ಓಲಾ, ಉಬರ್ ಆಟೊ ಸೇವೆ | ಶೇ.5ರಷ್ಟು ಸೇವಾ ಶುಲ್ಕ ಪಡೆಯಲು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆ

Update: 2023-01-04 16:45 GMT

ಬೆಂಗಳೂರು, ಜ. 4: ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೊರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಿ ರಾಜ್ಯ ಸರಕಾರವು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ (High Court of Karnataka) ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮೊಬೈಲ್ ಆ್ಯಪ್ ಆಧಾರಿತ ಓಲಾ, ಉಬರ್ ಮತ್ತು ರ್ಯಾಪಿಡೋ ಸಾರಿಗೆ ಸೇವೆಯಲ್ಲಿ ಆಟೋ ರಿಕ್ಷಾಗಳ ಸೇವೆಗೆ ನಿಬರ್ಂಧ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ಎಎನ್‍ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದವು. ಈ ನಡುವೆ ಆಟೊಗಳ ಸೇವೆಗೆ ದರ ಹೆಚ್ಚಳ ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದರು.

ಹೈಕೋರ್ಟ್ ಸೂಚನೆ ಮೇರೆಗೆ ಸಭೆ ನಡೆಸಿದ್ದ ಸಾರಿಗೆ ಇಲಾಖೆ, 2022ರ ನ. 25ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆ, ನಗರದಲ್ಲಿ ಆಟೊಗಳಿಗೆ ನಿಗದಿ ಪಡಿಸಿರುವ ದರಕ್ಕೆ ಸರಕು ಮತ್ತು ಸೇವಾ ತೆರಿಗೆ ಸೇರಿ ಶೇ.5ರಷ್ಟು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದು ಎಂದು ಅಧಿಸೂಚನೆ ಹೊರಡಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜಿದಾರ ಸಂಸ್ಥೆಗಳು, ಕೇಂದ್ರ ಸಾರಿಗೆ ನಿಯಮಗಳ ಪ್ರಕಾರ ರಾಜ್ಯ ಸರಕಾರಕ್ಕೆ ದರ ನಿಗದಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದವು. ಅಲ್ಲದೇ, ಸರಕು ಮತ್ತು ಸೇವಾ ಶುಲ್ಕಕ್ಕೆ ಶೇ.10 ರಷ್ಟು ಹೆಚ್ಚುವರಿ ಪಡೆದರೂ ನಷ್ಟವುಂಟಾಗಲಿದೆ. ಹೀಗಾಗಿ, ಶೇ.20ರಷ್ಟು ಹೆಚ್ಚುವರಿ ಶುಲ್ಕ ನಿಗದಿ ಪಡಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದವು. ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

ಪ್ರಕರಣವೇನು?: ಆಟೊ ರಿಕ್ಷಾಗಳನ್ನು ಆ್ಯಪ್ ಮೂಲಕ ಸಲ್ಲಿಸುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಿದ್ದ ಸಾರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಎಎನ್‍ಐ ಸೇರಿದಂತೆ ಇತರ ಸಂಸ್ಥೆಗಳು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದವು. ಅಗ್ರಿಗ್ರೇಟರ್‍ಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿಲ್ಲ, ಕಮಿಷನ್ ಆಧಾರದಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಈ ಆ್ಯಪ್ ಬುಕ್ಕಿಂಗ್ ಪರವಾನಗಿ ನೀಡುವ ಸಂದರ್ಭದಲ್ಲಿ ಆಟೊ ರಿಕ್ಷಾ ಸೇವೆ ಒದಗಿಸುವಂತಿಲ್ಲ ಎಂಬುದಾಗಿ ಉಲ್ಲೇಖಿಸಿರಲಿಲ್ಲ. ಹೀಗಾಗಿ ಆಟೋ ಸೇವೆ ಪಡೆದುಕೊಳ್ಳಲಾಗಿತ್ತು. ಇದೀಗ ಸ್ಥಗಿತಗೊಳಿಸಿರುವುದು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

ಸಾರಿಗೆ ಇಲಾಖೆ ಅಧಿಸೂಚನೆ: 2022 ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿದ್ದ ಸಾರಿಗೆ ಇಲಾಖೆ, ಆಟೊರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೊರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‍ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಬಹುದಾಗಿದೆ. ವಿಚಾರಣೆಯನ್ನು 2023ರ ಜ.12ಕ್ಕೆ ಮುಂದೂಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

Similar News