ನೆನಪುಗಳ ಮಾತು ಮಧುರ...

Update: 2023-01-06 12:15 GMT

ರಮೇಶ್ ಎಂದರೆ ಲವಲವಿಕೆ. ಚಿತ್ರರಂಗದಲ್ಲಿ ಮೂರು ದಶಕ ದಾಟಿದರೂ ಇವರಿಗೆ ಇಂದಿಗೂ ಮೂವತ್ತರ ಹರೆಯ. ಬೆಳ್ಳಿ ಪರದೆಯೇ ಇವರ ಸಂಗಾತಿ. ಪಂಚಭಾಷೆಗಳಲ್ಲೂ ಖ್ಯಾತಿ. ಇವರು ಮಾತಿಗೆ ಕುಳಿತರೆ ಅದು ಜೀವನಕ್ಕೊಂದು ಸ್ಫೂರ್ತಿ. ರೇಡಿಯೋ, ಕಿರುತೆರೆ, ಪುಸ್ತಕ, ನಟ, ನಿರ್ದೇಶಕ ಹೀಗೆ ರಮೇಶ್ ಪ್ರತಿಭೆಗೆ ಹಲವು ರೀತಿ. ನೋಟ, ನಗು, ಮಾತು ಎಲ್ಲವೂ ಸುಂದರ. ವಿವಾದಗಳು ಇವರಿಂದ ಬಲು ದೂರ. ಇಂಥ ನಟ ವೃತ್ತಿಯ ಪ್ರಮುಖ ನೆನಪು ಹಂಚಿಕೊಂಡಾಗ ಆ ಮಾತುಗಳೇ ಮಧುರ. (ರಮೇಶ್ ಅರವಿಂದ್ ಅವರ ಮಾತುಗಳಿಗೆ ಸಿನೆಮಾ ಪತ್ರಕರ್ತ ಶಶಿಕರ ಪಾತೂರು ಇಲ್ಲಿ ಅಕ್ಷರ ರೂಪ ನೀಡಿದ್ದಾರೆ)

ರಮೇಶ್ ಅರವಿಂದ್  \  ನಿರೂಪಣೆ: ಶಶಿಕರ ಪಾತೂರು

ಚಿತ್ರರಂಗದಲ್ಲಿ ಮೂರು ದಶಕ ದಾಟಿರುವ ಲವಲವಿಕೆಯ ನಟ ರಮೇಶ್ಅರವಿಂದ್ತಮ್ಮ ಸಿನಿಪಯಣದ ಪ್ರಮುಖ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಸಿನೆಮಾರಂಗ ಪ್ರವೇಶಕ್ಕೆ ಕಾರಣವಾದ ಘಟನೆ

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಮೆಕ್ಯಾನಿಕಲ್ ಓದುತ್ತಿದ್ದಾಗ ಸ್ಕಿಟ್, ಡಿಬೇಟ್ಗಳಿಗಾಗಿ ಇಂಟರ್ ಕಾಲೇಜ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ರೇಡಿಯೋ ದಲ್ಲಿ ಅವಕಾಶ ಸಿಕ್ಕಿತ್ತು. ಅಲ್ಲಿಂದ ಟೆಲಿವಿಶನ್ವಾಹಿನಿಗೂ ಕಾಲಿಡಲು ಸಾಧ್ಯವಾಗಿತ್ತು. ಟಿವಿಯಲ್ಲಿ ಯುವ ತಂಡಕ್ಕೆ ಅವಕಾಶ ಕೊಡುತ್ತಿದ್ದರು. ದೀಪಾವಳಿ ದಿನ ನಾನು ಒಂದು ಕಾರ್ಯಕ್ರಮ ಕೊಟ್ಟಿದ್ದೆ. ಪಟಾಕಿಗಳನ್ನು ಉಪಯೋಗಿಸಬೇಕಾದರೆ ಎಚ್ಚರಿಕೆಯಿಂದ ಬಳಸಿ, ಚಪ್ಪಲಿ ಹಾಕ್ಕೊಳ್ಳಿ.. ಇವೇ ನಾನು ಹೇಳಿದ ವಿಚಾರಗಳು! ಹೀಗೆ ಅದರಲ್ಲಿ ಸ್ವಲ್ಪ ಹಾಸ್ಯನೂ ಮಿಕ್ಸ್ ಮಾಡಿದ್ದೆ. ಕಾರ್ಯಕ್ರಮ ಪ್ರಸಾರವಾಗಿದ್ದು ಹಬ್ಬದ ದಿನವಾದ ಕಾರಣ, ಸಿನೆಮಾದವರಿಗೆ ಶೂಟಿಂಗ್ ಇರಲಿಲ್ಲ.

ಮಾತ್ರವಲ್ಲ ಆಗ ದೂರದರ್ಶನ ಬಿಟ್ಟರೆ ಬೇರೆ ಚಾನೆಲ್ ಕೂಡ ಇರಲಿಲ್ಲ. ಎಲ್ಲರೂ ಆ ಕಾರ್ಯಕ್ರಮ ನೋಡಿದ್ದರು. ಹಾಗಾಗಿ ಅದೊಂದು ಕಾರ್ಯಕ್ರಮದಿಂದ ಮೂರು ಚಿತ್ರಗಳಲ್ಲಿ ನನಗೆ ಅವಕಾಶಗಳು ಸಿಕ್ಕವು. ಮೊದಲು ಆ್ಯಕ್ಟ್ ಮಾಡಿದ್ದು ‘ಮೌನಗೀತೆ’ ಸಿನೆಮಾದಲ್ಲಿ. ಆದರೆ ಅದು ಆಮೇಲೆ ರಿಲೀಸ್ ಆಯಿತು.ಆಮೇಲೆ ಕೆ. ಬಾಲಚಂದರ್ ಅವರ ‘ಸುಂದರ ಸ್ವಪ್ನಗಳು’ ಮತ್ತು ಇನ್ನೊಂದು ರಾಜಾ ಶಂಕರ್ ಅವರ ‘ಅವಳ ಚರಿತ್ರೆ’. ಈ ಮೂರು ಚಿತ್ರಗಳು ಒಂದೇ ಕಾರ್ಯಕ್ರಮದಿಂದ ಸಿಕ್ಕಿದ್ದವು. ಅದುವೇ ದೊಡ್ಡ ತಿರುವು.

ಬದುಕಿಗೆ ತಿರುವು ಕೊಟ್ಟ ಸಿನೆಮಾ

ಸುಂದರ ಸ್ವಪ್ನಗಳು, ಮೌನಗೀತೆ ಹೀಗೆ ಸಣ್ಣ ಪಾತ್ರಗಳನ್ನೇ ಮಾಡುತ್ತಿದ್ದೆ. ಹೀರೋ ಆಗಿದ್ದು ಮಾತ್ರ ‘ಮಧುಮಾಸ’ ಚಿತ್ರದ ಮೂಲಕ. ಆನಂತರ ಬಂದಿದ್ದು ಪಂಚಮ ವೇದ. ಈ ಎರಡು ಚಿತ್ರಗಳು ನಾಯಕನ ಪಟ್ಟ ಕೊಟ್ಟವು. ಹಾಗಾಗಿ ಮೊದಲನೇ ತಿರುವು ಎಂದರೆ ಈ ಎರಡು ಚಿತ್ರಗಳೆಂದೇ ಹೇಳಬಹುದು. ಬೇರೆ ಬೇರೆ ಹಂತದಲ್ಲಿ ಆಗಾಗ ಒಳ್ಳೆಯ ಚಿತ್ರಗಳು ಬಂದು ನನಗೆ ಸಹಾಯವಾಯಿತು.

ಮರೆಯಲಾಗದ ವರ್ಷಕ್ಕೆ ಬೆಳ್ಳಿಹಬ್ಬ

1986ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನನಗೆ ದಶಕದ ಬಳಿಕ ಒಂದು ಅದ್ಭುತ ಅನುಭವವಾಯಿತು. 25 ವರ್ಷಗಳಹಿಂದೆ 1997ರಲ್ಲಿ ನನ್ನ 9 ಸಿನೆಮಾಗಳು ತೆರೆಕಂಡವು. ವಿಶೇಷ ಏನೆಂದರೆ, ಹಾಗೆ ಬಿಡುಗಡೆಯಾದ ನನ್ನ ಎಲ್ಲ ಸಿನೆಮಾಗಳು ಸೂಪರ್ ಹಿಟ್ ಆದವು. ಅದು ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಹಿಟ್ಸಿಕ್ಕಂಥ ವರ್ಷ ಎನ್ನಬಹುದು. ಅದು ಅನುರಾಗ ಸಂಗಮ, ಕರ್ಪೂರದ ಗೊಂಬೆ, ನಮ್ಮೂರ ಮಂದಾರ ಹೂವೇ, ಅಮೃತ ವರ್ಷಿಣಿ, ಅಮೆರಿಕಾ ಅಮೆರಿಕಾ, ಉಲ್ಟಾ ಪಲ್ಟಾ, ಮುಂಗಾರಿನ ಮಿಂಚು, ಓ ಮಲ್ಲಿಗೆ, ತುತ್ತಾಮುತ್ತ, ಇವೆಲ್ಲವೂ ಒಂದರ ಹಿಂದೊಂದಾಗಿ ಬಂದಂಥ ಆ ವರ್ಷವೇ ದೊಡ್ಡ ತಿರುವು ನೀಡಿತು.

ವಿವಿಧ ವಿಭಾಗದ ಅವಕಾಶಗಳು

ಸಿನೆಮಾ ನನ್ನನ್ನು ಒಬ್ಬ ನಟನಾಗಿ ಮಾತ್ರ ಉಳಿಸಲಿಲ್ಲ. ನನ್ನೊಳಗಿನ ಬರಹಗಾರನಿಗೂ ಅವಕಾಶ ತಂದುಕೊಟ್ಟಿತ್ತು. ನನ್ನ ಬರವಣಿಗೆಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ಮಾಡಿಕೊಟ್ಟಿದ್ದು ಹೂಮಳೆ ಎನ್ನುವ ಚಿತ್ರ. ಅದೇ ರೀತಿ ನಿರ್ದೇಶಕನಾಗಲು ತಿರುವು ನೀಡಿದ್ದು ರಾಮ ಶಾಮ ಭಾಮ. ಹೀಗೆ ಆಗಾಗ ಇಂಥ ಚಿತ್ರಗಳು ಬಂದು ನನ್ನನ್ನು ಯಶಸ್ವಿಯಾಗಿ ಚಿತ್ರರಂಗದಲ್ಲಿ ಉಳಿಯುವಂತೆ ಮಾಡಿತು.

ಪ್ರತಿಯೊಬ್ಬ  ನಿರ್ದೇಶಕರಿಂದಲೂ ಕಲಿತೆ

ಇದುವರೆಗೆ ನಾನು ಕನ್ನಡದಲ್ಲಿ ಮಾತ್ರ 103 ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದೇನೆ. ಇದನ್ನು ಸಾಧ್ಯವಾಗಿಸಿದ ಪ್ರೇಕ್ಷಕರು, ನನಗೆ ಅವಕಾಶ ಕೊಟ್ಟಂಥ ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಹೇಳಲು ಇಷ್ಟಪಡುತ್ತೇನೆ.

 ಪ್ರತಿಯೊಂದು ಚಿತ್ರದಿಂದ ಒಬ್ಬೊಬ್ಬ ನಿರ್ದೇಶಕರಿಂದ ನನಗೆ ಏನಾದರೂ ಒಂದು ಗುಣಗಳು ಇಷ್ಟವಾಗಿರುತ್ತವೆ. ಉದಾಹರಣೆಗೆ ಕೆ. ಬಾಲಚಂದರ್ ಅವರಲ್ಲಿ ಇದ್ದಂಥ ಸಿನೆಮಾದ ಕುರಿತಾದ ಬರವಣಿಗೆ, ನಟನೆಯ ಬಗ್ಗೆ ಇದ್ದಂಥ ಸಮಗ್ರ ಜ್ಞಾನ, ಗೀತಪ್ರಿಯ ಅವರು ನನ್ನನ್ನು ಏನೋ ಹೀರೋ.. ಬಾರೋ ಇಲ್ಲಿ ಎನ್ನುತ್ತಿದ್ದರು. ಹಾಗೆ ಹೀರೋ ಬಾರೋ ಎಂದು ಕರೆದು ಕರೆದೇ ನನಗೆ ನಾನು ಹೀರೋ ಅನಿಸಿಬಿಟ್ಟಿತ್ತು. ಗೀತ ಪ್ರಿಯರ ಆ ಗುಣ ಇರಬಹುದು, ಅವರು ಬರೆದಂಥ ಅದ್ಭುತವಾದ ಸಾಹಿತ್ಯ ಇರಬಹುದು ಎಲ್ಲವೂ ಕೂಡ ನಾವು ಜೀವನದಲ್ಲಿ ಬಳಸಬಹುದಾದಂಥದ್ದೇ ಎನ್ನಬಹುದು.

ನಿರ್ದೇಶಕ ಎಸ್. ಮಹೇಂದರ್ ಅವರು ಸಿನೆಮಾಗಳಲ್ಲಿ ಮ್ಯೂಸಿಕಲ್ ಆಗಿ ಶಾಟ್ಸ್ ಇಡ್ತಾರೆ. ಗ್ರಾಮೀಣ ಸೊಗಡನ್ನು ಚೆನ್ನಾಗಿ ತೋರಿಸುತ್ತಾರೆ ಎನ್ನುವುದು ಇಷ್ಟವಾಗುತ್ತಿತ್ತು. ನಮ್ಮ ರಾಜೇಂದ್ರ ಸಿಂಗ್ ಬಾಬು ಅವರು ತುಂಬ ಕೂಲ್ ಆಗಿ ಡೈರೆಕ್ಟ್ ಮಾಡುತ್ತಿದ್ದರು. ಬಹಳ ಕ್ಲಿಷ್ಟಕರವಾಗಿರುವಂಥ ಸಂದರ್ಭವನ್ನು ಕೂಡ ಯಾವುದೇ ಆತಂಕ ಇಲ್ಲದ ಹಾಗೆ ನಿರ್ದೇಶನ ಮಾಡುತ್ತಿದ್ದರು. ಕಲಾವಿದರನ್ನು ತುಂಬ ಖುಷಿಯಾಗಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಅದು ಇಷ್ಟವಾಗುತ್ತಿತ್ತು.

ಸುನೀಲ್ ಕುಮಾರ್ ದೇಸಾಯಿಯವರಲ್ಲಿ ಇದ್ದಂಥ ಫ್ಯಾಷನ್ ನೋಡುವುದೇ ಖುಷಿ. ಅಂದರೆ ಅವರು ಸಿನೆಮಾವನ್ನು ಎಷ್ಟೊಂದು ಪ್ರೀತಿಸುತ್ತಾರೆ ಅಂದರೆ, ಸೆಟ್ ನಲ್ಲಿ ಅವರು ಬೇರೆಯೇ ವ್ಯಕ್ತಿಯಾಗಿ ಬದಲಾಗುತ್ತಾರೆ. ಹೊರಗಡೆ ಇರುವ ದೇಸಾಯಿ ಬೇರೆ ಸೆಟ್ನಲ್ಲಿ ಇರುವ ದೇಸಾಯಿ ಬೇರೆ ಎನ್ನುವಂಥ ವ್ಯತ್ಯಾಸವನ್ನು ಅವರಲ್ಲಿ ನೋಡಿದ್ದೇನೆ. ದಿನೇಶ್ ಬಾಬು ಅವರನ್ನು ಒಬ್ಬ ಕವಿ ಎಂದೇ ಹೇಳುತ್ತೇನೆ. ಅವರಲ್ಲಿದ್ದಂಥ ಕವಿ ಮನಸ್ಸಿನಿಂದಲೇ ಅಮೃತ ವರ್ಷಿಣಿಯಲ್ಲಿ ಆ ರೀತಿಯ ಹಾಡಿನ ಸೃಷ್ಟಿಗೆ ಕಾರಣವಾಯಿತು. ದಿನೇಶ್ ಬಾಬು ಅವರೊಂದಿಗೆ ಕೆಲಸ ಮಾಡುವಾಗ, ಕ್ಯಾಮರಾ ಬಗ್ಗೆ ಅವರಿಂದ ಸಾಕಷ್ಟು ಒಳ್ಳೆಯ ಮಾಹಿತಿಗಳನ್ನು ಅರಿತುಕೊಂಡಿದ್ದೇನೆ.

ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನೆಮಾಗೆ ತರುವಂಥ ವಿಚಾರಗಳು ಆಕರ್ಷಕ ವಾಗಿರುತ್ತವೆ. ಉದಾಹರಣೆಗೆ ಭೂಮಿ ಸೂರ್ಯ ಶಶಾಂಕ್ ಎನ್ನುವ ಗಂಭೀರ ಥೀಮ್ ತೆಗೆದುಕೊಂಡು ಅವರು ಚಿತ್ರ ಮಾಡುತ್ತಾರೆ. ಅದು ನನಗೆ ಮಾತ್ರವಲ್ಲ, ಎಲ್ಲರಿಗೂ ಇಷ್ಟವಾಗುತ್ತದೆ. ಉಲ್ಟಾ ಪಲ್ಟ ನಿರ್ದೇಶಿಸಿದ ಎನ್.ಎಸ್. ಶಂಕರ್ ಅವರಿಗೆ ಇದ್ದಂಥ ಕಾಮಿಡಿ ಸೆನ್ಸ್ಗೆ ಮನಸೋಲಲೇಬೇಕು. ಆ ಕಾಲದಲ್ಲೇ ಒಂದು ಫುಲ್ ಫ್ಲೆಜ್ಡ್ ಬೌಂಡ್ ಸ್ಕ್ರಿಪ್ಟ್ ಅಂತ ತಂದು ತೋರಿಸಿದವರು ಅಂದರೆ ಅದು ಎನ್.ಎಸ್. ಶಂಕರ್. ವಿ.ಮನೋಹರ್ ಅವರಲ್ಲಿರುವ ಒಳ್ಳೆಯತನ.. ಹೀಗೆ ಪ್ರತಿಯೊಬ್ಬರ ಬಗ್ಗೆಯೂ ಮಾತನಾಡಬಲ್ಲೆ.

ನಿರ್ದೇಶಕ ಪಿ. ವಾಸು ಅವರು ಎಷ್ಟು ಚೆನ್ನಾಗಿ ಕತೆ ಹೇಳುತ್ತಾರೆ ಅಂದರೆ, ಯಾವ ನಟ ಆದರೂ ಅವರು ಪಾತ್ರವನ್ನು ವಿವರಿಸುವ ರೀತಿ ಕಂಡು ಒಪ್ಪಿಕೊಳ್ಳಲೇಬೇಕು. ಸಿನೆಮಾ ಶುರುವಾಗುವ ಮೊದಲೇ ಕತೆ ಹೇಳುತ್ತೀವಲ್ಲ? ಅದನ್ನು ಪಿ. ವಾಸು ಅವರು ಅದ್ಭುತವಾಗಿ ಹೇಳುತ್ತಾರೆ. ಹಾಗೆಯೇ ನಿರ್ದೇಶಕ ಕೆವಿ ರಾಜು ಅವರಿಗೆ ತಾಂತ್ರಿಕವಾಗಿ ಎಲ್ಲ ವಿಷಯ

ಗಳು ಗೊತ್ತಿತ್ತು. ಅವರಿಗೆ ಇದ್ದಂಥ ಲೀಡರ್ ಶಿಪ್ ಕ್ವಾಲಿಟಿ ಸೆಟ್ನಲ್ಲಿ ಎದ್ದು ಕಾಣಿಸುತ್ತಿತ್ತು. ತಾಂತ್ರಿಕತೆಯ ವಿಚಾರಕ್ಕೆ ಬಂದರೆ ನೆನೆಯಲೇಬೇಕಾದ ಹೆಸರು ಕ್ರೇಜಿಸ್ಟಾರ್ರವಿಚಂದ್ರನ್ ಅವರದ್ದು. ಅವರಲ್ಲಿದ್ದಂಥ ಅದ್ದೂರಿತನ, ಶಾಂತಿಕ್ರಾಂತಿ ಸಿನೆಮಾ ಮಾಡುವಾಗ ಅವರಲ್ಲಿದ್ದಂಥ ಕಲ್ಪನಾ ಶಕ್ತಿಯನ್ನು ಇತರರಿಂದ ಊಹಿಸುವುದು ಬಿಡಿ; ಅರಗಿಸಿಕೊಳ್ಳುವುದು ಕೂಡ ಕಷ್ಟವೆನ್ನುವ ಹಾಗಿತ್ತು. ಅವರ ಬ್ಯೂಟಿ ಸೆನ್ಸ್ ವೈಯಕ್ತಿಕವಾಗಿ ನನಗೂ ಬಹಳ ಇಷ್ಟವಾಗುತ್ತಿತ್ತು.

ಒಂದು ಕಾಲದಲ್ಲಿ ತಮಿಳು ಚಿತ್ರರಂಗದಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದ ನನ್ನನ್ನು ಕನ್ನಡಕ್ಕೆ ಮರಳಿ ಬರುವಂತೆ ಮಾಡಿದವರು ನಿರ್ದೇಶಕ ಉಮಾಕಾಂತ್ ಅವರು. ಅವರನ್ನಾಗಲೀ ನನಗೆ ಕೆಲವೊಂದು ಸಿನೆಮಾಗಳನ್ನು ನಿರ್ದೇಶಿಸಿದ ನಾಗಣ್ಣನನ್ನಾಗಲೀ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಜೊತೆಗೆ ಕೂಡ್ಲು ರಾಮಕೃಷ್ಣ ಅವರು, ಚಂದ್ರಮುಖಿ ಪ್ರಾಣಸಖಿ ನಿರ್ದೇಶಿಸಿದಂಥ ಸೀತಾರಾಮ್ ಕಾರಂತ್.. ಹೀಗೆ ತುಂಬ ಜನ ಡೈರೆಕ್ಟರ್ಸ್ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ಅವರೆ ಎಲ್ಲರಿಂದಾಗಿಯೂ ನನಗೆ ಹೊಸ ಹೊಸ ರೀತಿಯ ಭಾವ ಪ್ರದರ್ಶನಕ್ಕೆ ಅವಕಾಶಗಳು ಲಭಿಸಿವೆ.

ನನಗೆ ಆ ಕಾಲದಲ್ಲಿ ಸತತವಾಗಿ ಅವಕಾಶ ನೀಡಿ ಬೆಳೆಸಿದವರು ಪಿ.ಪಿ. ಎಚ್. ವಿಶ್ವನಾಥ್. ಅವರು ಪುಟ್ಟಣ್ಣ ಕಣಗಾಲ್ ಶಿಷ್ಯ ಆಗಿರುವುದರಿಂದ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಎದ್ದು ಕಾಣುತ್ತಿತ್ತು. ಹೆಚ್ಚಾಗಿ ತಮಿಳು ಸಿನೆಮಾಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಬಾಲು ಮಹೇಂದ್ರ ಅವರು ನನಗೆ ಸಹಜವಾಗಿ ನಟಿಸಲು ಪದೇಪದೇ ನೆನಪು ಮಾಡುತ್ತಿದ್ದರು. ದೃಶ್ಯಗಳು ಸ್ವಾರಸ್ಯಕರವಾಗಿ ಇರಬೇಕು ಜೊತೆಗೆ ನ್ಯಾಚುರಲ್ ಆಗಿರಬೇಕು ಎಂದು ಮತ್ತೆ ಮತ್ತೆ ನನ್ನೊಳಗೆ ಇಂಜೆಸ್ಟ್ ಮಾಡುತ್ತಿದ್ದರು. ಈ ತರಹ ಹಲವರು ನೀಡಿದ ಸ್ಫೂರ್ತಿ ನನ್ನ ಮೇಲಿದೆ. ಇತ್ತೀಚೆಗೆ ನಾನು ನಟಿಸಿದ ಚಿತ್ರಗಳಲ್ಲಿನ ಹೊಸ ನಿರ್ದೇಶಕರು ಉದಾಹರಣೆಗೆ ಪುಷ್ಪಕ ವಿಮಾನ ನಿರ್ದೇಶಿಸಿದ ರವಿ, ಶಿವಾಜಿ ಸುರತ್ಕಲ್ ನಿರ್ದೇಶಿಸಿದ ಆಕಾಶ್.. ಹೀಗೆ ಪ್ರತಿಯೊಬ್ಬ ನಿರ್ದೇಶಕರ ಬಗ್ಗೆಯೂ ಹೇಳಬಹುದು. ಯಾಕೆಂದರೆ ಪ್ರತಿಯೊಬ್ಬ ನಿರ್ದೇಶಕರ

ಲ್ಲಿಯೂ ಒಂದು ಅದ್ಭುತವಾದ ವಿಷಯ ಇದ್ದೇ ಇರುತ್ತದೆ. ಅದನ್ನು ನಾವು ಗ್ರಹಿಸಿ ನಮ್ಮದಾಗಿಸ

ಬೇಕು. ಹೀಗಾಗಿ ಎಲ್ಲ ಡೈರೆಕ್ಟರ್ಸ್ ಗೂ ನನ್ನ ಧನ್ಯವಾದಗಳು. ಇನ್ನೂ ಹಲವರಿದ್ದಾರೆ. ಎಲ್ಲರನ್ನೂ ಈ ಪಟ್ಟಿಯಲ್ಲಿ ನಾನು ಉಲ್ಲೇಖಿಸಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಇರಲಿ.

ಹೌದು; ಕಮಲ್ ಹಾಸನ್ ನಮ್ಮವರೇ..!

ಇತ್ತೀಚೆಗೆ ಕಮಲ್ ಹಾಸನ್ಕಾಂತಾರ ಚಿತ್ರದ ಬಗ್ಗೆ ಹೊಗಳುತ್ತಾ ಒಂದು ಮಾತು ಹೇಳುತ್ತಾರೆ, ನಾನು ಕನ್ನಡ ಚಿತ್ರರಂಗಕ್ಕೆ ಸೇರಿದವನು ಎನ್ನುವ ಕಾರಣ ಹೆಚ್ಚಿನ ಹೆಮ್ಮೆ ಇದೆ ಎಂದಿದ್ದಾರೆ. ಅವರನ್ನು ಯೂನಿವರ್ಸಲ್ ಸ್ಟಾರ್ಎನ್ನುತ್ತಾರೆ. ಎಲ್ಲ ಭಾಷೆಗಳಲ್ಲಿಯೂ ಸೂಪರ್ಹಿಟ್ಚಿತ್ರಗಳನ್ನು ನೀಡಿರುವ ಅವರನ್ನು ಎಲ್ಲ ಭಾಷೆಯ ಚಿತ್ರರಂಗದವರು ತಮ್ಮವರು ಎಂದು ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಕಮಲ್ ತಾವಾಗಿಯೇ ತನ್ನನ್ನು ಕನ್ನಡ ಚಿತ್ರರಂಗಕ್ಕೆ ಸೇರಿಕೊಂಡವನು ಎಂದಿರುವುದು ನಿಜಕ್ಕೂ ಖುಷಿಯ ವಿಚಾರ.

ಕನ್ನಡ ಚಿತ್ರರಂಗದ ಜೊತೆಗೆ ಕಮಲ್ಹಾಸನ್ ಆರಂಭ ಕಾಲದಿಂದಲೇ ಇರಿಸಿಕೊಂಡು ಬಂದಿರುವ ಬಾಂಧವ್ಯ, ನಟಿಸಿರುವ ಚಿತ್ರಗಳು ಎಲ್ಲವೂ ಕಮಲ್ ಹಾಸನ್ರನ್ನು ನಮ್ಮವರನ್ನಾಗಿಸಿದೆ. ಇಂಥ ಬಹುಮುಖ ಪ್ರತಿಭೆಯನ್ನು ನಿರ್ದೇಶಿಸಿಯೇ ನಾನು ಡೈರೆಕ್ಟರ್ಆದೆ ಎನ್ನುವುದು ನನಗೂ ಹೆಮ್ಮೆಯ ವಿಚಾರ.

ಕಮಲ್ ಹಾಸನ್ರನ್ನು ನಾನು ನೇರವಾಗಿ ನೋಡಿದ್ದು ವೃತ್ತಿಪರ ನಿರೂಪಕನಾಗಿದ್ದಾಗ! ಅದು ‘ಸಾಗರ ಸಂಗಮಂ’ ಚಿತ್ರದ 50ನೇ ದಿನದ ಸಕ್ಸಸ್ ಮೀಟ್ ಕಾರ್ಯಕ್ರಮವಾಗಿತ್ತು. ವುಡ್ಲ್ಯಾಂಡ್ಸ್ ಹೊಟೇಲಲ್ಲಿ ನಡೆಯಿತು. ಬಹುಶಃ ನಾನು ಆಗ ದೂರದರ್ಶನದ ಕಾರ್ಯಕ್ರಮದಿಂದ ಜನಪ್ರಿಯಗೊಂಡಿದ್ದೇನೆ ಅನ್ಸುತ್ತೆ. ಹೀಗಾಗಿ ಆ ಕಾರ್ಯಕ್ರಮದ ನಿರೂಪಣೆಗೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲೇ ನಾನು ಕಮಲ್ ನ ಮೊದಲ ಬಾರಿ ನೋಡಿದ್ದು. ಆನಂತರ ಅವರು ನಟಿಸಿದ ‘ಸೊಲ್ಲ ತಾನ್ ನೆನಿಕಿರೇನ್’ ಚಿತ್ರದ ಕನ್ನಡ ರಿಮೇಕ್ ನಲ್ಲಿ ನಾನು ನಟಿಸಿದೆ. ಅವರು ಮಾಡಿದ ಪಾತ್ರವೇ ನನಗೆ ಸಿಕ್ಕಿತು. ಆ ಚಿತ್ರವೇ ಸುಂದರ ಸ್ವಪ್ನಗಳು.

ನಿರ್ದೇಶಕ ಕೆ. ಬಾಲಚಂದರ್ ಅವರು ನನ್ನನ್ನು ಕಂಡರೆ ತುಂಬ ಇಷ್ಟ ಪಡುತ್ತಿದ್ದರು. ಹಾಗೆ ಅವರೇ ನನಗೆ ತಮಿಳು ಚಿತ್ರರಂಗದಲ್ಲಿ ಅವಕಾಶ ಕೊಟ್ಟು ಕರೆದುಕೊಂಡು ಹೋದರು. ಮೊದಲ ಬಾರಿ ನನ್ನ ಮತ್ತು ಕಮಲ್ ಹಾಸನ್ ನಡುವಿನ ವೈಯಕ್ತಿಕ ಭೇಟಿ ಅಲ್ಲಿಯೇ ಆಯಿತು. ಅದು ‘ಪುನ್ನಗೈ ಮನ್ನನ್’ ಚಿತ್ರೀಕರಣವಾಗುತ್ತಿದ್ದ ಸಂದರ್ಭ. ಒಂದು ರಿಫ್ಲೆಕ್ಟರ್ ಕೆಳಗೆ ಕಮಲ್ ಚಾರ್ಲಿ ಚಾಪ್ಲಿನ್ ಗೆಟಪ್ ನಲ್ಲಿ ನಿಂತಿದ್ದರು. ಬಾಲಚಂದರ್ ನನ್ನನ್ನು ಕರೆದುಕೊಂಡು ಹೋಗಿ ಅವರಿಗೆ ಇಂಟ್ರಡ್ಯೂಸ್ ಮಾಡಿದರು. ಹಾಗೆ ಪರಿಚಯವಾಯಿತು. ಆನಂತರ ಹಲವು ಚಿತ್ರಗಳಲ್ಲಿ ಜೊತೆ ಜೊತೆಯಾಗಿ ಕೆಲಸ ಮಾಡುವಂಥ ಅವಕಾಶಗಳು ಸಿಕ್ಕಿತು. ಇಲ್ಲಿಯವರೆಗೆ ಹತ್ತು ಚಿತ್ರಗಳಲ್ಲಿ ಜೊತೆಗೆ ನಟಿಸಿದ್ದೇವೆ.ಹಾಗಾಗಿ ಸ್ನೇಹಿತರಾದೆವು. ನನ್ನಲ್ಲಿ ಹೇಳುತ್ತಲೇ ಇದ್ದರು, ನಿನ್ನಲ್ಲಿ ತುಂಬ ಒಳ್ಳೆಯ ಸೃಜನಶೀಲತೆ ಇದೆ, ನೀನು ಆದಷ್ಟು ಬೇಗ ಡೈರೆಕ್ಟರ್ ಆಗಬೇಕು ಅಂತ. ಕೊನೆಗೆ ಅದಕ್ಕೂ ಅವರೇ ಅವಕಾಶ ಮಾಡಿಕೊಡುವ ಸಂದರ್ಭವೂ ಆಯಿತು.

ಕಮಲ್ ನಿರ್ಮಿಸಿ ನಟಿಸಿದ ‘ಮುಂಬೈ ಎಕ್ಸ್ ಪ್ರೆಸ್’ನಲ್ಲಿ ನನಗೆ ನಟನೆಯ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ನೋಡಿಕೊಳ್ಳುವಂಥ ಅವಕಾಶ ಸಿಕ್ಕಿತು. ಅದಾದ ಮೇಲೆ ಬಹಳ ಬೇಗನೆ ನನಗೆ ಡೇಟ್ಸ್ ಕೊಟ್ಟು ‘ರಾಮ ಶಾಮ ಭಾಮ’ ನಿರ್ದೇಶಿಸುವ ಅವಕಾಶ ಮಾಡಿಕೊಟ್ಟರು. ಆನಂತರ ಅವರೇ ನಾಯಕರಾಗಿರುವ ತಮಿಳು ಸಿನೆಮಾ ‘ಉತ್ತಮ ವಿಲನ್’ ಡೈರೆಕ್ಟ್ ಮಾಡಿದೆ. ಹೀಗೆ, ಹಲವು ವರ್ಷಗಳ ಸ್ನೇಹ ನಮ್ಮದು. ಹಲವು ವಿಷಯಗಳನ್ನು ಅವರಿಂದ ಕಲಿತಿದ್ದೇನೆ. ಅವರ ಚಿತ್ರಗಳಿಂದ ನಾನು ಬಹಳ ಸ್ಫೂರ್ತಿ ಪಡೆದಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕಮಲ್ನಲ್ಲಿ ಇಷ್ಟವಾಗುವ ವಿಷಯ ಅಂದರೆ ಅವರು ಅಷ್ಟು ಬೇಗ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಸೋತರೂ ಮತ್ತೆ ಅವರು ತಮ್ಮ ಶ್ರಮದಿಂದಲೇ ಎದ್ದು ಬರುತ್ತಾರೆ. ಇಂದಿಗೂ ಎಲ್ಲದಕ್ಕೂ ಅವರು ಪರಿಶ್ರಮ ಪಡುತ್ತಾರೆ. ಅದು ನನಗೆ ಬಹಳ ಇಷ್ಟವಾಗುತ್ತದೆ.

ಕಮಲ್ ನಿರ್ಮಿಸಿ ನಟಿಸಿದ ‘ಮುಂಬೈ ಎಕ್ಸ್ ಪ್ರೆಸ್’ನಲ್ಲಿ ನನಗೆ ನಟನೆಯ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ನೋಡಿಕೊಳ್ಳುವಂಥ ಅವಕಾಶ ಸಿಕ್ಕಿತು. ಅದಾದ ಮೇಲೆ ಬಹಳ ಬೇಗನೆ ನನಗೆ ಡೇಟ್ಸ್ ಕೊಟ್ಟು ‘ರಾಮ ಶಾಮ ಭಾಮ’ ನಿರ್ದೇಶಿಸುವ ಅವಕಾಶ ಮಾಡಿಕೊಟ್ಟರು. ಆನಂತರ ಅವರೇ ನಾಯಕರಾಗಿರುವ ತಮಿಳು ಸಿನೆಮಾ ‘ಉತ್ತಮ ವಿಲನ್’ ಡೈರೆಕ್ಟ್ ಮಾಡಿದೆ. ಹೀಗೆ, ಹಲವು ವರ್ಷಗಳ ಸ್ನೇಹ ನಮ್ಮದು. ಹಲವು ವಿಷಯಗಳನ್ನು ಅವರಿಂದ ಕಲಿತಿದ್ದೇನೆ.