×
Ad

ಕೋರೆಗಾಂವ್ ವಿಜಯೋತ್ಸವ ದಲಿತರ ಸ್ವಾಭಿಮಾನದ ಸಂಕೇತ: ರಾಜರತ್ನ ಅಂಬೇಡ್ಕರ್

Update: 2023-01-04 23:52 IST

ಚಿಕ್ಕಮಗಳೂರು, ಜ.4: ಕೋರೆಗಾಂವ್ ವಿಜಯೋತ್ಸವ ದಲಿತರ ಸ್ವಾಭಿಮಾನದ ಸಂಕೇತ. 500 ಮಂದಿ ಮಹರ್ ಸೈನಿಕರು ಅವಿದ್ಯಾವಂತರಾಗಿದ್ದರೂ ತಮ್ಮ ಶತ್ರುಗಳು ಯಾರೆಂದು ಸ್ಪಷ್ಟವಾಗಿ ಗುರುತಿಸಿದ್ದರಿಂದ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಸ್ವಾಭಿಮಾನಕ್ಕಾಗಿ ಹೋರಾಡಿ ಗೆದ್ದುಬೀಗಿದರು. ಇಂದಿನ ಕಾಲದ ವಿದ್ಯಾವಂತರಿಗೆ ನಮ್ಮ ಶತ್ರುಗಳನ್ನು ಗುರುತಿಸಲು ಸಾಧ್ಯವಾಗದಿರುವ ಕಾರಣಕ್ಕೆ ದಲಿತರು, ಶೋಷಿತರು ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿ ಮೊಮ್ಮಗ ಹಾಗೂ ಬುದ್ಧೀಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ. 

ಬುಧವಾರ ನಗರದ ಆಝಾದ್‍ಪಾರ್ಕ್ ವೃತ್ತದಲ್ಲಿ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 205ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋರೆಗಾಂವ್ ವಿಜಯ ಸ್ಥಂಭ ದಲಿತರು, ಶೋಷಿತರ ಸ್ವಾಭಿಮಾನ, ಶೌರ್ಯದ ಸಂಕೇತ. ದಲಿತರು, ಶೋಷಿತರು ಕೋಳಿ ಕುರಿಗಳ ಸಂತಾನವಲ್ಲ, ಅವರು ಹುಲಿ, ಸಿಂಹಗಳ ಸಂತಾನ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಕಳೆದು ಹೋಗಿದ್ದ ದಲಿತರ ಶೌರ್ಯದ ಸಂಕೇತವನ್ನು ಪರಿಶ್ರಮದಿಂದ ಶೋಧಿಸಿದವರು ಅಂಬೇಡ್ಕರ್. ವಿದ್ಯಾವಂತರಲ್ಲದ 500 ಮಂದಿ ಮಹರ್ ಸಮುದಾಯದ ಅಸ್ಪøಶ್ಯರು ಮೇಲ್ವರ್ಗದವರು ತಮ್ಮ ಮೇಲೆ ಹೇರಿದ್ದ ಅಮಾನವೀಯ ಆಚರಣೆಗಳ ವಿರುದ್ಧ ಸಿಡಿದೆದ್ದು ಕೋರೆಗಾಂವ್ ಎಂಬಲ್ಲಿ 25 ಸಾವಿರ ಪೇಶ್ವೆ ಸೈನ್ಯವನ್ನು ಸದೆಬಡಿದ ಇತಿಹಾಸ ಶೋಷಿತ ಸಮುದಾಯಗಳ ಸ್ವಾಭಿಮಾನವನ್ನು ಹೆಚ್ಚಿಸುತ್ತಿದೆ ಎಂದರು. 

ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ಥಂಭ ಈ ಹಿಂದೆ ಕಳೆದು ಹೋಗಿತ್ತು, ಅದನ್ನು ಅಂಬೇಡ್ಕರ್ ಅವರು ಸಂಶೋಧನೆ ನಡೆಸಿ ಜಗತ್ತಿಗೆ ಅದರ ಇತಿಹಾಸವನ್ನು ಪರಿಚಯಿಸಿದರು. ಅಂದಿನ ವಿಜಯೋಯತ್ಸವ ದಿನವನ್ನು ಶೌರ್ಯ ದಿನ ಎಂದು ಕರೆಯಲಾಗುತ್ತಿದೆ. ಕೋರೆಗಾಂವ್ ವಿಜಯಸ್ಥಂಭದ ಇತಿಹಾಸ ಶೋಧಿಸಿದ ಬಳಿಕ ಅಂಬೇಡ್ಕರ್ ಅವರಿಗೆ ತಮ್ಮ ಸಮುದಾಯದ ಶೌರ್ಯದ ಬಗ್ಗೆ ಸಂತಸಗೊಂಡಿದ್ದರು. ದಲಿತರು ಗುಲಾಮರಲ್ಲ, ಆಳುವ ರಾಜರು ಎಂದು ಎಲ್ಲ ಸಭೆಗಳಲ್ಲೂ ಹೇಳುತ್ತಾ ಬಂದಿದ್ದರು. ಅಸ್ಪøಶ್ಯ ಸಮುದಾಯದವರು ಕುರಿ, ಕೋಳಿ ಸಂತಾನದರಲ್ಲ, ಹುಲಿ, ಸಿಂಹಗಳ ಸಂತಾನದವರು ಎಂದು ಭಾವಿಸಿದ್ದರು. ಅಂಬೇಡ್ಕರ್ ಹೇಳಿದಂತೆ ದಲಿತರು, ಶೋಷಿತರು ಆಳುವವರೇ ಹೊರತು, ಆಳಿಸಿಕೊಳ್ಳುವವರಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಲು ಈ ಹಿಂದೆ ಮುಸ್ಲಿಮ್ ಸಮುದಾಯ ಸಹಾಯ ಮಾಡಿದ್ದರು. ಇದರಿಂದಾಗಿ ಅಂಬೇಡ್ಕರ್ ಸಂವಿಧಾನ ಬರೆಯಲು ಸಾಧ್ಯವಾಯಿತು. ಆದರೆ ಸದ್ಯ ಅಂಬೇಡ್ಕರ್ ಸಂವಿಧಾನ ಅಪಾಯದಲ್ಲಿರುವ ಸಂದರ್ಭದಲ್ಲಿ ಸಂವಿಧಾನ ರಕ್ಷಣೆ ಮಾಡಲು ಮುಸ್ಲಿಮರು ಮತ್ತೊಮ್ಮೆ ಅಂಬೇಡ್ಕರ್ ಅವರೊಂದಿಗೆ ನಿಲ್ಲಬೇಕಾಗಿದೆ ಎಂದ ಅವರು, ದಲಿತರು, ಅಲ್ಪಸಂಖ್ಯಾತರಿಗೆ ನಮ್ಮ ಶತೃಗಳನ್ನು ಗುರುತಿಸಲು ಸಾಧ್ಯವಾದಲ್ಲಿ ಮಾತ್ರ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಪಡೆದ ಜಯದಂತೆ ನಾವು ಅಧಿಕಾರ ಹಿಡಿಯಲು ಸಾಧ್ಯ, ಅಂಬೇಡ್ಕರ್ ಕನಸು ನನಸು ಮಾಡಲು ಸಾಧ್ಯ ಎಂದರು.

ಬೇಲೂರಿನ ಭಂತೇ ಬೋಧಿದತ್ತ ಸ್ವಾಮೀಜಿ ಮಾತನಾಡಿ, ಭಾರತೀಯರೆಲ್ಲರಿಗೂ ಬದುಕು ನೀಡಿರುವುದು ಡಾ.ಬಿ.ಆರ್.ಅಂಬೇಡ್ಕರ್. ಅವರನ್ನು ದಲಿತರ ಸೂರ್ಯ, ದಲಿತರ ಗುರು ಎನ್ನಲಾಗುತ್ತಿದೆ, ಆದರೆ ಅವರು ದಲಿತರ ಸೂರ್ಯ ಅಲ್ಲ, ಇಡೀ ಜಗತ್ತಿನ ಸೂರ್ಯ. ಇಡೀ ಜಗತ್ತಿನಲ್ಲೇ ಶ್ರೇಷ್ಟ ಜ್ಞಾನಿ ಎಂದು ಹೆಸರು ಪಡೆದಿರುವ ಅವರು ಓದಿದ್ದ ಕೊಲಂಬಿಯ ವಿವಿಯ ಮುಂಬಾಗದಲ್ಲಿ ಜಗತ್ತಿನ 100 ಶ್ರೇಷ್ಟ ವಿದ್ಯಾರ್ಥಿಗಳ ಪಟ್ಟಿ ಹಾಕಿದ್ದು, ಅದರಲ್ಲಿ ಮೊದಲ ಹೆಸರು ಅಂಬೇಡ್ಕರ್ ಅವರದ್ದಾಗಿದೆ. ಅಂಬೇಡ್ಕರ್ ಎಂತಹ ಜ್ಞಾನಿ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಡ ಎಂದರು. 

ಮುಸ್ಲಿಂ ಧರ್ಮಗುರು ಮುಕ್ತಿಯಾರ್ ಅಸ್ಗರ್ ಮಾತನಾಡಿ, ಪ್ರಸಕ್ತ ಹಿಂದೂ ಮುಸ್ಲಿಮರ ನಡುವೆ ಧ್ವೇಷ ಬಿತ್ತಲಾಗುತ್ತಿದೆ. ಮುಸ್ಲಿಮರನ್ನು ಈ ದೇಶದ ಶತ್ರಗಳು ಎಂದು ಬಿಂಬಿಸಲಾಗುತ್ತಿದೆ. ಆದರೆ ಅಂಬೇಡ್ಕರ್ ಅವರೊಂದಿಗ ಈ ಸಮುದಾಯ ಹಿಂದೆಯೂ ಇತ್ತು, ಇಂದಿಗೂ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ತ್ಯಾಗ ಬಲಿದಾನ ಇದೆ. ಧ್ವೇಷ ಹರಡುವವವರ ವಿರುದ್ಧ ಸೌಹಾರ್ದ ಸಾಮರಸ್ಯ ಬಯಸುವವರು ಒಂದಾದಲ್ಲಿ ದೇಶ ಉಳಿಯಲಿದೆ. ಈ ದೇಶ ಎಲ್ಲರದ್ದೂ ಆಗಿದೆ, ಎಲ್ಲ ಧರ್ಮದವರಿಗೂ ಸೇರಿದ್ದಾಗಿದೆ. ಪ್ರಸಕ್ತ ಮುಸಲ್ಮಾನರನ್ನು ಪಾಕಿಸ್ತಾನದವರು ಎನ್ನಲಾಗುತ್ತಿದೆ. ಪಾಕಿಸ್ತಾನಕ್ಕೆ ಹೋಗಿ ಎನ್ನಲಾಗುತ್ತಿದೆ. ಆದರೆ ನಾವು ಭಾರತೀಯರು. ಪಾಕಿಸ್ತಾನಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ, ನಮ್ಮನ್ನು ಈ ದೇಶದ ಶತ್ರಗಳು ಎನ್ನುತ್ತಾ ಕೆಲ ಪಟ್ಟಭದ್ರರು ಒಡೆದಾಳುವ ನೀತಿ ಮೂಲಕ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ಇದನ್ನು ಸೌಹಾರ್ದ ಪ್ರಿಯರು, ಅಂಬೇಡ್ಕರ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

Similar News