ಮೀಸಲಾತಿಯ ಚರ್ಚೆ ಬಗ್ಗೆ ಚರ್ಚೆ

Update: 2023-01-06 15:36 GMT

ಹೃಷಿಕೇಶ್ ಬಹದ್ದೂರ ದೇಸಾಯಿ

ಮೂಲತಃ ಹಾವೇರಿಯವರಾಗಿರುವ ಹೃಷಿಕೇಶ್ ಬಹದ್ದೂರ್ ದೇಸಾಯಿ , ಬೆಳಗಾವಿ ನಿವಾಸಿ. ಪತ್ರಕರ್ತ. ಉತ್ತರ ಕರ್ನಾಟಕದ ಸೊಬಗನ್ನು ತುಂಬಿಕೊಂಡ ಅವರ ಬರಹಗಳು ನಾಡಿನ ಹಲವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಮಾಜಿಕ ಜಾಲ ತಾಣಗಳಲ್ಲೂ ಸಕ್ರಿಯರು. ಹರಿತ ವ್ಯಂಗ್ಯದ ಜೊತೆಗೆ ಇವರು ಮಾಡುವ ರಾಜಕೀಯ ವಿಶ್ಲೇಷಣೆಗಳು ಜನಮನ ಸೆಳೆದಿವೆ.

ಈಕತೆ ಸರ್ವ ಕಾಲಕ್ಕೂ ಸಲ್ಲುವುದಾದರೂ, ಶುರು ಆಗುವುದು ಒಂದಾನೊಂದು ಕಾಲದಲ್ಲಿ.

ಅಂಕ ಒಂದು

ಕಿರು ಮಾರಿ ಕೋವಿಡ್ ನಂತರದ ಮಹಾಮಾರಿ ಲಾಕ್ ಡೌನ್ ನಲ್ಲಿ ಶಾಲೆ - ಕಾಲೇಜು ಗಳು ಸರಿಯಾಗಿ ನಡೆಯಲಿಲ್ಲ ಎನ್ನುವ ಚರ್ಚೆ ಮೊನ್ನೆ ಪರಿಚಯಸ್ಥ ರೊಬ್ಬರ ಮನೆಯಲ್ಲಿ ನಡೆಯುತ್ತಿತ್ತು.

ಅಲ್ಲಿ ಒಬ್ಬ ಕಾಲೇಜು ಉಪನ್ಯಾಸಕರು ತಮ್ಮ ವಿವೇಕ ಪ್ರದರ್ಶನ ಮಾಡುತ್ತಿದ್ದರು.

‘‘ಖಾಸಗಿ ಸಂಸ್ಥೆಗಳು ಸ್ವಲ್ಪ ಬೆಟರ್. ಸರಕಾರಿ ಶಾಲೆಗಳು ಸಂಪೂರ್ಣ ವಾಗಿ ಕೆಟ್ಟು ಹೋಗಿ ಬಿಟ್ಟಾವ. ಯಾಕ್ ಅಂದ್ರ ಖಾಸಗಿ ಯವರು ಮೆರಿಟ್ ಮ್ಯಾಲೆ ನೌಕರಿ ಕೊಡತಾರ. ಸರಕಾರ ದಾಗ ಆ ಸುಡುಗಾಡು ಮೀಸಲಾತಿ. ಅಲ್ಲೇ ಕುದುರಿನೂ ಒಂದ, ಕತ್ತಿ ನೂ ಒಂದ, ಅಲ್ಲೇ ಮೆರಿಟ್ ಗೆ ಮರ್ಯಾದಿ ಇಲ್ಲ. ಅದಕ್ಕನ ಹಂಗ,’’ ಅಂತ ಅಂದರು.

ಕೆಲವರು ಅವರ ಪರವಾಗಿ ಮಾತಾಡಿದರು. ಕೆಲವರು ಚರ್ಚೆಯ ಗಂಭೀರತೆ ತಿಳಿಯದೇ ಸುಮ್ಮನಿದ್ದರು. ಇನ್ನು ಕೆಲವರು ಇವರ ಜೊತೆಗೆ ಏನು ಬಾಯಿಗೆ ಹತ್ತುವುದು ಅಂತ ಹೇಳಿ ಇದ್ದರು. ಸ್ವಲ್ಪ ಹೊತ್ತಿಗೆ ಅವರು ಎದ್ದು ಹೊರಟರು. ‘‘ಯಾಕ ಎಲ್ಲಿ ಹೋಗಬೇಕು? ಏನು ಗಡಿಬಿಡಿ?’’ ಅಂತ ಇನ್ನೊಬ್ಬರು ಕೇಳಿದರು. ‘‘ಏನಿಲ್ಲಾ ನಾನು ನಮ್ಮ ಸಮಾಜದ ಮೀಸಲಾತಿ ಹೋರಾಟ ಸಮಿತಿ ಸೆಕ್ರೆಟರೀ ಇದ್ದೇನಿ. ಮುಂದಿನ ವಾರ ಅದರ್ದು ಹೋರಾಟ. ಅದರ ಮೀಟಿಂಗ್ ಗೆ ಹೋಗಬೇಕು. ನಮ್ಮದು ಓಬಿಸಿ 3 ಬಿ ಬರ್ತದ. ಅದನ್ನ 2 ಎ ಮಾಡಿಸಬೇಕು’’ ಅಂತ ಅವರು ಹೇಳಿದರು. ‘‘ನಾವು ಓಬಿಸಿ ಬರತೆವಿ. ಅದರ ನಮಗ ಎಸ್ ಟಿ ಬೇಕಾಗೇದ. ಅದಕ್ಕ ನಮ್ಮ ಹೋರಾಟ ಶುರು ಆಗೆತಿ ಅಂತ ಇನ್ನೊಬ್ಬರು’’ ಅಂದರು.

ಅಷ್ಟರಲ್ಲಿ ಅಲ್ಲಿದ್ದ ಒಬ್ಬ ವಕೀಲರು ‘‘ನಮಗ ಈ ಹೋರಾಟ -ಗಿರಾಟ ದೊಳಗ ನಂಬಿಕಿ ಇಲ್ಲ. ನಾವು ಒಂದು ಹಳೆ ಸುಪ್ರೀಂ ಕೋರ್ಟ್ ತೀರ್ಪು ಇಟ್ಟುಕೊಂಡು ಬಿಟ್ಟೆವಿ. ನಮ್ಮ ಜಾತಿಯ ಹೆಸರಿನ ಸಮಾನಾರ್ಥಕ ಪದ ಇರೋ ಎಲ್ಲಾ ಜಾತಿಗಳಿಗೆ ಎಸ್‌ಸಿ ಸರ್ಟಿಫಿಕೇಟ್ ಸಿಗಲಿಕ್ಕೆ ಹತ್ತಿ ಬಿಟ್ಟದ. ಎಲ್ಲಾ ಜಿಲ್ಲೆಗಳ ಒಳಗ ನಮ್ಮ ಹೋರಾಟ ಸಮಿತಿ ಯವರು ಅದಾರು. ಅವರು ಎಲ್ಲಾರಿಗೂ ಜಾಗೃತಿ ಮೂಡಿಸಲಿಕ್ಕೆ ಶುರು ಮಾಡಿದಾರ. ತಹಶೀಲ್ದಾರಗಳು ಸುಪ್ರೀಂ ಕೋರ್ಟ್ ಆರ್ಡರ್ ತೋರಿಸಿದ ಕೂಡಲೇ ಹೆದರಿ ಕೊಂಡು ನಮಗ ಬೇಕಾಗಿದ್ದ ಪತ್ರ ಕೊಡತಾರ.

ನಾವು ಸರಕಾರದ ಮ್ಯಾಲೆ ಡೆಪೆಂಡ್ ಆಗೋದೇ ಇಲ್ಲಾ. ನಾವು ಆತು, ನಮ್ಮ ಕೋರ್ಟ್ ಆತು,’’ ಅಂತ ಜಯದ ನಗೆ ನಕ್ಕರು.

ಅಂಕ ಎರಡು

ನಮ್ಮ ಪಕ್ಕದ ಮನೆಯ ಕೂಡು ಮನೆ ಕಾಕಾ ಅಂದರೆ ಅಪಾರ್ಟ್ ಮೆಂಟ್ ಅಂಕಲ್ ಅವರು ನಿವೃತ್ತ ಕೇಂದ್ರ ಸರಕಾರಿ ಅಧಿಕಾರಿ. ಅವರ ಮಗ- ಮಗಳು, ಸೊಸೆ- ಅಳಿಯ ಎಲ್ಲರೂ ಎನ್‌ಆರ್‌ಐಗಳು. ಆವಾಗವಾಗ ಭೇಟಿ ಯಾಗುವ ಅವರು ಸಿಕ್ಕಾಗಲೆಲ್ಲ ತುಂಬ ಹೊತ್ತು ಮಾತಾಡುತ್ತಾರೆ. ತಿಂಗಳಿಗೆ 25-30 ಬಾರಿ ಭೇಟಿ ಆದರೂ ಕೂಡ ಅವರ ಮೆಚ್ಚಿನ ಚರ್ಚೆಯ ವಿಷಯ ಗಳು ಕೇವಲ ಮೂರು. ಯಾವ ಸಂಬಂಧಿಕರ ಮಕ್ಕಳ ಮದುವೆ ಫಿಕ್ಸ್ ಆಗಿದೆ, ಯಾರ ಮದುವೆ ಆಯಿತು, ಯಾರದು ಮುರಿದು ಬಿತ್ತು, ಎನ್ನುವುದು ಒಂದನೆಯ ವಿಷಯ. ಇನ್ನೊಂದು ಹವಾಗುಣ. ಮೂರನೆಯ ಮತ್ತು ಅತಿ ಮುಖ್ಯ ವಾದದ್ದು ಮೀಸಲಾತಿ ಯನ್ನು ಬಯ್ಯುವುದು.

‘‘ನಂ ಇಂಡಿಯಾ ಇಷ್ಟು ಹಾಳಾಗಿ ಹೋಗಿರಲಿಕ್ಕೆ ಮೀಸಲಾತಿನೇ ಕಾರಣ. ಫಾರಿನ್‌ದೊಳಗ ನೋಡ್ರಿ, ಇಂಥದ್ದು ಯಾವುದೂ ಇಲ್ಲೇ ಇಲ್ಲ. ಅದಕ್ಕ ಅದು ಮುಂದುವರಿದ ದೇಶ ಅಂತ ಅವರು ಸುಮಾರು ಏಳು ಸಾವಿರದ ಹನ್ನೊಂದು ನೂರು ಸರೆ ಹೇಳಿದ್ದಾರ’’.

ಪ್ರತಿ ಬಾರಿ ಭೇಟಿ ಆದಾಗಲೂ ಅವರು ತಮ್ಮ ಇಬ್ಬರೂ ಮಕ್ಕಳು ಹಾಗೂ ತಮ್ಮ ಬೀಗರ ಇಬ್ಬರೂ ಮಕ್ಕಳು ಅಮೆರಿಕಕ್ಕೆ ಹೋಗಿದ್ದು ಅಲ್ಲಿನ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ, ಅನ್ನುವುದನ್ನು ಅವರು ತುಂಬ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಮಾತು ಕೇಳಿ ಸಾಕಾಗಿ ಹೋಗಿದ್ದ ನನ್ನ ಮಗಳು ಒಂದು ದಿವಸ ಕಾಕಾ ಅವರಿಗೆ ಅವರ ಮಕ್ಕಳು ಓದಿದ ವಿಶ್ವ ವಿದ್ಯಾನಿಲಯಗಳ ವೆಬ್‌ಸೈಟ್ ತೋರಿಸಿದಳು. ಅಲ್ಲಿ ಭಾರತೀಯರು ಹಾಗೂ ಇತರ ಅಶ್ವೇತ ವಿದ್ಯಾರ್ಥಿಗಳಿಗೆ ನಮ್ಮಲ್ಲಿ ಮೀಸಲಾತಿ ಇದೆ, ಅದಕ್ಕೆ ದೈವರ್ಸಿಟಿ ನೀತಿ ಅಂತ ಕರಿತಾರೆ ಅನ್ನುವುದನ್ನೂ, ಅ ನೀತಿಯ ಅಡಿಯಲ್ಲಿ ಸೀಟು ಪಡೆದ ಭಾರತೀಯ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅವರ ಮಕ್ಕಳ ಹೆಸರು ಇರುವುದನ್ನೂ ತೋರಿಸಿದಳು.

ಅಂದಿನಿಂದ ಅವರು ನಮ್ಮ ಮನೆಗೆ ಬಂದಿಲ್ಲ. ಆದರೆ ಇತರ ನೆರೆಯವರ ಮನೆಗೆ ಹೋಗಿ ಹೊರೆಯಾಗುವುದನ್ನು ತಪ್ಪಿಸಿಲ್ಲ.

ಅಂಕ ಮೂರು

ನಮ್ಮ ಸ್ನೇಹಿತರು ಹಾಗೂ ಯುವ ವೈದ್ಯರೊಬ್ಬರ ಭೇಟಿಗೆ ಹೋದಾಗ ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಿ ಅನೇಕ ಸಂಸ್ಥೆಗಳು ಸ್ಥಾಪನೆ ಆಗಲು ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿದ್ದಾಗ ಬಹಳ ಪ್ರಯತ್ನ ಮಾಡಿದ್ದರು ಅನ್ನುವ ಮಾತು ಬಂತು.

‘‘ಈ ಎಸ್‌ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು, ರಾಜ್ಯ ಸರಕಾರದ ವೈದ್ಯ ಕಾಲೇಜು, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಎಲ್ಲಾ ಬರ್ತಾ ಇದ್ದಾವು. ಅದರಿಂದ ಜನ ಸಾಮಾನ್ಯರಿಗೆ

ಅನುಕೂಲ ಆಯಿತು’’ ಅಂತ ಒಬ್ಬರು ಅಂದ್ರು. ಸರಕಾರಿ ವೈದ್ಯ ಕಾಲೇಜು ಪ್ರೊಫೆಸರ್ ಆಗಿರುವ

ವೈದ್ಯರು ಒಪ್ಪಲಿಲ್ಲ. ‘‘ಇಲ್ಲಾ ಅದು ಸರಿಯಲ್ಲ. ಉಳಿದಿದ್ದೆಲ್ಲಾ ಓಕೆ, ಆದರೆ ಈ ಎಸ್‌ಐ ಆಸ್ಪತ್ರೆ ಹಾಗೂ ವೈದ್ಯ ಕಾಲೇಜು ಮಾಡಿದ್ದು ಮಾತ್ರ ತಪ್ಪು. ಕಂಪ್ಲೀಟ್ ರಾಂಗ್ ’’ ಅಂತ ಒಬ್ಬರು ನನ್ನ ಬಳಿ ಹೇಳಿದರು. ‘‘ಯಾಕೆ ಹಾಂಗ್ ಅಂತೀರಿ ಸಾರ್’’ ಅಂತ ನಾನು ಕೇಳಿದಾಗ. ‘‘ಅದು ಕೇವಲ ತಮ್ಮ ಅಠರಾ ಪರ್ಸೆಂಟ್ (18 ಪರ್ಸೆಂಟ್) ಜನರಿಗೆ ನೌಕರಿ ಕೊಡಬೇಕು ಅಂತ ಮಾಡಿದ್ದು. ಇದು ಭಾಳ ತಪ್ಪು ಕೆಲಸ,’’ ಅಂತ ಅವರು ಅಂದ್ರು. ‘‘ನೀವು ಈ ಮಾತು ಹೇಳಬಾರದು. ಯಾವ ಜಾತಿಯ ಎಷ್ಟು ಜನ ಅಲ್ಲಿ ಕೆಲಸಕ್ಕೆ ಇದ್ದಾರೆ ಅನ್ನುವ ಲೆಕ್ಕ - ಪಟ್ಟಿ ಇಟ್ಟುಕೊಂಡು ನೀವು ಮಾತಾಡುತ್ತಾ ಇದ್ದೀರಾ? ನಿಮಗೆ ಸರಕಾರಿ ಕಾಲೇಜು ಅಲ್ಲದೆ ಖಾಸಗಿ ಕಾಲೇಜಿನಲ್ಲಿ ಕೆಲಸ ಇದ್ದರೆ ಎಷ್ಟು ಸಂಬಳ ಬರುತ್ತಿತ್ತು?’’ ಅಂತ ಕೇಳಿದೆ. ‘‘ಬಹಳ ಕಮ್ಮಿ ಬಿಡ್ರಿ, ಆದರೂ ಇದು ಸರಿಯಲ್ಲ’’ ಅಂತ ಅವರು ತಮ್ಮ ವಾದ ಮುಂದುವರಿಸಿದರು.

ಅಂಕ ನಾಕು

ನಮ್ಮ ಸ್ನೇಹಿತರು ಒಬ್ಬರು ತಮ್ಮ ಮಗನಿಗೆ ಹೈದರಾಬಾದ್ ಕರ್ನಾಟಕ ಕೋಟಾ ಅಡಿಯಲ್ಲಿ ಸರಕಾರಿ ನೌಕರಿ ಸಿಕ್ಕ ಖುಷಿಗೆ ಚಹಾ ಪಾರ್ಟಿ ಇಟ್ಟುಕೊಂಡಿದ್ದರು. ಅವರ ಮನೆಗೆ ಬಂದ ವಾಸ್ತು

ಶಿಲ್ಪಿಯೊಬ್ಬರು ಬೀದರ್ ಜಿಲ್ಲೆಯ ಹಿಂದುಳಿದಿರುವಿಕೆಯ ಬಗ್ಗೆ ಮಾತಾಡಲು ಶುರು ಮಾಡಿದರು.

‘‘ಇಲ್ಲಿನ ಶಾಹೀನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದು ದೇಶಾದ್ಯಂತ ಪಿಯುಸಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಕಳೆದ ಕೆಲ ವರ್ಷಗಳಿಂದ ಅದರ ವಿದ್ಯಾರ್ಥಿಗಳು ಪ್ರತೀ ಬಾರಿ ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿ 300- 400 ಸರಕಾರಿ ಕೋಟಾ ಮೆಡಿಕಲ್ ಸೀಟ್‌ಗಳನ್ನು ಪಡೆಯುತ್ತಾರೆ. ಅದರಿಂದ ನಮ್ಮ ನೂರಾರು ಹುಡುಗ- ಹುಡುಗಿಯರು ಡಾಕ್ಟರ್ ಆಗುತ್ತಿದ್ದಾರೆ. ಇಲ್ಲಾ ಅಂದರೆ ವರ್ಷಕ್ಕೆ ಒಂದೋ ಎರಡೋ ಬರುತ್ತಿತ್ತು, ಅಷ್ಟ’’ ಅಂತ ಆತಿಥೇಯರ ಮಡದಿ ಅಂದ್ರು.

ಆದರೆ ಆ ಆರ್ಕಿಟೆಕ್ಟ್ ಅವರು ಅದನ್ನು ಒಪ್ಪಲಿಲ್ಲ. ‘‘ಇಲ್ಲಾ ಅದೆಲ್ಲಾ ಬೋಗಸ್. ಅವರಿಗೆ ಸಿಕ್ಕ ಸೀಟು ಎಲ್ಲಾ ಕೇವಲ ಈ ಸಾಬರ ಜಾತಿಯವರು ಹೊಡಕೊಂಡಿದ್ದು. ನೀವು ಲಿಸ್ಟು ತೊಗೊಂಡು

ನೋಡ್ರಿ ಬೇಕಾದರೆ’’ ಅಂತ ಅಂದ್ರು. ‘‘ಇಲ್ಲಾ ಇಲ್ಲಾ. ಹಂಗೇನು ಇಲ್ಲಾ. ಕರ್ನಾಟಕದಲ್ಲಿ ಮುಸಲ್ಮಾನರಿಗೆ ಇರುವ ಮೀಸಲು ಸೌಲಭ್ಯ ಕೇವಲ ನಾಲ್ಕು ಪರ್ಸೆಂಟ್’’ ಅಂತ ಇನ್ನೊಬ್ಬರು ಹೇಳಿದರು. ಇವರು ನಂಬಲಿಲ್ಲ. ‘‘ಅವರು ಹೇಳುತ್ತಾ ಇರೋದು ಖರೆ. ಲಿಸ್ಟು ತೊಗೊಂಡು ನೋಡಬೇಕಾದವರು ನೀವು, ಅವರಲ್ಲ’’ ಅಂತ ಹೇಳಿ ನಾನು ಆರ್ಕಿಟೆಕ್ಟ್ ಸಾಹೇಬರಿಗೆ ಹೇಳಿ ಸುಮ್ಮನಾದೆ.

ಅಂಕ ಐದು

ಜಗತ್ ವಿಖ್ಯಾತ ಪ್ರವಾಸಿಗಳಿಗೆ ಗೊತ್ತಿರುವಂತೆ ಅನೇಕ ವಿಶ್ವಗಳನ್ನು ತನ್ನಲ್ಲಿ ಒಳಗೊಂಡಿರುವ ಏಕೈಕ ರಾಜ್ಯ ಕರ್ನಾಟಕ. ಅದರ ರಾಜಧಾನಿ ಇಡೀ ದೇಶದ ಏಕೈಕ ಓಯಸಿಸ್ ಎಂದು ಹೆಸರಾಗಿರುವ ನಗರ ಬೆಂಗಳೂರು ಅಥವಾ ಹಾಗಂತ ಇತರ ಯಾವ ಊರನ್ನೂ ನೋಡದವರು ತಿಳಿದುಕೊಂಡಿದ್ದಾರೆ. ಅದು ನಿಮಗೆ ಗೊತ್ತು.

ಈ ಮಾಯಾ ನಗರಿಯಲ್ಲಿ ವಿಧಾನಸೌಧದ ಹತ್ತಿರ ಆ ದೊಡ್ಡ ಕಚೇರಿ ಕಟ್ಟಿಸಿದವರ ಮೂರ್ತಿ ಇದೆ. ಅದನ್ನು ನೀವು ನೋಡಿರುತ್ತೀರಿ. ಅದೊಂದು ರವಿವಾರ, ರಾಜ್ಯದ ಮುಖ್ಯಮಂತ್ರಿ

ಗಳು ಒಂದು ಐಟಿ ಸಮ್ಮೇಳನ ಉದ್ಘಾಟಿಸಲಿದ್ದರು. ಆ ಜಾಗಕ್ಕೆ ಹೋಗಲು ನಾವು ಕೆಲವು ಜೂನಿಯರ್ ವರದಿಗಾರರು ಕಾಯುತ್ತಿದ್ದೆವು. ಆಗ ಒಬ್ಬರು ಹಿರಿಯ ವರದಿಗಾರರು ಅದೂ ಇದೂ ಮಾತಾಡಲು ಶುರು ಮಾಡಿದರು. ಅವರು ‘ನಮ್ಮ ದೇಶದಲ್ಲಿ ಬ್ಯಾಕ್ಟೀರಿಯಾ- ವೈರಸ್ ಬಿಟ್ಟರೆ ದೊಡ್ಡ ರೋಗ ಅಂದರೆ ರಿಸರ್ವೇಷನ್’ ಅಂತ ಫರ್ಮಾನು ಹೊರಡಿಸಿದರು. ರಾಜ್ಯದ ಹಿರಿಯ ಮಹಿಳಾ ಪತ್ರಕರ್ತರಲ್ಲಿ ಒಬ್ಬ್ಬರಾದ ಅವರಿಗೆ ನಾನು ಮೀಸಲಾತಿಯ ಇತಿಹಾಸ, ಭಾರತೀಯ ಸಾಮಾಜಿಕ ಅಸಮಾನತೆ, ಮೀಸಲಾತಿಯ ಅನಿವಾರ್ಯತೆ,ಜಾತಿ, ಲಿಂಗ, ಅಂಗವೈಕಲ್ಯ, ಇತ್ಯಾದಿ ಕಾರಣಗಳಿಂದ ಹಿಂದುಳಿದವರಿಗೆ ವಿಶೇಷ ಅವಕಾಶ ಸೃಷ್ಟಿ ಮಾಡುವ ಅವಶ್ಯಕತೆ, ಇತರ ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿ ಇರುವುದು ಇತ್ಯಾದಿಗಳ ಬಗ್ಗೆ ಹೇಳಲು ಹೋದೆ. ಅವರು ಕೇಳಿಸಿಕೊಳ್ಳಲಿಲ್ಲ. ‘‘ಯಾರಿಗೆ ವಿಶೇಷ ಅವಕಾಶ ಯಾಕ್ರಿ ಕೊಡಬೇಕು? ಅವರು ಎಲ್ಲರಂತೆ ಫೈಟ್ ಮಾಡಿ ಮೇಲಕ್ಕೆ ಬರಾಕ್ ಆಗಲ್ಲವ’’ ಅಂತ ಜೋರು ದನಿಯಿಂದ ಮೊಂಡು ವಾದ ಮಾಡಲು ಶುರು ಮಾಡಿದರು. ಕೊನೆಗೆ, ನಾನು ‘‘ಹಂಗಾದ್ರೆ ಲೇಡಿಸ್ ಟಾಯ್ಲೆಟ್ ಯಾಕೆ ಇರಬೇಕು’’ ಅಂತ ಹೇಳಿದೆ. ಅವರಿಗೆ ಕೋಪ ಬಂತು. ನಾನು ಎಲ್ಲರ ಮುಂದೆ ಈ ಮಾತು ಹೇಳಿದೆ ಅಂತ ಅವರು ಇತರರಿಗೆ ಹೇಳಿದರು. ಯಾವ ಮಾತಿಗೆ ಆ ಪ್ರತ್ಯುತ್ತರ ಬಂತು ಎನ್ನುವುದನ್ನು ಮಾತ್ರ ಹೇಳಲಿಲ್ಲ.

ಅಂಕ ಆರು

ಊರಿನಲ್ಲಿ ಹಿರಿಯ ಪತ್ರಕರ್ತರೊಬ್ಬರ ಉಪನ್ಯಾಸ. ಅವರನ್ನು ವಿಮಾನ ನಿಲ್ದಾಣದಿಂದ ಕರೆ ತರುವ ಜವಾಬುದಾರಿ ನನ್ನದು. ಅದೇ ಕಾರಿನಲ್ಲಿ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಇದ್ದರು. ತಳ ಸಮುದಾಯ ದಿಂದ ಬಂದಿದ್ದ ನಮ್ಮ ಸೀನಿಯರ್ ಪತ್ರಕರ್ತರು ಬಡವರ- ದಲಿತರ ಅನುಕೂಲಕ್ಕಾಗಿ ಒಂದು ಟ್ರಸ್ಟ್ ಮಾಡಿದ್ದರು.

‘‘ನಾವು ಗೆಳೆಯರೆಲ್ಲ ಸೇರಿ ಈ ಕೆಲಸ ಶುರು ಮಾಡಿದ್ದೇವೆ. ಮೊನ್ನೆ ಒಬ್ಬ ಸಮಗಾರನ ಮಗಳಿಗೆ ಒಂದು ವಿದ್ಯಾರ್ಥಿ ವೇತನ ಕೊಡಿಸಿದೆವು’’ ಅಂತ ಹೇಳಿದರು. ಅವರ ಜೊತೆ ಇದ್ದವರು ‘‘ಅಯ್ಯೋ, ನಾವೂ ಸಮಗಾರರು. ಆಥೆಂಟಿಕ್ ಸಮಗಾರರು. ನಾವೂ ಕೂಡ ಚಿಕ್ಕ ವಯಸ್ಸಿನಲ್ಲಿ ಬಹಳ ಬಡತನ ಅನುಭವಿಸಿದ್ದೇವೆ. ನಮಗೆ ಯಾರೂ ಹೆಲ್ಪ್ ಮಾಡಲಿಲ್ಲ. ನಾವಾಗಿಯೇ ಮೇಲೆ ಬಂದೆವು’’ ಅಂತ ಅಂದ್ರು. ಸ್ವಲ್ಪ ಹೊತ್ತಿಗೆ ತಮ್ಮ ಮಗ ಎಂಬಿಬಿಎಸ್ ಕಲಿಯುತ್ತಿರುವುದಾಗಿಯೂ, ಅವನಿಗೆ ಮೀಸಲಾತಿಯಿಂದಾಗಿ ಸೀಟು ಸಿಗದೇ ಹೋದಾಗ, ತಾವು ಮಾಜಿ ಮಂತ್ರಿಯೊಬ್ಬರ ವೈದ್ಯಕೀಯ ಕಾಲೇಜಿನಲ್ಲಿ ಡೊನೇಷನ್ ಸೀಟು ಕೊಡಿಸಬೇಕಾಯಿತು ಅಂತ ಹೇಳಿದರು. ಅದರ ಹಣ ಹೂಡಿಸಲು ಆಸ್ತಿ ಒತ್ತೆ ಇಟ್ಟು, ತಮ್ಮ ಮದುವೆಯ ಬಂಗಾರದ ಒಡವೆ ಮಾರಿ, ಸಾಲ ತೊಗೊಂಡು ಭಯಂಕರ ಖಟಪಟೀ ಮಾಡಬೇಕಾಯಿತು ಅಂತ ಗೋಳಾಡಿದರು.

ಅವರ ಮಾತನ್ನು ಅಲ್ಲಿಗೇ ನಿಲ್ಲಿಸಿದ ಹಿರಿಯ ಪತ್ರಕರ್ತರು. ನೋಡಿ, ಮೀಸಲು ವ್ಯವಸ್ಥೆ ಪ್ರತಿಭೆಯ ವಿರೋಧಿ ಅಲ್ಲ. ಅದು ಪ್ರತೀ ಜಾತಿಯಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳುವ ಕ್ರಮ. ನಿಜವಾದ ಪ್ರತಿಭೆಯ ವಿರೋಧಿ ಅಂದರೆ ಡೊನೇಷನ್, ಅಂತ ಅಂದ್ರು. ಆಗ ಸಿಟ್ಟಿನಿಂದ ಸಿಡಿದು ಹೋದ ಭಾವಿ ಡಾಕ್ಟರ್ ಸಾಹೇಬರ ತಾಯಿ ಅಯ್ಯೋ ಅದು ಹೇಗೆ? ಅವು ಎರಡೂ ತಪ್ಪು ಅಂದ್ರು. ಹಾಗೆ ಅನ್ನಬೇಡಿ. ನಿಮಗೆ ಮೀಸಲಾತಿ ಯ ಒಳ್ಳೆಯತನದ ಬಗ್ಗೆಯೂ ಗೊತ್ತಿಲ್ಲ, ಡೊನೇಷನ್ ನ ಕೆಡುಕಿನ ಬಗ್ಗೆಯೂ ಗೊತ್ತಿಲ್ಲ, ಅಂತ ಇವರು ಮಾತು ಮುಗಿಸಿದರು.

ಸ್ಪಷ್ಟೀಕರಣ

ಇದರಲ್ಲಿ ಬರುವ ವ್ಯಕ್ತಿಗಳು, ಊರುಗಳು, ಘಟನೆಗಳು, ಸನ್ನಿವೇಶಗಳು ಹಾಗೂ ಸಂವಾದಗಳು, ಇವು ಯಾವುವೂ ಕಾಲ್ಪನಿಕ ಅಲ್ಲ. ಇದನ್ನು ಓದಿದಾಗ ಅಥವಾ ಕೇಳಿಸಿ ಕೊಂಡಾಗ, ಯಾರಿಗಾದರೂ ಬೇಜಾರಾದರೆ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿ ವಿನಂತಿ. ಅವರವರ ಭಾವನೆಗಳಿಗೆ ಅವರೇ ಜವಾಬುದಾರರು.

ಜಗತ್ ವಿಖ್ಯಾತ ಪ್ರವಾಸಿಗಳಿಗೆ ಗೊತ್ತಿರುವಂತೆ ಅನೇಕ ವಿಶ್ವಗಳನ್ನು ತನ್ನಲ್ಲಿ ಒಳಗೊಂಡಿರುವ ಏಕೈಕ ರಾಜ್ಯ ಕರ್ನಾಟಕ. ಅದರ ರಾಜಧಾನಿ ಇಡೀ ದೇಶದ ಏಕೈಕ ಓಯಸಿಸ್ ಎಂದು ಹೆಸರಾಗಿರುವ ನಗರ ಬೆಂಗಳೂರು ಅಥವಾ ಹಾಗಂತ ಇತರ ಯಾವ ಊರನ್ನೂ ನೋಡದವರು ತಿಳಿದುಕೊಂಡಿದ್ದಾರೆ. ಅದು ನಿಮಗೆ ಗೊತ್ತು. ಈ ಮಾಯಾ ನಗರಿಯಲ್ಲಿ ವಿಧಾನಸೌಧದ ಹತ್ತಿರ ಆ ದೊಡ್ಡ ಕಚೇರಿ ಕಟ್ಟಿಸಿದವರ ಮೂರ್ತಿ ಇದೆ. ಅದನ್ನು ನೀವು ನೋಡಿರುತ್ತೀರಿ. ಅದೊಂದು ರವಿವಾರ, ರಾಜ್ಯದ ಮುಖ್ಯಮಂತ್ರಿಗಳು ಒಂದು ಐಟಿ ಸಮ್ಮೇಳನ ಉದ್ಘಾಟಿಸಲಿದ್ದರು. ಆ ಜಾಗಕ್ಕೆ ಹೋಗಲು ನಾವು ಕೆಲವು ಜೂನಿಯರ್ ವರದಿಗಾರರು ಕಾಯುತ್ತಿದ್ದೆವು.