ಸಿದ್ದರಾಮಯ್ಯ ಚಲಾವಣೆಯಲ್ಲಿಲ್ಲದ ಹಳೆ ನೋಟಿನ ಹಾಗೆ: ಬಿಜೆಪಿ ಟೀಕೆ

Update: 2023-01-04 18:25 GMT

ಬೆಂಗಳೂರು, ಜ.4: ಕಾಂಗ್ರೆಸ್ ಪಾಳಯದಲ್ಲಿ ಇತ್ತೀಚೆಗೆ ಒಂದು ಮಾತು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಹಳೇ 1000 ನೋಟಿನ ಹಾಗೆ. ತಕ್ಷಣಕ್ಕೆ ಜನರು ನೋಡಿ ಕಣ್ಣಿಗೊತ್ತಿಕೊಂಡರೂ ಅದು ಚಲಾವಣೆಯಲ್ಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ನೋಟು ಅಮಾನ್ಯೀಕರಣವಾದಾಗ ಬಹಳ ಅವಕಾಶವಿದ್ದರೂ ಅವರು ನೋಟು ಬದಲಾವಣೆಗೆ ಬ್ಯಾಂಕ್‍ಗೆ ಹೋಗಲೇ ಇಲ್ಲ ಎಂದು ಬಿಜೆಪಿ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಬದಲಿಗೆ ನಾನೇ ಅಂತಿಮ ಎಂದುಕೊಂಡರು. ಸಾವಿರ ರೂ. ನೋಟು ರದ್ದಾಗಿ 2 ಸಾವಿರದ ನೋಟು ಬಂದಂತೆ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ದುರಂತ ಏನು ಎಂದರೆ ಈಗ 1000 ನೋಟು ಬದಲಾವಣೆಗೆ ಬ್ಯಾಂಕ್ ಬಾಗಿಲು ಮುಚ್ಚಿದಂತೆ ಸಿದ್ದರಾಮಯ್ಯಗೆ ಮಲ್ಲಿಕಾರ್ಜುನ ಖರ್ಗೆ ಬಂದ ಮೇಲಂತೂ ಹೈಕಮಾಂಡ್ ಬಾಗಿಲು ಮುಚ್ಚೇ ಹೋಗಿದೆ ಎಂದು ವ್ಯಂಗ್ಯವಾಡಿದೆ.

ತಮ್ಮ ಪರಿಸ್ಥಿತಿಯೇ ಪಕ್ಷದಲ್ಲಿ ಕರೆಂಟ್ ತಂತಿಗೆ ಸಿಕ್ಕ ಗಾಳಿಪಟದಂತಾಗಿರುವಾಗ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಸಾರ್ವಜನಿಕ ಸಭೆಯಲ್ಲಿ ನಿಂದಿಸಿದ್ದಾರೆ. ಸಿದ್ದರಾಮಯ್ಯನವರು ಬೊಮ್ಮಾಯಿವರು ಯಾರು ಎಂದು ಹೇಳುವುದು ಹಾಗಿರಲಿ, ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲಿ ಖೆಡ್ಡಾ ತೋಡಿದ್ದಾರೆ ನೋಡಿಕೊಳ್ಳಲಿ ಎಂದು ಬಿಜೆಪಿ ಹೇಳಿದೆ.

ರಾಜ್ಯದ ಜನತೆ ಕಾಂಗ್ರೆಸ್‍ನಿಂದ ದೂರ ಉಳಿಯಬೇಕಿದೆ. ಇವರಿವರೇ ಕುರ್ಚಿಗಾಗಿ ಕಿತ್ತಾಡುತ್ತಿದ್ದರೆ, ಅತ್ತ ಪಿಎಫ್‍ಐ ಉಗ್ರ ಸಂಘಟನೆಗಳಿಂದ ಕೊಲೆ, ಲವ್ ಜಿಹಾದ್, ಮತಾಂತರ ಆಗುತ್ತಿರುತ್ತದೆ. ಇದೇ ಕಾರಣಕ್ಕೆ ಇವರ ಸರಕಾರವನ್ನು ರಾಜ್ಯದ ಜನತೆ ಕಿತ್ತೊಗೆದಿದ್ದಲ್ಲವೇ? ಬಿಜೆಪಿಯ ಸರಕಾರವಷ್ಟೇ ಇವರ ಉಪಟಳಕ್ಕೆ ಮದ್ದು ಎಂದು ಬಿಜೆಪಿ ತಿಳಿಸಿದೆ.

Similar News