ಮೈಸೂರು | ದಲಿತ ಯುವತಿಯ ಅತ್ಯಾಚಾರ ಪ್ರಕರಣ: ಸ್ಯಾಂಟ್ರೊ ರವಿ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ

Update: 2023-01-04 16:40 GMT

ಮೈಸೂರು,ಜ.4: ದಲಿತ ಯುವತಿ ಮೇಲೆ ಅತ್ಯಾಚಾರ, ವಂಚನೆ, ಕ್ರಿಮಿನಲ್ ಪಿತೂರಿ ದೌರ್ಜನ್ಯ ನಡೆಸಿರುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್ ಎಂಬಾತನನ್ನು  ಬಂಧಿಸಿ ಸಮಗ್ರ ತನಿಖೆ  ನಡೆಸಬೇಕು. ಹಾಗೂ ಅತನ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು  ನೀಡುತ್ತಿರುವ  ಸರ್ಕಾರದ ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್. ಎಂಬುವವರು ಹಣಕಾಸು ಸಂಸ್ಥೆಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ದಲಿತ ಯುವತಿಯೊಬ್ಬರನ್ನು ವಂಚಿಸಿ ಅತ್ಯಾಚಾರ ನಡೆಸಿ  ದೌರ್ಜನ್ಯ ನಡೆಸಿರುವ ಬಗ್ಗೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಜ.1 ರಂದು ಪ್ರಕರಣ ದಾಖಲಾಗಿದೆ. ಒಡನಾಡಿ ಸಂಸ್ಥೆಯ ಆಶ್ರಯದಲ್ಲಿ ಸಂತ್ರಸ್ತೆ ಇದ್ದಾರೆ. ಒಡನಾಡಿ ಸಂಸ್ಥೆಯ ಆಶ್ರಯದಲ್ಲಿರುವ  ಸಂತ್ರಸ್ತೆ ಬಳಿಗೆ ಒಡನಾಡಿ ಸಂಸ್ಥೆಯ ಮುಖ್ಯಸ್ಥರ  ಸಮ್ಮುಖದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ ಅವರ ನಿಯೋಗ ಜ.3ರ ಬುಧವಾರ ಭೇಟಿ ಮಾಡಿ ಸಮಗ್ರ ಮಾಹಿತಿ ಮತ್ತು ಹಲವು ದಾಖಲೆಗಳನ್ನು ಕಲೆಹಾಕಿದೆ.

2019-2022 ರ ನಡುವೆ ದೌರ್ಜನ್ಯ ನಡೆದಿದೆ. ಆರೋಪಿಯು ತನಗೆ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆಸಿಕೊಂಡಿದ್ದ ಈ ವೇಳೆ ಮತ್ತು ಬರುವ ಜ್ಯೂಸ್ ಕುಡಿಸಿ ಪ್ರಜ್ಞೆ ಕಳೆದುಕೊಂಡ ಬಳಿಕ ಅತ್ಯಾಚಾರ ಎಸಗಿದ್ದ. ನನ್ನ ನಗ್ನ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿದ್ದ. ನಂತರ ಮದುವೆಯಾಗಿ, ಮದುವೆಯಾದ ಬಳಿಕವೂ ಸಾಕಷ್ಟು ಹಿಂಸೆ  ನೀಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಈಗಾಗಲೇ ಸಂತ್ರಸ್ತೆ ಯುವತಿ  ನೀಡಿರುವ ದೂರಿನ ಮೇಲೆ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟ ದೌರ್ಜನ್ಯ ನಿಷೇಧ ಕಾಯ್ದೆ, ಲೈಂಗಿಕ ಕಿರುಕುಳ, ಅತ್ಯಾಚಾರ ವಂಚನೆ ಪ್ರಕರಗಳು ವಿಜಯನಗರ  ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅನ್ಯಾಯಕ್ಕೊಳಗಾದ ಯುವತಿಗೆ ನ್ಯಾಯ ದೊರಕದಿದ್ದರೆ  ಮೈಸೂರು ಜಿಲ್ಲೆ ಮತ್ತು ರಾಜ್ಯಾದ್ಯಂತ ಚಳವಳಿ ಮಾಡಬೇಕಾಗುತ್ತದೆ ಎಂದು ದಸಂಸ ಎಚ್ಚರಿಕೆ ನೀಡಿದೆ.

ಸ್ಯಾಂಟ್ರೊ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್. ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯಾಗಿದ್ದು, ವೇಶ್ಯಾವಾಟಿಕೆ ನಡೆಸುತ್ತಾ ರಾಜ್ಯದ ಪ್ರಭಾವಿ ಸಚಿವರು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮ ಹಣ ವರ್ಗಾವಣೆ, ಅಧಿಕಾರಿಗಳ ವರ್ಗಾವಣೆ, ಇನ್ನು ಮುಂತಾದ ಕಾನೂನು ಬಾಹಿರ ಕೆಲಸಗಳಿಗೆ ಕಿಂಗ್ ಪಿನ್ ನಂತೆ ಕೆಲಸ ನಿರ್ವಹಿಸುತ್ತಿದ್ದಾನೆ ಎಂದು ದೂರಿದ್ದಾರೆ.

ಅಸಹಾಯಕ ದಲಿತ ಯುವತಿಯರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್. ನಿಗೆ ಸರ್ಕಾರದ ಕೆಲವು ಸಚಿವರು, ಐಎಎಸ್, ಕೆಎಎಸ್, ಐಪಿಎಸ್ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿರುವುದು ದಾಖಲೆಗಳಿಂದ ಸಾಬೀತಾಗಿದೆ.

ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯ ಘೋಷಿತ ಅಪರಾಧಿ ಎಂದು ತೀರ್ಪು ನೀಡಿದೆ. ಇಂತಹ ಕ್ರಿಮನಲ್ ಹಿನ್ನಲೆಯ ಅಪರಾದಿ ಜೊತೆ ರಾಜ್ಯದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರೆ ಸಲುಗೆಯಿಂದ ವರ್ತಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಈತನಿಗೆ ಕಾನೂನು ಶಿಕ್ಷೆ ಕೊಡಿಸಬೇಕಿದ್ದ ಅಡ್ವೊಕೇಟ್ ಶಶಿಭೂಷಣ್, ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಬೆಂಬಲ ನೀಡುವ ದಾಖಲೆಗಳು ಯುವತಿಯಿಂದ ಬಹಿರಂಗಗೊಂಡಿದೆ.

ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಸರ್ಕಾರದ ಮುಖ್ಯಮಂತ್ರಿಗಳು ಪರಿಗಣಿಸಿ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಿಕೊಡಬೇಕು. ಹಾಗೆಯೇ ಅಪರಾಧಿಗೆ ಶಿಕ್ಷೆ ವಿಧಿಸುವಂತೆ ಮಾಡಬೇಕು. ಹಾಗು ಈತನಿಗೆ ನೆರವಾಗಿರುವ  ರಾಜ್ಯದ ಮಂತ್ರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೆಕು ಎಂದು ದಸಂಸ ಮುಖಂಡರುಗಳಾದ  ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್ ಮತ್ತು ಶಂಭುಲಿಂಗಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ಜತೆ ಬಿಜೆಪಿ ಸಚಿವರ ಸಂಪರ್ಕ: ಎಚ್.ಡಿ.ಕುಮಾರಸ್ವಾಮಿ ಆರೋಪ

Similar News