ಋಗ್ವೇದ ಮತ್ತು ತಳಿ ವಿಜ್ಞಾನ

Update: 2023-01-05 07:36 GMT

ವಿಮರ್ಶೆಯೆನ್ನುವುದು ಬೌದ್ಧಿಕ ಕಸರತ್ತು ಎನ್ನಿಸಿಕೊಳ್ಳುವ ಕಾಲದಲ್ಲಿ, ಅದಕ್ಕೆ ಸಮಕಾಲೀನತೆಯನ್ನು, ಹೃದಯವಂತಿಕೆಯನ್ನು ಕೊಟ್ಟವರು ನೆಲ್ಲುಕುಂಟೆ ವೆಂಕಟೇಶ್. ವರ್ತಮಾನದ ತಲ್ಲಣಗಳನ್ನು ಗ್ರಹಿಸಿ ಬರೆಯಬಲ್ಲವರು. ವೀಣೆಯ ತಂತಿಯಂತೆ ಮೀಟಬಲ್ಲವರು. ಇವರ ರಾಜಕೀಯ ಲೇಖನಗಳೂ ಹೃದ್ಯವಾಗುವುದು ಈ ಕಾರಣಕ್ಕಾಗಿ. ಕಾವ್ಯ, ಕತೆ ಮೊದಲಾದ ಸೃಜನಶೀಲ ಬರಹಗಳಲ್ಲೂ ಗುರುತಿಸಿಕೊಂಡಿರುವ ನೆಲ್ಲುಕುಂಟೆ ಸಂಸ್ಕೃತಿ ಚಿಂತಕರೂ ಆಗಿದ್ದಾರೆ. ತಳಸಂಸ್ಕೃತಿಯ ಬೇರುಗಳನ್ನು ಅರಸುವ ಅವರ ಸಂಶೋಧನಾ ಬರಹಗಳು ಕನ್ನಡದ ಮಟ್ಟಿಗೆ ತೀರಾ ಹೊಸತು ಅನ್ನಿಸಬಲ್ಲವುಗಳು. ವರ್ತಮಾನಕ್ಕೆ ಸಂಬಂಧಿಸಿದಂತೆ ಅವುಗಳು ಹಲವು ಹೊಸ ಒಳನೋಟಗಳನ್ನು ನೀಡಿವೆ. 

ಚರಿತ್ರೆಯನ್ನು ವೈಜ್ಞಾನಿಕವಾಗಿ ನಿರ್ವಹಿಸದೆ ಸಂಕೇತಗಳ ಮೂಲಕ ನೆನಪುಗಳನ್ನು ಹಿಡಿದು ದಾಖಲಿಸಿದ ಸಂಸ್ಕೃತಿ-ನಾಗರಿಕತೆಗಳು ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿವೆ. ಕಥೆಯೊಂದು ಚರಿತ್ರೆಯಾಗುವ, ನಂಬಿಕೆಗಳನ್ನು ಇತಿಹಾಸವೆಂದು ವ್ಯಾಖ್ಯಾನಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥೆಯನ್ನು ನಿಯಂತ್ರಿಸುತ್ತವೆ. ನಾವೂ ಇಂಥದ್ದೆ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಸಾವಿರಗಟ್ಟಲೆ ವರ್ಷಗಳಿಂದಲೇ ಟರ್ಕಿ, ಗ್ರೀಕ್, ಚೀನಾ, ಪರ್ಶಿಯಾ ಮುಂತಾದ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದರೂ ನಮ್ಮಲ್ಲಿ ಚರಿತ್ರೆ ಎಂಬ ಶಿಸ್ತು ತನ್ನ ನಿಜಾರ್ಥದಲ್ಲಿ ಬೆಳೆಯಲೇ ಇಲ್ಲ. ಹಾಗಾಗಿ ಇತಿಹಾಸ ಎಂಬ ಶಿಸ್ತು ಇಲ್ಲದ ಕಾರಣಕ್ಕೆ ವೈದಿಕ ಆಕರಗಳನ್ನೆ ನಂಬಿಕೊಳ್ಳಬೇಕಾದ ಪರಿಸ್ಥಿತಿ ಇದೆ. ನಮ್ಮಲ್ಲಿ ಪುರಾತತ್ವ ಶಾಸ್ತ್ರವೆಂಬ ಶಿಸ್ತು ಇದ್ದರೂ ಇಲ್ಲಿನ ಹವಾಮಾನದ ಕಾರಣಕ್ಕೆ ಪಶ್ಚಿಮ ಏಶ್ಯ, ಯುರೋಪ್ ಮುಂತಾದ ಕಡೆ ಸಿಗುವಂತೆ ಸಾಂದ್ರವಾದ ಸಾಕ್ಷಗಳು ಲಭಿಸುವುದಿಲ್ಲ. ಹಾಗಿರುವಾಗ ತೌಲನಿಕ ಭಾಷಾಶಾಸ್ತ್ರ ಮತ್ತು ಆಧುನಿಕವೂ ಹೆಚ್ಚು ನಿಖರವೂ ಆದ ತಳಿ ವಿಜ್ಞಾನಗಳು ತುಸು ಮಟ್ಟಿಗೆ ಮನುಷ್ಯರ ಇತಿಹಾಸ ಮತ್ತು ಚಲನೆಯನ್ನು ವಿವರಿಸುತ್ತಿವೆ. ಬಹು ಸಂಸ್ಕೃತಿಗಳ ಜನರು ಒಟ್ಟಿಗೆ ಬಾಳುತ್ತಿರುವ ಈ ನೆಲದಲ್ಲಿ ಜಾತಿ ವರ್ಣಗಳ ಹೈರಾರ್ಕಿಯನ್ನು ನೆಲೆಗೊಳಿಸಲು ಪ್ರಯತ್ನಿಸಲಾಗಿದೆ. ಪುರಾಣ, ಕಥೆ, ಕಾವ್ಯಗಳ ಮೂಲಕ ವಿಧಿ ನಿಷೇಧಗಳನ್ನು ರೂಪಿಸಲಾಗಿದೆ. ಆ ಮೂಲಕ ತನ್ನ ಮೇಲಿನ ಎಲ್ಲರ ಭಾರವನ್ನು ಹೊರುತ್ತಿರುವ ಕಟ್ಟ ಕಡೆಯ ಜಾತಿಯ ಮನುಷ್ಯನಿಗೂ ಒಂದು ಸಾಂಸ್ಕೃತಿಕ ಐಡೆಂಟಿಟಿಯನ್ನು ಹೇಳಿಕೊಳ್ಳಲು ಅವಕಾಶ ನೀಡಲಾಗಿದೆ. ಡಿ.ಡಿ. ಕೊಶಾಂಬಿಯವರು ತಮ್ಮ ಮಿಥ್ ಆ್ಯಂಡ್ ರಿಯಾಲಿಟಿ ಕೃತಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ ಅತಿ ಹೆಚ್ಚು ತುಳಿತಕ್ಕೆ ಒಳಗಾದ ಜಾತಿ/ ಬುಡಕಟ್ಟುಗಳ ಜನರ ಲಾಂಛನಗಳನ್ನು ಆಳುವ ಸಮುದಾಯಗಳು ತಮ್ಮ ಲಾಂಛನಗಳ ಜೊತೆಯಲ್ಲಿ ಸೇರಿಸಿಕೊಂಡಿವೆ. ಈ ಸೇರಿಸಿಕೊಳ್ಳುವಿಕೆಯು ಏಕ ಕಾಲದಲ್ಲಿ ಎರಡು ಕೆಲಸಗಳನ್ನು ಮಾಡುತ್ತಿದೆ. ಹಾವು, ಅಳಿಲು, ಕಾಗೆ, ಆನೆ, ಸಿಂಹ, ಗೂಬೆ ಹೀಗೆ ಅನೇಕ ಬುಡಕಟ್ಟುಗಳ ಲಾಂಛನಗಳ ಮೇಲೆ ಕೂತ ದೇವ/ದೇವತೆಗಳ ಮೂಲಕ ನಿಮ್ಮ ಅಸ್ಮಿತೆಯನ್ನು ನಾವು ನಿರಾಕರಣೆ ಮಾಡುವುದಿಲ್ಲವೆಂತಲೂ ಮತ್ತು ನಿಮ್ಮ ಮೇಲಿನ ನಮ್ಮ ಜಯವನ್ನು ಒಪ್ಪಿಕೊಳ್ಳಿ ಎಂತಲೂ ಈ ಕಥನಗಳು ತೋರಿಸುತ್ತಿರಬಹುದು. ಪುರಾಣ ಮತ್ತು ಕಾವ್ಯಗಳ ಮೂಲಕ ನಡೆದಿರುವ ಸಂಸ್ಕೃತಿ ರಾಜಕಾರಣವು ಕೆಲವೊಮ್ಮೆ ಗಾಬರಿ ಹುಟ್ಟಿಸುತ್ತದೆ. ಜನ ಸಮುದಾಯಗಳ ನೋವುಗಳನ್ನು ನೀಗಲು ನೆರವಾಗುವ ಇವುಗಳು ಸದ್ದಿಲ್ಲದೆ ಹೈರಾರ್ಕಿಯನ್ನು, ಕರ್ಮಸಿದ್ಧಾಂತ, ಹಣೆ ಬರಹ ಸಿದ್ಧಾಂತವನ್ನು ಒಪ್ಪಿಕೊಳ್ಳುವಂತೆ ಮಾಡಿವೆ. ಅದರ ಮೂಲಕ ಮೇಲಿನವರ ಭಾರವನ್ನು ನಿರಾಕರಿಸದೆ ಸವೆದು ಅಸ್ಥಿಪಂಜರವಾಗುತ್ತಿದ್ದರೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ನೆನೆಸಿಕೊಂಡು ಬದುಕುವಂಥ ವ್ಯವಸ್ಥೆ ಬಹುಶಃ ಬೇರೆಲ್ಲೂ ಇರಲಾರದು. ವರ್ಣ ವ್ಯವಸ್ಥೆಯ ಮೊದಲ ಪ್ರಸ್ತಾವ ಋಗ್ವೇದದ 10ನೇ ಮಂಡಲದಲ್ಲಿ ಬರುತ್ತದೆ. ಸರಿ ಸುಮಾರು 3,200 ವರ್ಷಗಳ ಹಿಂದೆ ಋಗ್ವೇದದ ಈ ಮಂಡಲವು ರಚನೆಯಾಗಿರಬಹುದೆಂದು ಅಂದಾಜಿಸಲಾಗಿದೆ. ತಳಿ ವಿಜ್ಞಾನವು ಭಾರತದಲ್ಲಿ ಸುಮಾರು 2,500 ವರ್ಷಗಳಿಂದ ಈಚೆಗೆ ಜಾತಿ/ ಬುಡಕಟ್ಟುಗಳು ಇತರ ಜಾತಿ ಬುಡಕಟ್ಟುಗಳ ಜೊತೆಗೆ ರಕ್ತ ಸಂಬಂಧ ಬೆಳೆಸದೆ ಪ್ರತ್ಯೇಕವಾಗಿ ಉಳಿಯಲು ಪ್ರಾರಂಭಿಸಿದ್ದಾರೆ ಎಂಬ ಸತ್ಯಗಳನ್ನು ಲೋಕದ ಮುಂದೆ ಮಂಡಿಸುತ್ತಿದೆ. ಅದಕ್ಕೂ ಮೊದಲು? ತಳಿ ವಿಜ್ಞಾನದ ಅನ್ವೇಷಣೆಗಳ ಪ್ರಕಾರ ಉಪಖಂಡದ ಶೇ.80ಕ್ಕೂ ಹೆಚ್ಚು ಜನರ ತಾಯಿ ಮೂಲ ಒಂದೇ ಆಗಿದೆ. ಮೈಟೊಕಾಂಡ್ರಿಯಾ ಡಿಎನ್‌ಎ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ. ಸುಮಾರು 65 ಸಾವಿರ ವರ್ಷಗಳ ಹಿಂದೆ ಆಫ್ರಿಕಾದಿಂದ ದೊಡ್ಡ ಅಲೆಯ ಮೂಲಕ ಕಡೆಯದಾಗಿ ವಲಸೆ ಬಂದ ಹೋಮೊ ಸೇಪಿಯನ್ ಜನರ ಜೊತೆ ಬಂದ ಹೆಣ್ಣಿನಿಂದಲೇ ನಮ್ಮಲ್ಲಿ ವಿಕಾಸ ನಡೆದಿದೆ. ಆದರೆ ವೈ ಕ್ರೋಮೊಸೋಮುಗಳ ಮೂಲಕ ತಂದೆ ಯಾರು ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಕಾಶ್ಮೀರವೂ ಸೇರಿದಂತೆ ಉತ್ತರದ ಮೇಲಿನ ಸ್ತರಗಳ ಸಮುದಾಯಗಳ ಜನರಲ್ಲಿ ಶೇ.70 ಕ್ಕೂ ಹೆಚ್ಚು ಪ್ರಮಾಣದ ತಂದೆಯ ಮೂಲ ಯುರೇಶಿಯಾದಿಂದ ಬಂದವರದ್ದಾಗಿದೆ. ಆರ್1ಎ1 ತಳಿ ಗುಂಪಿನ ಈ ಜನರೊಳಗೂ ಶೇ.30ರಷ್ಟು ಸ್ಥಳೀಯ ಸಮುದಾಯಗಳ ವೈ ಕ್ರೋಮೊಸೋಮುಗಳು ಪತ್ತೆಯಾಗಿವೆ. ದಕ್ಷಿಣದ ಆದಿಮ ಜಾತಿಗಳಲ್ಲಿ ಶೇ.18ರಿಂದ 40-50 ರವರೆಗೆ ಆರ್ಯ ಬುಡಕಟ್ಟುಗಳ ಮಿಶ್ರಣವಾಗಿದೆ. ತಳಿವಿಜ್ಞಾನವು ವೈಜ್ಞಾನಿಕ ಹುಡುಕಾಟದ ಮೂಲಕ ಮಂಡಿಸುತ್ತಿರುವ ಈ ಸತ್ಯ ಗೊತ್ತಿಲ್ಲದಿದ್ದಾಗಲೂ ನಮ್ಮ ತತ್ವಪದಕಾರರು ಭಿನ್ನ ಭೇದವ ಮಾಡಬ್ಯಾಡಿರಿಎಂದು ಕೇಳಿಕೊಂಡಿದ್ದರು. ಒಟ್ಟಿಗೆ ಬಾಳುವ ತೆರದಲಿ ಹರಸು ಎಂಬುದು ಒತ್ತಾಯವೂ ಹೌದು, ಆಶಯವೂ ಹೌದು. ವಚನಕಾರರ ಪ್ರಮುಖ ಪ್ರಮೇಯ ಒಳಗೊಂಡು ಇವನಾರವನೆನ್ನದೆ ಇವ ನಮ್ಮವನೆಂದೆಣಿಸು ಬಾಳುವ ಆಶಯ ಹೊಂದಿದೆ. ದ್ವೇಷ ತತ್ವವನ್ನು ಪ್ರತಿಪಾದಿಸುವ ನಿಲುವು ಅಲ್ಲಿ ಮನುಷ್ಯ ವಿರೋಧಿ. ದೈವ ವಿರೋಧಿಯೂ ಕೂಡ. ಋಗ್ವೇದದಲ್ಲಿಯೇ ದೇವತೆಗಳು, ಅಸುರರು ಪಕ್ಷ ಬದಲಾಯಿಸುವ ಅಸಂಖ್ಯ ನಿದರ್ಶನಗಳಿವೆ. ಅನೇಕ ಕಡೆ ಮಿಶ್ರಣಗಳ ಕತೆಗಳೂ ಇವೆ. ಯಯಾತಿ- ದೇವಯಾನಿ- ಶರ್ಮಿಷ್ಠೆಯ ಕಥೆ ಇದಕ್ಕೆ ಉದಾಹರಣೆ. 10ನೇ ಮಂಡಲಕ್ಕೆ ಮೊದಲು ಬ್ರಾಹ್ಮಣ, ಕ್ಷತ್ರಿಯ ಎಂಬ ವಿಂಗಡಣೆ ಕಾಣುವುದಿಲ್ಲ. ಆಗ ಗುರು, ಪುರೋಹಿತ, ಕವಿ, ರಾಜ, ಅಸುರ, ದಸ್ಯು, ದಾಸ ಹೀಗೆ ಉಲ್ಲೇಖಗಳಿವೆ. ಈ ಕವಿ- ಪುರೋಹಿತರೆ ಮುಂದೆ ಬ್ರಾಹ್ಮಣರಾಗಿರಬಹುದು. ನಿರ್ದಿಷ್ಟ ಮನೆತನಗಳಲ್ಲಿ ಹುಟ್ಟಿ ತಾವು ಪ್ರತಿನಿಧಿಸುವ ಬುಡಕಟ್ಟಿನ ನಾಯಕರ ಕಥನಗಳನ್ನು ಹಾಡುವ ಕೆಲಸ ಮಾಡುತ್ತಿದ್ದ ಇವರುಗಳು ಚರಿತ್ರೆಯ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಹೀಗಾಗಿ ಋಗ್ವೇದದ ಓದು ಹೊಸ ತಿಳುವಳಿಕೆಗಳ ಕಡೆಗೆ ತಿರುಗಿಸುವ ಸಾಧ್ಯತೆ ಇದೆ.

ಋಗ್ವೇದವನ್ನು ಚರಿತ್ರೆ, ತೌಲನಿಕ ಭಾಷಾವಿಜ್ಞಾನ, ಪುರಾತತ್ವ ವಿಜ್ಞಾನ ಮುಂತಾದ ಪ್ರಮೇಯಗಳ ಮೂಲಕ ವಿಶ್ಲೇಷಣೆ ಮಾಡುವ ಕೆಲಸಗಳು ಬಹಳ ಹಿಂದಿನಿಂದಲೇ ನಡೆದಿವೆ. ಆದರೆ ತಳಿ ವಿಜ್ಞಾನದ ಪ್ರಮೇಯಗಳ ಮೂಲಕ ವಿಶ್ಲೇಷಣೆ ಮಾಡುವ ಕೆಲಸಗಳು ಬಹಳ ಇತ್ತೀಚೆಗೆ ಪ್ರಾರಂಭವಾಗಿವೆ. ಈ ಬರಹವು ಅಂಥದ್ದೊಂದು ಪ್ರಯತ್ನದ ಭಾಗ.

ವೇದಕಾಲೀನ ಜನರ ಚಲನೆ, ಸಂಘರ್ಷ, ಸಾಮರಸ್ಯ ಮತ್ತು ನೆಲೆಗೊಳ್ಳುವಿಕೆ ಮುಂತಾದವುಗಳು ಪ್ರಮೇಯಗಳಂತೆಯೆ ಚರ್ಚೆಗೆ ಒಳಗಾಗಿವೆ. ಒಳಗಾಗುತ್ತಲೂ ಇವೆ. ಇವುಗಳನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮೆಲ್ಲ ಸಂಕುಚಿತ ದೃಷ್ಟಿಕೋನಗಳಿಂದ ಹೊರಬರಬೇಕು. ನಮ್ಮ ತುರ್ತುಗಳಿಗಾಗಿ ಚರಿತ್ರೆಯನ್ನು ತಿರುಚಬಾರದು. ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಕಟ್ಟುವ ಬೈಪಾಸು ಮೆಥೆಡಾಲಜಿಯೆ ಅಪಾಯಕರವಾದುದು.

ವಸಾಹತುವಾದಿಗಳು ಉಪಖಂಡದ ಮೇಲೆ ದಾಳಿ ಮಾಡಿದಾಗ ಇಲ್ಲಿನ ಅನೇಕ ಗ್ರಂಥಗಳನ್ನು ಯುರೋಪಿನ ಭಾಷೆಗಳಿಗೆ ಅನುವಾದ ಮಾಡುವ ಕೆಲಸ ಮಾಡಿದರು. ಅಂಥ ಗ್ರಂಥಗಳಲ್ಲಿ ಋಗ್ವೇದವೂ ಒಂದು. ಮೊದಲ ಸಂಸ್ಕೃತ ವೈದಿಕ ಗ್ರಂಥ ಋಗ್ವೇದವು ಯುರೋಪು ಮತ್ತು ಏಶ್ಯದ ವಿದ್ವಾಂಸರನ್ನು ಇನ್ನೂ ಕಾಡುತ್ತಿದೆ. 1830 ರಲ್ಲಿ ಫ್ರೆಡರಿಕ್ ಆಗಸ್ಟ್ ರೇಸೊನ್ ಎಂಬಾತ ಮೊದಲಿಗೆ ಋಗ್ವೇದವನ್ನು ಲ್ಯಾಟಿನ್‌ಗೆ ಭಾಗಶಃ ಅನುವಾದ ಮಾಡಿದ. 1849 ರಲ್ಲಿ ಮ್ಯಾಕ್ಸ್ ಮುಲ್ಲರ್ ಜರ್ಮನ್ ಭಾಷೆಗೆ ಭಾಷಾಂತರಿಸಿದ. ವಿಲ್ಸನ್ ಎಂಬಾತ 1850 ರಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ. ದಯಾನಂದ ಸರಸ್ವತಿಯವರು 1877 ರಲ್ಲಿ ಹಿಂದಿ ಭಾಷೆಗೆ ಅನುವಾದಿಸಿದರು. ಕನ್ನಡ ಭಾಷೆಗೆ 1947 ರಲ್ಲಿ ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಪಂಡಿತ ವೆಂಕಟರಾವ್ ಮುಂತಾದವರ ಮೂಲಕ ಅನುವಾದ ಮಾಡಿಸಿದರು. ಇಷ್ಟೆಲ್ಲದರ ನಡುವೆ ಆರ್‌ಟಿಎಚ್ ಗ್ರಿಫಿತ್ 1889-92 ರವರೆಗೆ ಇಂಗ್ಲಿಷ್ ಭಾಷೆಗೆ ಮಾಡಿದ ಅನುವಾದವನ್ನು ಬಹುಪಾಲು ವಿದ್ವಾಂಸರು ಇಂದಿಗೂ ಆಕರವಾಗಿ ಬಳಸುತ್ತಾರೆ. ಒಂದು ಅಂದಾಜಿನ ಪ್ರಕಾರ 31 ಕ್ಕೂ ಹೆಚ್ಚು ವಿದ್ವಾಂಸರು ಋಗ್ವೇದವನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿದ್ದಾರೆ. ಈಗಲೂ ಅನುವಾದಗಳು ನಡೆಯುತ್ತಲೇ ಇವೆ.

ಪುರಾಣ ಮತ್ತು ತೌಲನಿಕ ಭಾಷಾಶಾಸ್ತ್ರವನ್ನು ಮುಖ್ಯವಾದ ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡುವ ವಿದ್ವಾಂಸರ ಪ್ರಕಾರ ಇರಾನಿನ ಅವೆಸ್ತಾ ಮತ್ತು ವಾಯುವ್ಯ ಭಾರತದ ಋಗ್ವೇದ ಇವೆರಡನ್ನೂ ರಚಿಸಿದವರು ಒಂದೇ ಗುಂಪಿನ ಜನ. ಋಗ್ವೇದದ ಅಂತಿಮತೆ ಸಾಧ್ಯವಾಗಿದ್ದು ಭರತ- ಪುರು ಕುಲಗಳ ಆಶ್ರಯದಲ್ಲಿ ಎಂದು ಮೈಖೆಲ್ ವಿಟ್ಝೆಲ್ ಹೇಳುತ್ತಾರೆ.

ಕೋಲ್ಕೊತಾ ವಿಶ್ವವಿದ್ಯಾನಿಲಯದ ಪ್ರೊ. ಕಾನಡ ಸಿನ್ಹಾ ಅವರ ಆಸಕ್ತಿಕರ ಅಧ್ಯಯನದ ಪ್ರಕಾರ ಸ್ವತಃ ಋಗ್ವೇದವೇ ವೇದಗಳ ಬುಡಕಟ್ಟು ಜನರು ಇರಾನಿನ ಬಯಲುಗಳಿಂದ ವಾಯುವ್ಯ ಭಾರತದತ್ತ ಬಂದ ಕುರಿತು ಪುರಾವೆಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಮುಖ್ಯವಾಗಿ ದೇವ ಮತ್ತು ಅಸುರರ ಕುರಿತಾದ ಕಥನಗಳು ಈ ಕುರಿತಂತೆ ಹಲವು ಆಸಕ್ತಿಕರ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಅವೆಸ್ತಾದಲ್ಲಿ ಅಹುರ ಅಸುರ ಅಲ್ಲಿನ ವಿವೇಕದ ದೇವತೆಯಾದರೆ, ಇಲ್ಲಿ ಅಸುರ ಎನ್ನುವುದು ರಾಕ್ಷಸತ್ವವನ್ನು ಪ್ರತಿನಿಧಿಸುತ್ತದೆ. ಇರಾನಿನಲ್ಲಿ ದೇವ ಎನ್ನುವುದನ್ನು ದುಷ್ಟತನದ ಜೊತೆ ಸಮೀಕರಿಸಿ ನೋಡಲಾಗುತ್ತಿತ್ತು. ಇಲ್ಲಿ ದೇವ ಎನ್ನುವುದು ರಕ್ಷಕ, ಮೋಕ್ಷದಾತ ಎಂಬುದಾಗಿ ಕಥನಗಳನ್ನು ಕಟ್ಟಲಾಗಿದೆ. ಯಾಕೆ ಹೀಗಾಯಿತು? ಒಟ್ಟಿಗೆ ಇದ್ದ ಬುಡಕಟ್ಟುಗಳು ಆಚೀಚೆ ಚೆದುರಿ ವಲಸೆ ಹೋದಾಗ ವರ್ತನೆಗಳು ಬದಲಾಗುತ್ತವೆಯೆ? ಡಾ.ಸಿನ್ಹಾ ಪ್ರಕಾರ ಪ್ರಧಾನ ಕವಿ-ಪುರೋಹಿತ ಕುಲಗಳ ಮೇಲಾಟದಲ್ಲಿ ಆಗಿ ಹೋದ ಪಾತ್ರಗಳು ದೇವರು ಮತ್ತು ಅಸುರರಾಗಿ ಬದಲಾಗುತ್ತಾರೆ. ಇಸ್ಲಾಮ್ ಪೂರ್ವದ ಇರಾನಿನಲ್ಲಿ ದಯೇವ ದುಷ್ಟತೆಗೆ ಕೆಡುಕಿಗೆ ಸಂಕೇತವಾದರೆ ಇಲ್ಲಿ ಅಸುರರನ್ನು ನಕಾರಾತ್ಮಕ ಶಕ್ತಿಗಳ ಪ್ರತಿನಿಧಿಗಳನ್ನಾಗಿಸಲಾಗಿದೆ. ಅಹುರ ಮಝ್ದಾ ಎಂಬ ಇರಾನಿನ ಬಯಲುಗಳ ದೇವತೆ ಅತ್ಯಂತ ಪ್ರಭಾವಶಾಲಿಯಾಗಿದ್ದವನು.

 ವೇದಪೂರ್ವ ಮತ್ತು ವೇದಕಾಲದಲ್ಲಿ ಪ್ರಧಾನ ಪಾತ್ರ ವಹಿಸಿದ ಎರಡು ಕವಿ-ಪುರೋಹಿತ ಕುಲದ ಮನೆತನಗಳಾದ ಅಂಗೀರಸ ಮತ್ತು ಭಾರ್ಗವ ಇವುಗಳ ಮೇಲಾಟಗಳು ಉಪಖಂಡದ ಚರಿತ್ರೆಯ ದಿಕ್ಕನ್ನೇ ಬದಲಿಸಿದವು. ಅಂಗೀರಸ ಕುಲದ ಕವಿ ಪುರೋಹಿತರುಗಳು ದೇವತೆಗಳ ಪರವಾಗಿಯೂ ಭಾರ್ಗವ ಕುಲದವರು ಅಸುರರ ಪರವಾಗಿಯೂ ನಿಂತು ಎದುರಾ ಬದುರಾದ ಮಹಾ ಕಥನಗಳನ್ನು ಕಟ್ಟಿದರು. ಈ ಎರಡು ಕಥನಗಳು ಮುಂದೆ ಉಪಖಂಡವನ್ನು ಎರಡು ಭಾಗವನ್ನಾಗಿಸಿದವು. ಕಥನಗಳು ಎರಡು ಪ್ರಮೇಯಗಳಾಗಿ ಇಂದಿಗೂ ನಮ್ಮನ್ನು ಕಂಗೆಡಿಸಿ ಕೂತಿವೆ.

ಅಂಗೀರಸ ಬುಡಕಟ್ಟಿನ ಕವಿ ಪುರೋಹಿತರು ತುಸು ಮೊದಲು ಇರಾನಿನತ್ತಣಿಂದ ಉಪಖಂಡದತ್ತ ಬಂದರು. ಭಾರ್ಗವ ಬುಡಕಟ್ಟಿನವರು ತುಸು ತಡವಾಗಿ ಬಂದರು. ಈ ಭಾರ್ಗವ ಬುಡಕಟ್ಟಿನ ಶುಕ್ರಾಚಾರ್ಯ ಮುಂತಾದವರು ಅಸುರರ ಗುರುಗಳಾಗಿದ್ದರು. ಆದರೆ ನಂತರ ಬದಲಾದ ಕಾಲಘಟ್ಟದಲ್ಲಿ ಈ ಕುಲದವರೇ ಮನುಸ್ಮತಿಯಂತಹ ಭಾರತದ ಅಧಃಪತನಕ್ಕೆ ಕಾರಣವಾದ ಧರ್ಮಸೂತ್ರ ರೂಪದ ಕೃತಿಯನ್ನು ರಚಿಸಿದರು. ಎರಡು ಮಹಾಕಾವ್ಯಗಳನ್ನು ಬ್ರಾಹ್ಮಣ್ಯದ ವೌಲ್ಯಗಳನ್ನು ಪ್ರತಿಪಾದಿಸುವ ವ್ಯಾಖ್ಯಾನಗಳನ್ನು ಮಾಡಿದರು. ಋಗ್ವೇದದಲ್ಲಿ ದೇವರುಗಳೆಂದು ಕರೆಸಿಕೊಳ್ಳುತ್ತಿದ್ದ ಇಂದ್ರ, ಅಗ್ನಿ, ಮಿತ್ರ, ವರುಣ, ರುದ್ರ, ಸೋಮ, ಮರುತರು, ವಸುಗಳು ಮುಂತಾದವರನ್ನು ಅಸುರರು ಅಥವಾ ಅಸುರೀ ಶಕ್ತಿಗಳುಳ್ಳವರು ಎಂದು ವರ್ಣಿಸಲಾಗಿದೆ. ವೈದಿಕರ ಪ್ರಧಾನ ದೇವತೆಯಾದ ಅಗ್ನಿಯನ್ನು 14 ಸೂಕ್ತಗಳಲ್ಲಿ ಅಸುರ ಎನ್ನಲಾಗಿದೆ. ಇಂದ್ರನನ್ನು ಸುಮಾರು 10 ಕ್ಕೂ ಹೆಚ್ಚಿನ ಸೂಕ್ತಗಳಲ್ಲಿ, ಮಿತ್ರ ಮತ್ತು ವರುಣರನ್ನು 7 ಬಾರಿ, ರುದ್ರನನ್ನು 5 ಕ್ಕೂ ಹೆಚ್ಚು ಬಾರಿ, ಸವಿತೃವನ್ನು 3 ಕ್ಕೂ ಹೆಚ್ಚು ಸೂಕ್ತಗಳಲ್ಲಿ ಅಸುರ ಎಂದು ವರ್ಣಿಸಲಾಗಿದೆ. ಮರುತರನ್ನು ಅಸುರಾಯ ನಿಲಯಃ ಎಂದು ಕರೆಯಲಾಗಿದೆ. 10 ನೇ ಮಂಡಲದ 124 ನೇ ಸೂಕ್ತದಲ್ಲಿ ಇಂದ್ರನು ಅಗ್ನಿ, ವರುಣ ಮತ್ತು ಸೋಮನನ್ನು ಅಸುರ ಪಿತೃವಿನ ಪಕ್ಷವನ್ನು ತ್ಯಜಿಸಿ ತನ್ನ ಕಡೆ ಬರುವಂತೆ ಕೇಳಿಕೊಳ್ಳುತ್ತಾನೆ. ಈ ಎಲ್ಲ ದೇವತೆಗಳನ್ನು ದೇವಾನಾಂ ಅಸುರ ದೇವರುಗಳಲ್ಲಿನ ಅಸುರರು ಎಂದು ವರ್ಣಿಸಲಾಗಿದೆ. ವೇಲ್ಸ್ ಎಂಬ ವಿದ್ವಾಂಸ ಗುರ್ತಿಸುವಂತೆ ಅಸುರತ್ವ ಎನ್ನುವುದು ಆಳುವವನ

ಉಪಖಂಡದಲ್ಲಿ ಅಸಂಖ್ಯಾತ ಸಾಂಸ್ಕೃತಿಕ-ಜನಾಂಗಿಕ ಗುಂಪುಗಳಿದ್ದರೂ ಸಹ ತಳಿ ವಿಜ್ಞಾನವು ಪ್ರಧಾನವಾಗಿ 3 ಗುಂಪುಗಳಿರುವುದನ್ನು ಗುರ್ತಿಸುತ್ತದೆ. 1. ಆದಿ ಪ್ರಾಚೀನ ದಕ್ಷಿಣ ಭಾರತೀಯರು 2. ಪ್ರಾಚೀನ ದಕ್ಷಿಣ ಭಾರತೀಯರು ಮತ್ತು 3. ಪ್ರಾಚೀನ ಉತ್ತರ ಭಾರತೀಯರು ಎಂದು. ಭಾಷಾಶಾಸ್ತ್ರೀಯವಾಗಿ ನೋಡಿದರೆ ಪ್ರಧಾನವಾಗಿ 6 ಗುಂಪುಗಳು ಇಲ್ಲಿ ನೆಲೆಸಿರುವುದು ಕಂಡು ಬರುತ್ತದೆ. ತಳಿ ವಿಜ್ಞಾನದ ಅಧ್ಯಯನಗಳಲ್ಲಿ 1. ಮೈಟೊ ಕಾಂಡ್ರಿಯಾ, 2. ಕ್ರೋಮೊಸೋಮುಗಳು, 3.ಆಟೊಸೋಮುಗಳು ಇವುಗಳ ಅಧ್ಯಯನವನ್ನು ವೈಜ್ಞಾನಿಕ ಅಧ್ಯಯನವೆಂತಲೂ ಮತ್ತು ತೌಲನಿಕ ಭಾಷಾಶಾಸ್ತ್ರ ಹಾಗೂ ಪುರಾತತ್ವಶಾಸ್ತ್ರವನ್ನು ಪೂರಕ ಶಿಸ್ತುಗಳೆಂತಲೂ ವಿಭಾಗಿಸಿಕೊಳ್ಳಲಾಗುತ್ತದೆ. ತಳಿ ವಿಜ್ಞಾನದ ಪ್ರಮೇಯಗಳನ್ನು ಮನುಷ್ಯನ ಇತಿಹಾಸ, ಚಲನೆ, ನೆಲೆಸುವಿಕೆ, ಜಾತಿ, ಕುಲಗಳ ಉಗಮ ಮುಂತಾದ ವಿಷಯಗಳನ್ನು ಅಧ್ಯಯನ ಮಾಡುವಾಗ ಅಳವಡಿಸಿಕೊಳ್ಳಲಾಗುತ್ತದೆ.

ಆರ್ಯರು ಇಂದಿನ ಭಾರತದ ನೆಲಕ್ಕೆ ಹೊರಗಿನಿಂದ ಬಂದವರೊ ಇಲ್ಲ ಭಾರತದ ನೆಲದಿಂದ ಹೊರಕ್ಕೆ ಹೋದವರೊ ಎಂಬುದು ಶತಮಾನ ಮೀರಿದ ಕಗ್ಗಂಟಿನ ಪ್ರಶ್ನೆ. ಈ ಪ್ರಶ್ನೆಯನ್ನು ಸಾಧ್ಯವಾದ ಮಟ್ಟಿಗೆ ಬಿಡಿಸಲು ನೆರವಾಗಿದ್ದು ಮಾತ್ರ ತಳಿವಿಜ್ಞಾನವೆ. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪದೇ ಪದೇ ಬಳಕೆಯಾದ ಆಕರಗಳಲ್ಲಿ ಮುಖ್ಯವಾಗಿ ಋಗ್ವೇದ, ಅವೆಸ್ತ, ಸಿಂಧೂ ಕಣಿವೆ ಮತ್ತು ಅದಕ್ಕೆ ಸಂಬಂಧಿಸಿದ ಕಡೆಗಳಲ್ಲಿ ಸಿಗುವ ದಾಖಲೆಗಳು ಮತ್ತು ಮಹಾಭಾರತಗಳು ಸೇರಿವೆ. ಈ ಮೂರೂ ಕೂಡ ಹೊಸ ಹೊಸ ಜ್ಞಾನ ಶಿಸ್ತುಗಳ ಬೆಳಕಿನಲ್ಲಿ ಅಪಾರ ಪ್ರಮಾಣದ ಸತ್ಯವನ್ನು ಹೊರಗೆಡಹುತ್ತಿವೆ.

ಹಾಗೆ ಹುಡುಕಾಟದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದ ಪ್ರಮುಖ ಬರಹ, ದ ದೇವಾಸ್, ದ ಅಸುರಾಸ್ ಆ್ಯಂಡ್ ಗಿಲ್ಗಮೇಶ್; ಎಕ್ಸ್ ಪ್ರೋರಿಂಗ್ ದ ಕ್ರಾಸ್ ಕಲ್ಚರಲ್ ಜರ್ನಿ ಆಫ್ ಮಿಥ್ಸ್ ಕೂಡ ಒಂದು. ಈ ಬರೆಹವನ್ನು ಕೋಲ್ಕತ್ತುದ ಸಂಸ್ಕೃತ ಕಾಲೇಜಿನ 33 ವರ್ಷ ವಯಸ್ಸಿನ ಪ್ರತಿಭಾವಂತ ಪ್ರೊಫೆಸರ್ ಕಾನಡ್ ಸಿನ್ಹಾ ಎಂಬವವರು ಬರೆದಿದ್ದಾರೆ. ಇವರು 2014 ರಲ್ಲಿ ಜೆಎನ್‌ಯುವಿನಲ್ಲಿ ತನ್ನ ಸಂಶೋಧನಾ ಪ್ರಬಂಧವನ್ನು ಮಂಡಿಸಿದ ಪ್ರತಿಭಾವಂತರಲ್ಲೊಬ್ಬರು. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಹೊಸ ಹೊಳಹುಗಳನ್ನು ಹೆಕ್ಕಿ ತೆಗೆದು ವಿವರಿಸುವ, ಕಡಿದು ಹೋಗಿರುವ ತಂತುಗಳನ್ನು ಹಿಡಿದು ಜೋಡಿಸುವ ಅವರ ಕೆಲಸ ಗಮನಾರ್ಹವಾದುದು.

ಋಗ್ವೇದದಲ್ಲಿ ಪ್ರಾಣಿ, ಪಕ್ಷಿಗಳ ಉಲ್ಲೇಖಗಳ ಆಧಾರದ ಮೇಲೆ ವೇದಕಾಲೀನ ಜನರು ಯಾವ ಪ್ರದೇಶದಲ್ಲಿ ವಾಸಿಸಿದ್ದರು ಎಂಬ ಸಂಗತಿಗಳನ್ನು ತೀರ್ಮಾನಿಸಬಹುದಾಗಿದೆ. 2 ರಿಂದ 9 ರವರೆಗಿನ ಮಂಡಲಗಳನ್ನು ಋಗ್ವೇದದ ಪ್�