುಡ್ದು ಸಂಸಾರ ಸಾಗ್ಸೋಕೆ ಆಗುತ್ತೆ ಅಂದ್ಕೊಂಡಿದ್ದೀಯಾ? ನಾನಿಲ್ಲಿ ಹಗ್ಲೂ ರಾತ್ರಿ ದುಡೀತಿದ್ದೀನಿ. ಅವರ್ಗೆ ಒಂದೊತ್ತು ಗಂಜಿ ಬೇಯಿಸಿ ಕುಡ್ದು ಸಾಲೆಗೆ ಹೋಗೋದೇನು ಕಷ್ಟ? ಒಲೆಯ ಮೇಲಿಟ್ಟ ಕಾದ ಎಣ್ಣೆಯಲ್ಲಿ ಸಿಡಿವ ಪುಟ್ಟ ಪುಟ್ಟ ಸಾಸಿವೆ ಕಾಳಂತೆ ಸಿಡಿದರು. ನನಗೂ ಹೌದಲ್ಲಾ ಅನಿಸಿತು. ಬದುಕಿನ ಅಗ್ನಿ ದಿವ್ಯಗಳನ್ನು ಕಾಲಕಾಲಕ್ಕೆ ಹಾದು ಬಂದವರಿಗೆ ಇವೆಲ್ಲಾ ಯಾವ ಮಹಾ ಕಷ್ಟ ಅನಿಸಿತು. ಮರುಕ್ಷಣ 15 ಸೆಂಟಿ ಮೀಟರ್ ಉದ್ದದ ಕವಿತೆ ಓದಲು ಸಾವಿರಾರು ಕಿಲೋಮೀಟರ್ ಪ್ರಯಾಣ ಬೆಳೆಸುವ ಕವಿಗಳ ಬಗ್ಗೆ ನನ್ನಲ್ಲಿ ತೀವ್ರವಾದ ಪ್ರೀತಿ, ಮೆಚ್ಚುಗೆ, ಕರುಣೆ, ಕನಿಕರ, ಅನುಕಂಪ... ಎಲ್ಲವೂ ಇದೆ ಎಂಬ ಚಂದ್ರಶೇಖರ್ ಐಜೂರು ಅವರ ಫೇಸ್ಬುಕ್ ಪೋಸ್ಟ್ ನೆನಪಾಗಿ ಕವನ ಓದಲೆಂದು ಮಂಗಳೂರಿಂದ ಬೆಂಗಳೂರಿಗೆ ಹೋದ ನನ್ನ ಬಗ್ಗೆಯೇ ಮರುಕ ಹುಟ್ಟಿಕೊಂಡು ಬಿಟ್ಟಿತು. ಒಮ್ಮೆ ಅವರ ಕೈಯನ್ನು ನನ್ನ ಕೈಯೊಳಗಿಟ್ಟು ಈ ಬೆಚ್ಚನೆಯ ಭಾವ ಕೊನೆಯವರೆಗೆ ಜೊತೆಯಲ್ಲಿರಲಿ ಎಂಬಂತೆ ಒಂದು ಮಾತೂ ಆಡದೆ ಅಲ್ಲಿಂದೆದ್ದು ಹೊರಬಂದೆ. ತಣ್ಣಗೆ ಹೊಯ್ಯುತ್ತಿದ್ದ ಬೆಂಗಳೂರಿನ ಮಳೆ ಇದ್ದಕ್ಕಿದ್ದಂತೆ ಬಿರುಸು ಪಡೆದಂತೆ ಅನಿಸಿತು...

ಒಂದು ಕ್ಷಣ ನನ್ನ ಅಜ್ಜಿ, ಮುತ್ತಜ್ಜಿ ಹೊಗೆಯುಗುಳುವ ಒಲೆಯ ಮುಂದೆ ಕಣ್ಣನ್ನು ಕೆಂಡದುಂಡೆಗಳನ್ನಾಗಿ ಮಾಡಿಕೊಂಡು ದೊಡ್ಡ ಕುಟುಂಬಕ್ಕೆ ಅಡುಗೆ ಮಾಡುತ್ತಿದ್ದುದು, ಅನಿರೀಕ್ಷಿತ ಅತಿಥಿಗಳಿಗೆ ಹೊಟ್ಟೆ ತುಂಬಾ ಉಣ್ಣಿಸಿ ತಾವೇ ಅರೆಹೊಟ್ಟೆಯಲ್ಲಿರುತ್ತಿದ್ದುದು, ಮನೆಯ ಆಳು ಕಾಳು, ಹಸು ಕರು ಇವನ್ನೆಲ್ಲಾ ನೋಡಿಕೊಂಡು ಬದುಕುತ್ತಿದ್ದುದು ಎಲ್ಲಾ ಕಣ್ಣ ಮುಂದೆ ಬಂದಂತಾಯಿತು.