ಬಟ್ಟೆ ಹುಟ್ಟಿಸುವ ವಿಸ್ಮಯ ಸಂಕಟ

Update: 2023-01-06 16:49 GMT

ಪೌರಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಾ ಬಂದಿರುವ ದು.ಸರಸ್ವತಿ ಅವರು ಹೋರಾಟಕ್ಕಾಗಿಯೇ ತಮ್ಮ ಕಾವ್ಯ, ಬರಹ, ನಾಟಕಗಳನ್ನು ದುಡಿಸಿಕೊಂಡು ಬರುತ್ತಿರುವವರು. ‘ಹೆಣೆದರೆ ಜೇಡನಂತೆ’, ‘ಜೀವಸಂಪಿಗೆ’ ಇವರ ಕಾವ್ಯಸಂಕಲನ. ‘ಈಗೇನ್ಮಾಡೀರಿ’ ಅನುಭವ ಕಥನ. ಮಹಿಳೆಯ ಹಕ್ಕುಗಳಿಗಾಗಿಯೂ ಸರಸ್ವತಿ ಧ್ವನಿಯೆತ್ತುತ್ತಾ ಬಂದವರು. ಒಂದು ರೀತಿಯಲ್ಲಿ ತಳಸ್ತರದ ಜನರ ಬದುಕಿನ ಹಕ್ಕಿಗಾಗಿ ಬಹುರೂಪಿಯಾಗಿ ಕೆಲಸ ಮಾಡುತ್ತಿರುವವರು.

ದು.ಸರಸ್ವತಿ

ರಕ್ಷಣೆಗೆ, ಸಂಭ್ರಮಕ್ಕೆ ಕೊನೆಗೆ ಶೋಕಕ್ಕೆ ಕೂಡ ಮುಖ್ಯವಾಗಿರುವ ಬಟ್ಟೆ ಎಂಬುದು ನಮ್ಮ ಚರ್ಮದಂತೆಯೇ ಆಗಿಬಿಟ್ಟಿದೆ. ಬಟ್ಟೆ ಇಲ್ಲದೆ ಬದುಕನ್ನು ಯೋಚಿಸಲೂ ಸಾಧ್ಯವಿಲ್ಲ. ಹುಟ್ಟಿದ ಮೇಲೆ ಮಾಸು ತೊಳೆದ ಕೂಡಲೇ ಜೋಪಾನವಾಗಿಡಲು ಬಟ್ಟೆ ಸುತ್ತುತ್ತೇವೆ. ಹೊಸ ಹಸುಗೂಸಿನ ಎಳೆ ಚರ್ಮಕ್ಕೆ ಘಾಸಿಯಾಗಬಾರದೆಂದು ಬಳಸುವುದು ಮೆತುವಾದ ಹಳೆ ಬಟ್ಟೆಯನ್ನೇ. ವಯಸ್ಸಿಗೆ ತಕ್ಕಂತೆ, ಋತುಮಾನಕ್ಕೆ ತಕ್ಕಂತೆ, ಗಂಡು, ಹೆಣ್ಣಿಗೆ ತಕ್ಕಂತೆ, ಹಬ್ಬ, ಜಾತ್ರೆ, ಮದುವೆಗೆ ತಕ್ಕಂತೆ ತೊಡುವ ಬಟ್ಟೆಗಳಂತು ಎಷ್ಟೋ ಆಚರಣೆಯ ಬಹುಮುಖ್ಯ ಭಾಗವಾಗಿದೆ. ಮದುವೆ ಆಚರಣೆಯಲ್ಲಿ ಜವಳಿ ಖರೀದಿ ಪ್ರಮುಖ ಕಾರ್ಯಕ್ರಮ.

ಕೆಲವು ಮದುವೆಗಳಲ್ಲಿ ಧಾರೆ ಆಚರಣೆಗೆ ಹೆಣ್ಣಿಗೆ ಕೆಂಪು ಸೀರೆ ಉಡಿಸಿದರೆ ಕೆಲವು ಕಡೆ ಬಿಳಿ ಸೀರೆ ಉಡಿಸುತ್ತಾರೆ. ಮದುವೆಯಾಗಿ ಒಂದು ವರ್ಷದಲ್ಲೇ ಸೀರೆ ಹರಿಯಲೇ ಬೇಕೆಂದು ಕೆಲವರು ಹತ್ತಿ ಸೀರೆಯನ್ನಷ್ಟೇ ಉಡಿಸಿದರೆ, ಕೆಲವರು ರೇಷ್ಮೆ ಸೀರೆ ಉಡಿಸುತ್ತಾರೆ. ಗರ್ಭಿಣಿಯರಿಗೆ ಮಾಡುವ ಸೀಮಂತದ ಆಚರಣೆಯನ್ನು ಉತ್ತರ ಕರ್ನಾಟಕದವರು ಕುಬಸ ಎಂದೇ ಕರೆಯುತ್ತಾರೆ.

ತೀರಿಹೋದ ನಂತರ ಶವದ ಮೇಲೆ ಹೊಸ ಬಟ್ಟೆ ಹೊದಿಸಲೇಬೇಕು. ಗಂಡ ತೀರಿಕೊಂಡಾಗ ಹೆಂಡತಿಗೆ ತವರು ಮನೆಯವರು ಸೀರೆ ಕೊಡಲೇಬೇಕು. ತಂದೆ ತೀರಿಕೊಂಡರೆ ಸೋದರರು ಹೆಣ್ಣುಮಕ್ಕಳಿಗೆ ಸೀರೆ ಕೊಡಲೇಬೇಕು. ಅಂತೂ ತೊಟ್ಟಿಲಿನಿಂದ ಚಟ್ಟದವರೆಗೂ ಬಟ್ಟೆ ನಮ್ಮ ಜೊತೆಗೆ ಬರುವ ಸಂಗಾತಿ. ಇಂತಹ ಸಂಗಾತಿ ನಮ್ಮ ದೇಹಕ್ಕೆ ರಕ್ಷಣೆ ನೀಡಿ, ಮರ್ಯಾದೆ ಕಾಪಾಡಿ ಚೆಂದ ಹೆಚ್ಚಿಸುವುದರ ಜೊತೆಗೆ ಭೀಕರ ವಾದ-ವಿವಾದ-ಕದನ-ವ್ಯಾಜ್ಯವನ್ನು ಹುಟ್ಟುಹಾಕಿದೆ.

ನಮ್ಮ ನಾಡಿನ ಮುಸ್ಲಿಮ್ ಹೆಣ್ಣುಮಕ್ಕಳು ತೊಡುವ ತಲೆವಸ್ತ್ರ ಬಹುದೊಡ್ಡ ಗಂಭೀರ ವಿಷಯವಾಗಿ ಚರ್ಚೆ, ವಾದ, ಆಕ್ರೋಶಕ್ಕೆ ಕಾರಣವಾಯಿತು. ತಲೆವಸ್ತ್ರ ತಲೆಯೊಳಗೆ ಎಬ್ಬಿಸಿದ ವಿಚಾರಗಳು ಹುಟ್ಟಿಸಿದ ಕುದಿತವು ಆವಿಯಾಗುತ್ತ ಹೆಂಗಸರಿಗೂ ಬಟ್ಟೆಗೂ ಇರುವ ನಂಟಿನ ಜಾಡು ಹಿಡಿಸಿತು. ಆ ಜಾಡಿನಲ್ಲಿ ಬಿಚ್ಚಿಕೊಂಡ ನೆನಪುಗಳು, ಮಾಹಿತಿಗಳು ನಿಮಗೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪರಿಚಯಿಸಿ ಅವರುಗಳೂ ತಮ್ಮ ಜಾಡುಗಳ ಹಿಡಿಯಲಿ ಎಂಬ ಬಯಕೆ ನನ್ನದು.

ಹೆಣ್ಣಿನ ದೇಹ ಮತ್ತು ಆ ದೇಹ ತೊಡುವ, ತೊಡಲೇಬೇಕಾದ ಉಡುಪನ್ನು ಕುರಿತು ಇರುವ ಸೌಮ್ಯ, ಉಗ್ರ, ಕಠೋರ ನಿಯಮಗಳನ್ನು ಕುರಿತು ಯೋಚಿಸುವಾಗ ಮಹಿಳಾ ಚಳವಳಿಯು ದೇಹರಾಜಕಾರಣದ ಮೂಲಕ ಎತ್ತಿದ ಪ್ರಶ್ನೆಗಳು ನನ್ನ ದೇಹ ನನ್ನ ಹಕ್ಕು ಎಂದು ಪ್ರತಿಪಾದಿಸಿದ್ದು ನೆನಪಾಗುತ್ತಿವೆ. ಹೆಣ್ಣು ಎಂಬ ದೇಹ ಹುಟ್ಟಿಸಿರುವ ಭೀತಿ, ಜುಗುಪ್ಸೆ, ಮೋಹ, ಮಾಯೆ, ಆಸೆಗಳಿಗೆ ಕಾರಣವಾದ ಜಿಜ್ಞಾಸೆ, ಚಿಂತನೆ, ಜಗಳ, ಗುದ್ದಾಟ, ಕಾದಾಟ, ಯುದ್ಧಗಳು; ಹೆಣ್ಣ ದೇಹವನ್ನು ನಿಯಂತ್ರಿಸಲು, ಬಂಧಿಸಲು, ಕಾಪಾಡಲು, ರಕ್ಷಿಸಲು, ಕಾವಲು ಕಾಯಲು, ಬಳಸಿಕೊಳ್ಳಲು ಮಾಡಿದ ಪ್ರಯತ್ನಗಳು; ರಕ್ಷಣೆ, ನಿರ್ಬಂಧ, ಕಾವಲು, ಬಳಕೆಯು ಹೆಣ್ಣಿನ ಇಡೀ ವ್ಯಕ್ತಿತ್ವದ ಮೇಲೆ ಬೀರಿರುವ ಅಳಿಸಲಾಗದ ಪರಿಣಾಮಗಳು; ಬಟ್ಟೆಯಿಂದಾಗಿ ಅನುಭವಿಸುವ ಮುಜುಗರ, ಅವಮಾನ, ಕಿರುಕುಳ, ಹಿಂಸೆ ಹೆಣ್ಣಿನ ದೇಹ ಮತ್ತು ಮನಸ್ಸಿನ ಮೇಲೆ ಮಾಡಿರುವ ಗುರುತುಗಳು; ಮನೆತನ, ಕುಟುಂಬ, ಕುಲ, ಧರ್ಮ, ಮತ ಎಲ್ಲದರ ಮರ್ಯಾದೆಯ ಹೊರೆಯನ್ನು ಹೆಗಲ ಮೇಲಿನಷ್ಟೇ ಉಡುಪಿನ ಮೇಲೂ ಹೇರಿರುವುದು; ಕಾಡುವ, ಕೆಣಕುವ ಮತ್ತು ಜುಗುಪ್ಸೆ, ಹೇವರಿಕೆ, ನಾಚಿಕೆ, ಗೀಳಾಗಿರುವ ಮೊಲೆಸೊಂಟತೊಡೆಯಷ್ಟೇ ಆಗಿರುವ ಹೆಣ್ಣಿನ ದೇಹವನ್ನು ಮುಕ್ತವಾಗಿ ಎದುರುಗೊಳ್ಳಲು ಬೇಕಾದ್ದು ಯುದ್ಧಾಸ್ತ್ರಗಳಲ್ಲ ಘನತೆ ಮತ್ತು ಪ್ರೀತಿಯ ವಿಳಾಸ; ನಿತ್ಯದ ಬದುಕಲ್ಲಿ ಕಾಣಬೇಕಾದ ಸತ್ಯ.... ಏನೆಲ್ಲ ನೆನಪಾಗುತ್ತಿವೆ.

1988ರಲ್ಲಿ ಇರಬಹುದು, ಲೇ ಲಡಾಖ್ಗೆ ಸ್ನೇಹಿತರೆಲ್ಲ ಸೇರಿ ಟ್ರೆಕ್ಕಿಂಗ್ಗೆಂದು ಹೋಗಿದ್ದೆವು. ನಡೆಯಲು ಸೂಕ್ತವಾದ ಉಡುಪುಗಳನ್ನು ತರಲು ಸೂಚಿಸಿದ್ದರು. ದಂಪತಿ ಹುಬ್ಬಳಿಯಿಂದ ಬಂದಿದ್ದರು. ಪತ್ನಿಗೆ ಸೀರೆ ಬಿಟ್ಟು ಬೇರೆ ಉಡುಪು ಧರಿಸಿ ಅಭ್ಯಾಸವೇ ಇರಲಿಲ್ಲ. ನಡಿಗೆಗೆ ಅನುಕೂಲವಾಗಲೆಂದು ಮೊತ್ತ ಮೊದಲ ಬಾರಿಗೆ ಟ್ರ್ಯಾಕ್ಸೂಟ್ ತೊಟ್ಟು ಆಕೆ ಪಟ್ಟ ಮುಜುಗರ ಎಷ್ಟೆಂದರೆ ಬಿಂದಾಸ್ ಆಗಿ ಪ್ಯಾಂಟ್ ತೊಡುತ್ತಿದ್ದ ನಾವು ಗೆಳತಿಯರಿಗೂ ಮುಜುಗರವಾಯಿತು. ಮಾರನೆಯ ದಿನ ಆಕೆ ಸೀರೆಯನ್ನೇ ಧರಿಸಿ ನಡೆಯತೊಡಗಿದರು. ಆರಾಮವಾಗಿ, ಹಿಮಾಲಯದ ದಾರಿಗಳಲ್ಲೂ.

ಮನೆಯಲ್ಲಿ ಹೊರಗಡೆ ಯಾವಾಗಲೂ ಸೀರೆಯನ್ನೇ ಉಡುವ ನಮ್ಮ ಹಿರಿಯ ಗೆಳತಿ ರಾತ್ರಿ ಮಲಗುವಾಗ ಅದೂ ರೂಮಿನಲ್ಲಿ ಹೋಗಿ ಲೈಟು ಆರಿಸುವ ಮುನ್ನ ನೈಟಿ ಧರಿಸಿ ಬೆಡ್ಶೀಟ್ನೊಳಗೆ ತೂರಿಕೊಂಡು ಬೆಳಗ್ಗೆ ಎದ್ದ ಕೂಡಲೇ ಸೀರೆ ಉಡುತ್ತಾರೆ. ಅವರು ನೈಟಿ ಧರಿಸುವುದನ್ನು ನೋಡಿದವರೇ ಇಲ್ಲ ಎನ್ನಬೇಕು.

ಕೆಲವು ಗೆಳತಿಯರು ಹೆರಿಗೆಯಾದ ಮೇಲೆಯೇ ನೈಟಿ ತೊಡುವುದನ್ನು ಅಭ್ಯಾಸ ಮಾಡಿಕೊಂಡರು. ಮಗುವಿಗೆ ಹಾಲೂಡಿಸಲು ಮತ್ತು ಸಿಸೇರಿಯನ್ ಆಪರೇಷನ್ ಆಗಿದ್ದರಿಂದ ತೊಡಲು ಅನುಕೂಲವಾಗಿರಲೆಂದು ಆರಂಭಿಸಿದ್ದು; ಸೀರೆ ಧರಿಸುವ ಕೆಲವು ಗೆಳತಿಯರು ಮಕ್ಕಳನ್ನು ಶಾಲೆಗೆ ಬಿಡಲು, ಕರೆ ತರಲು ಸ್ಕೂಟರ್ ಕಲಿತು ಓಡಿಸಲು ಅನುಕೂಲವೆಂದು ನಿಧಾನವಾಗಿ ಚೂಡಿದಾರಿಗೆ ಬದಲಾದರು. ಅದೂ ಕಡ್ಡಾಯವಾಗಿ ಎದೆಯ ಭಾಗ ಪೂರ್ತಿಮುಚ್ಚುವಂತೆ ದುಪ್ಪಟ್ಟ ಹೊದ್ದು ಪಿನ್ನುಹಾಕಿ ಹಿಂದಕ್ಕೆ ಗಂಟು ಹಾಕಿಕೊಳ್ಳುವುದಲ್ಲದೆ ಗಂಡ ಮತ್ತು ಮನೆಯವರೊಂದಿಗೆ ವಾದಿಸಿ ಸಂಧಾನಮಾಡಿಕೊಂಡು.

ನನ್ನ ಅಯ್ಯನ ಊರಿನ ಮಹಿಳೆಯರು ತಲೆಯ ಮೇಲಿನ ಸೆರಗು ತೆಗೆಯುವುದೇ ಇಲ್ಲ. ಕೆಲವೊಮ್ಮೆ ಸೆರಗು ಸಡಿಲಾಗಿ ಸೊಂಟದ ಭಾಗವೋ, ಸ್ತನದ ಭಾಗವೋ ಕಂಡರೂ ತಲೆಯ ಮೇಲಿನಿಂದ ಸೆರಗು ಬೀಳದಿರುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿರುತ್ತಾರೆ.

ಸಣ್ಣಪುಟ್ಟ ಹಳ್ಳಿ ಮತ್ತು ಪಟ್ಟಣಗಳಿಂದ ಹೊಟ್ಟೆಪಾಡಿಗಾಗಿ ನಗರದ ಮಾಲ್ಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು, ಅಲ್ಲಿಯ ನಿಯಮದಂತೆ ಪ್ಯಾಂಟ್ ಶರ್ಟು ಬೂಟುಗಳ ತೊಡುವುದನ್ನು ಅಭ್ಯಾಸಮಾಡಿಕೊಳ್ಳುತ್ತಾರೆ. ಅವರು ತೊಡುವ ಉಡುಪು, ಹೇರ್ಸ್ಟೈಲ್ನಲ್ಲಿ ಮಾಡಿಕೊಂಡ ಬದಲಾವಣೆಯ ಮರೆಯಲ್ಲಿ ಮೂಗುತಿಗೆಂದು ಮಾಡಿದ ರಂಧ್ರ, ಹಣೆ ಮತ್ತು ಕೈಮೇಲಿನ ಹಚ್ಚೆ ಗುರುತುಗಳು ಇರುತ್ತವೆ.

ತೊಡುವ ಉಡುಪಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನಾನು ಹತ್ತಿರದಿಂದ ಬಲ್ಲ ಮಹಿಳೆಯರು ಅನುಭವಿಸಿರುವ ಮುಜುಗರ, ನಾಚಿಕೆ, ಕಸಿವಿಸಿಗೆ ನಾನು ಸಾಕ್ಷಿಯಾಗಿರುವುದಷ್ಟೇ ಅಲ್ಲ ಧೈರ್ಯ ತುಂಬಿ ಅಭ್ಯಾಸ ಆಗುವವರೆಗೂ ಸಾಥ್ ನೀಡಿರುವುದು ಇದೆ. ನೆರೆಯ ಗುಜರಾತಿ ಮಹಿಳೆ ನನಗೆ ಆಪ್ತ ಗೆಳತಿಯೂ ಆಗಿದ್ದರು. ಡಯಾಬಿಟಿಸ್ ಇದ್ದುದರಿಂದ ವಾಕ್ ಮಾಡಬೇಕಾಗಿತ್ತು.

ಬೆಂಗಳೂರಿಗೆ ಹೊಸಬರಾಗಿದ್ದರಿಂದ ನಾನು ಜೊತೆಗೆ ವಾಕ್ ಮಾಡಲು ಬರುತ್ತೇನೆ ಎಂದಿದ್ದಕ್ಕೆ ಬಹಳ ಖುಷಿಪಟ್ಟಿದ್ದರು. ಚಪ್ಪಲಿ, ಚೂಡಿದಾರು ಬಿಟ್ಟು ಟ್ರ್ಯಾಕ್ ಪ್ಯಾಂಟು, ಬೂಟು ತೊಟ್ಟು ನಡೆಯವುದಕ್ಕೆ ಒಗ್ಗಿಕೊಂಡ ಮೇಲೆ ಸರಸ್ವತಿ ಮೈನೆ ಕಭಿ ನಹಿ ಸೋಚಾ ಕಿ ಮೈ ಶೂ ಪೆಹನ್ಕರ್, ವಾಕ್ ಕರೂಂಗಿ, ಜಿಂದಗಿಬರ್ ಯಾದ ರಕ್ಕೂಂಗಿ (ಶೂಸ್ ಹಾಕ್ಕೊಂಡು, ಟ್ರ್ಯಾಕ್ ಪ್ಯಾಂಟ್ ಹಾಕ್ಕೊಂಡು ವಾಕ್ ಮಾಡ್ತಿನಿ ಅಂತ ಜೀವಮಾನದಲ್ಲಿ ಅಂದ್ಕೊಂಡಿರ್ಲಿಲ್ಲ) ಎಂದು ಹೇಳಿದ್ದು ಲೆಕ್ಕವಿಲ್ಲದಷ್ಟು ಸಲ.

ಕೆಲವರ ಗಂಡಂದಿರಿಗೆ ಕೆಲವು ಬಣ್ಣ ಇಷ್ಟವಾಗುವುದಿಲ್ಲ, ಸ್ಲೀವ್ ಲೆಸ್ ಇಷ್ಟವಾಗುವುದಿಲ್ಲ, ಜೀನ್ಸ್ ಪ್ಯಾಂಟ್ ಇಷ್ಟವಾಗುವುದಿಲ್ಲ, ಬ್ಲೌಸ್ ಸ್ವಲ್ಪ ಡೀಪ್ ಆಗಿರುವುದು ಇಷ್ಟವಿಲ್ಲ, ಸೀರೆ ಸ್ವಲ್ಪ ಕೆಳಗೆ ಉಟ್ಟರೆ ಇಷ್ಟವಾಗುವುದಿಲ್ಲ. ಸೊಂಟ ತೀರಾ ಕಂಡರೆ ಇಷ್ಟವಾಗುವುದಿಲ್ಲ. ಕೆಲವು ಮಹಿಳೆಯರು ತಾವು ತೊಡುವ ಬಟ್ಟೆಗಳನ್ನು ತಾವೇ ಖರೀದಿಮಾಡುವುದಿಲ್ಲ. ಗಂಡಂದಿರು ತಂದು ಕೊಡುವ ಇಷ್ಟಪಡುವ ಬಣ್ಣದ ಬಟ್ಟೆಗಳನ್ನೇ ತೊಡುತ್ತಾರೆ.

ನಿಮಗಿಷ್ಟವಾದ ಬಣ್ಣ ಯಾವುದೆಂದು ಕೇಳಿದಾಗ ಇಷ್ಟ ಎಂದರೆ ಏನೂ ಎಂಬಂತೆ ನೋಡಿರುವ ಮಹಿಳೆಯರ ಚಿತ್ರ ನನ್ನನ್ನು ಅಲುಗಾಡಿಸಿದೆ. ಚೂಡಿದಾರಿನಲ್ಲೇ ಇರುತ್ತಿದ್ದ ಕೆಲವರು ಜೀನ್ಸ್ಗೆ ಶಾರ್ಟ್ಸ್ಗೆ ಬದಲಾಗಿ ಅದರಲ್ಲೇ ಆರಾಮವಾಗಿರುವವರೂ ಇದ್ದಾರೆ. ಉಡುಪು ನಮ್ಮ ಚರ್ಮದಷ್ಟೇ ಆರಾಮವಾಗಿ ಮೈಮನಸ್ಸುಗಳಿಗೆ ಒಗ್ಗಿಕೊಂಡು, ಕಾಣುವ ಕಾಣದಿರುವುದರ ಕುರಿತ ಕಮೆಂಟುಗಳಿಗೆ ತಲೆ ಕೊಡದಂತಹ ಸ್ಥಿತಿ ಕಲ್ಪನೆಯಲ್ಲಿ ತೊಡಲೇಬೇಕು, ತೊಡಬಾರದು ಎಂದು ಹೇರುವ ನಿರ್ಬಂಧಗಳ ಕೆಡವಿ ಉರುಳಿಸಿದಾಗ ಎಳೆಗಳ ಮೂಲವಾದ ಹುಳ ಮತ್ತು ಸಸ್ಯಗಳು, ಎಳೆಗಳ ಒಗ್ಗೂಡಿಸಿ ಬಟ್ಟೆಯಾಗಿಸುವ ನೇಯ್ಗೆಯ ಸಾಕ್ಷಾತ್ಕಾರವಾಯಿತು.

ಎಳೆಗಳ ಮೂಲ

ಸಸ್ಯವೊಂದು ತನ್ನ ಬೀಜ ಗಾಳಿಯಲ್ಲಿ ಹಾರಿ ಹೋಗಿ ಇನ್ನೆಲ್ಲೋ ಮಣ್ಣಿನಲ್ಲಿ ಊರಿ ಗಿಡವಾಗಲೆಂದು ಬೀಜದ ಸುತ್ತ ರಚಿಸಿಕೊಂಡ ಹಗುರಾದ ಎಳೆಗಳ ಗೂಡು-ಹತ್ತಿ ಪೊದೆಯಂತೆ ಬೆಳೆಯುವ ಅಗಸೆ ಸಸ್ಯದ ಕಾಂಡ, ರೆಂಬೆಯೊಳಗಿನ ನಾರು ಕಂಬಳಿಹುಳ ಚಿಟ್ಟೆಯಾಗಲು ತನ್ನ ಎಂಜಲನ್ನೇ ನೇಯ್ದು ಮಾಡಿಕೊಂಡ ಕೋಶ ಎಳೆಗಳ ಮೂಲಗಳಾಗಿವೆ.

ಹತ್ತಿ- ಮಾಲ್ವೇಸಿಯಾ ಕುಟುಂಬಕ್ಕೆ ಸೇರಿದ ಹತ್ತಿಗಿಡದ ಸಸ್ಯಶಾಸ್ತ್ರೀಯ ಹೆಸರು ಜೀನಸ್ ಗಾಸಿಪಿಯಂ. ಹತ್ತಿಯ ಬೀಜದ ಸುತ್ತಲು ಚೆಂಡಿನಂತೆ ಸುತ್ತಿಕೊಳ್ಳುವ ಮೆತ್ತನೆ ತುಪ್ಪುಳದಂತಹ ಎಳೆಗಳ ಕೋಶವೇ ಹತ್ತಿ. ಇದು ಬೀಜ ಪ್ರಸರಣಕ್ಕೆ ಸಹಾಯಕ. ಅಮೆರಿಕ, ಆಫ್ರಿಕ, ಈಜಿಪ್ಟ್ ಮತ್ತು ಭಾರತ ಒಳಗೊಂಡಂತೆ ವಿಶ್ವದ ಉಷ್ಣವಲಯ ಮತ್ತು ಅರೆ-ಉಷ್ಣವಲಯದ ಪ್ರದೇಶಗಳಲ್ಲಿ ಪೊದೆಯಾಗಿ ಬೆಳೆಯುವ ಗಿಡ ಇದಾಗಿದೆ. ಅತಿ ಹೆಚ್ಚಿನ ಕಾಡು ಹತ್ತಿ ತಳಿಗಳು ಇರುವುದು ಮೆಕ್ಸಿಕೋದಲ್ಲಿ. ನಂತರದ ಸ್ಥಾನ ಆಸ್ಟ್ರೇಲಿಯಾ ಮತ್ತು ಆಫ್ರಿಕಾ. ಕೋಶವನ್ನು ದಾರಗಳನ್ನಾಗಿ ಮಾಡಿ ದಾರಗಳನ್ನು ಜೋಡಿಸಿ ನೇಯ್ದು ಬಟ್ಟೆಮಾಡಲಾಗುತ್ತದೆ.

ಅಗಸೆ- ಲೈನೇಸಿ ಸಸ್ಯ ಕುಟುಂಬದ ಲೈನಮ್ ಯುಸಿಟಾಟಿಸಿಮಮ್ ಜಾತಿಗೆ ಸೇರಿದ ಸಸ್ಯವಿದು. ಸಾಮಾನ್ಯವಾಗಿ ಇದನ್ನು ಅಗಸೆನಾರು ಅಥವಾ ನಾರಗಸೆ ಅಥವಾ ಅತಸಿ ಎಂದು ಕರೆಯುತ್ತಾರೆ. ತೊಗಟೆಯ ನಾರನ್ನು ಬ್ಯಾಸ್ಟಂ ನಾರೆಂದು ಕರೆಯುತ್ತಾರೆ ಅಗಸೆ ಸಮಶೀತೋಷ್ಣ ವಾಯುಗುಣವಿದ್ದೆಡೆಯಲ್ಲಿ ಚೆನ್ನಾಗಿ ಬೆಳೆಯುವ ಒಂದು ವಾರ್ಷಿಕ ಬೆಳೆಯಾಗಿದೆ. ಇದನ್ನು ನಾರಿಗಾಗಿಯೂ, ಬೀಜಕ್ಕಾಗಿಯೂ ಬೆಳೆಯಲಾಗುತ್ತದೆ.

ಅಗಸೆ ಗಿಡದ ನಾರಿನಿಂದ ಮಾಡುವ ಬಟ್ಟೆಯ ಉತ್ಪಾದನೆ ಕಷ್ಟದ್ದಾದರೂ ಇದು ಹತ್ತಿಗಿಂತ ಗಟ್ಟಿಯು, ಹೆಚ್ಚು ಹೀರಿಕೊಳ್ಳುವ ಗುಣ ಮತ್ತು ಬೇಗನೆ ಒಣಗುವ ಗುಣವನ್ನು ಹೊಂದಿದೆ. ಬಿಸಿಲು ಮತ್ತು ಆರ್ದ್ರತೆ ಹೆಚ್ಚಿರುವ ವಾತಾವರಣದಲ್ಲಿ ಇದರ ತಂಪು ಮತ್ತು ತಾಜಾತನದ ಗುಣ ಉಪಯುಕ್ತ. ಇದನ್ನು ಬಳಸಿ ಏಪ್ರನ್ಗಳು, ಚೀಲಗಳು, ಟವೆಲ್ಲುಗಳು, ಕರವಸ್ತ್ರಗಳು, ಬೆಡ್ಶೀಟುಗಳು, ಮೇಜು ಹೊದಿಕೆಗಳು, ಕುರ್ಚಿಹೊದಿಕೆಗಳು ಹಾಗೂ ಮಹಿಳೆ ಮತ್ತು ಪುರುಷರ ಬಟ್ಟೆಗಳನ್ನು ಉತ್ಪಾದಿಸಲಾಗುತ್ತದೆ. ಅಗಸೆ ಗಿಡದ ನಾರಿನಿಂದ ಮಾಡುವ ಬಟ್ಟೆಯನ್ನು ಇಂಗ್ಲಿಷಿನಲ್ಲಿ ಲಿನಿನ್ ಎಂದು ಕರೆಯುತ್ತಾರೆ. ಲಿನಿನ್ನಂತೆಯೇ ನೇಯುವ ಹತ್ತಿ ಬಟ್ಟೆಯನ್ನು ಸಹ ಲಿನಿನ್ ಎಂದು ಕರೆಯಲಾಗುತ್ತದೆ. ಲಿನಿನ್ ನೇಕಾರಿಕೆಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಸ್ವಿಸ್ ಲೇಕ್ ಪ್ರದೇಶಗಳಲ್ಲಿ ಕ್ರಿ.ಪೂ.80000 ಹಿಂದಿನ ಲಿನಿನ್ ಬಟ್ಟೆ, ನಾರು, ನೂಲುಗಳ ಅವಶೇಷಗಳು ದೊರೆತಿವೆ.

ರೇಷ್ಮೆ-ಇದೊಂದು ಕೀಟಗಳ ನೈಸರ್ಗಿಕ ಸಸಾರಜನಕ ಎಳೆಯಾಗಿದೆ. ರೇಷ್ಮೆಯಂತಹ ಎಳೆಗಳನ್ನು ಹಲವಾರು ತೆರನ ಕೀಟಗಳು ಉತ್ಪಾದಿಸುತ್ತವೆಯಾದರೂ ನೇಯಲು ಬೇಕಾದ ಉತ್ತಮವಾದ ರೇಷ್ಮೆ ಎಳೆಗಳನ್ನು ತೆಗೆಯುವುದು ರೇಷ್ಮೆ ಚಿಟ್ಟೆಯಾಗುವ ಕಂಬಳಿಹುಳಗಳನ್ನು ಬೆಳೆಸಿ ಅವು ಕಟ್ಟುವ ಗೂಡುಗಳಿಂದ. ಇದರ ವೈಜ್ಞಾನಿಕ ಹೆಸರು ಬಾಂಬಿಕ್ಸ್ ಮೋರಿ. ರೇಷ್ಮೆ ಎಳೆಗಳ ಮಿರುಗುವ ಗುಣ ಬಂದಿರುವುದು ಎಳೆಯ ತ್ರಿಕೋನಾಕಾರದ ಪ್ರಿಸಂ ಆಕಾರದ ರಚನೆಯಿಂದಾಗಿ. ಈ ರಚನೆಯು ಒಳಬರುವ ಬೆಳಕನ್ನು ವಿವಿಧ ಕೋನಗಳಲ್ಲಿ ಪ್ರತಿಫಲಿಸುವುದರಿಂದ ವಿವಿಧ ಬಣ್ಣಗಳನ್ನು ನೀಡುತ್ತದೆ.

ಇತಿಹಾಸ

ನೂಲಿನ ಎಳೆಗಳನ್ನು ಉದ್ದವಾಗಿ, ಅಡ್ಡವಾಗಿ ಒಂದರೊಳಗೊಂದು ನೇಯ್ದು ಬಟ್ಟೆ ಮಾಡುವ ನೇಕಾರಿಕೆಗೆ ಪುರಾತನ ಇತಿಹಾಸವಿದೆ. ವಾನರನಿಂದ ಮಾನವರಾದ ದೇಹದ ರಕ್ಷಣೆ, ಮಾನಸಮ್ಮಾನ ಕಾಪಾಡುವ ಬಟ್ಟೆ ಮಾಡುವುದರಿಂದ ಆರಂಭವಾಗಿ ಅಪಾರ ನೈಪುಣ್ಯತೆಯೊಂದಿಗೆ ಕುಶಲ ವೃತ್ತಿಯಾಗಿ ಬೆಳೆದ ನೇಕಾರಿಕೆಯ ಇತಿಹಾಸವು ಮನುಷ್ಯರ ವಿಸ್ಮಯಕಾರಿ ಸೃಜನಶೀಲತೆ ಮತ್ತು ಕಲಾತ್ಮಕತೆಯ ಕತೆಯೇ ಆಗಿದೆ.

ಜಾಗತಿಕ

ನೇಯ್ಗೆ-ಪ್ಯಾಲಿಯೊಲೆಥಿಕ್ ಕಾಲಕ್ಕೆ ಎಂದರೆ ಸುಮಾರು 27,000ವರ್ಷಗಳ ಹಿಂದೆಯೇ ನೇಯುವುದು ಇತ್ತು ಎಂಬುದಕ್ಕೆ ಪ್ರಾಚೀನ ಈಜಿಪ್ಟ್ನಲ್ಲಿ ಕುರುಹುಗಳು ಸಿಕ್ಕಿವೆ. ದೋಲ್ನಿ ವೆಸ್ಟೊನೈಸ್ ಸೈಟ್ನಲ್ಲಿ ನೇಯ್ದ ಬಟ್ಟೆಗಳು ಸಿಕ್ಕಿವೆ. ಪೆರುವಿನ ಗಿಟಾರ್ರೆರೊ ಗುಹೆಯಲ್ಲಿ 6 ಉತ್ತಮವಾಗಿ ನೇಯ್ದ ಬಟ್ಟೆ ತುಂಡುಗಳು ಸಿಕ್ಕಿವೆ. ಸಸ್ಯದ ನಾರುಗಳಿಂದ ಇವನ್ನು ನೇಯ್ದಿದ್ದು ಇವು ಕ್ರಿ. ಪೂ.10100 ಮತ್ತು 9080 ಕಾಲಕ್ಕೆ ಸೇರಿವೆ. ಕ್ರಿ.ಪೂ.7000 ಕಾಲದ ಬಟ್ಟೆ ತುಂಡುಗಳು ಕಟಾಲ್ಹೊಯುಕ್ ಸೈಟ್ನಲ್ಲಿ ಸಿಕ್ಕಿವೆ. ನಿಯೋಲಿಥಿಕ್ ಕಾಲದ ಎಂದರೆ ಕ್ರಿ.ಪೂ.5000 ಕಾಲದ ನೇಯ್ದ ಬಟ್ಟೆ ಫಾಯೂನ್ನಲ್ಲಿ ದೊರೆತಿದೆ. ಅಗಸೆ ನಾರಿನಿಂದ ನೇಯ್ದ ಬಟ್ಟೆ ತುಂಡುಗಳು ಈಜಿಪ್ಟ್ನಲ್ಲಿ ದೊರೆತಿದ್ದು ಅದು ಕ್ರಿ. ಪೂ.3600 ಕಾಲಕ್ಕೆ ಸೇರಿದೆ. ಎಲ್ಲ ಮಹಾನಾಗರಿಕತೆಗಳಿಗೂ ನೇಯ್ಗೆ ತಿಳಿದಿತ್ತು. ಮೊದಲಿಗೆ ಸಣ್ಣ ಬಟ್ಟೆಗಳನ್ನಷ್ಟೇ ನೇಯಲಾಗುತ್ತಿತ್ತು. ಉಂಕೆಯ (ವಾರ್ಪ್) ಆಕಾರ ದೊಡ್ಡದಾದಂತೆ ನೇಯುವ ಬಟ್ಟೆಯ ಅಳತೆಯು ಹೆಚ್ಚಿತು. ಕ್ರಿ.ಪೂ.4ನೇ ಶತಮಾನದ ಅವಧಿಯಲ್ಲಿ ಹತ್ತಿ ಬೆಳೆಯುವುದು, ಹತ್ತಿಯಿಂದ ನೂಲು ತೆಗೆಯುವುದು ಮತ್ತು ನೇಯುವುದು ಮೆರೋದಲ್ಲಿ ಉತ್ತುಂಗವನ್ನು ತಲುಪಿತ್ತು. ಕುಷ್ ಜನಾಂಗಕ್ಕೆ ಜವಳಿ ರಫ್ತು ಸಂಪತ್ತು ಹೆಚ್ಚಿಸಿಕೊಳ್ಳುವ ದಾರಿಯಾಗಿತ್ತು. ಎಜನ ರಾಜ ಅಕ್ಸುಮಿತೆ ಶಾಸನವೊಂದರಲ್ಲಿ ಮೆರೊವನ್ನು ವಶಪಡಿಸಿಕೊಳ್ಳುವಾಗ ಬೃಹತ್ ಹತ್ತಿ ಬೆಳೆಯನ್ನು ನಾಶಪಡಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಕ್ರಿ.ಪೂ.4000 ಹೊತ್ತಿಗೆ ಹತ್ತಿ ಮತ್ತು ಕೇಮ್ ಲಿಡ್ಸ್ ಎರಡನ್ನು ಅಭಿವೃದ್ಧಿಪಡಿಸಲಾಗಿತ್ತು. ಇಂದು ನಮಗೆ ತಿಳಿದಿರುವ, ಯಂತ್ರ ಬಳಸದ ತಂತ್ರಗಳೆಲ್ಲವನ್ನು ಸ್ವತಂತ್ರವಾಗಿ ಪರಿಶೋಧಿಸಿದ ಶ್ಲಾಘನೆ ಸಲ್ಲುವುದು ಅಮೆರಿಕದ ನೇಕಾರರಿಗೆ. ಅಮೆರಿಕದ ಮೂಲನಿವಾಸಿಗಳು ಅಮೆರಿಕದ ಉಷ್ಣವಲಯ ಮತ್ತು ಅರೆ ಉಷ್ಣವಲಯದಾದ್ಯಂತ ಹತ್ತಿ ಬಟ್ಟೆಗಳ ನೇಕಾರಿಕೆಯನ್ನು ಚಾಲ್ತಿಯಲ್ಲಿಟ್ಟಿದ್ದಾರೆ. ದಕ್ಷಿಣ ಅಮೆರಿಕ ಆ್ಯಂಡಿಸ್ ಪ್ರದೇಶದಲ್ಲಿ ಉಣ್ಣೆಯನ್ನು ನೇಯುತ್ತಿದ್ದರು. ಕೇಮ್ ಲಿಡ್ಸ್, ಇಲಮಾಸ್ ಮತ್ತು ಅಲ್ಪಕಾಸ್ (ಒಂಟೆ ಜಾತಿಗೆ ಸೇರಿದ ಪ್ರಾಣಿಗಳು)ಉಣ್ಣೆಯನ್ನು ಬಳಸುತ್ತಿದ್ದರು.

ಕ್ರಿ.ಪೂ.2500ರಷ್ಟು ಹಿಂದೆಯೇ ಹರಪ್ಪ ಮತ್ತು ಮೊಹೆಂಜೋದಾರೊ ನಿವಾಸಿಗಳು ನೇಯ್ಗೆಯನ್ನು ಕರಗತಮಾಡಿಕೊಂಡಿದ್ದರು. ಸಿಂಧು ನದಿ ಕಣಿವೆಯ ರೈತರೇ ಹತ್ತಿಯಿಂದ ನೂಲು ತೆಗೆದು ನೇಯ್ದ ಮೊದಲಿಗರು ಎನ್ನಬಹುದು. 1929ರಲ್ಲಿ ಪುರಾತತ್ವಜ್ಞರು ಇಂದಿನ ಪಾಕಿಸ್ತಾನದಲ್ಲಿರುವ ಮೊಹೆಂಜೊದಾರೊದಲ್ಲಿ ನಡೆಸಿದ ಉತ್ಖನನದಲ್ಲಿ ಕ್ರಿ.ಪೂ.3250 ಮತ್ತು 2750ರ ಅವಧಿಯ ಹತ್ತಿಬಟ್ಟೆಯ ತುಂಡುಗಳು ಮತ್ತು ಮೂಳೆಯಲ್ಲಿ ಮಾಡಿದ ಸೂಜಿಗಳು ದೊರೆತಿವೆ. ಈಜಿಪ್ಟಿನ ಸಮಾಧಿಗಳಲ್ಲಿ ಸಿಕ್ಕಿರುವ ಬಹುದೊಡ್ಡ ಪ್ರಮಾಣದ ಹತ್ತಿ ಬಟ್ಟೆಯ ತುಂಡುಗಳು ಕ್ರಿ.ಶ.5ನೇ ಶತಮಾನಕ್ಕೆ ಸೇರಿದ್ದಾಗಿದ್ದು ಅವು ಗುಜರಾತ್ ಮೂಲದ್ದಾಗಿದೆ.

ಭಾರತ

ಭಾರತದ ಎಲ್ಲಾ ಕಲೆ ಮತ್ತು ಕರಕೌಶಲಗಳಲ್ಲಿ ಕೈಮಗ್ಗದಲ್ಲಿ ಬಟ್ಟೆ ನೇಯುವುದು ಅತ್ಯಂತ ಪುರಾತನವಾದುದು. ಋಗ್ವೇದ, ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳಲ್ಲಿ ನೇಕಾರಿಕೆಯ ಕುರಿತು ವಿವರಗಳಿವೆ. ಹಿರಣ್ಯ ಎಂದರೆ ಚಿನ್ನದ ಬಟ್ಟೆಯ ಕುರಿತು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಸಿದ್ಧ ಆಸ್ಥಾನ ಕಲಾವಿದೆ ಅಮರಾವತಿಯು ಉಟ್ಟಿದ್ದ ಅರೆ ತೆಳು ಸೀರೆಯ ಕುರಿತ ಉಲ್ಲೇಖಗಳು ಪುರಾಣಗಳಲ್ಲಿದೆ.

ರೇಷ್ಮೆಯ ನೂಲು ಭಾರತಕ್ಕೆ ಈಗಿನ ಅಸ್ಸಾಂ ಪ್ರದೇಶದಿಂದ ಹಾದು ಬಂದರೆ, ಭಾರತೀಯ ಕುಶಲಕರ್ಮಿಗಳು ರೇಷ್ಮೆ ಉತ್ಪಾದನೆಯನ್ನು ಕಲಿತದ್ದು ಚೈನಾದವರಿಂದ. ಕ್ರಿ.ಶ.ದ ಆರಂಭದಲ್ಲಿಯೇ ಭಾರತದ ರೇಷ್ಮೆ ರೋಮ್ನಲ್ಲಿ ಜನಪ್ರಿಯವಾಗಿತ್ತು. 13ನೇ ಶತಮಾನದಲ್ಲಿ ದಕ್ಷಿಣ ಭಾರತದ ರೇಷ್ಮೆ ಬಟ್ಟೆ ಇಂಡೋನೇಶ್ಯಕ್ಕೆ ರಫ್ತಾಗುತ್ತಿತ್ತು. ಗುಜರಾತ್, ಬಂಗಾಳ, ಮಲಬಾರ್ ಮತ್ತು ಚೋಳಮಂಡಳದ ತೀರಗಳಿಂದ ಸಾಲು ಸಾಲು ದೋಣಿಗಳು ಹತ್ತಿ ಮತ್ತು ರೇಷ್ಮೆ ಬಟ್ಟೆಗಳನ್ನು ಹೊತ್ತು ಈಜಿಪ್ಟ್, ಅರೇಬಿಯಾ ಮತ್ತು ಚೈನಾದತ್ತ ತೆರಳುತ್ತಿದ್ದವು. ಭಾರತೀಯ ಕುಶಲಕರ್ಮಿಗಳು ಮತ್ತು ಕಸುಬುದಾರರು ತಮ್ಮ ನಿಪುಣತೆ, ಚತುರತೆಯಿಂದಾಗಿ ಯಾವುದೇ ಮಾರುಕಟ್ಟೆಗೆ ಬೇಕಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳುವ ಕಾರಣಕ್ಕೆ ಭಾರತೀಯ ನೇಯ್ಗೆಯು ಜಗತ್ತಿನಾದ್ಯಂತ ವಿಶೇಷ ಜನಪ್ರಿಯತೆಯನ್ನು ಪಡೆದುಕೊಂಡು ಹಲವು ಶತಮಾನಗಳ ಕಾಲ ಜವಳಿ ಉದ್ದಿಮೆಯಲ್ಲಿ ಪ್ರಾಬಲ್ಯ ಮೆರೆಯಿತು. ಮೌರ್ಯರಿಂದ ಹಿಡಿದು ಮೊಗಲರವರೆಗೆ ನೇಕಾರಿಕೆಗೆ ಪ್ರೋತ್ಸಾಹ ದೊರೆಯಿತು. 17ನೇ ಶತಮಾನದ ಹೊತ್ತಿಗೆ ಯೂರೋಪಿನ ಬೇಡಿಕೆ ಹೆಚ್ಚಿ ಭಾರತದ ಮಸ್ಲಿನ್ ಬಟ್ಟೆಗಳನ್ನಿಟ್ಟುಕೊಳ್ಳುವುದು ಯೂರೋಪಿನಲ್ಲಿ ಅಂತಸ್ತಿನ ಸಂಕೇತವಾಗಿತ್ತು.

18ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದಾಗಿ ಆರಂಭವಾದ ಯಾಂತ್ರೀಕೃತ ಮಿಲ್ಲುಗಳು ಮತ್ತು ಅಮೆರಿಕದ ಸಿವಿಲ್ ಯುದ್ಧದ ಸಂದರ್ಭದಿಂದಾಗಿ ಭಾರತೀಯ ಜವಳಿ ಉದ್ದಿಮೆಯು ತನ್ನ ಭವ್ಯತೆಯನ್ನು ಕಳೆದುಕೊಂಡಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಭಾರತದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳ ವ್ಯಾಪಾರ ಮಾಡುತ್ತಿತ್ತು. ಆ ಬಟ್ಟೆಗಳಲ್ಲಿ ಡಾಕಾ, ಬಿಹಾರ್ ಮತ್ತು ಒಡಿಶಾದ ಮುಸ್ಲಿಮರು ನೇಯುತ್ತಿದ್ದ ಮಸ್ಲಿನ್ ಬಟ್ಟೆ ಹೊರದೇಶಗಳಲ್ಲಿ ಬಹಳ ಪ್ರಸಿದ್ಧವಾಗಿತ್ತು.

ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡಿರುವ ಉದ್ದಿಮೆ ನೇಕಾರಿಕೆಯ ಆಗಿದೆ. ನೇಕಾರಿಕೆಯ ಉತ್ಪನ್ನಗಳು ರಾಷ್ಟ್ರೀಯ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುತ್ತವೆ. ನೇಕಾರಿಕೆಯ ಉದ್ದಿಮೆಯು ಮಾರ್ಕೆಟಿಂಗ್, ಆರ್ಥಿಕತೆ, ಸಾರಿಗೆ, ಹೋಟೆಲುಗಳು ಮತ್ತು ನಿರ್ವಹಣಾ ಸೇವೆಗಳಂತಹ ಸುಮಾರು 32 ಇತರ ಕ್ಷೇತ್ರಗಳಿ

Writer - ದು.ಸರಸ್ವತಿ

contributor

Editor - ದು.ಸರಸ್ವತಿ

contributor