ಸೋಮವಾರಪೇಟೆ: ​ಕೆರೆಗೆ ಬಿದ್ದ ಕರುವನ್ನು ರಕ್ಷಿಸಿದ ಬಾಲಕ

Update: 2023-01-04 13:57 GMT

ಮಡಿಕೇರಿ ಜ.4 : ನೀರು ಕುಡಿಯಲೆಂದು ಬಂದು ಆಕಸ್ಮಿಕವಾಗಿ ಕೆರೆಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಕರು ಒಂದನ್ನು ಬಾಲಕನೊಬ್ಬ ರಕ್ಷಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ.

ಕಿಬ್ಬೆಟ್ಟ ಗ್ರಾಮದ 9 ನೇ ತರಗತಿ ವಿದ್ಯಾರ್ಥಿ ಕೆ.ಎಂ.ರೋಹನ್ ಎಂದಿನಂತೆ ಬುಧವಾರ ಬೆಳಗ್ಗೆ ಸೋಮವಾರಪೇಟೆ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಗೆ ತೆರಳುತ್ತಿದ್ದಾಗ ಕೆರೆಯಲ್ಲಿ ಹೋರಿ ಕರು ಮುಳುಗಿರುವ ದೃಶ್ಯ ಕಂಡು ಬಂದಿದೆ. ಏನು ಮಾಡಬೇಕೆಂದು ತಿಳಿಯದೆ ಪಕ್ಕದಲ್ಲೇ ಇದ್ದ ಮನೆಗೆ ಮರಳಿದ ಬಾಲಕ ತಂದೆಗೆ ವಿಷಯ ತಿಳಿಸಿದ್ದಾನೆ.

ತಕ್ಷಣ ಇಬ್ಬರು ಸ್ಥಳಕ್ಕೆ ಬಂದು ನೋಡಿದಾಗ ಹೋರಿ ಕರು ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವುದು ಕಂಡು ಬಂದಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಎಚ್ಚೆತ್ತುಕೊಂಡ ರೋಹನ್ ಕೊಕ್ಕೆ ಕೋಲೊಂದನ್ನು ಹಿಡಿದು ಕೆರೆಯಲ್ಲಿದ್ದ ಕರುವಿನ ಮೂಗುದಾರಕ್ಕೆ ಸಿಕ್ಕಿಸಿದ್ದಾನೆ. ನಂತರ ಸುಮಾರು 25 ಮೀಟರ್ ದೂರಕ್ಕೆ ಕರುವನ್ನು ಎಳೆದು ತಂದಿದ್ದಾನೆ. ಕೆರೆಗೆ ಮೆಟ್ಟಿಲು ಅಥವಾ ಬೇರೆ ಯಾವುದೇ ಮಾರ್ಗವಿಲ್ಲದ ಕಾರಣ ದಿಬ್ಬದ ರೀತಿಯ ಸ್ಥಳದಲ್ಲೇ ಶಕ್ತಿಮೀರಿ ಕರುವನ್ನು ಎಳೆದಿದ್ದಾನೆ. ಸುಮಾರು 45 ನಿಮಿಷದ ಕಾರ್ಯಾಚರಣೆಯ ನಂತರ ಕರು ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದೆ. 

ಇದು ಅಪಾಯಕಾರಿ ಕೆರೆಯಾಗಿದ್ದು, ಈ ಹಿಂದೆಯೂ ಹಸುಗಳು ಮೃತಪಟ್ಟಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು. ಬಾಲಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಗ್ರಾಮಸ್ಥರು ಈತನಿಗೆ ಶೌರ್ಯ ಪ್ರಶಸ್ತಿ ನೀಡಬೇಕೆಂದು ಅಭಿಪ್ರಾಯಪಟ್ಟರು. 

ಕಿಬ್ಬೆಟ್ಟ ಗ್ರಾಮದ ನಿವಾಸಿ ಪಿ.ಸಿ.ಮುದ್ದ ಹಾಗೂ ಲಕ್ಷ್ಮಿ ದಂಪತಿ ಪುತ್ರನಾಗಿರುವ ರೋಹನ್ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. 

Similar News